‘ಸಭ್ಯ ಸಮಾಜದ ನಿರ್ಮಾಣ ಸಾಹಿತಿಗಳ ಆದ್ಯತೆ’

ಬೆಂಗಳೂರು: ‘ಜನಪ್ರತಿನಿಧಿಗಳು ದಾರಿ ತಪ್ಪದಂತೆ ನೋಡಿಕೊಳ್ಳುವುದು ಸಾಹಿತಿಗಳ ಕೆಲಸವಾಗಬೇಕು. ಸಭ್ಯ ಸಮಾಜದ ನಿರ್ಮಾಣ ಸಾಹಿತಿಗಳ ಆದ್ಯತೆಯಾಗಬೇಕು’ ಎಂದು ಕರ್ನಾಟಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಹೇಳಿದರು.
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕನ್ನಡ ಸಾಹಿತ್ಯ ಪರಿಷತ್ತು–100’ ಒಂದು ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಯಾವುದೇ ಒಂದು ಪಕ್ಷವನ್ನು ಪ್ರತಿನಿಧಿಸಿ, ಅವರ ಪರ ಪ್ರಚಾರ ಮಾಡುವುದು ಸಾಹಿತಿಗಳ ಕೆಲಸವಲ್ಲ. ಸಾಹಿತ್ಯದ ಕೆಲಸ ಯಾವುದೇ ಚುನಾವಣೆಯನ್ನು ಅವಲಂಬಿಸಿಲ್ಲ. ಯಾವ ಪಕ್ಷವು ಆಡಳಿತಕ್ಕೆ ಬಂದರೂ ನಮಗೆ ಮುಖ್ಯವಲ್ಲ. ದೇಶದ ಸಮಗ್ರತೆ, ಘನತೆಯನ್ನು ಕಾಯಬೇಕು ಎನ್ನುವುದೇ ಅಪೇಕ್ಷೆಯಾಗಿದೆ’ ಎಂದು ಹೇಳಿದರು.
‘ಸಾಹಿತ್ಯ ಪರಿಷತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೂ ಮಾತೃಸಂಸ್ಥೆಯಾಗಿದೆ. ಕೇವಲ 100– 200 ಸದಸ್ಯರಿಂದ ಆರಂಭವಾಗಿದ್ದ ಸಂಸ್ಥೆ ಇಂದು 2 ಲಕ್ಷ ಸದಸ್ಯರನ್ನು ಹೊಂದಿದೆ’ ಎಂದರು.
‘ಸಾಹಿತ್ಯ ಪರಿಷತ್ತಿನ 100 ರ ವರ್ಷಾಚರಣೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಭಾಷಣ, ವಿಚಾರ ಸಂಕಿರಣಕ್ಕೆ ಮಾತ್ರ ಸೀಮಿತವಾಗಬಾರದು. ಇದೊಂದು ಸಾರ್ವಜನಿಕ ಹಬ್ಬವಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ಸಮಾಜ ಶಿಕ್ಷಣ ಸಂಸ್ಥೆಯಾಗಬೇಕು’ ಎಂದು ಹೇಳಿದರು.
‘ಸರ್ಕಾರ ಸಂಸ್ಥೆಗೆ ನೀಡುವುದು ದಾನವಲ್ಲ, ನಾವು ಪಡೆಯುವುದು ಭಿಕ್ಷೆಯಲ್ಲ. ರಾಜ್ಯದ ಸಾಹಿತ್ಯ ಮತ್ತು ಸಂಸ್ಕೃತಿಗೆ ನೆರವು ನೀಡಬೇಕಾದದ್ದು ಸರ್ಕಾರದ ಕರ್ತವ್ಯವಾಗಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿದ್ದು ನಮ್ಮ ಕರ್ತವ್ಯವಾಗಿದೆ’ ಎಂದರು.
ವಿಮರ್ಶಕ ಪ್ರೊ.ಜಿ.ಅಶ್ವತ್ಥನಾರಾಯಣ, ‘ಸಂಸ್ಥೆಯ ಒಂದೊಂದು ಕಣವು ಸಾಹಿತಿಗಳ ತ್ಯಾಗದ ಮತ್ತು ನಿರಂತರ ಶ್ರಮದ ಪ್ರತೀಕ. ಹಿಂದೆ ಸಾಹಿತ್ಯ ಪರಿಷತ್ತು ಸಾಹಿತಿಗಳ ಕಾಶಿಯಾಗಿತ್ತು. ಇದು ಕೇವಲ ಸಂಸ್ಥೆಯಲ್ಲ. ಸಾಹಿತಿಗಳ ಜೀವಂತ ಸಂಗಮವಾಗಿತ್ತು’ ಎಂದು ನೆನೆದರು.
ಸುತ್ತೋಲೆ ಹೊರಡಿಸಿ
ಸಾಹಿತ್ಯ ಪರಿಷತ್ತಿನ 100ರ ವರ್ಷಾ ಚರಣೆಯನ್ನು ಪ್ರಾಥಮಿಕ ಶಾಲೆಗಳಿಂದ ಸ್ನಾತಕೋತ್ತರ ಕಾಲೇಜು ಗಳವರೆಗೂ ಆಚರಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಬೇಕು.
– ಗೊ.ರು.ಚನ್ನಬಸಪ್ಪ, ಅಧ್ಯಕ್ಷ, ಕರ್ನಾಟಕ ಶರಣ ಸಾಹಿತ್ಯ ಪರಿಷತ್.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.