ಶುಕ್ರವಾರ, ಏಪ್ರಿಲ್ 23, 2021
24 °C

190 ಮಕ್ಕಳು ಶಾಲೆಗೆ ಸೇರ್ಪಡೆ: ಲಕ್ಷ್ಮೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಶಿಕ್ಷಣದಿಂದಲೇ ನೆಮ್ಮದಿಯ ಜೀವನ ಸಾಧ್ಯ ಎಂಬ ಅಂಶ ಜನತೆಗೆ ಮನವರಿಕೆ ಆಗಬೇಕು. ಚಿಕ್ಕ ಸಮಸ್ಯೆಗಳೇ ಈ ಭಾಗದಲ್ಲಿ ಮಕ್ಕಳು ಶಾಲೆಯಿಂದ ಹೊರಗೆ ಉಳಿಯುವುದಕ್ಕೆ ಕಾರಣ. ಶಿಕ್ಷಣದ ಮಹತ್ವ ಸಾರುವ ನಿಟ್ಟಿನಲ್ಲಿ ತಮ್ಮ ಸಂಸ್ಥೆ ಕೆಲಸ ಮಾಡುತ್ತಿದ್ದು, ಮಾನ್ವಿ ತಾಲ್ಲೂಕಿನ 15 ಗ್ರಾಮಗಳಲ್ಲಿ ಒಂದು ವರ್ಷ ಅವಧಿಯಲ್ಲಿ 190 ಮಕ್ಕಳನ್ನು ಶಾಲೆಗೆ ಸೇರ್ಪಡೆ ಮಾಡಿದೆ ಎಂದು ಬೆಂಗಳೂರಿನ ಸೃಷ್ಠಿ ಸಂಸ್ಥೆಯ ನಿರ್ದೇಶಕಿ ಲಕ್ಷ್ಮೀಹರಿಹರನ್ ಅವರು ತಿಳಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ಮಾನ್ವಿ ತಾಲ್ಲೂಕಿನ 15ಗ್ರಾಮಗಳಲ್ಲಿ ಕಡ್ಡಾಯ ಶಿಕ್ಷಣ ಜಾರಿಗೆ ಪೂರಕವಾಗಿ ಮಕ್ಕಳು ಹಾಗೂ ಯುವಕರ, ಪಾಲಕರಲ್ಲಿ ಜಾಗೃತಿ ಮೂಡಿಸುವಂಥ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.ಈ ಗ್ರಾಮಗಳಲ್ಲಿ ಮಕ್ಕಳು ಹಾಗೂ ಜನರಲ್ಲಿ ಏನು ಮಾಡಿದರೂ ನಮ್ಮ ಬದುಕಿನ ಸ್ಥಿತಿ ಬದಲಾವಣೆಯಾಗುವುದಿಲ್ಲ ಎಂಬುವಂಥ ಗಾಢವಾದ ನಂಬಿಕೆ ಮನಸ್ಸಿನಲ್ಲಿ ಮೂಡಿದೆ. ಇಂಥ ನಂಬಿಕೆ ಬದಲಾವಣೆಯ ಅಗತ್ಯವಿದೆ.ಕಡ್ಡಾಯ ಶಿಕ್ಷಣ ಜಾರಿಗೆ ಶಿಕ್ಷಣ ಇಲಾಖೆಯಿಂದ ಮಾತ್ರ ಸಾಧ್ಯವಾಗುವುದಿಲ್ಲ. ಇದರಲ್ಲಿ ಪಾಲಕರು, ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಸಮುದಾಯವೇ ಜವಾಬ್ದಾರಿ ವಹಿಸಿಕೊಂಡ ಕಾರ್ಯನಿರ್ವಹಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಗ್ರಾಮಗಳ ಯುವಕರಿಗೆ ಸೃಷ್ಠಿ ಸಂಸ್ಥೆಯು ಶಿಕ್ಷಣ ಕುರಿತು ಜಾಗೃತಿ ಮೂಡಿಸುವ ಹಾಗೂ ಮಕ್ಕಳ ಹಕ್ಕುಗಳ ಕುರಿತು ಪ್ರಶ್ನಿಸುವ ಧ್ವನಿ ನೀಡುವಂಥ ಕೆಲಸವನ್ನು ಮಾಡುತ್ತಿದೆ. ಆಯ್ದ 15 ಗ್ರಾಮಗಳಲ್ಲಿ  15 ಆಸಕ್ತ ಯುವತಿ ಅಥವಾ ಯುವಕರಿಗೆ ಈ ದಿಶೆಯಲ್ಲಿ ಸೂಕ್ತ ತರಬೇತಿ ನೀಡಿದೆ ತಿಳಿಸಿದರು.