ಶನಿವಾರ, ಜನವರಿ 18, 2020
19 °C

‘ಸಮಾಧಾನದಿಂದ ಸಮಾಜ ಕಟ್ಟಲು ಸಾಧ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀರೂರು: ಜಾತಿಗೊಂದು ಆಚರಣೆಯ ದುರಂತ ನಡೆದಿರುವ ಸಮಯದಲ್ಲಿ ಸಮಾನತೆ ಮತ್ತು ಸಮಾಧಾನದಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದು ಕನಕ ಗುರುಪೀಠದ ನಿರಂಜನಾ­ನಂದಪುರಿಶ್ರೀ ಅಭಿಪ್ರಾಯಪಟ್ಟರು.ಪಟ್ಟಣದ ಸಂಗೊಳ್ಳಿರಾಯಣ್ಣ ರಂಗಮಂಟಪ­ದಲ್ಲಿ ಕನಕವೇದಿಕೆ, ಕನಕಶ್ರೀ ನೌಕರ ಬಳಗ ಮತ್ತು ಕುರುಬ ಸಮಾಜದ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ 525ನೇ ಕನಕಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು,

‘ಜಾತಿ ಪದ್ಧತಿ ಮತ್ತು ಮೇಲು–ಕೀಳಿನ ವ್ಯವಸ್ಥೆಯನ್ನು ತಿದ್ದುವ ಸಲುವಾಗಿ ಬರಿಗಾಲಿ­ನಲ್ಲಿ ರಾಜ್ಯಾದ್ಯಂತ ಸಂಚರಿಸಿ ಕೀರ್ತನೆಗಳ ಮೂಲಕ ಭಕ್ತಿಸಾರವನ್ನು ಹಂಚಿದ ಕನಕದಾಸರು ತಮ್ಮ ಆಧ್ಯಾತ್ಮಿಕ ಚೈತನ್ಯದಿಂದಲೇ ಭಗವಂತನ ಸಾಕ್ಷಾತ್ಕಾರ ಪಡೆದು ಜಾತ್ಯತೀತ ವ್ಯವಸ್ಥೆಯ ಮಾರ್ಗ ನಮಗೆ ತೋರಿದ್ದಾರೆ. ಹರಿ–ಹರರಿಗೆ ಸಮಾನ ಪ್ರಾಮುಖ್ಯತೆ ನೀಡಿ ಧಾರ್ಮಿಕ ಶೋಷಣೆ ತಪ್ಪಿಸುವ ನಿಟ್ಟಿನಲ್ಲಿ ಶ್ರಮಿಸಿದ ಕನಕದಾಸರ ಚಿಂತನೆಗಳು ಮಡಿವಂತಿಕೆಯ ಬಂಧನದಿಂದ ಹೊರಬಂದು ಸಮಾನತೆಯ ಸಮಾಜ ಕಟ್ಟುವ ನಿಟ್ಟಿನಲ್ಲಿ ದಾರಿದೀಪ­ವಾಗಬೇಕು. ವಿವಾದಗಳನ್ನು ಹುಟ್ಟಿಸುವ ಬದಲು ಕೃಷ್ಣನನ್ನು ಕಂಡಂತೆ ಕನಕನನ್ನೂ ಕಂಡಾಗ ಸಮಾನತೆ ಸಾಧ್ಯ’ ಎಂದು ನುಡಿದರು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ‘ಮುಕ್ತಿಗೆ ಭಕ್ತಿಯೇ ಮಾರ್ಗ ಎಂದು ತೋರಿದ ಕನಕದಾಸರು ಸಮಾಜದ ಅನಿಶ್ಚಿತತೆ, ಅಸ್ಪೃಶ್ಯತೆ, ಮಡಿವಂತಿಕೆ ಮತ್ತು ಡಂಭಾಚಾರಗಳನ್ನು ವಿರೋಧಿಸಿ ವೈಚಾರಿಕತೆ ಮೆರೆದವರು. ಕೀರ್ತನೆಗಳ ಮೂಲಕವೇ ಸಮಾಜದ ಡೊಂಕುಗಳನ್ನು ತಿದ್ದುವ ಪ್ರಯತ್ನ ನಡೆಸಿ ದಾಸಶ್ರೇಷ್ಠರಾಗಿ ಇತಿಹಾಸ ನಿರ್ಮಿಸಿ ತನ್ಮೂಲಕ ಕನ್ನಡಭಾಷೆಗೂ ಶ್ರೀಮಂತಿಕೆ ನೀಡಿ ಹರಿಭಕ್ತಿಸಾರದ ಮೂಲಕ ಪರಿವರ್ತನೆಯ ನಾಂದಿ ಹಾಡಿದರು. ಅವರ ತತ್ವ–ಆದರ್ಶಗಳು ಬದುಕಿನಲ್ಲಿ ಮಿಳಿತವಾದಾಗ ಸಾರ್ಥಕ ಬದುಕು ನಮ್ಮದಾಗುತ್ತದೆ’ ಎಂದು ತಿಳಿಸಿದರು.