ಶುಕ್ರವಾರ, ಮೇ 7, 2021
27 °C

13 ವರ್ಷವಾದರೂ ಕಾಯಂ ಸಿಬ್ಬಂದಿಯೇ ಇಲ್ಲ!

ಎ.ಎಂ.ಸುರೇಶ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡುವ ಉದ್ದೇಶದಿಂದ 13 ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಆರಂಭವಾದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಇದುವರೆಗೆ ಕಾಯಂ ಸಿಬ್ಬಂದಿಯ ನೇಮಕವೇ ಆಗಿಲ್ಲ.ಬೋಧಕ/ಬೋಧಕೇತರ ಹುದ್ದೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದು, ಆರು ತಿಂಗಳು, ವರ್ಷಕ್ಕೊಮ್ಮೆ ಅವರ ಗುತ್ತಿಗೆ ಅವಧಿಯನ್ನು ನವೀಕರಿಸಲಾಗುತ್ತಿದೆ.ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಇದ್ದರೆ ಹೆಚ್ಚಿನ ಒತ್ತು ನೀಡಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕಾಗಿ 1998ರಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಸೀಮಿತವಾಗಿ ಪ್ರತ್ಯೇಕ ವಿ.ವಿ ಆರಂಭವಾಯಿತು. 98ರಿಂದ ಇಲ್ಲಿಯವರೆಗೆ ಮೂವರು ಕುಲಪತಿಗಳು ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದು, ಹಾಲಿ ಇರುವ ನಾಲ್ಕನೇ ಕುಲಪತಿ ಎಚ್.ಮಹೇಶಪ್ಪ ಈಗಾಗಲೇ ಒಂದು ವರ್ಷದ ಅವಧಿಯನ್ನು ಪೂರೈಸಿದ್ದಾರೆ.ಇದುವರೆಗೆ ಕುಲಪತಿಗಳಾಗಿ ಕಾರ್ಯನಿರ್ವಹಿಸಿದವರೆಲ್ಲ ಕಾಯಂ ಸಿಬ್ಬಂದಿಯನ್ನು ನೇಮಕ ಮಾಡುವುದಾಗಿ ಹತ್ತಾರು ಬಾರಿ ಹೇಳಿದ್ದರು. ಆದರೆ ನೇಮಕ ಮಾತ್ರ ಆಗಲೇ ಇಲ್ಲ. ಸೇವಾ ಭದ್ರತೆ ಇಲ್ಲದ ಗುತ್ತಿಗೆ ಸಿಬ್ಬಂದಿ ಯಾವಾಗ ಏನಾಗುತ್ತದೊ ಎಂಬ ಆತಂಕದಲ್ಲೇ ದಿನ ತಳ್ಳುತ್ತಿದ್ದಾರೆ. ವಿಶ್ವವಿದ್ಯಾಲಯದ ಬೆಳಗಾವಿ ಕ್ಯಾಂಪಸ್ ಹಾಗೂ ಬೆಂಗಳೂರು, ಮೈಸೂರು, ಗುಲ್ಬರ್ಗ ಮತ್ತು ಬೆಳಗಾವಿಯ ಪ್ರಾದೇಶಿಕ ಕಚೇರಿಗಳಲ್ಲಿ ಸದ್ಯ 275 ಮಂದಿ ಬೋಧಕೇತರ ಸಿಬ್ಬಂದಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ.ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 187 ಎಂಜಿನಿಯರಿಂಗ್ ಕಾಲೇಜುಗಳಿವೆ. ಬಿಇ ಕೋರ್ಸ್‌ಗಳ ಜೊತೆಗೆ ಕೆಲವು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಎಂ.ಟೆಕ್, ಎಂಸಿಎ, ಎಂಬಿಎ ಕೋರ್ಸ್‌ಗಳಿವೆ. ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ದಾಖಲಾತಿ ಅನುಮೋದನೆ, ಪರೀಕ್ಷಾ ಕಾರ್ಯ ಸೇರಿದಂತೆ ಹತ್ತಾರು ಕೆಲಸಗಳನ್ನು ನಿರ್ವಹಿಸಲು ಬೋಧಕೇತರ ಸಿಬ್ಬಂದಿಯ ಅಗತ್ಯವಿದೆ.ಸೂಪರಿಂಟೆಂಡ್, ಪ್ರಥಮ/ದ್ವಿತೀಯ ದರ್ಜೆ ಸಹಾಯಕರು, ಜವಾನರು, ಚಾಲಕರ ಹುದ್ದೆಗಳನ್ನು ಗುತ್ತಿಗೆ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ. ಈ ಹುದ್ದೆಗಳಿಗೆ ಸರ್ಕಾರ ನಿಗದಿಪಡಿಸಿರುವುದಕ್ಕಿಂತ ಸ್ವಲ್ಪ ಕಡಿಮೆ ಸಂಬಳವನ್ನು ಗುತ್ತಿಗೆ ಸಿಬ್ಬಂದಿಗೆ ನೀಡಲಾಗುತ್ತಿದೆ.ಆದರೆ ಅವರು ಕಾಯಂ ನೌಕರರು ಅಲ್ಲದ ಕಾರಣ ಗಂಭೀರ ಲೋಪಗಳು ಉಂಟಾದಾಗ ಶಿಸ್ತುಕ್ರಮ ಕೈಗೊಳ್ಳಲು, ಜವಾಬ್ದಾರರನ್ನಾಗಿ ಮಾಡಲು ಸಾಧ್ಯವಾಗುತ್ತಿಲ್ಲ. ಹೆಚ್ಚೆಂದರೆ ಗುತ್ತಿಗೆ ರದ್ದಾಗುತ್ತದೆ ಅಷ್ಟೇ.`2007ರಲ್ಲಿ ಬೋಧಕೇತರ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸಿ 325 ಹುದ್ದೆಗಳನ್ನು ಸೃಜಿಸಲಾಗಿತ್ತು. ಇದಕ್ಕೆ ಕುಲಾಧಿಪತಿಯೂ ಆದ ರಾಜ್ಯಪಾಲರ ಒಪ್ಪಿಗೆ ಸಹ ದೊರಕಿತ್ತು. ಆ ವೇಳೆಗೆ ನನ್ನ ಅಧಿಕಾರ ಅವಧಿಯೂ ಮುಗಿಯಿತು. ಆ ನಂತರ ಬಂದವರು ನೇಮಕಾತಿಯತ್ತ ಗಮನಹರಿಸಲಿಲ್ಲ~ ಎಂದು ವಿಶ್ರಾಂತ ಕುಲಪತಿ ಡಾ.ಕೆ.ಬಾಲವೀರ ರೆಡ್ಡಿ `ಪ್ರಜಾವಾಣಿ~ಗೆ ತಿಳಿಸಿದರು.`ನಾನು ನಿವೃತ್ತಿಯಾಗುವ ಸಂದರ್ಭದಲ್ಲಿ 220 ಮಂದಿ ಗುತ್ತಿಗೆ ಸಿಬ್ಬಂದಿ ಇದ್ದರು. ಈಗ ಅವರ ಸಂಖ್ಯೆಯೂ ಜಾಸ್ತಿಯಾಗಿದೆ. ಆಗಲೇ ನಿರ್ಧಾರ ತೆಗೆದುಕೊಂಡಿದ್ದರೆ ಸೂಕ್ತವಾಗಿತ್ತು. ಗುತ್ತಿಗೆ ಸಿಬ್ಬಂದಿಗೆ ಕಾಯಂ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಿಕೊಡುವ ಅಥವಾ ತೆಗೆಯುವ ವಿಷಯದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗದ ಕಾರಣ, ಗುತ್ತಿಗೆ ಪದ್ಧತಿಯನ್ನು ಹಾಗೆಯೇ ಮುಂದುವರಿಸಿಕೊಂಡು ಬರಲಾಗುತ್ತಿದೆ~ ಎಂದು ಹೇಳಿದರು.`2007ರಲ್ಲಿಯೇ ಹುದ್ದೆಗಳು ಸೃಷ್ಟಿಯಾಗಿದ್ದರೂ ನಿಮ್ಮ ಅವಧಿಯಲ್ಲಿ ಯಾಕೆ ನೇಮಕ ಮಾಡಲಿಲ್ಲ~ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ಹಿಂದಿನ ಕುಲಪತಿ ಡಾ.ಎಚ್.ಪಿ.ಖಿಂಚ ನಿರಾಕರಿಸಿದರು. ಈಗ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು, ಕಾಯಂ ನೇಮಕಾತಿ ಸಂದರ್ಭದಲ್ಲಿ ಪರಿಗಣಿಸುವ ಬಗ್ಗೆ ಖಾತರಿ ಇಲ್ಲ. ಹೆಚ್ಚೆಂದರೆ ಇವರಿಗೆ ಕೃಪಾಂಕ ನೀಡಬಹುದು ಅಷ್ಟೇ. ಹೀಗಾಗಿ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ.