ಸೋಮವಾರ, ಜನವರಿ 27, 2020
22 °C

‘ವಚನಕಾರರದ್ದು ಶ್ರಮಮೂಲ ಸಂಸ್ಕೃತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಚನಕಾರರು ತಮ್ಮ ಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿದ್ದ ಜನಪರವಲ್ಲದ ಹಲವು ಅಂಶಗಳನ್ನು ನಿರಾಕರಿಸಿ ಶ್ರಮಮೂಲ ನೆಲೆಯಲ್ಲಿ ಪರ್ಯಾಯ ಸಂಸ್ಕೃತಿಯನ್ನು ಕಟ್ಟಲು ಪ್ರಯತ್ನಿಸಿದರು ಎಂದು  ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ. ವೀರಣ್ಣ ಹೇಳಿದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಬೆಂಗಳೂರು ಜಿಲ್ಲಾ ಘಟಕದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯ­ಕ್ರಮ­ದಲ್ಲಿ ವಚನಕಾರರ ಪ್ರತಿಭಟನೆ­ಗಳ ನೆಲೆಗಳ  ಕುರಿತು ಅವರು ಮಾತನಾಡಿ, ‘ಕಾಯಕದ ಮಹತ್ವ, ಸ್ತ್ರೀ–ಪುರುಷ ಸಮಾನತೆ, ವೈದಿಕ ಪರಂಪರೆಯ ವಿಶ್ಲೇಷಣೆಯನ್ನು ವಚನಕಾರರು ಮಾಡಿದರು. ಅವರ ಪ್ರತಿಪಾದನೆಯ ಹೊಸ ಚಿಂತನೆಯಲ್ಲಿ ನಡೆ–ನುಡಿಯ ಸಮನ್ವಯ ಮತ್ತು ಅಂತರಂಗ–ಬಹಿರಂಗಗಳ ಏಕರೂಪತೆಗೆ ಪ್ರಾಧಾನ್ಯತೆಯಿತ್ತು’ ಎಂದು ವಚನ ಚಳುವಳಿಯ ಸ್ವರೂಪವನ್ನು ವಿವರಿಸಿದರು.‘ದೇವಾಲಯಗಳ ದೇವರನ್ನು ತೊರೆದು ಆತ್ಮಲಿಂಗ–ಆಪ್ತಲಿಂಗ ಪರಿ­ಕಲ್ಪನೆ­ಯನ್ನು ತಳ ಸಮುದಾಯದ ಕೈಗೆ ನೀಡಿದರು. ಇದು  ಅಂದಿನ ಕಾಲಕ್ಕೆ ಕ್ರಾಂತಿಕಾರಕ ಹೆಜ್ಜೆ­ಯಾಗಿತ್ತು’ ಎಂದು ವಿಶ್ಲೇಷಿಸಿದರು.ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ, ದಿಬ್ಬೂರು ಸಿದ್ದಲಿಂಗಪ್ಪ ಮತ್ತು ಇತರರು ಉಪನ್ಯಾಸ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)