ಕನಕದಾಸರ ಕುರಿತು ಉಪನ್ಯಾಸ ನೀಡಿದ ಬೂದಾಳು ನಟರಾಜ್‌, ‘ದಾರ್ಶನಿಕರನ್ನು ಸಮಾಜ ಜಾತಿಯ ಚೌಕಟ್ಟಿನಲ್ಲಿ ಬಂಧಿಸಿ ಅವರವರ ಹೆಸರಿನಲ್ಲಿ ಆಚರಣೆ ನಡೆಸುವುದು ತಪ್ಪು. ನಮ್ಮ ನಾಡಿನ ದಾರ್ಶನಿಕರು ಯಾವುದೇ ಜಾತಿಗೆ ಸೀಮಿತವಾದವರಲ್ಲ, ಅವರ ಆದರ್ಶಗಳು ಚಿರಂತನವಾಗಿದ್ದು ನಮ್ಮ ಬದುಕಿಗೆ ದಾರಿ ತೋರುವಂತಾಗಬೇಕು. ದಾಸನಾಗುವ ಮುನ್ನ ಕವಿಯಾಗಿದ್ದ ಕನಕ ಒಬ್ಬ ಸಾಮಾನ್ಯ ವ್ಯಕ್ತಿಯಾಗದೆ ಪವಾಡಪುರುಷನಾಗಿ ಹೊರ­ಜಗತ್ತಿಗೆ ಕಂಡುಬಂದ. ಕನಕ ಮತ್ತು ಪುರಂದರರು ದಾಸಸಾಹಿತ್ಯದ ಅಶ್ವಿನಿದೇವತೆ­ಗಳಾಗಿದ್ದು ಅಂತಹವರನ್ನು ಜಾತಿಗೆ ಸೀಮಿತ­ವಾಗಿಸದೆ ಅವರ ಆದರ್ಶಗಳನ್ನು ಚರ್ಚಿಸಿ ಹಂಚಿಕೊಂಡು ಸಮಾಜದ ಏಳಿಗೆಯಲ್ಲಿ ಎಲ್ಲರೂ ಪಾತ್ರವಹಿಸುವಂತಾಗಬೇಕು’ ಎಂದು ಕರೆ ನೀಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕನಕವೇದಿಕೆ ಕಾರ್ಯಾಧ್ಯಕ್ಷ ಮಹೇಶ್‌ಒಡೆಯರ್‌, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ನಿಟ್ಟಿನಲ್ಲಿ ಕನಕದಾಸರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಧಾರ್ಮಿಕಶೋಷಣೆ ಮತ್ತು ದಬ್ಬಾಳಿಕೆ ಮೆಟ್ಟಿನಿಲ್ಲಲು ಗುರುಪೀಠಗಳು ಕಾರ್ಯೋನ್ಮುಖವಾಗಿದ್ದು ಸಾಂಸ್ಕೃತಿಕ ಮತ್ತು ಸಾಮಾಜಿಕ ಮೌಲ್ಯಗಳಿಗೆ ಧಕ್ಕೆ ಬಂದಾಗ ದೌರ್ಜನ್ಯದಿಂದ ಸಮಾಜವನ್ನು ಮುಕ್ತಗೊಳಿಸಲು ಎಲ್ಲರೂ ಒಂದಾಗಬೇಕು ಎಂದು ತಿಳಿಸಿದರು. ಕನಕವೇದಿಕೆಯ ಅಧ್ಯಕ್ಷ ಎಂ.ಮಲ್ಲಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಕುರುಬರ ಸಂಘದ ಅಧ್ಯಕ್ಷ ಆರ್‌.ಗುರುಸಿದ್ದಪ್ಪ, ಜಿ.ಪಂ.ಸದಸ್ಯರಾದ ಪದ್ಮಾಚಂದ್ರಪ್ಪ, ಬಿ.ಪಿ.ನಾಗರಾಜ್‌, ಕುರುಬ ಸಮಾಜದ ನಿರ್ದೇಶಕರಾದ ಕರಿಬಡ್ಡೆ ಶ್ರೀನಿವಾಸ್‌, ಸಾವಿತ್ರಿ ಗಂಗಪ್ಪ, ಕನಕಶ್ರೀ ಮಹಿಳಾ ವೇದಿಕೆಯ ಅನ್ನಪೂರ್ಣ ಹಾಲಪ್ಪ, ಪಾರ್ವತಮ್ಮ ಪುರಂದರಪ್ಪ, ಪುರಸಭೆ ಸದಸ್ಯರಾದ ರವಿಕುಮಾರ್‌, ವಿಜೇಂದ್ರಬಾಬು, ಎನ್‌.ಎಂ.ನಾಗರಾಜ್‌, ಸವಿತಾ ರಮೇಶ್‌, ಕಡೂರು ಬಿಇಒ ರಂಗನಾಥಸ್ವಾಮಿ, ಬೀರೂರು ಬಿಇಒ ಮೋಹನ್‌ ಕುಮಾರ್‌ ಸೇರಿದಂತೆ ಕುರುಬರ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಸಾರ್ವಜನಿಕರು ಇದ್ದರು.

ಪ್ರತಿಕ್ರಿಯಿಸಿ (+)