‘ಬಂಡವಾಳ ಹೂಡಿಕೆಗೆ ಹಿಂಜರಿಕೆ ಬೇಡ’

ಗದಗ: ಜಿಲ್ಲೆಯಲ್ಲಿ ಬಂಡವಾಳ ಹೂಡಲು ಯಾವುದೇ ಹಿಂಜರಿಕೆ ಬೇಡ. ಕೈಗಾರಿಕೆ ಸ್ಥಾಪನೆಗೆ ಬೇಕಾದ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಚಿವ ಎಚ್.ಕೆ.ಪಾಟೀಲ ಅವರು ಹೂಡಿಕೆದಾರರಿಗೆ ಅಭಯ ನೀಡಿದರು.
ನಗರದಲ್ಲಿ ಏರ್ಪಡಿಸಿದ್ದ ಬಂಡವಾಳ ಹೂಡಿಕೆದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಹಣವಂತರು ಕೈಗಾರಿಕಾ ಸ್ಥಾಪನೆಗೆ ಬಂಡವಾಳ ಹೂಡಿದರೆ ಲಾಭ ಬರಲಿದೆ. ಜಿಲ್ಲೆಯ ವಿವಿಧೆಡೆ ಹೊರಗಿನ ಉದ್ಯಮಿಗಳೇ ಹೆಚ್ಚು ವಿಂಡ್ ಮಿಲ್ ಹಾಕಿದ್ದಾರೆ.
ವಾತಾವರಣ, ನೈಸರ್ಗಿಕ ಮತ್ತು ಮಾನವ ಸಂಪನ್ಮೂಲ ಬಳಕೆ ಮಾಡಿಕೊಂಡು ಸ್ಥಳೀಯರು ಬಂಡವಾಳ ಹೂಡಬೇಕು. ಇಲ್ಲಿನ ಮಣ್ಣಿನಲ್ಲಿ ಚಿನ್ನವಿದೆ ಎಂಬುದನ್ನು ಭೂಗರ್ಭಶಾಸ್ತ್ರಜ್ಞ ರಾಧಾಕೃಷ್ಣ ಅವರು ‘ಗದಗ ಗೋಲ್ಡ್’ ಪುಸ್ತಕದಲ್ಲಿ ವಿವರಿಸಿದ್ದಾರೆ. ಕಡಿಮೆ ಅವಧಿಯಲ್ಲಿ ಕರ್ನಾಟಕ ವಿ.ವಿ. ಸ್ನಾತಕೋತ್ತರ ಕೇಂದ್ರ, ಗ್ರಾಮೀಣಾಭಿವೃದ್ಧಿ ವಿ.ವಿ, ಮೆಡಿಕಲ್ ಕಾಲೇಜು ಆರಂಭಗೊಳ್ಳಲಿದೆ ಎಂದು ಉಹಿಸಿರಲಿಲ್ಲ. ಮುಂದಿನ ದಿನಗಳಲ್ಲಿ ಗದಗ ಜಿಲ್ಲೆಯ ಚಿತ್ರಣವೇ ಬದಲಾಗಲಿದೆ ಎಂದು ಹೇಳಿದರು. ಉತ್ಪಾದನಾ ಮತ್ತು ತಯಾರಿಕಾ ಘಟಕಗಳು ಹೆಚ್ಚು ಸ್ಥಾಪನೆಯಾದರೆ ಪಟ್ಟಣ ಅಭಿವೃದ್ಧಿ ಹೊಂದುವುದರ ಜತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶವೂ ದೊರೆಯಲಿದೆ. ಉದ್ಯಮಿಗಳು ಕೇವಲ ಹೊಲ ಖರೀದಿಸಿದರೆ ಹಣ ಬರುವುದಿಲ್ಲ. ವ್ಯಾಪಾರಕ್ಕೆ ಹಣ ಹಾಕಿದರೆ ಸಾಲದು, ಕೈಗಾರಿಕೆ ಸ್ಥಾಪನೆಗೂ ಮುಂದಾಗಬೇಕು. ಹೂಡಿಕೆದಾರರಿಗೆ ಸಹಕಾರ, ಮಾರ್ಗದರ್ಶನ ನೀಡಲಾಗುವುದು ಎಂದರು.
