ಭಾನುವಾರ, ಜೂನ್ 20, 2021
20 °C
ಚಿಂತನಾ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಎಸ್‌.ಟಿ.ಅಂಜನಕುಮಾರ್‌

‘ಸ್ವೀಪ್‌’ ಚಟುವಟಿಕೆಗೆ ಭಾರತ ನಿರ್ಮಾಣ ಸೇವಕರ ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಲೋಕಸಭಾ ಚುನಾವಣೆಯ ‘ಸ್ವೀಪ್‌’ ಚಟುವಟಿಕೆಗೆ ಭಾರತ ನಿರ್ಮಾಣ ಸೇವಕರನ್ನು ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್‌.ಟಿ.ಅಂಜನಕುಮಾರ್‌ ಮಾಹಿತಿ ನೀಡಿದರು.ತಾಲ್ಲೂಕಿನ ದೊಡ್ಡಬಾತಿಯ ತಪೋವನದಲ್ಲಿ ಬುಧವಾರ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಜಿಲ್ಲಾ ಪಂಚಾಯ್ತಿ ಆಶ್ರಯದಲ್ಲಿ ನಡೆದ ಭಾರತ ನಿರ್ಮಾಣ ಸೇವಕರ ರಾಜ್ಯಮಟ್ಟದ ಚಿಂತನಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸ್ಥಳೀಯ ಸಂಯೋಜಕರ ಸಹಕಾರ ಪಡೆದು, ಮತದಾನ ಜಾಗೃತಿ ಕಾರ್ಯದಲ್ಲಿ ನಿಮ್ಮ ಅಮೂಲ್ಯ ಸೇವೆ ಬಳಕೆ ಮಾಡಿಕೊಳ್ಳಲಾಗುವುದು. ಈ ಬಗ್ಗೆ ಚಿಂತನೆಗಳು ನಡೆಯುತ್ತಿವೆ. ಮತದಾನ ಎರಡು ದಿನ ಇರುವ ಹಾಗೆ ಮತದಾರರು ಆಮಿಷಕ್ಕೆ ಒಳಗಾಗುವುದು ಹೆಚ್ಚಾಗಿದೆ. ಜಾತಿ, ಮತ, ಪಂಥದ ಮೇಲೆ ಮತದಾನ ನಡೆಯುತ್ತಿದೆ. ಇದು ತಪ್ಪಬೇಕು ಎಂದು ಮನವಿ ಮಾಡಿದರು.‘ಚುನಾವಣೆಯ ವೇಳೆ ಹಳ್ಳಿಗಳು ಕುಡುಕರ ತಾಣಗಳಾಗುತ್ತವೆ. ನಮ್ಮದು ಅತಿಯಾದ ಪ್ರಜಾಪ್ರಭುತ್ವ ಆಗಿದೆ. ಅದಕ್ಕೆ ಅರಿವಿನ ಕೊರತೆ ಕಾರಣ. ಮತದಾರರಿಗೆ ನೀವು ಜಾಗೃತಿ ಮೂಡಿಸಿ ಸಮುದಾಯ ಏಳಿಗೆಗೆ ಪ್ರಯತ್ನಿಸಬೇಕು’ ಎಂದು ಹೇಳಿದರು.ಯುವಜನರು ಸದೃಢ ಭಾರತ ನಿರ್ಮಾಣ ಕಾರ್ಯದಲ್ಲಿ ಸಕ್ರಿಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಭಾರತ ನಿರ್ಮಾಣ ಸೇವಕರು ಸ್ವಯಂ ಪ್ರೇರಿತವಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕೆಲಸ. ಭಾರತದಲ್ಲಿ ಶೇ 40ರಷ್ಟು ಯುವಕರೇ ಇದ್ದಾರೆ. ಈ ದೇಶದ ದೊಡ್ಡಆಸ್ತಿ ಎಂದರೆ ಯುವ ಜನರು. ಅವರೇ ಅಮೂಲ್ಯ ಸಂಪತ್ತು. ಯುವಕರ– ಯುವತಿಯ ಸೇವೆ ಬಳಸಿಕೊಂಡು ಅಭಿವೃದ್ಧಿಯತ್ತ ದೇಶ ಮುನ್ನಡೆಯಬೇಕಾಗಿದೆ ಎಂದು ಸಲಹೆ ನೀಡಿದರು.ಅಭಿವೃದ್ಧಿ ಹಾಗೂ ರಚನಾತ್ಮಕ ಕಾರ್ಯಗಳು ಸಮಗ್ರವಾಗಿ ನಡೆಯುತ್ತಿಲ್ಲ. ಅದಕ್ಕೆ ಅಡ್ಡಗಾಲು ಹಾಕುವವರೇ ಹೆಚ್ಚಾಗಿದ್ದಾರೆ. ಅಡ್ಡಗಾಲು ಹಾಕುವವರ ದಮನ ಮಾಡುವ ಕೆಲಸಗಳು ಆಗಬೇಕು. ಈ ದೇಶದಲ್ಲಿ ಶೇ 65ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿಯೇ ವಾಸ ಮಾಡುತ್ತಿದ್ದಾರೆ. ಬಡ ಹಾಗೂ ಮಧ್ಯಮವರ್ಗದ ಶ್ರೇಯೋಭಿವೃದ್ಧಿಗೆ ಸಾಕಷ್ಟು ಯೋಜನೆಗಳಿವೆ. ಅವುಗಳ ಸಮರ್ಪಕ ಅನುಷ್ಠಾನ ಕಷ್ಟವಾಗುತ್ತಿದೆ; ಮಧ್ಯವರ್ತಿಗಳ ಕಾಟ ಹೆಚ್ಚಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಜಿಲ್ಲಾ ಪಂಚಾಯ್ತಿ ಸಿಇಒ ಎ.ಬಿ. ಹೇಮಚಂದ್ರ, ಸಾಹಿತಿ ಪ್ರೊ.ಬಿ.ವಿ.ವೀರಭದ್ರಪ್ಪ, ವಿಲ್ಫ್ರೆಡ್‌ ಡಿಸೋಜ, ಜಿಲ್ಲಾ ಪಂಚಾಯ್ತಿ ಯೋಜಾನಾಧಿಕಾರಿ ವಿಶ್ವನಾಥ್‌ ಮುದ್ದಜಿ ಹಾಜರಿದ್ದರು.ಜಿಲ್ಲಾಧಿಕಾರಿಗೇ ಮಾಹಿತಿ ಇರಲಿಲ್ಲವಂತೆ!

