ಸೋಮವಾರ, ಜನವರಿ 20, 2020
20 °C
ಅಬಕಾರಿ ಗಾರ್ಡ್‌ನಿಂದ ನೌಕರಿ ಆಮಿಷ: 30 ಜನರಿಗೆ ವಂಚನೆ

‘ಬಾಬಾ ವೇಷ’ದ ಆರೋಪಿ ಪೊಲೀಸ್‌ ಅತಿಥಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಬಾಬಾ ವೇಷ’ದ ಆರೋಪಿ ಪೊಲೀಸ್‌ ಅತಿಥಿ

ರಾಯಚೂರು: ಹೊಸಪೇಟೆಯಲ್ಲಿ ಅಬಕಾರಿ ಇಲಾಖೆಯಲ್ಲಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ  ಶ್ರೀನಿವಾಸ್, ಯುವಕರಿಗೆ ನೌಕರಿ ಕೊಡಿಸು­ವುದಾಗಿ 30ಕ್ಕೂ ಹೆಚ್ಚು ಜನ­ರಿಂದ 20 ಲಕ್ಷ ಹಣ ಪಡೆದು ನಾಪತ್ತೆ­ಯಾಗಿದ್ದ ವ್ಯಕ್ತಿ ಬಾಬಾ ವೇಷದಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.ಪಶ್ಚಿಮ ಪೊಲೀಸ್ ಠಾಣೆಯ ಪೊಲೀಸರು ಈ ವ್ಯಕ್ಯಿಯನ್ನು ಬಂಧಿಸಿ­ದ್ದಾರೆ.ಪ್ರಕರಣ ಹಿನ್ನೆಲೆ: ಈ ಶ್ರೀನಿವಾಸ್ ಎಂಬ ಆರೋಪಿ ಮೂಲತಃ ರಾಯ­ಚೂರು ತಾಲ್ಲೂಕಿನ ಗಾರಲದಿನ್ನಿ ಗ್ರಾಮ­­ದವ. ಹೊಸಪೇಟೆಯಲ್ಲಿ  ಅಬಕಾರಿ ಇಲಾಖೆ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ತಾನು ಕೆಲಸ ಮಾಡುವ ಅಬಕಾರಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ರಾಯಚೂರು ತಾಲ್ಲೂಕಿನ ರಾಂಪುರ ಗ್ರಾಮದ ಮಲ್ಲೇಶ ಎಂಬ ಯುವಕನಿಗೆ ನಂಬಿಸಿ 6 ಲಕ್ಷ ₨ ಲಂಚ ಕೊಡಬೇಕಾಗುತ್ತದೆ ಹೇಳಿದ್ದ. ಪುನಃ ಆತನನ್ನು ನಂಬಿಸಿ 3 ಲಕ್ಷ ಪಡೆದು ಉಳಿದ ಹಣ ನೌಕರಿ ಬಂದ ನಂತರ ಕೊಡಲು ತಿಳಿಸಿದ್ದ.ಅಲ್ಲದೇ, ಅಬಕಾರಿ ಇಲಾಖೆಯ ಗುಲ್ಬರ್ಗ ಅಬಕಾರಿ ಜಂಟಿ ಆಯು­ಕ್ತರು(ಜಾರಿ ಮತ್ತು ತನಿಖೆ) ಅವರ ಹೆಸರಿನಲ್ಲಿ (ಎಡಿಎಂ/ಇಎಸ್ಪಿ/ವಿಪಿಟಿ/ 145/2007–08. ದಿನಾಂಕ 30–11–2007) ‘ಸುಳ್ಳು ಆದೇಶ ’ ಸೃಷ್ಟಿಸಿ ಮಲ್ಲೇಶನಿಗೆ ಕೊಟ್ಟು ಆತನಿಂದ ಒಟ್ಟು 6 ಲಕ್ಷ ಪಡೆದಿದ್ದ. ನೌಕರಿಯನ್ನು ಕೊಡಿ­ಸಿರಲಿಲ್ಲ. ನೌಕರಿಯನ್ನು ಕೊಡಿಸದೇ ಹಣವನ್ನೂ ವಾಪಸ್ ಕೊಡದೇ ಜೀವ ಬೆದರಿಕೆ ಹಾಕಿ ಮೋಸ ಮಾಡಿದ್ದ. ಈ ಬಗ್ಗೆ ಮಲ್ಲೇಶ ಮೋಸ ಮಾಡಿದ ಶ್ರೀನಿವಾಸ ಹಾಗೂ ಆತನ ಹೆಂಡತಿ ಸುಶೀಲಮ್ಮ ವಿರುದ್ಧ ಪಶ್ಚಿಮ ಪೊಲೀಸ್ ಠಾಣೆ 2012ರ ಡಿಸೆಂಬರ್ 15ರಂದು ದೂರು ಸಲ್ಲಿಸಿದ್ದ. ಪ್ರಕರಣ ದಾಖಲಾಗಿತ್ತು.