1990ರಲ್ಲಿ 100 ಕೈಗಾರಿಕಾ ಸ್ಥಾಪನೆ ಯೋಜನೆ ಆರಂಭಿಸಲಾಗಿತ್ತು. ಆಗ ನೀರಿನ ಸಮಸ್ಯೆ ಇತ್ತು. ಸದ್ಯದಲ್ಲಿಯೇ 24*7 ನೀರಿನ ಸೌಲಭ್ಯ ದೊರೆಯಲಿದೆ. ಕೆಲವೇ ದಿನಗಳಲ್ಲಿ ಸಮಸ್ಯೆಗಳು ಇತಿಹಾಸ ಸೇರಲಿವೆ. ಆದ್ದರಿಂದ ಕೈಗಾರಿಕಾ ಕೇಂದ್ರ ಮತ್ತು ಜವಳಿ ಹಾಗೂ ಕೈ ಮಗ್ಗ ಇಲಾಖೆ ಜಂಟಿಯಾಗಿ ಎರಡನೇ ಹಂತದ 100 ಕೈಗಾರಿಕಾ ಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಆರು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಹೆಚ್ಚು ಕೈಗಾರಿಕೆ ಸ್ಥಾಪನೆ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
‘ಇನ್ವೆಸ್ಟ್ ಕರ್ನಾಟಕ–2006’ ಅಂಗವಾಗಿ ಜಿಲ್ಲೆಯ 27 ಉದ್ಯಮಿಗಳು ಬಂಡವಾಳ ಹೂಡಲು ಇ ಮೇಲ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟು ₹ 58.68 ಕೋಟಿ ಬಂಡವಾಳ ನಿರೀಕ್ಷಿಸಲಾಗಿದ್ದು, 954 ಮಂದಿಗೆ ಉದ್ಯೋಗಾವಕಾಶ ದೊರಕಲಿದೆ. ಕೃಷಿ ಆಧಾರಿತ ವಲಯದಲ್ಲಿ ₹ 17.75 ಕೋಟಿ, ಅಸಾಂಪ್ರದಾಯಕ ವಿದ್ಯುತ್ ಉತ್ಪಾದನೆಗೆ (ವಿಂಡ್ ಮಿಲ್, ಸೌರ ಘಟಕ) ₹ 9 ಕೋಟಿ ಹಾಗೂ ಜವಳಿ ಮತ್ತು ಸಿದ್ದ ಉಡುಪು ಕೈಗಾರಿಕೆಗಳಲ್ಲಿ ₹ 14 ಕೋಟಿ ಬಂಡವಾಳ ಹೂಡಿಕೆ ನಿರೀಕ್ಷಿಸಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿ ತಿಳಿಸಿದ್ದಾರೆ. ಕಾರ್ಯಾಗಾರದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ದೇವದಾಸ ಕಾಮತ್, ಕೈ ಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕ ಆನಂದ ವಿ ಕಿತ್ತೂರ, ಉದ್ಯಮಿಗಳಾದ ಶ್ರೀಕಾಂತ ಖಟವಟೆ, ಶಿವಣ್ಣ ಮುಳಗುಂದ, ಚಂದ್ರು ಬಾಳಿಹಳ್ಳಿ ಮಠ, ಸಾಯಿಕುಮಾರ, ಆರ್.ಆರ್.ಓದುಗೌಡರ ಹಾಜರಿದ್ದರು.
ಕೈ ಮಗ್ಗ ಮತ್ತು ಜವಳ ಇಲಾಖೆ ಉಪ ನಿರ್ದೇಶಕ ಎನ್.ಟಿ.ನೆಗಳೂರು ಸ್ವಾಗತಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.