ಬುಧವಾರ, ಜನವರಿ 22, 2020
22 °C
ಕಡತ ವಿಲೇವಾರಿ ವಿಳಂಬಕ್ಕೆ ರಾಜ್ಯ ಸರ್ಕಾರದ ಕೆಂಗಣ್ಣು

14 ಕಾರ್ಯದರ್ಶಿಗಳಿಗೆ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಚಿವಾಲಯದ ಹಂತ­ದಿಂದಲೇ ಕಡತ ವಿಲೇವಾರಿಗೆ ಚುರುಕು ಮುಟ್ಟಿಸಲು ರಾಜ್ಯ ಸರ್ಕಾರ ಮುಂದಾಗಿದ್ದು,  ಶೇಕಡ 50ಕ್ಕಿಂತಲೂ ಹೆಚ್ಚು ಕಡತಗಳನ್ನು ಬಾಕಿ ಉಳಿಸಿ­ಕೊಂಡಿರುವ 14 ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ ನೋಟಿಸ್‌ ಜಾರಿ ಮಾಡಲಿದೆ. ಕಡತ ವಿಲೇ­ವಾರಿಯಲ್ಲಿನ ವಿಳಂಬ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ದೀರ್ಘ ಚರ್ಚೆ­ಯಾಗಿದೆ.

ಆಡಳಿತ ಸುಧಾರಣೆ ಮತ್ತು ಕಡತ ವಿಲೇವಾರಿ ಮೇಲೆ ನಿಗಾ ಇರಿಸಲು ಮುಖ್ಯಮಂತ್ರಿಯವರು ನೇಮಿ­ಸಿ­ರುವ ಉನ್ನತಮಟ್ಟದ ಸಮಿ­ತಿಯ ಅಧ್ಯಕ್ಷರೂ ಆಗಿರುವ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು, ಕಡತ ವಿಲೇವಾರಿಗೆ ಸಂಬಂಧಿಸಿದ ವರದಿಯನ್ನು ಸಭೆಯಲ್ಲಿ ಮಂಡಿಸಿ­ದ್ದಾರೆ. ಈ ಕುರಿತು ಚರ್ಚೆ ನಡೆಸಿದ ಬಳಿಕ ನೋಟಿಸ್‌ ಜಾರಿ  ನಿರ್ಣಯ ಕೈಗೊಳ್ಳಲಾಗಿದೆ.ಸಭೆಯ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಜಯಚಂದ್ರ, ಸಚಿವಾ­ಲ­ಯದ ವಿವಿಧ ಇಲಾಖೆಗಳಲ್ಲಿ ಒಟ್ಟು 1,62,803 ಕಡತಗಳನ್ನು ಸೃಜಿಸ­ಲಾಗಿತ್ತು. ಈ ಪೈಕಿ 1,22,270 ಕಡತ­ಗಳನ್ನು ಇನ್ನೂ ವಿಲೇವಾರಿ ಮಾಡಿಲ್ಲ. ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಕಡತಗಳ ಪ್ರಮಾಣದ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ ಎಂದು ಹೇಳಿದರು.ಕಂದಾಯ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಮತ್ತಿತರ ಇಲಾಖೆ­ಗಳಲ್ಲಿ ಸಿಬ್ಬಂದಿ ಕೊರತೆಯ ಕಾರಣ­ದಿಂದ ಕಡತ ವಿಲೇವಾರಿ ವಿಳಂಬ­ವಾಗು­ತ್ತಿರುವುದು ಗಮನಕ್ಕೆ ಬಂದಿದೆ. ಪ್ರಮುಖ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದಾರೆ ಎಂದರು.ನಿಯಮಕ್ಕೆ ತಿದ್ದುಪಡಿ

ಸಚಿವಾಲಯದಲ್ಲಿ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿದವರಿಗೆ ಮಾತ್ರ ಗೆಜೆಟೆಡ್‌ ಶ್ರೇಣಿಗೆ ಬಡ್ತಿ ನೀಡಬಹುದು ಎಂಬ ನಿರ್ಬಂಧ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಇದೆ. ಅದನ್ನು ಎರಡು ವರ್ಷಕ್ಕೆ ಇಳಿಕೆ ಮಾಡುವ ಸಂಬಂಧ ನಿಯಮಗಳಿಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಸಂಪುಟ ಒಪ್ಪಿಗೆ ನೀಡಿದೆ.

ಯಾರಿಗೆಲ್ಲ ನೋಟಿಸ್‌

ಅರಣ್ಯ (ಶೇ 68.69),  ಆಹಾರ  (ಶೇ 65.71), ವೈದ್ಯಕೀಯ ಶಿಕ್ಷಣ (ಶೇ 60.4), ಇಂಧನ (ಶೇ 60.23), ಯುವಜನ ಸೇವೆ (ಶೇ 59.5), ಮೂಲಸೌಕರ್ಯ (ಶೇ 58.81), ಲೋಕೋಪಯೋಗಿ (ಶೇ 55.85),  ವಾಣಿಜ್ಯ ಮತ್ತು ಕೈಗಾರಿಕೆ (ಶೇ 55), ನಗರಾಭಿವೃದ್ಧಿ (ಶೇ 54.73), ಕಂದಾಯ (ಶೇ 53.32) ಪಶು ಸಂಗೋಪನೆ (ಶೇ 51), ಉನ್ನತ ಶಿಕ್ಷಣ (ಶೇ 51), ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ (ಶೇ 50.97) ಇಲಾಖೆಗಳಲ್ಲಿ ಶೇ 50ಕ್ಕಿಂತ ಹೆಚ್ಚು ಕಡತಗಳು ಬಾಕಿ ಇವೆ.ಈ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳಿಗೆ ನೋಟಿಸ್‌ ನೀಡಿ, ತಕ್ಷಣವೇ ಕಡತ ವಿಲೇವಾರಿ ಚುರುಕುಗೊಳಿಸಲು ಮತ್ತು ಹೆಚ್ಚಿನ ಕಡತ ಬಾಕಿ ಉಳಿಸಿಕೊಂಡಿರುವುದಕ್ಕೆ ಕಾರಣ ನೀಡುವಂತೆ ಸೂಚಿಸಲಾಗುವುದು ಎಂದು ಸಚಿವ ಜಯಚಂದ್ರ ತಿಳಿಸಿದರು.

ಪ್ರತಿಕ್ರಿಯಿಸಿ (+)