ಬುಧವಾರ, ಮಾರ್ಚ್ 3, 2021
22 °C
ವಿಶ್ವ ಛಾಯಾಗ್ರಹಣ ದಿನ

‘ಶಂಕರ’ ಕಂಡ ಹಂಪಿ

ರಮೇಶ ಕೆ. Updated:

ಅಕ್ಷರ ಗಾತ್ರ : | |

‘ಶಂಕರ’ ಕಂಡ ಹಂಪಿ

ಕಲಾವಿದರಿಗೆ ಹಾಗೂ ಛಾಯಾಗ್ರಾಹಕರಿಗೆ ಬಳ್ಳಾರಿ ಜಿಲ್ಲೆಯಲ್ಲಿರುವ ಹಂಪಿ ನೆಚ್ಚಿನ ತಾಣ. ವಿಜಯನಗರ ಅರಸರು ಆಳಿದ  ಈ ಸ್ಥಳವನ್ನು ಇಂದು ‘ಹಾಳು ಹಂಪಿ’ ಎಂದು ಕರೆಯುತ್ತಾರೆ. ಆದರೆ, ವಿಜಯನಗರ ಕಾಲದ ಶ್ರೀಮಂತ ವಾಸ್ತುಶಿಲ್ಪ ಕಲೆಯನ್ನು ಛಾಯಾಗ್ರಾಹಕರು ತೆರೆದಿಡುವ ಬಗೆ ಮಾತ್ರ ಅನನ್ಯ. ಒಬ್ಬೊಬ್ಬ  ಛಾಯಾಗ್ರಾಹಕನಿಗೂ ಭಿನ್ನವಾಗಿ ಕಾಣುವ ಇಲ್ಲಿನ ಕಲ್ಲಿನ ಸ್ಮಾರಕಗಳು ಒಂದೊಂದು ಕಲಾಕೃತಿಯಾಗಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗುತ್ತವೆ. ನಗರದ ಯುವ ಛಾಯಾಗ್ರಾಹಕ ಶಂಕರ್‌ ಟಿ.ವಿ. ಹಂಪಿಯ ಸ್ಮಾರಕಗಳ ಚಿತ್ರವನ್ನು ವಿಭಿನ್ನವಾಗಿ ಸೆರೆಹಿಡಿದಿದ್ದಾರೆ. ಜೊತೆಗೆ ಕಿರುಚಿತ್ರವನ್ನು ಮಾಡುತ್ತಿದ್ದಾರೆ.ಛಾಯಾಗ್ರಹಣದಲ್ಲಿ ಲ್ಯಾಂಡ್‌ಸ್ಕೇಪ್‌,  ಪೋರ್ಟೇಟ್‌ (ಭಾವಚಿತ್ರ), ಫ್ಯಾಷನ್‌, ಸಿನಿಮಾಟೊಗ್ರಫಿ, ಫೋಟೊ ಜರ್ನಲಿಸಂ, ಫುಡ್‌, ವಾಸ್ತುಶಿಲ್ಪ (ಆರ್ಕಿಟಕ್ಚರಲ್‌), ಪ್ರೊಡಕ್ಟ್‌... ಹೀಗೆ ಹಲವು ವಿಭಾಗಗಳಿವೆ. ಆರ್ಕಿಟೆಕ್ಚರಲ್‌ ಛಾಯಾಗ್ರಹಣದಲ್ಲಿ ನೈಪುಣ್ಯ ಸಾಧಿಸಿರುವ ಶಂಕರ್‌ ಎಚ್‌ಡಿಆರ್‌ (ಹೈ ಡೈನಮಿಕ್‌ ರೇಂಜ್‌) ಫೋಟೊಗ್ರಫಿ ಮಾಡುತ್ತಾರೆ.‘ಸಾಮಾನ್ಯವಾಗಿ ಒಂದು ದೇವಾಲಯದ ಹೊರಾಂಗಣ ಚಿತ್ರ ತೆಗೆದರೆ ಕೆಲವೊಮ್ಮೆ ಆಕಾಶ ಬಿಳಿಯಾಗಿ ಕಾಣುತ್ತದೆ. ಆದರೆ ಎಚ್‌ಡಿಆರ್‌ನಲ್ಲಿ ಪ್ರತಿ ಆಬ್ಜೆಕ್ಟ್‌ ವಿಭಿನ್ನ ಎಕ್ಸ್‌ಪೋಷರ್‌ನಲ್ಲಿ ಶೂಟ್ ಮಾಡಲಾಗುತ್ತದೆ. ಅಂತಿಮವಾಗಿ ಅವುಗಳೆಲ್ಲವನ್ನೂ ಕೂಡಿಸಿ ಅಂತಿಮ ಫೋಟೊವನ್ನು ಸಿದ್ಧಪಡಿಸುತ್ತೇವೆ. ಆಗ ಎಚ್‌ಡಿಆರ್‌ ಫೋಟೊಗ್ರಫಿಯಾಗುತ್ತದೆ’ ಎನ್ನುತ್ತಾರೆ ಶಂಕರ್‌.