ಸೋಮವಾರ, ಮೇ 16, 2022
29 °C

1983ರ ನೆನಪು ಮರುಕಳಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ತವರು ನೆಲದಲ್ಲಿ ನಡೆಯುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಆಟಗಾರರು ಒತ್ತಡಕ್ಕೆ ಒಳಗಾಗದೇ ಸಂತೋಷದಿಂದ ಆಡಬೇಕು. ಯಶಸ್ಸಿನ ಹಾದಿಯಲ್ಲಿ ಸಾಗಲು ಒತ್ತಡದಿಂದ ಮುಕ್ತರಾಗಿ ಆಡಬೇಕಿರುವುದು ಅಗತ್ಯವಿದೆ ಎಂದು ಭಾರತ ಕ್ರಿಕೆಟ್ ಆಯ್ಕೆ ಸಮಿತಿ ಮುಖ್ಯಸ್ಥ ಕೆ. ಶ್ರೀಕಾಂತ್ ಹೇಳಿದ್ದಾರೆ.ತವರು ನೆಲದಲ್ಲಿ ಆಡುವಾಗ ಕ್ರಿಕೆಟ್ ಪ್ರೇಮಿಗಳು ಸಾಕಷ್ಟು ಆತಿಥೇಯ ತಂಡದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ.ಅದಕ್ಕೆ ತಕ್ಕಂತೆ ಆಡಲು ಆಟವನ್ನು ಸಂಭ್ರಮಿಸಬೇಕು. ಅದರಲ್ಲಿ ಯಶಸ್ಸು ಕಾಣಬೇಕು. ದೋನಿ ಸಾರಥ್ಯದ ಭಾರತ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಈ ಟೂರ್ನಿಯಲ್ಲಿ ಪ್ರದರ್ಶಿಸಿ 28 ವರ್ಷಗಳ ಬಳಿಕವಾದರೂ ಈ ಸಲ ಟ್ರೋಫಿಯನ್ನು ಭಾರತಕ್ಕೆ ತಂದು ಕೊಡಬೇಕು. 1983ರ ನೆನಪು ಮರುಕಳಿಸುವಂತೆ ಮಾಡಬೇಕು ಎಂದು ಶ್ರೀಕಾಂತ್ ಆಟಗಾರರಿಗೆ ಸಲಹೆ ನೀಡಿದ್ದಾರೆ.‘ಈ ಸಲದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಟ್ರೋಫಿ ಗೆಲ್ಲುವ ಸಾಮರ್ಥ್ಯ ಹೊಂದಿದೆ. ಗೆಲ್ಲುವುದೆಂಬ ವಿಶ್ವಾಸವು ನನ್ನದು. ತವರು ನೆಲದಲ್ಲಿ ಆಡುತ್ತಿರುವುದರಿಂದ ಕೆಲ ಅನುಕೂಲಗಳು ಭಾರತಕ್ಕೆ ಆಗಲಿವೆ. ಸದ್ಯಕ್ಕೆ ತಂಡದ ಬ್ಯಾಟಿಂಗ್, ಬೌಲಿಂಗ್ ಹಾಗೂ ಕ್ಷೇತ್ರ ರಕ್ಷಣೆ ಸಮತೋಲನದಿಂದ ಕೂಡಿದೆ. ಸ್ಪಿನ್ ಬೌಲರ್‌ಗಳು ಪಂದ್ಯದ ಫಲಿತಾಂಶವನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.ಅವರು (ಬೌಲರ್ ಗಳೂ) ತಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ಬಳಸಿಕೊಳ್ಳಬೇಕು ಎಂದರು.ಭಾರತ 1983ರ ವಿಶ್ವಕಪ್ ಗೆಲ್ಲುವಲ್ಲಿ ನಾಯಕ ಕಪಿಲ್‌ದೇವ್ ಅವರ ಪಾತ್ರ ಮುಖ್ಯವಾದುದು. ಅವರೊಬ್ಬ ಸ್ಪೂರ್ತಿದಾಯಕ ‘ನಾಯಕ’ರಾಗಿದ್ದರು ಎಂದು ಕಪಿಲ್ ಅವರ ಗುಣಗಾನ ಮಾಡಿದರು. ಸಕಾರಾತ್ಮಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಯಶಸ್ವಿನೆಡೆಗೆ ಕೊಂಡೊಯ್ಯವುದು ಅವರ ನಡೆ ನಿಜಕ್ಕೂ ಮೆಚ್ಚುವಂತದ್ದು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.