ನೇಮಕಾತಿಗೆ ಕ್ರಮ: ಕಾಯಂ ಸಿಬ್ಬಂದಿಯ ನೇಮಕಕ್ಕೆ 6-7 ತಿಂಗಳಿಂದ ಪ್ರಯತ್ನಗಳು ನಡೆದಿವೆ. ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದು, ನೇಮಕಾತಿಗೆ ಅನುಮತಿ ನೀಡುವಂತೆ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ. ಎರಡು ತಿಂಗಳಲ್ಲಿ ನೇಮಕ ಪ್ರಕ್ರಿಯೆ ಶುರುವಾಗುವ ವಿಶ್ವಾಸವಿದೆ ಎಂದು ಕುಲಪತಿ ಡಾ.ಎಚ್.ಮಹೇಶಪ್ಪ ತಿಳಿಸಿದರು.

ಬೋಧಕೇತರ ಸಿಬ್ಬಂದಿಯ ನೇಮಕದ ಜೊತೆಗೆ, 140 ಬೋಧಕ ಹುದ್ದೆಗಳನ್ನು ಸೃಜಿಸುವಂತೆ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ. ಈಗ ಇರುವ ಗುತ್ತಿಗೆ ಸಿಬ್ಬಂದಿಯನ್ನೇ ಅರ್ಹತೆ ಮತ್ತು ಮೀಸಲಾತಿಗೆ ಅನುಗುಣವಾಗಿ ಕಾಯಂ ನೇಮಕಾತಿ ಸಂದರ್ಭದಲ್ಲಿ ತುಂಬಿಕೊಳ್ಳಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.ಪ್ರಾದೇಶಿಕ ಕಚೇರಿಗಳು ಇರುವ ಕಡೆ ಪ್ರಸಕ್ತ ಸಾಲಿನಿಂದಲೇ ಎಂ.ಟೆಕ್, ಎಂಬಿಎ, ಎಂಸಿಎ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ಸದ್ಯಕ್ಕೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಹುದ್ದೆಗಳು ಮಂಜೂರಾದ ನಂತರ ಕಾಯಂ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು.ದಾವಣಗೆರೆಯ ಬಿ.ಡಿ.ಟಿ ಎಂಜಿನಿಯರಿಂಗ್ ಕಾಲೇಜು ಈಚೆಗೆ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಹಸ್ತಾಂತರವಾಗಿದ್ದು, ಅದರ ಅಭಿವೃದ್ಧಿಗೆ ಎರಡು ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ.ಅಲ್ಲಿ ಶೇ 50ರಷ್ಟು ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಲು, ಸುಸಜ್ಜಿತವಾದ ಆಡಿಟೋರಿಯಂ, ಕ್ಲಾಸ್‌ರೂಂ ಕೊಠಡಿಗಳ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ. ಪ್ರಾದೇಶಿಕ ಕಚೇರಿಗಳ ಕ್ಯಾಂಪಸ್‌ಗಳಲ್ಲೂ ಹಾಸ್ಟೆಲ್, ಕ್ಯಾಂಟಿನ್, ಗ್ರಂಥಾಲಯ ಇತ್ಯಾದಿಗಳನ್ನು ಆರಂಭಿಸುವುದಾಗಿ ಅವರು ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.