ಗುರುವಾರ , ಏಪ್ರಿಲ್ 15, 2021
31 °C

16 ಕೋಟಿ ವೆಚ್ಚದಲ್ಲಿ ಮಧೂರು ಕ್ಷೇತ್ರ ನವೀಕರಣ

ಪ್ರಜಾವಾಣಿ ವಾರ್ತೆ ಸುರೇಶ್ ಎಡನಾಡು Updated:

ಅಕ್ಷರ ಗಾತ್ರ : | |

ಕಾಸರಗೋಡು: ಕುಂಬಳೆ ಸೀಮೆಯ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ, ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯವನ್ನು ರೂ 16 ಕೋಟಿ ವೆಚ್ಚದಲ್ಲಿ ನವೀಕರಿಸಲು ಕೇರಳ ದೇವಸ್ವಂ ಮಂಡಳಿ ಅಂಗೀಕಾರ ನೀಡಿದೆ.

ಕೇರಳ ಮತ್ತು ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದಿರುವ ಈ ಕ್ಷೇತ್ರವನ್ನು 300 ವರ್ಷಗಳ ಹಿಂದೆ ಮಾಯಿಪ್ಪಾಡಿ ಅರಸರು ನವೀಕರಿಸಿದ್ದರು.ಭಕ್ತರ ಅಪೇಕ್ಷೆಗೆ ತಕ್ಕಂತೆ ಇಲ್ಲಿ ಅಭಿವೃದ್ಧಿ ನಡೆಯುತ್ತಿಲ್ಲ ಎಂಬ ಆರೋಪವಿತ್ತು. ಇದೀಗ ರೂ 16 ಕೋಟಿ ವೆಚ್ಚದಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳಿಗೆ ಟೆಂಡರ್ ನೀಡಲಾಗಿದ್ದು, ಕಾಮಗಾರಿ ಆರಂಭಗೊಂಡಿದೆ.ಪ್ರಾಚೀನ ದಾರುಶಿಲ್ಪಗಳಿಗೆ ಭಂಗ ಬರದಂತೆ ನವೀಕರಣ ನಡೆಯಲಿದೆ. 3 ಹಂತಗಳಲ್ಲಿ ನಡೆಯುವ ಕ್ಷೇತ್ರದ ನವೀಕರಣ 5 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಮದನಂತೇಶ್ವರ, ಸಿದ್ಧಿವಿನಾಯಕ ದೇವರ ಗರ್ಭಗುಡಿಯ ಸುತ್ತ ಇರುವ ಹಂಸರೂಪಿ ಸದಾಶಿವ, ದುರ್ಗಾಪರಮೇಶ್ವರಿ, ಸುಬ್ರಹ್ಮಣ್ಯ, ಕಾಶಿ ವಿಶ್ವನಾಥ ಮೊದಲಾದ ಉಪದೇವತೆಗಳ ಗರ್ಭಗುಡಿ, ಸುತ್ತು ಗೋಪುರ, ಅಗ್ರಶಾಲೆ, ಭೋಜನ ಶಾಲೆಗಳನ್ನು ನವೀಕರಿಸಲು ಯೋಜನೆ ಹಾಕಿಕೊಳ್ಳಲಾಗಿದೆ.ಅತಿಥಿ ಮಂದಿರ, ಯಾಗಶಾಲೆ, ಕಲ್ಯಾಣ ಮಂಟಪ, ವೇದ ಪಾಠಶಾಲೆ, ತಂತ್ರಿಗಳ ವಸತಿಗೃಹ, ವಿಶ್ರಾಂತಿ ಮಂದಿರ, ಬಸ್ ನಿಲ್ದಾಣ, ವ್ಯಾಪಾರ ಸಂಕೀರ್ಣ ನಿರ್ಮಿಸುವ ಯೋಜನೆಯೂ ಇದೆ.ಕ್ಷೇತ್ರ ಸಮಿತಿ ಸಲ್ಲಿಸಿದ ಕಾಮಗಾರಿಯ ಪ್ರಸ್ತಾವಕ್ಕೆ ಮಲಬಾರ್ ದೇವಸ್ವಂ ಮಂಡಳಿ ಅಂಗೀಕಾರ ನೀಡಿದೆ ಎಂದು ಮಧೂರು ಕ್ಷೇತ್ರದ ಕಾರ್ಯನಿರ್ವಾಹಕ ಅಧಿಕಾರಿ ವಿ.ವಿ.ಪ್ರಭಾಕರನ್ `ಪ್ರಜಾವಾಣಿ~ಗೆ ತಿಳಿಸಿದರು.ನವೀಕರಣ ಕಾರ್ಯಗಳ ಸುಗಮ ನಿರ್ವಹಣೆಗೆ ಯು.ಟಿ.ಆಳ್ವ (ಅಧ್ಯಕ್ಷ), ಡಾ.ಜಯದೇವ ಖಂಡಿಗೆ (ಕಾರ್ಯದರ್ಶಿ), ಕಾರ್ಯನಿರ್ವಾಹಕ ಅಧಿಕಾರಿ ವಿ.ವಿ.ಪ್ರಭಾಕರನ್ (ಖಜಾಂಚಿ) ಅವರನ್ನೊಳಗೊಂಡ ನವೀಕರಣ ಸಮಿತಿ ರಚಿಸಲಾಗಿದೆ.