ಶಂಕರ್‌ ಅವರು 20 ಬಾರಿ ಹಂಪಿಗೆ ಹೋಗಿ ಛಾಯಾಗ್ರಹಣ ಮಾಡಿದ್ದಾರೆ. ಕಳೆದ ತಿಂಗಳು ಆಗ್ರಾಗೆ ಹೋಗಿ ತಾಜ್‌ಮಹಲ್‌ ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಸೂರ್ಯ ಮುಳುಗುವ ವೇಳೆ ತಾಜ್‌ಮಹಲ್‌ ಎದುರಿಗೆ  ಮೇಕೆಗಳೊಂದಿಗೆ ಮನೆಗೆ ಹಿಂತಿರುಗುತ್ತಿರುವ ಮಹಿಳೆಯ ಚಿತ್ರ ಕಲಾತ್ಮಕವಾಗಿದೆ.ಇನ್ನು ಹಂಪಿಯ ಲೋಟಸ್‌ ಟೆಂಪಲ್‌, ವಿಠ್ಠಲ ದೇವಸ್ಥಾನ, ಹಜರಾಮ ದೇವಸ್ಥಾನ, ಕಲ್ಲಿನ ರಥ, ಆನೆ ಸಾಲು ಮಂಟಪ, ಕಮಲ ಮಹಲ್‌, ತಮಿಳು ನಾಡಿನ ಮಹಾಬಲೀಪುರಂ ದೇವಾಲಯ... ಹೀಗೆ ಒಂದೊಂದು ದೇವಾಲಯ, ಸ್ಮಾರಕಗಳು ಛಾಯಾಚಿತ್ರಗಳ ಮೂಲಕ ಕಲಾಕೃತಿಗಳಾಗಿವೆ.‘ಆರ್ಕಿಟಕ್ಚರಲ್‌ ಫೋಟೊಗ್ರಫಿ ಕಲಿಕೆಗೆ ತಾಳ್ಮೆ ಬೇಕು, ಒಂದು ಸ್ಥಳದ ಫೋಟೊಗ್ರಫಿ ಮಾಡುವಾಗ ಮೊದಲು ಅದರ ಇತಿಹಾಸ, ತಿಳಿದುಕೊಳ್ಳಬೇಕು, ಈಗಾಗಲೇ ತೆಗೆದ ಚಿತ್ರಕ್ಕಿಂತ ಭಿನ್ನವಾಗಿ ತೆಗೆಯಬೇಕು ಹಾಗೂ ಯೋಚಿಸಬೇಕು’ ಎನ್ನುತ್ತಾರೆ ಅವರು.ಶಂಕರ್‌ ಛಾಯಾಗ್ರಹಣವನ್ನಷ್ಟೇ ಮಾಡದೇ ಚಿತ್ರಗಳನ್ನೂ ರಚಿಸುತ್ತಾರೆ. ಕಳೆದ ಹತ್ತು ವರ್ಷಗಳಿಂದ ಪೇಂಟಿಂಗ್‌ ಮಾಡುತ್ತಿರುವ ಇವರು ಮೈಸೂರಿನ ಲಲಿತಕಲಾ ಮಹಾಸಂಸ್ಥಾನದಲ್ಲಿ ಬ್ಯಾಚುಲರ್‌ ಆಫ್‌ ಫೈನ್‌ ಆರ್ಟ್ಸ್ ಮಾಡಿದ್ದಾರೆ. ಪ್ಯಾಲೆಟ್‌ ನೈಫ್‌ ಮತ್ತು ಜಲವರ್ಣ ಚಿತ್ರ ರಚಿಸುವುದು  ಇವರ ವಿಶೇಷ.‘ಕ್ಯಾಮೆರಾವನ್ನು ಬ್ರಶ್‌ ಆಗಿ, ಲೈಟ್‌ ಅನ್ನು ಪೇಂಟ್‌ ಆಗಿ ಬಳಸಿಕೊಂಡು ಬರೆಯುವ ಚಿತ್ರವೇ ಫೋಟೊ. ಒಂದೊಂದು ಫೋಟೊಗಳು ಕಲಾಕೃತಿಗಳಿಗೆ ಸಮನಾಗಿರುತ್ತವೆ. ಕೆಲವೊಮ್ಮೆ ನಾನು ತೆಗೆದ ಛಾಯಾಚಿತ್ರಗಳು ಪೇಂಟಿಂಗ್‌ಗೆ ಸ್ಫೂರ್ತಿಯಾಗಿವೆ’ ಎಂದು ಛಾಯಾಗ್ರಹಣ ಮಹತ್ವ ವಿವರಿಸುತ್ತಾರೆ ಶಂಕರ್‌.ಹಂಪಿ ಕಿರುಚಿತ್ರ

