ಗುರುವಾರ , ಜೂನ್ 17, 2021
26 °C
ರಾಜ್ಯ ಉನ್ನತ ಪದವೀಧರರ ವೇದಿಕೆ ಒತ್ತಾಯ

‘ನೌಕರರ ನಿವೃತ್ತಿ ವಯಸ್ಸು 57ಕ್ಕೆ ನಿಗದಿಪಡಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಸರ್ಕಾರಿ ನೌಕರರ ನಿವೃತಿ ವಯಸ್ಸನ್ನು 60ರ ಬದಲಿಗೆ ೫೭ಕ್ಕೆ ನಿಗದಿಗೊಳಿಸಲು ಸರ್ಕಾರ ಕೂಡಲೇ ಮುಂದಾಗಬೇಕು ಎಂದು ರಾಜ್ಯ ಉನ್ನತ ಪದವೀಧರರ ವೇದಿಕೆ ಜಿಲ್ಲಾಮಟ್ಟದ ವಿಚಾರಗೋಷ್ಠಿಯಲ್ಲಿ ಒತ್ತಾಯಿಸಿತು.ನಗರದ ರಾಘವೇಂದ್ರ ಬಿ.ಇಡಿ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ರಾಜ್ಯ ಉನ್ನತ ಪದವೀಧರರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ವಿಚಾರಗೋಷ್ಠಿ ಅಂಗವಾಗಿ ಪದವೀಧರ ವಿದ್ಯಾರ್ಥಿಗಳಿಂದ ಸಂವಾದ ಮತ್ತು ಅಭಿಪ್ರಾಯ ಸಂಗ್ರಹ ಕಾರ್ಯಕ್ರಮ ನಡೆಯಿತು.ರಾಜ್ಯದಲ್ಲಿ 5 ಲಕ್ಷಕ್ಕೂ ಹೆಚ್ಚು ನೀರುದ್ಯೋಗಿ ಯುವಕರು ಕೆಲಸವಿಲ್ಲದೆ ಅಲೆಯುತ್ತಿದ್ದು, ಸರ್ಕಾರ ಉದ್ಯೋಗ ಸೃಷ್ಟಿಸಬೇಕು. ಪದವೀಧರರಿಗೆ ನೀರುದ್ಯೋಗ ಭತ್ಯೆ ನೀಡಬೇಕು. ಪ್ರಸ್ತುತ ರೈತರ ಮಕ್ಕಳಿಗೆ ಉನ್ನತ ಶಿಕ್ಷಣ ಗಗನ ಕುಸುಮವಾಗಿದೆ. ಆದ್ದರಿಂದ, ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕು ಎಂಬ ಆಗ್ರಹಗಳು ಸಭೆಯಲ್ಲಿ ಕೇಳಿಬಂದವರು.ರಾಜ್ಯ ಉನ್ನತ ಪದವೀಧರರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಸಂತೋಷ್ ಹಿರೆಮಠ್‌ ಮಾತನಾಡಿ, ಭ್ರಷ್ಟಾಚಾರದಲ್ಲಿ ಮುಳುಗಿರುವ ಕೆಪಿಎಸ್‌ಸಿ ಅನ್ನು ಸರ್ಕಾರ ಕೂಡಲೇ ರದ್ದುಗೊಳಿಸಿ ಸಿಇಟಿ ಮೂಲಕ ಪಾರದರ್ಶಕ ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಒತ್ತಾಯ ಮಾಡಿದರು.ಕೋಟಿಗಟ್ಟಲೇ ಹಣ ನೀಡಿ ಆಯ್ಕೆಯಾದ ಕೆಪಿಎಸ್‌ಸಿ ಸದಸ್ಯರು ಕೆಎಎಸ್, ಕೆಇಎಸ್ ಪರೀಕ್ಷೆ ಸೇರಿದಂತೆ ಕೆಪಿಎಸ್‌ಸಿ ಮೂಲಕ ನಡೆಯುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸಾದ ಅಭ್ಯರ್ಥಿಗಳಿಂದ ಸಂದರ್ಶನದ ವೇಳೆಯಲ್ಲಿ ಲಕ್ಷಾಂತರ ಹಣ ವಸೂಲಿ ಮಾಡಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆದ್ದರಿಂದ ಕೆಪಿಎಸ್‌ಸಿ ಕಚೇರಿಯನ್ನು ಸಿಇಟಿ ಕೇಂದ್ರವಾಗಿಸಿ ಪಾರದರ್ಶಕ ಅಭ್ಯರ್ಥಿಗಳ ನೇಮಕಾತಿ ಮಾಡಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.ರಾಜ್ಯದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು ಶೀಘ್ರ ಭರ್ತಿ ಮಾಡಬೇಕು. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸಿಇಟಿ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಿ ನಿರುದ್ಯೋಗಿ ಪದವೀಧರರಿಗೆ ಅನುಕೂಲ ಮಾಡಿಕೊಡಬೇಕು. ರಾಜ್ಯ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.ನಿರುದ್ಯೋಗಿ ಪದವೀಧರರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರಕಿಸಿಕೊಡುವಂತೆ ಚಿತ್ರದುರ್ಗದಿಂದ ವಿಧಾನಸೌಧದವರೆಗೆ ಪಾದ ಯಾತ್ರೆ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಿದಾಗ ಮಹಿಳಾ ಪದವೀಧರರು,  ಎನ್‌ಎಫ್‌ಐಡಬ್ಲ್ಯೂ ಮಹಿಳಾ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ಜ್ಯೋತಿ ಸುಂದರೇಶ್ ಬೆಂಬಲ ವ್ಯಕ್ತಪಡಿಸಿದರು.ವೇದಿಕೆಯ ರಾಜ್ಯ ಉಪಾಧ್ಯಕ್ಷ ಆರ್.ನಾಗಪ್ಪ, ಗೌರವಾಧ್ಯಕ್ಷ ಎಲ್.ಪಿ.ಸುಭಾಸ್ ಚಂದ್ರ, ಕಾರ್ಯದರ್ಶಿ ರಘುರಾಮ್, ಸಮಿತಿ ಸದಸ್ಯ ಮಂಜುನಾಥ್, ಜಿಲ್ಲಾಧ್ಯಕ್ಷ ಕೆ.ಶಿವರಾಜ್, ಸಂಚಾಲಕ ರಾಘವೇಂದ್ರ ಸೇರಿದಂತೆ ೧೦೦ ಮಂದಿ ಅತಿಥಿ ಉಪನ್ಯಾಸಕರು, ಪದವೀಧರರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.