ಮಕ್ಕಳು ಶಾಲೆಯಿಂದ ಹೊರ ಉಳಿಯಲು ಕಾರಣದ ಬಗ್ಗೆ ಮಾಹಿತಿ ಸಂಗ್ರಹಿಸಲು ಸಮೀಕ್ಷೆ ನಡೆಸಿದಾಗ ರೀತಿಯ ಕಾರಣ, ವಿಚಾರಗಳು ವ್ಯಕ್ತವಾಗಿವೆ. ಮನೆಯ ವಾತಾವರಣ ಮಕ್ಕಳ ಕಲಿಕೆಗೆ ಪೂರಕವಾಗಿಲ್ಲದೇ ಇರುವುದು, ಮಕ್ಕಳನ್ನು ದುಡಿಮೆಗಾಗಿ ಪಾಲಕರು ಕಳುಹಿಸುತ್ತಿರುವುದು, ಕೌಟುಂಬಿಕ ಹಿನ್ನೆಲೆ, ಶಿಕ್ಷಣ ಕೊಡಿಸುವ ಬಗ್ಗೆ ಪಾಲಕರಿಗೆ ಆಸಕ್ತಿ ಇದ್ದರೂ ಸಹ ಮಕ್ಕಳಲ್ಲಿ ಕಲಿಕಾ ಆಸಕ್ತಿ ಇಲ್ಲದೇ ಇರುವುದು ಸೇರಿದಂತೆ ಹಲವಾರು ರೀತಿಯ ಕಾರಣಗಳು ಕಂಡು ಬಂದಿವೆ ಎಂದು ವಿವರಿಸಿದರು. ಇಂಥ ತೊಡಕುಗಳ ನಿರ್ಮೂಲನೆಗೆ ಮಕ್ಕಳಿಗೆ ಶಿಕ್ಷಣದ ಬಗ್ಗೆ ಆಸಕ್ತಿ ಮೂಡಿಸುವಂಥ ಪ್ರಯತ್ನಗಳು ಕಳೆದ ಒಂದು ವರ್ಷದಿಂದ ಸೃಷ್ಠಿ ಸಂಸ್ಥೆ ಕೈಗೊಂಡಿದೆ ಎಂದು ಹೇಳಿದರು.ಈ ಕಾರ್ಯದಲ್ಲಿ ಮಲ್ಲಟ ಗ್ರಾಮದ ರೇಣುಕಾ, ಬಾಗಲವಾಡ ಗ್ರಾಮದ ಅಬ್ದುಲ್, ಪಾಮನಕಲ್ಲೂರ ಗ್ರಾಮದ ಜಹೀರಾಬಿ ಅವರು ಶಾಲೆಗಳಲ್ಲಿ ಮೂಲಭೂತ ಸೌಲಭ್ಯ, ದೂರದ ಶಾಲೆಗಳನ್ನು ಸಮುದಾಯ ಹತ್ತಿರಕ್ಕೆ ತರುವಂತೆ ಎಸ್‌ಡಿಎಂಸಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಹಲವು ರೀತಿಯ ಜಾಗೃತಿ ಕೈಗೊಂಡಿದ್ದಾರೆ. ಅಲ್ಲದೇ ಇಲ್ಲಿಯವರೆಗೆ 190 ಮಕ್ಕಳನ್ನು ಶಾಲೆಗೆ ಕಳುಹಿಸುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ ಎಂದು ವಿವರಿಸಿದರು. ಮುನಿರಾಜ, ಮಮತಾ, ವಿದ್ಯಾ ಮತ್ತು ರೇಣುಕಾ ಪತ್ರಿಕಾಗೋಷ್ಠಿಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.