ಹಂ
ಪಿ ಹಾಳಾಗದೇ ಉಳಿದಿದ್ದರೆ ಈಗ ಹೇಗಿರುತ್ತಿತ್ತು ಎಂಬ ವಿಷಯವನ್ನು ಇಟ್ಟುಕೊಂಡು ಕಿರುಚಿತ್ರವನ್ನು ಮಾಡುತ್ತಿದ್ದಾರೆ ಶಂಕರ್‌. ಈಗಾಗಲೇ ಚಿತ್ರೀಕರಣ ಕೆಲಸ ಆರಂಭಿಸಿರುವ ಇವರು, ಕಥೆ, ನಿರ್ದೇಶನ ಹಾಗೂ ಸಿನಿಮಾಟೊಗ್ರಫಿಯನ್ನೂ ಮಾಡಿದ್ದಾರೆ.ಹೆಬ್ಬಾಳದಲ್ಲಿರುವ ದೃಷ್ಟಿ ಫೋಟೊಗ್ರಫಿ ಶಾಲೆಯಲ್ಲಿ ಶಂಕರ್‌ ಆರು ತಿಂಗಳ ಕೋರ್ಸ್‌ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಗೌತಮ್‌ ಬಸಕ್‌ ಇವರ ಗುರು. ಗೌತಮ್‌ ಅವರು 35 ವರ್ಷಗಳಿಂದ ಫೋಟೊಗ್ರಫಿ ಪಾಠ ಮಾಡುತ್ತಿದ್ದಾರೆ.ಎಂ.ಜಿ.ರಸ್ತೆಯಲ್ಲಿ ಶಂಕರ್‌  ‘ಮೈಂಡ್‌ಬ್ಲ್ಯೂ’ ಎಂಬ ಕಂಪೆನಿಯನ್ನು ಆರಂಭಿಸಿ, ಪ್ರೊಡಕ್ಟ್‌ ಹಾಗೂ ಆರ್ಕಿಟಕ್ಚರಲ್‌ ಫೋಟೊಗ್ರಫಿಯನ್ನು ಮಾಡುತ್ತಿದ್ದಾರೆ.

ಮಾಹಿತಿಗೆ:  97427 77766

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.