‘ಮನಂ’ನಲ್ಲಿ ಅಮಿತಾಭ್

ಅಕ್ಕಿನೇನಿ ನಾಗೇಶ್ವರರಾವ್ ಹಾಗೂ ಅವರ ಮೊಮ್ಮಗ ಚೈತನ್ಯ ಅಭಿನಯಿಸಿರುವ ‘ಮನಂ’ ತೆಲುಗು ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಸಣ್ಣ ಪಾತ್ರವೊಂದರಲ್ಲಿ ನಟಿಸಿರುವ ಗುಟ್ಟು ಈಗ ರಟ್ಟಾಗಿದೆ.
‘ನನ್ನ ತಂದೆ ಅಕ್ಕಿನೇನಿ ನಾಗೇಶ್ವರರಾವ್ ಸದಾ ಅಮಿತಾಭ್ ಅವರನ್ನು ಹೊಗಳುತ್ತಲೇ ಇದ್ದರು. ಅವರು ದೇಶದ ಶ್ರೇಷ್ಠ ನಟ ಎಂದೇ ಭಾವಿಸಿದ್ದರು. ನಮ್ಮ ಪಾಲಿಗೆ ಭಾವನಾತ್ಮಕವಾಗಿ ವಿಶೇಷವಾದ ಈ ಚಿತ್ರದಲ್ಲಿ ಅಮಿತಾಭ್ ನಟಿಸಿರುವುದು ಸಂತೋಷದ ಸಂಗತಿ.
ಚಿತ್ರ ಬಿಡುಗಡೆಯಾಗುವವರೆಗೆ ಈ ವಿಷಯವನ್ನು ಗುಟ್ಟಾಗಿ ಇಡಬೇಕು ಎಂದುಕೊಂಡಿದ್ದೆವು. ಆದರೆ ಅಮಿತಾಭ್ ಏನು ಮಾಡಿದರೂ ಮುಚ್ಚಿಡುವುದು ಈ ಕಾಲದಲ್ಲಿ ಕಷ್ಟವಾಗಿದೆ. ಅಮಿತಾಭ್ ಅಭಿನಯಿಸಿರುವ ತೆಲುಗಿನ ಮೊದಲ ಚಿತ್ರ ಇದು’ ಎಂದು ಇಂಡಿಯನ್ ಅಬ್ರಾಡ್ ನ್ಯೂಸ್ ಸರ್ವಿಸ್ ಸುದ್ದಿಸಂಸ್ಥೆಗೆ ಅಕ್ಕಿನೇನಿ ನಾಗಾರ್ಜುನ ತಿಳಿಸಿದರು.
ನಾಗಾರ್ಜುನ ಹೇಳುವಂತೆ ಅಮಿತಾಭ್ ಬಚ್ಚನ್ ಅಭಿನಯಿಸಿರುವುದು ತಮ್ಮ ಕುಟುಂಬಕ್ಕೆ ಸಂದ ಗೌರವವಾಗಿದೆ. ಕೇಳಿದ ತಕ್ಷಣ ಅವರು ಪಾತ್ರಕ್ಕೆ ಒಪ್ಪಿಗೆ ನೀಡಿದ್ದರಿಂದ ಸಹಜವಾಗಿಯೇ ಅವರಿಗೆ ಖುಷಿಯಾಗಿದೆ.
ಇದೇ ವರ್ಷ ಜನವರಿಯಲ್ಲಿ ಅಕ್ಕಿನೇನಿ ನಾಗೇಶ್ವರರಾವ್ ತೀರಿಹೋದರು. ಅದರಿಂದ ಚಿತ್ರಕಥೆ ಅಪೂರ್ಣವೇನೂ ಆಗಲಿಲ್ಲ. ‘ಬಹುಶಃ ತಮ್ಮ ಕೊನೆಗಾಲ ಹತ್ತಿರವಾಯಿತು ಎಂದು ಅಪ್ಪನ ಸುಪ್ತಪ್ರಜ್ಞೆ ಹೇಳುತ್ತಿತ್ತೋ ಏನೋ? ಅವರು ತಮ್ಮ ಪಾತ್ರದ ಬಹುಪಾಲಿನ ಚಿತ್ರೀಕರಣವನ್ನು ಮುಗಿಸಿದ್ದರು.
ಕೆಲವು ಸನ್ನಿವೇಶಗಳ ಚಿತ್ರೀಕರಣ ಮಾತ್ರ ಬಾಕಿ ಇತ್ತು. ಅದರಿಂದ ಸಿನಿಮಾದ ಆಶಯಕ್ಕೇನೂ ಧಕ್ಕೆಯಾಗಲಿಲ್ಲ. ಅದೃಷ್ಟವಶಾತ್ ಅಂದುಕೊಂಡಂತೆಯೇ ಚಿತ್ರ ಮೂಡಿಬಂದಿದೆ’ ಎಂದು ನಾಗಾರ್ಜುನ ಸ್ಪಷ್ಟಪಡಿಸಿದರು. ಇದೇ ತಿಂಗಳ 23ರಂದು ಚಿತ್ರ ತೆರೆಕಾಣಲಿದ್ದು, ತಮ್ಮ ತಂದೆಯ ಅಭಿಮಾನಿಗಳು ಅದನ್ನು ನೋಡಲು ಉತ್ಸುಕರಾಗಿದ್ದಾರೆ ಎನ್ನುವುದು ನಾಗಾರ್ಜುನ ಅವರಿಗೆ ಗೊತ್ತಿದೆ.
ಹಾಗೆಂದು ಅತಿ ಹೆಚ್ಚು ಪ್ರಿಂಟ್ಗಳನ್ನು ಹಾಕಿಸಿ, ಇಡೀ ಮಾರುಕಟ್ಟೆಯಲ್ಲಿ ತಮ್ಮ ಚಿತ್ರ ವಿಜೃಂಭಿಸುವಂತೆ ಮಾಡಬೇಕು ಎನ್ನುವ ಉದ್ದೇಶ ಅವರಿಗೆ ಇಲ್ಲ. ‘ಲೋಕಸಭಾ ಚುನಾವಣೆಯ ಫಲಿತಾಂಶ ಬಂದಿರುತ್ತದೆ. ಐಪಿಎಲ್ ಕ್ರಿಕೆಟ್ ಫೈನಲ್ ಪಂದ್ಯದ ದಿನವೂ ಮುಂದಕ್ಕೆ ಹೋಗಿದೆ. ಆದ್ದರಿಂದ ನಮ್ಮ ಚಿತ್ರಕ್ಕೆ ತೊಂದರೆಯಾಗುವುದಿಲ್ಲ ಎಂದು ಭಾವಿಸಿದ್ದೇನೆ.
ಪರಿಸ್ಥಿತಿ ಹೀಗಿದ್ದರೂ ನನಗೆ ಸಹಜವಾಗಿಯೇ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುವುದೋ ಎನ್ನುವ ಆತಂಕವಿದೆ’ ಎಂದೂ ನಾಗಾರ್ಜುನ ಹೇಳಿದರು, ‘ಮನಂ’ ತಮ್ಮ ಕುಟುಂಬದ ಪಾಲಿಗೆ ಅಪರೂಪದ ಚಿತ್ರವಾದರೂ ಅದು ಪ್ರತಿ ಕಲಾವಿದನ, ತಂತ್ರಜ್ಞರ ಬೆವರಿನ ಫಲ ಎಂದು ಅವರು ಭಾವುಕವಾಗಿ ನುಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.