ಮಂಗಳವಾರ, ಆಗಸ್ಟ್ 16, 2022
29 °C
ಪರೀಕ್ಷಾ ಪದ್ಧತಿ ಬದಲಾವಣೆಗೆ ಅಗತ್ಯ ಕ್ರಮ: ಕುಲಪತಿ ಪ್ರೊ.ಎಸ್.ಆರ್.ನಿರಂಜನ

‘ರೂಸಾ’ ಅಡಿ ₹20 ಕೋಟಿ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಮೂಲಸೌಕರ್ಯ ಅಭಿವೃದ್ಧಿ, ಹೊಸ ಕಟ್ಟಡಗಳ ನಿರ್ಮಾಣ, ವಸತಿಗೃಹಗಳು ಹಾಗೂ ವಿ.ವಿ ಆವರಣದ ನವೀಕರಣಕ್ಕೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು (ಎಂಎಚ್‌ಆರ್‌ಡಿ) ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಇದೇ ಮೊದಲ ಬಾರಿಗೆ ₹20 ಕೋಟಿ ಅನುದಾನ ಬಿಡುಗಡೆ ಮಾಡಿದೆ.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿವರ ನೀಡಿದ ಕುಲಪತಿ ಪ್ರೊ.ಎಸ್.ಆರ್.ನಿರಂಜನ, ‘ರಾಷ್ಟ್ರೀಯ ಶೈಕ್ಷಣಿಕ ಮೌಲ್ಯಮಾಪನ ಮತ್ತು ಗುಣಮಟ್ಟ ವರ್ಧನ ಮಂಡಳಿ (ನ್ಯಾಕ್) ಮತ್ತು ಸ್ವಯಂ ಅಧ್ಯಯನ ವರದಿ ಸಲ್ಲಿಕೆ ಬಳಿಕ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ (ರೂಸಾ)ದಡಿ ₹20 ಕೋಟಿ ಅನುದಾನ ಬಿಡುಗಡೆಯಾಗಿದೆ.ಶೇ 35ರಷ್ಟು ಅನುದಾನವನ್ನು ಹೊಸ ಕಟ್ಟಡಗಳ ನಿರ್ಮಾಣ, ಶೇ 35ನ್ನು ವಸತಿಗೃಹಗಳ ನವೀಕರಣ ಹಾಗೂ ಶೇ 30ರಷ್ಟನ್ನು ವಿ.ವಿ ಆವರಣದ ಬೆಳವಣಿಗೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಕೇಂದ್ರ ಸ್ಥಾಪನೆ, ಸಾಂಪ್ರದಾಯಿಕ ಶಕ್ತಿಮೂಲಗಳ ವಿಭಾಗಗಳ ಸ್ಥಾಪನೆಗೆ ಬಳಸಲಾಗುವುದು’ ಎಂದರು.‘ಮಾನವ ಕಲ್ಯಾಣಕ್ಕೆ ನೈಸರ್ಗಿಕ ಮತ್ತು ಜೈವಿಕ ಅಣುಗಳ ಅಧ್ಯಯನ’ ಶೀರ್ಷಿಕೆಯಡಿ ಜೀವಶಾಸ್ತ್ರ ವಿಭಾಗಗಳ ಅಂತರಶಿಸ್ತೀಯ ಸಂಶೋಧನೆ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಸೂಕ್ಷ್ಮಜೀವಿಶಾಸ್ತ್ರ, ಜೈವಿಕ ತಂತ್ರಜ್ಞಾನ, ಸಸ್ಯಶಾಸ್ತ್ರ ಹಾಗೂ ಜೀವರಸಾಯನಶಾಸ್ತ್ರ ವಿಭಾಗಗಳು ಒಟ್ಟಾಗಿ ಸಂಶೋಧನೆ ಕೈಗೊಳ್ಳಲಿವೆ. ಇದಕ್ಕೆ ರೂಸಾ ಅಡಿಯಲ್ಲಿ ₹40 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ವಿಸ್ತೃತ ವರದಿಯನ್ನು ಎಂಎಚ್‌ಆರ್‌ಡಿಗೆ ಕಳುಹಿಸಲಾಗಿದೆ. ಅಲ್ಲದೆ, ಅತ್ಯುನ್ನತ ಸಾಮರ್ಥ್ಯ ಕೇಂದ್ರವನ್ನಾಗಿಸಲು ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.‘ವಿ.ವಿಗೆ ಲಭ್ಯವಾಗಿರುವ ₹20 ಕೋಟಿ ಅನುದಾನದಲ್ಲಿ ವಿ.ವಿ ಆವರಣದಲ್ಲಿ ಪರಿಹಾರ ಬೋಧನಾ ಕೇಂದ್ರ, ಶೈಕ್ಷಣಿಕ ಸಿಬ್ಬಂದಿ ಕಾಲೇಜು, ಕ್ರೀಡಾಂಗಣದಲ್ಲಿ 8ಲೇನ್ ಟ್ರ್ಯಾಕ್ ನಿರ್ಮಾಣ, ಪರಿಸರವಿಜ್ಞಾನ ವಿಭಾಗ, ದೃಶ್ಯ ಮತ್ತು ಪ್ರದರ್ಶಕ ಕಲೆಗಳ ವಿಭಾಗಗಳ ನೂತನ ಕಟ್ಟಡ, ಹೈದರಾಬಾದ್ ಕರ್ನಾಟಕ ವಸ್ತುಸಂಗ್ರಹಾಲಯ ಮತ್ತು ರಾಯಚೂರಿನ ಸ್ನಾತಕೋತ್ತರ ಕೇಂದ್ರದಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗುವುದು’ ಎಂದರು.ನ್ಯಾಕ್ ತಂಡ ಭೇಟಿ: ನ್ಯಾಕ್ ತಂಡವು 2016ರ ಫೆಬ್ರುವರಿ ಅಥವಾ ಮಾರ್ಚ್‌ನಲ್ಲಿ ವಿ.ವಿಗೆ ಭೇಟಿ ನೀಡಲಿದೆ. ಹೀಗಾಗಿ, ಕಟ್ಟಡ, ವಸತಿಗೃಹ, ಪ್ರಯೋಗಾಲಯಗಳ ನವೀಕರಣ, ರಸ್ತೆ ನಿರ್ಮಾಣ, ಶುದ್ಧ ಕುಡಿಯುವ ನೀರು, ಶೌಚಾಲಯ ನಿರ್ಮಾಣ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ₹5 ಕೋಟಿ ವೆಚ್ಚದಲ್ಲಿ 53 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ’ ಎಂದು ಹೇಳಿದರು.ಹೊಸ ಡಿಪ್ಲೊಮಾ ಕೋರ್ಸ್: ಕರ್ನಾಟಕ ಜೈವಿಕ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ (ಕೆಬಿಐಟಿಎಸ್‌) ಇಲಾಖೆಯು ವಿ.ವಿಗೆ ₹1 ಕೋಟಿ ಸಹಾಯಧನ ಬಿಡುಗಡೆ ಮಾಡಿದೆ. ಈ ಅನುದಾನವನ್ನು ಜೀವವಿಜ್ಞಾನ ವಿಭಾಗಗಳ ಅಂತರಶಿಸ್ತೀಯ ಸಂಶೋಧನೆ ಕೈಗೊಳ್ಳಲು ಹೊಸದಾಗಿ ಆರಂಭಿಸಲಾಗಿರುವ ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ (ಜೈವಿಕ ತಂತ್ರಜ್ಞಾನ)ಗೆ ಬಳಸಲಾಗುವುದು. ಈ ಕೋರ್ಸ್‌ನಲ್ಲಿ 10 ವಿದ್ಯಾರ್ಥಿಗಳಿಗೆ ಪ್ರವೇಶ ಲಭ್ಯವಿದ್ದು, ಪ್ರತಿ ವಿದ್ಯಾರ್ಥಿಗೂ ತಲಾ ₹10 ಸಾವಿರ ಫೆಲೊಷಿಪ್ ನೀಡಲಾಗುವುದು’

