ಶನಿವಾರ, ಫೆಬ್ರವರಿ 27, 2021
28 °C

‘ವ್ಯಕ್ತಿತ್ವ ರೂಪಿಸುವ ಚಿತ್ತಾಲರ ಸಾಹಿತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ವ್ಯಕ್ತಿತ್ವ ರೂಪಿಸುವ ಚಿತ್ತಾಲರ ಸಾಹಿತ್ಯ’

ಸಿದ್ದಾಪುರ: ‘ಸಾಹಿತ್ಯದ ಮೂಲಕ ವ್ಯಕ್ತಿಯನ್ನು ವ್ಯಕ್ತಿತ್ವವಾಗಿ ರೂಪಿಸುವ ಕಲೆಗಾರಿಕೆ ಯಶವಂತ ಚಿತ್ತಾಲರದ್ದು’ ಎಂದು ಹಿರಿಯ ಸಾಹಿತಿ ವಿಷ್ಣು ನಾಯ್ಕ ಅಭಿಪ್ರಾಯಪಟ್ಟರು.ಬೆಂಗಳೂರಿನ ಸಹಚರ, ಪಟ್ಟಣದ ಸಂಸ್ಕೃತಿ ಸಂಪದ, ಪ್ರಯೋಗ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸ್ಥಳೀಯ ಶಂಕರ ಮಠದ ಸಭಾಭವನ ದಲ್ಲಿ ಭಾನುವಾರ ಏರ್ಪಡಿಸಿದ್ದ ‘ಯಶವಂತ ಚಿತ್ತಾಲರ ಸಾಹಿತ್ಯ, ಒಂದು ಮರುಚಿಂತನೆ’ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಸಾವು, ಕ್ರೌರ್ಯ ಮತ್ತು ಹುಡುಕಾಟ ಚಿತ್ತಾಲರ ಸಾಹಿತ್ಯದ ಪ್ರಮುಖ  ಅಂಶಗಳು. ಮನುಷ್ಯ ಎಷ್ಟು ಕ್ರೂರಿಯಾಗಬಲ್ಲ ಎಂಬುದು ಅವರ  ಕತೆಗಳಲ್ಲಿ ಆಗಾಗ ಪ್ರಕಟಗೊಳ್ಳುತ್ತಲೇ ಇರುತ್ತದೆ. ಯಶವಂತ ಚಿತ್ತಾಲರ ಸಹೋದರ ಗಂಗಾಧರ ಚಿತ್ತಾಲರೂ ತಮ್ಮ ಕವಿತೆಗಳಲ್ಲಿ ಇದೇ ಹುಡುಕಾಟ ನಡೆಸಿದ್ದು ಕಂಡು ಬರುತ್ತದೆ’ ಎಂದರು.ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ.ಆರ್‌.ಪಿ.ಹೆಗಡೆ ಮಾತನಾಡಿ, ‘ಯಶವಂತ ಚಿತ್ತಾಲರಿಗೆ ಮನುಷ್ಯನ ಪ್ರೀತಿ ಮತ್ತು ಅಂತಃಕರಣ ಮುಖ್ಯ. ಅದನ್ನು ಅರ್ಥ ಮಾಡಿಕೊಳ್ಳಲು ಅವರು ತಾವು ಕಲಿತಿದ್ದ ವಿಜ್ಞಾನದ ವಿಶ್ಲೇಷಕ ಗುಣವನ್ನು ಬಳಸಿ ಕೊಂಡಿದ್ದಾರೆ. ತಮ್ಮನ್ನು ತಾವೇ ಶೋಧಿಸಿ ಕೊಳ್ಳುವ ಪ್ರವೃತ್ತಿ ಚಿತ್ತಾಲ ರದ್ದು. ಯಾವುದೇ ಪ್ರಾಣಿಗೂ ಇರದ ಗುಣವೊಂದು ಮನುಷ್ಯನಲ್ಲಿದೆ, ಅದು ತನ್ನವರನ್ನು ತಾನು ಕೊಲ್ಲುವುದು. ತನ್ನ ಸಂತೋಷಕ್ಕಾಗಿ ಮತ್ತೊಬ್ಬನನ್ನು ಕೊಲ್ಲುವುದಕ್ಕೆ ಮನುಷ್ಯ ಮಾತ್ರ ಮುಂದಾಗಬಲ್ಲ ಎಂಬುದು ಚಿತ್ತಾಲರ ಅಭಿಪ್ರಾಯವಾಗಿತ್ತು’ ಎಂದರು.ಕವಿ ಜಯಂತ ಕಾಯ್ಕಿಣಿ, ಕತೆಗಾರ ಶ್ರೀಧರ ಬಳಗಾರ ಮತ್ತು ರಂಗಕರ್ಮಿ ಕೆ.ವಿ.ಅಕ್ಷರ ಮತ್ತು ಇತರರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಪ್ರಯೋಗ ಸಂಸ್ಥೆಯ ಗಂಗಾಧರ ಕೊಳಗಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಎಂ.ಕೆ.ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.