ಶನಿವಾರ, ಮಾರ್ಚ್ 6, 2021
29 °C

‘ಪೀಕು’ ಆದದ್ದು ಹೀಗೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪೀಕು’ ಆದದ್ದು ಹೀಗೆ...

‘ಟೈಟಾನ್‌’, ‘ಸಫೋಲಾ’ ಜಾಹೀರಾತುಗಳ ಸ್ಕ್ರಿಪ್ಟ್‌ ಹಿಡಿದುಕೊಂಡು ವರ್ಷಗಳ ಹಿಂದೆ ತನ್ನ ಸಹೋದ್ಯೋಗಿ ಜೊತೆ ಅಪ್ಪನೊಡನೆ ಜಗಳ ಕಾದು ಬಂದ ಸಂದರ್ಭವನ್ನು ಹುಡುಗಿ ವಿವರಿಸುತ್ತಿದ್ದಳು. ಅದನ್ನು ಪದೇಪದೇ ಆಲಿಸುತ್ತಾ ಇದ್ದ ಸಹೋದ್ಯೋಗಿಯ ತಲೆಯಲ್ಲಿ ಅದೇ ವಸ್ತು ಸಿನಿಮಾ ಬೀಜವಾಯಿತು. ತನ್ನ ಹಾಗೂ ಅಪ್ಪನ ವಿಚಿತ್ರ ಸಂಬಂಧದ ಕುರಿತು ಮುಕ್ತವಾಗಿ ಹೇಳಿಕೊಂಡ ಆ ಹುಡುಗಿ ಜೂಹಿ ಚತುರ್ವೇದಿ. ಅದನ್ನು ಸಿನಿಮಾ ಮಾಡಿದ ಆಕೆಯ ಸಹೋದ್ಯೋಗಿ ಶೂಜಿತ್‌ ಸರ್ಕಾರ್‌.

