‘ಸಂಕಷ್ಟದಲ್ಲಿ ಸಿಲುಕಿದವರು ಶೀಘ್ರ ಭಾರತಕ್ಕೆ’

ನವದೆಹಲಿ (ಪಿಟಿಐ): ಸೌದಿ ಅರೇಬಿಯಾದಲ್ಲಿ ನೌಕರಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ 10 ಸಾವಿರಕ್ಕೂ ಅಧಿಕ ಭಾರತೀಯರನ್ನು ಶೀಘ್ರದಲ್ಲೇ ತವರಿಗೆ ಕರೆತರಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಸೋಮವಾರ ಸಂಸತ್ತಿಗೆ ತಿಳಿಸಿದ್ದಾರೆ.
ಭಾರತೀಯರನ್ನು ಕರೆತರುವ ಪ್ರಕ್ರಿಯೆಯ ಮೇಲ್ವಿಚಾರಣೆಯನ್ನು ನೋಡಿ ಕೊಳ್ಳಲು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ. ಸಿಂಗ್ ಅವರನ್ನು ಸೌದಿಗೆ ಕಳುಹಿಸುವುದಾಗಿ ಅವರು ಹೇಳಿದ್ದಾರೆ.
ಸೌದಿಯಲ್ಲಿ ನೌಕರಿ ಕಳೆದುಕೊಂಡ ಭಾರತೀಯರು ಹಸಿವಿನಿಂದ ನರಳುತ್ತಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ ಕಾರಣ ಸುಷ್ಮಾ ವಿವರಣೆ ನೀಡಿದ್ದಾರೆ.
‘ಭಾರತೀಯರಿಗೆ ಆಹಾರ ಒದಗಿಸಲು ಸೌದಿಯ ಭಾರತೀಯ ರಾಯಭಾರ ಕಚೇರಿಯು ಐದು ಕೇಂದ್ರಗಳನ್ನು ತೆರೆದಿದೆ. ಅಲ್ಲಿನ ಪರಿಸ್ಥಿತಿಯನ್ನು ಪ್ರತಿ ಗಂಟೆಗೊಮ್ಮೆ ಸ್ವತಃ ಅವಲೋಕಿ ಸುತ್ತಿದ್ದೇನೆ’ ಎಂದು ಸುಷ್ಮಾ ತಿಳಿಸಿದ್ದಾರೆ.
‘ಸೌದಿಯಲ್ಲಿ ಭಾರತದ ಯಾರೂ ಹಸಿವಿನಿಂದ ನರಳುತ್ತಿಲ್ಲ. ಸಂಸತ್ತಿನ ಮೂಲಕ ಈ ಭರವಸೆಯನ್ನು ದೇಶಕ್ಕೆ ನೀಡುತ್ತಿದ್ದೇನೆ. ನೌಕರಿ ಕಳೆದುಕೊಂಡ ಎಲ್ಲರನ್ನೂ ದೇಶಕ್ಕೆ ಕರೆತರಲಾಗುವುದು’ ಎಂದಿದ್ದಾರೆ.
ಈ ನೌಕರರನ್ನು ವಾಪಸ್ ಕರೆತರುವ ಸಂಬಂಧ ಸೌದಿ ಅರೇಬಿಯಾದ ವಿದೇಶಾಂಗ ಮತ್ತು ಕಾರ್ಮಿಕ ಸಚಿವಾಲಯದ ಜತೆ ಮಾತುಕತೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
‘ಸೌದಿ ಕಾನೂನಿನಂತೆ ವಾಪಸಾತಿ ವೀಸಾ ನೀಡಬೇಕಾದರೆ ಮಾಲೀಕರ ನಿರಾಕ್ಷೇಪಣಾ ಪತ್ರ ಅಗತ್ಯ. ಭಾರತೀಯರು ಕೆಲಸ ಮಾಡುತ್ತಿದ್ದ ಕೆಲ ಕಂಪೆನಿಗಳು ಬಾಗಿಲು ಮುಚ್ಚಿದ್ದು, ಅವುಗಳ ಮಾಲೀಕರು ದೇಶ ಬಿಟ್ಟು ತೆರಳಿದ್ದಾರೆ. ಆದ್ದರಿಂದ ಭಾರತೀಯ ನೌಕರರು ವೀಸಾ ಲಭಿಸದೆ ತೊಂದರೆಯಲ್ಲಿದ್ದಾರೆ’ ಎಂದು ವಿವರಿಸಿದ್ದಾರೆ.
ಭಾರತೀಯ ನೌಕರರಿಗೆ ವಾಪಸಾತಿ ವೀಸಾ ನೀಡುವಂತೆ ಮತ್ತು ಬಾಕಿಯಿ ರುವ ವೇತನ ನೀಡಲು ಸೂಕ್ತ ಕ್ರಮ ಕೈ ಗೊಳ್ಳುವಂತೆ ಸೌದಿ ಅರೇಬಿಯಾ ಸರ್ಕಾ ರಕ್ಕೆ ಮನವಿ ಮಾಡಿದ್ದೇವೆ ಎಂದಿದ್ದಾರೆ.
ಸುಷ್ಮಾ ಅವರು ಲೋಕಸಭೆಯಲ್ಲಿ ಸ್ಪಷ್ಟೀಕರಣ ನೀಡಿದ ಬಳಿಕವೂ ವಿರೋಧ ಪಕ್ಷಗಳ ಕೆಲವು ಸದಸ್ಯರು ಕೆಲವೊಂದು ಪ್ರಶ್ನೆಗಳನ್ನು ಮುಂದಿಟ್ಟರು. ಆದರೆ ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಸುಮಿತ್ರಾ ಮಹಾಜನ್, ‘ಸಂಕಷ್ಟದಲ್ಲಿರುವ ಭಾರತೀಯರಿಗೆ ನೆರವಾಗಲು ಸುಷ್ಮಾ ತಮ್ಮಿಂದಾದ ಎಲ್ಲ ಕೆಲಸ ಮಾಡಿದ್ದಾರೆ. ಅದನ್ನು ಮೆಚ್ಚಲೇಬೇಕು. ಬೇರೆ ಯಾರೂ ಈ ರೀತಿ ಕೆಲಸ ಮಾಡುತ್ತಿರಲಿಲ್ಲ’ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.