 

ಅನನ್ಯ ಗಜಪೃಷ್ಠಾಕೃತಿ

ವಾಸ್ತು ಪ್ರಕಾರ ಮಧೂರು ಕ್ಷೇತ್ರ (ಗರ್ಭಗುಡಿ) ಗಜಪೃಷ್ಠಾಕೃತಿಯಲ್ಲಿದೆ. ಇದು ಈ ಕ್ಷೇತ್ರದ ವೈಶಿಷ್ಟ್ಯತೆಗಳಲ್ಲಿ ಒಂದು. ಮೂರು ಅಂತಸ್ತುಗಳಿರುವ ಈ ಗರ್ಭಗುಡಿಯ ಕೆಳಗಿನ ಮಾಡಿಗೆ ಹೆಂಚು ಹೊದಿಸಿದರೆ ಉಳಿದ ಮಾಡನ್ನು ತಾಮ್ರದಿಂದ ಹೊದಿಸಲಾಗಿದೆ. ಎರಡನೇ ಅಂತಸ್ತಿನಲ್ಲಿ ಕೆಂಪುಕಲ್ಲಿನ ಆಕರ್ಷಕ ದಾರುಶಿಲ್ಪಗಳು ಯಾತ್ರಾರ್ಥಿಗಳ ಕಣ್ಮನ ಸೆಳೆಯುತ್ತಿದೆ. ಮರದ ದಾರುಶಿಲ್ಪಗಳು ನಶಿಸುತ್ತಿದೆ. ಇದನ್ನು ನವೀಕರಿಸಲು ಸಾಗುವಾನಿ ಮರ ಅಗತ್ಯವಿದೆ. ರಾಜ್ಯದಲ್ಲಿ ಸಾಗುವಾನಿ ಮರದ ಬೆಲೆ ಗಗನ ಮುಖಿಯಾಗಿದ್ದು, ಮಲೇಶಿಯಾದಿಂದ ಆಮದು ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಅಂದಾಜು ರೂ 3 ಕೋಟಿಯಷ್ಟು ಮೌಲ್ಯದ ಸಾಗುವಾನಿ ಮರಗಳು ನವೀಕರಣ ಕಾರ್ಯಕ್ಕೆ ಅಗತ್ಯವಿದೆ ಎಂದು ಪ್ರಭಾಕರನ್ ವಿವರಿಸಿದರು. ಗರ್ಭಗುಡಿಯೊಳಗೆ ಮರದ 10 ಸ್ತೂಪಗಳಿದ್ದು, ಇದನ್ನು ಶಿಲಾಮಯಗೊಳಿಸಲಾಗುವುದು. ಗರ್ಭಗುಡಿಯ ನವೀಕರಣಕ್ಕೆ ರೂ 4.35ಕೋಟಿ ವೆಚ್ಚದ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ.ಎರಡನೇ ಹಂತದಲ್ಲಿ ಸುತ್ತು ಗೋಪುರ, ಆಕರ್ಷಕ ದಾರುಶಿಲ್ಪದ ರಾಜಗೋಪುರ ನಿರ್ಮಿಸಲಾಗುವುದು. ಪ್ರಸಿದ್ಧ ವಾಸ್ತುಶಿಲ್ಪಿ ಸುಳ್ಯದ ಮುನಿಯಂಗಳ ಕೃಷ್ಣ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ನವೀಕರಣ ನಡೆಯಲಿದೆ.

ಗರ್ಭಗುಡಿ, ನಮಸ್ಕಾರ ಮಂಟಪದಲ್ಲಿ ಅತ್ಯಪೂರ್ವ ದಾರುಶಿಲ್ಪಗಳು ಇದೆ. ಇವುಗಳ ಸೌಂದರ್ಯವನ್ನು ಪ್ರಕೃತಿದತ್ತ ಬಣ್ಣಗಳಿಂದಲೇ ಕಾಪಾಡುವ ಯೋಜನೆ ನವೀಕರಣ ಸಮಿತಿಗೆ ಇದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.