ಮಂಗಳವಾರ, ಜನವರಿ 21, 2020
29 °C
ವಿಶ್ವಸಂಸ್ಥೆ ಗೊತ್ತುವಳಿ

‘ಡ್ರೋನ್‌’ ಬಳಕೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ/ಇಸ್ಲಾಮಾಬಾದ್‌ (ಪಿಟಿಐ): ಭಯೋತ್ಪಾದನೆ ನಿಗ್ರಹಕ್ಕೆ ಡ್ರೋನ್‌ ವಿಮಾನ ಬಳಕೆ ಸೇರಿದಂತೆ ಇತರ ಮಾರ್ಗ­ಗಳನ್ನು ಅನುಸರಿಸುವಾಗ ಅಂತರ­ರಾಷ್ಟ್ರೀಯ ನಿಯಮಗಳನ್ನು ಪಾಲಿಸಬೇಕು ಎಂಬ ಗೊತ್ತುವಳಿಯನ್ನು ವಿಶ್ವಸಂಸ್ಥೆಯ ಮಹಾಸಭೆಯು ಅವಿ­­­ರೋ­­­­­ಧ­ವಾಗಿ ಅಂಗೀಕರಿಸಿದೆ.ಪಾಕಿಸ್ತಾನದ ಭಯೋತ್ಪಾಕರ ಅಡಗು­ತಾಣದ ಮೇಲೆ ಅಮೆರಿಕ ಡ್ರೋನ್‌  ದಾಳಿ ನಡೆಸಿದಾಗ ನಾಗರಿಕರೂ ಸತ್ತಿ­ದ್ದಾರೆ. ಇದರಿಂದ ಮಾನವ ಹಕ್ಕು ಹಾಗೂ ಪಾಕಿಸ್ತಾನದ ಸಾರ್ವಭೌಮ­ತ್ವದ ಉಲ್ಲಂಘನೆಯಾಗಿದೆ ಎಂಬ ಟೀಕೆ ವ್ಯಾಪಕವಾಗಿ ಕೇಳಿ ಬಂದಿದ್ದರ ಹಿನ್ನೆಲೆ­ಯಲ್ಲಿ ಇದೇ ಮೊದಲ ಬಾರಿಗೆ ವಿಶ್ವ­ಸಂಸ್ಥೆಯ ಮಹಾಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.ಗೊತ್ತುವಳಿಯಲ್ಲಿ ‘ಡ್ರೋನ್‌’ ಪದ­ವನ್ನು ಬಳಸುವ ಬಗ್ಗೆ ಪಾಕಿಸ್ತಾನವು ವಿಶೇಷ ಆಸಕ್ತಿ ವಹಿಸಿ ಮಿತ್ರ ರಾಷ್ಟ್ರಗಳ ಬೆಂಬಲ ಪಡೆಯುವಲ್ಲಿ ಯಶಸ್ವಿ­ಯಾಗಿದೆ.

ಕಳೆದ ಸೆಪ್ಟೆಂಬರ್ 27ರಂದು ಪಾಕಿ­ಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಅವರು ವಿಶ್ವಸಂಸ್ಥೆಯ ಮಹಾಸಭೆ­ಯಲ್ಲಿ ಡ್ರೋನ್‌  ದಾಳಿಯಿಂದ ತಮ್ಮ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾ­ಗಿದೆ ಎಂದು ತಿಳಿಸಿದ್ದರು.ಭಯೋತ್ಪಾದಕರ ಅಡಗುತಾಣದ ಮೇಲೆ ದಾಳಿ ಮಾಡುವ ಸಂದರ್ಭದಲ್ಲಿ ಅನೇಕ ನಾಗರಿಕರೂ ಸತ್ತಿದ್ದಾರೆ ಎಂದು ಷರೀಫ್‌ ದೂರಿದ್ದರು. ಭಯೋತ್ಪಾದಕ ಚಟುವಟಿಕೆಗಳನ್ನು ದಮನ ಮಾಡುವ ಸಂದರ್ಭದಲ್ಲಿ ಮಾನವ ಹಕ್ಕುಗಳ ಕಾಯ್ದೆ, ಅಂತರ­ರಾಷ್ಟ್ರೀಯ ಮಾನವೀಯತೆ ಕಾಯ್ದೆ ಮತ್ತು ಇತರ ನಿಯಮಗಳು ಉಲ್ಲಂಘನೆ ಆಗದಂತೆ ನೋಡಿಕೊಳ್ಳ­ಬೇಕು ಎಂದು ಗೊತ್ತುವಳಿ ತಿಳಿಸಿದೆ. ಈ ಗೊತ್ತುವಳಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಸಮ್ಮತಿ ನೀಡಿದರೆ ಮಾತ್ರ ಅದಕ್ಕೆ ಬಲ ಬರುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತ­ಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)