‘ಪೀಕು’ ಹಿಂದಿ ಸಿನಿಮಾ ಜನಪ್ರಿ ಸೂತ್ರಗಳನ್ನು ಮೀರಿಯೂ ಬಾಲಿವುಡ್‌ನಲ್ಲಿ ಭಾರಿ ಯಶಸ್ಸು ಗಳಿಸಿರುವ ಈ ಹೊತ್ತಿನಲ್ಲಿ ಸಿನಿಮಾ ಕಥೆಯ ‘ಬೀಜಮಂತ್ರ’ ಆಸಕ್ತಿಕರ ಸಂಗತಿಯಾಗಿದೆ. ರಂಗಭೂಮಿ, ಜಾಹೀರಾತು, ಸಿನಿಮಾ ಮೂರೂ ಮಾಧ್ಯಮಗಳಲ್ಲಿ ಕೈಯಾಡಿಸಿದ ಶೂಜಿತ್‌ ಸರ್ಕಾರ್‌ಗೆ ತಮ್ಮ ನಿಲುವುಗಳ ಬಗ್ಗೆ ಸ್ಪಷ್ಟತೆ ಇದೆ. ಬಂಗಾಳಿ ಸಂಸ್ಕೃತಿಯ ಗಂಧ ಯಾವ ರೂಪದಲ್ಲಾದರೂ ಇರುವಂತೆಯೇ ಅವರು ಸಿನಿಮಾ ಮಾಡುವುದು.ಜೂಹಿ ಹಾಗೂ ಅವರ ಸಿನಿಮಾ ಕಥನದ ಸಂಬಂಧ ಕೂಡ ಆಸಕ್ತಿಕರ. ಅಪ್ಪ–ಮಗಳ ಅಪರೂಪದ ಸಂಬಂಧ ಇಟ್ಟುಕೊಂಡು ಯಾಕೆ ಒಂದು ಸಿನಿಮಾ ಮಾಡಬಾರದು ಎಂದು ಶೂಜಿತ್‌ಗೆ ಅನ್ನಿಸಿದ್ದೇ, ಜೂಹಿಗೆ ಸ್ಕ್ರಿಪ್ಟ್‌ ಮಾಡಿಕೊಡುವಂತೆ ಸೂಚಿಸಿದರು.  ತನ್ನ ಅನುಭವದ ಜೊತೆ ಒಂದಿಷ್ಟು ಸಂಸ್ಕೃತಿ, ಸೂಕ್ಷ್ಮದ ಹೂರಣವನ್ನೂ ಬೆರೆಸಿ ಜೂಹಿ  ಅಚ್ಚುಕಟ್ಟಾಗಿ ಸಿದ್ಧಪಡಿಸಿಕೊಟ್ಟ ಸ್ಕ್ರಿಪ್ಟ್‌ ‘ಪೀಕು’.ಸ್ಕ್ರಿಪ್ಟ್‌ ಸಂಪೂರ್ಣ ಪಕ್ಕಾ ಆದ ನಂತರವಷ್ಟೇ ಸಿನಿಮಾ ಮಾಡುವ ಗಿರೀಶ್‌ ಕಾಸರವಳ್ಳಿ ಅವರ ಜಾಯಮಾನದವರೇ ಆದ ಶೂಜಿತ್‌, ಅದನ್ನು ಅಮಿತಾಭ್‌, ದೀಪಿಕಾ ಹಾಗೂ ಇರ್ಫಾನ್‌ ಖಾನ್‌ ಎದುರು ಇಟ್ಟರು. ಸಿನಿಮಾ ಸಂಕಥನದಲ್ಲಿ ಮಲಬದ್ಧತೆಯೂ ಮುಖ್ಯ ವಿಷಯ. ಮೂರು ಪಾತ್ರಗಳ ನಡುವಿನ ವರ್ತನಾ ವೈಚಿತ್ರ್ಯದಲ್ಲಿಯೇ ಸಿನಿಮಾಗೆ ಮನರಂಜನೆಯ ರಿಲೀಫ್‌, ಭಾವಲೋಕದ ತೀವ್ರತೆ ಎರಡೂ ಪ್ರಾಪ್ತವಾಗಿದೆ ಎಂದು ಅಮಿತಾಭ್‌ ಗುರ್ತಿಸಿದರು.ಇನ್ನು ಚಿತ್ರೀಕರಣದ ವಿಷಯ. ಪಕ್ಕಾ ಸ್ಕ್ರಿಪ್ಟ್‌ ಇದ್ದುದರಿಂದ ಶೂಜಿತ್‌ ಸ್ಥಳದಲ್ಲಿಯೇ ಮಾರ್ಪಾಟು ಮಾಡಿಕೊಳ್ಳುವ ಗೊಡವೆಗೆ ಹೋಗಲಿಲ್ಲ. ರಂಗಭೂಮಿಯಲ್ಲಿ ಮಾಡುವಂತೆ ಎಲ್ಲಾ ಪಾತ್ರಗಳಿಂದಲೂ ತಾಲೀಮು ಮಾಡಿಸಿದರು. ಅಮಿತಾಭ್‌, ದೀಪಿಕಾ, ಇರ್ಫಾನ್‌ ಮೂವರೂ ಒಂದಲ್ಲ ಒಂದು ವಿಧದಲ್ಲಿ ತಾಲೀಮಿಗೆ ಒಳಗಾದವರೇ ಆದರೂ ಸಿನಿಮಾ ಲೋಕದಲ್ಲಿ ಇಂಥ ಪ್ರಯೋಗ ಅಪರೂಪವೇ ಹೌದು. ಪ್ರಚ್ಛನ್ನ ಅಭಿನಯ ಶಕ್ತಿ ಇರುವ ಈ ಮೂವರೂ ನಟ–ನಟಿಯರು ನಿರ್ದೇಶಕ ಬಯಸಿದ ರೂಹನ್ನು ಸ್ಕ್ರಿಪ್ಟ್‌ಗೆ ತುಂಬಿದರು. ಇವೆಲ್ಲದರ ಫಲವೇ ‘ಪೀಕು’ ಯಶಸ್ಸು.ಕಥೆ ಇಲ್ಲ ಎಂದು ಹಳಹಳಿಸುವವರು, ಗಂಭೀರ ಸಿನಿಮಾ ಮಾಡಿದರೆ ಮನರಂಜನೆ ಎಲ್ಲಿಂದ ಬರಬೇಕು ಎಂದು ರಾಗ ತೆಗೆಯುವವರು, ಜನಪ್ರಿಯ ತಾರೆಗಳು ಒಪ್ಪುವಂಥ ಸ್ಕ್ರಿಪ್ಟ್‌ ಮಾಡುವುದೇ ಕಷ್ಟ ಎಂದು ಕೊರಗುವವರು ‘ಪೀಕು’ ಸಿನಿಮಾ ಆದ ಈ ಪ್ರಕ್ರಿಯೆಯನ್ನು ಗಮನಿಸಬೇಕು. ಶೂಜಿತ್‌ ಇದನ್ನು ತಮ್ಮದೇ ಶೈಲಿಯಲ್ಲಿ, ‘ಬಾಲಿವುಡ್‌ನಲ್ಲೂ ಬಂಗಾಳಿ ಗಾಳಿ ಬೀಸಬಲ್ಲದು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.