ಗಂಡ ನಾಪತ್ತೆ!;ಹೆಂಡತಿಯಿಂದಲೇ ದೂರು: ಮತ್ತೊಂದೆಡೆ  ಆರೋಪಿ ಶ್ರೀನಿವಾಸನ ಹೆಂಡತಿ ಸುಶೀಲಮ್ಮ ತನ್ನ ಪತಿ 2010ರ ಡಿಸೆಂಬರ್ ತಿಂಗಳಲ್ಲಿ ರಾಯಚೂರು ತಾಲ್ಲೂಕು ಯರಗೇರಾ ಗ್ರಾಮದಿಂದ ಕಾಣೆಯಾಗಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿ­ಕಾರಿಗೆ ದೂರು ಸಲ್ಲಿಸಿದ್ದರು! 2012ರಲ್ಲಿ ಯರಗೇರಾ ಠಾಣೆಯಲ್ಲಿ ವ್ಯಕ್ತಿ ಕಾಣೆ ಪ್ರಕರಣ ದಾಖಲಾಗಿತ್ತು.ಪತ್ತೆ ಕಾರ್ಯಕ್ಕೆ ತಂಡ ರಚನೆ: ಕಾಣೆಯಾದ ಈ ವ್ಯಕ್ತಿ ಪಶ್ಚಿಮ­ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲೂ ಆರೋಪಿಯಾ­ಗಿದ್ದ­ರಿಂದ ಡಿ.ಎಸ್‌.ಪಿ ಎಂ ಪಾಷಾ ಅವರು ಸಿಪಿಐ ವಿನೋದ ಮುಕ್ತೇದಾರ್, ಪಿಎಸ್‌ಐ ಆರ್.ಎಂ ನದಾಫ್, ಸಿಬ್ಬಂದಿ ಹನು­ಮಂತಪ್ಪ, ಮೋನಪ್ಪ, ಗೋಪಾಲ್, ಕೆ ನಾಗಪ್ಪ, ಗೋಪಾ­ಲರೆಡ್ಡಿ ಅವರನ್ನೊಳಗೊಂಡ ತಂಡ ರಚಿಸಿ ಪತ್ತೆ ಕಾರ್ಯ ಚುರುಕಿಗೆ ಮುಂದಾಗಿದ್ದರು.ಆಂಧ್ರಪ್ರದೇಶದಲ್ಲಿ ಪತ್ತೆ: ಈ ಆರೋಪಿ ಶ್ರೀನಿವಾಸ್ ಆಂಧ್ರಪ್ರದೇಶದ ಮಹೆ­ಬೂಬನಗರ ಸಮೀಪದ ಮರಿಕಲ್‌­ನಲ್ಲಿ ಬಾಬಾವೇಷದಲ್ಲಿ ಪೊಲೀ­ಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ವಂಚನೆ ದೂರು ನೀಡಿದ್ದ ಮಲ್ಲೇಶ ಎಂಬ ಯುವಕನಿಗಲ್ಲದೇ ಇನ್ನೂ 30 ಜನರಿಂದ 20 ಲಕ್ಷ ಪಡೆದು ವಂಚಿಸಿ­ದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.ಮಹೆಬೂಬನಗರ ಜಿಲ್ಲೆಯ ಮರಿಕಲ್‌ ಗ್ರಾಮದಲ್ಲಿ ಹುಸೇನಿ ಆಲಂ ಬಾಬಾ ದರ್ಗಾ ಮಾಡಿಕೊಂಡು ಯಲ­ಗಂಡ್ಲಾ ಸ್ವಾಮಿ ಅಂತಾ ಹೆಸರಿಟ್ಟು­ಕೊಂಡು ಅಲ್ಲಿನ ಜನರಿಗೂ ಈತ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಪೊಲೀಸರು ಹೇಳಿದ್ದಾರೆ.ಪತ್ನಿಯಿಂದ ಸುಳ್ಳು ದೂರು ದಾಖಲು: ಮಲ್ಲೇಶ ಅವರ ವಂಚನೆ ದೂರಿನ ಎರಡನೇ ಆರೋಪಿ ಅಂದರೆ ಶ್ರೀನಿವಾಸನ ಪತ್ನಿ ಜಿ ಸುಶೀಲಾ  ತನ್ನ ಗಂಡ ಅಬಕಾರಿ ಇಲಾಖೆ ಸರ್ಕಾರಿ ನೌಕರ ಎಂಬುದು ಗೊತ್ತಿದ್ದೂ ಇಲಾಖೆ ಸವಲತ್ತು ಪಡೆಯುವ ಸಲುವಾಗಿ ತನ್ನ ಗಂಡ 2010ರಲ್ಲಿ ಕಾಣೆಯಾಗಿದ್ದಾನೆ ಎಂದು ಸುಳ್ಳು ದೂರು ಕೊಟ್ಟಿರುವುದು ಬೆಳಕಿಗೆ ಬಂದಿದೆ ಎಂದು ಪಶ್ಚಿಮ ಪೊಲೀಸ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)