ಎಂದು ತಿಳಿಸಿದರು.‘ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಯು ವಿ.ವಿಗೆ 120 ಕಂಪ್ಯೂಟರ್, ಪ್ರಿಂಟಿಂಗ್ ಮಷಿನ್ ನೀಡಿದೆ. ಅಲ್ಲದೆ, 6 ಹೊಸ ಬಸ್‌ಗಳನ್ನು ಕೊಡುತ್ತಿದೆ. ಎಚ್‌ಕೆಆರ್‌ಡಿಬಿ ಅನುದಾನದಲ್ಲಿ ವಿ.ವಿಯ 30 ಉಪನ್ಯಾಸ ಕೊಠಡಿಗಳನ್ನು ಸ್ಮಾರ್ಟ್‌ ಕ್ಲಾಸ್‌ರೂಂಗಳಾಗಿ ಅಭಿವೃದ್ಧಿ ಪಡಿಸಲಾಗಿದೆ. ರಾಯಚೂರು ಮತ್ತು ಬೀದರ್ ಸ್ನಾತಕೋತ್ತರ ಕೇಂದ್ರಗಳ ಎಲ್ಲ ವಿದ್ಯಾರ್ಥಿಗಳಿಗೆ ಇ–ಗ್ರಂಥ, ಇ–ನಿಯತಕಾಲಿಕೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದರು. ಕುಲಸಚಿವರಾದ ಪ್ರೊ.ಮೈಕಲ್, ಪ್ರೊ.ಸಿ.ಎಸ್.ಪಾಟೀಲ ಇದ್ದರು.***

ವಿಶ್ವವಿದ್ಯಾಲಯವನ್ನು ಅತ್ಯುನ್ನತ ಸಾಮರ್ಥ್ಯ ಕೇಂದ್ರ (POTENTIAL FOR EXCELLENCE) ವನ್ನಾಗಿಸಲು ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ನ್ಯಾಕ್‌ಗೆ ವರದಿ ಸಲ್ಲಿಸಲಾಗಿದೆ.

-ಪ್ರೊ.ಎಸ್.ಆರ್.ನಿರಂಜನ,
ಕುಲಪತಿ, ಗುಲಬರ್ಗಾ ವಿ.ವಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.