ದಾವಣಗೆರೆ:
ದೊಡ್ಡಬಾತಿಯ ತಪೋವನದಲ್ಲಿ ನಡೆದ ಭಾರತ ನಿರ್ಮಾಣ ಸೇವಕರ ರಾಜ್ಯಮಟ್ಟದ ಚಿಂತನಾ ಕಾರ್ಯಾಗಾರದ ಮಾಹಿತಿ ಜಿಲ್ಲಾಧಿಕಾರಿ ಎಸ್‌.ಟಿ.ಅಂಜನಕುಮಾರ್‌ಗೆ ಇರಲಿಲ್ಲವಂತೆ..! ಹಾಗಂತ ಅವರೇ ಅದನ್ನು ಒಪ್ಪಿಕೊಂಡರು.

ಇದೊಂದು ಎಂಜಿನಿಯರ್‌ಗಳ ಕಾರ್ಯಕ್ರಮ ಎಂದುಕೊಂಡು ಬಂದೆ. ಆಧುನಿಕ ಶಿಲ್ಪಿಗಳು ಎನಿಸಿಕೊಂಡ ಅವರು ಇತ್ತೀಚೆಗೆ ನಿರ್ಮಾಣ ಮಾಡುತ್ತಿರುವ ಕಟ್ಟಡಗಳು ಬಹುಬೇಗ ಬೀಳುವ ಹಂತಕ್ಕೆ ತಲುಪುತ್ತಿವೆ. ಅವರಿಗೆ ಸ್ವಲ್ಪ ಬುದ್ಧಿ ಹೇಳೋಣ ಎಂದುಕೊಂಡು ಬಂದೆ. ಆದರೆ, ಕಾರ್ಯಕ್ರಮವೇ ಬೇರೆ ಆಗಿದೆಯಲ್ಲ? ಎಂದು ಅಚ್ಚರಿ ಮೂಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.