ಶುಕ್ರವಾರ, ಮೇ 27, 2022
21 °C

2ಜಿ ತರಂಗಾಂತರ ಹಗರಣ: ಇಂದು ಸರ್ಕಾರದ ಹೊಸ ಪ್ರಸ್ತಾವ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣ ಬಗ್ಗೆ ಬಿಜೆಪಿ ಮತ್ತು ಎಡಪಕ್ಷಗಳು ಜೆಪಿಸಿ ತನಿಖೆಗೆ ಇನ್ನೂ ಪಟ್ಟು ಹಿಡಿದಿವೆ.  ಹಣಕಾಸು ಸಚಿವ ಪ್ರಣವ್‌ಮುಖರ್ಜಿ ಅವರು ಪ್ರತಿಪಕ್ಷಗಳು ಒಪ್ಪಿಕೊಳ್ಳಬಹುದಾದ ಹೊಸ ಪ್ರಸ್ತಾವವನ್ನು ಮುಂದಿಟ್ಟರೆ ಮಾತ್ರ ಸಂಸತ್ತಿನ ಬಿಕ್ಕಟ್ಟು ನಿವಾರಣೆಗೆ ಸರ್ಕಾರ ಮಂಗಳವಾರದ ಸರ್ವಪಕ್ಷಗಳ ಸಭೆಯಲ್ಲಿ ಕೈಗೊಳ್ಳಲಿರುವ ಯತ್ನ ಸಫಲ ಆಗಲಿದೆ.ಜೆಪಿಸಿ ಬೇಡಿಕೆಯೊಂದಿಗೆ ಒಂದು ತಿಂಗಳ ಅವಧಿಯ ಚಳಿಗಾಲದ ಅಧಿವೇಶನ ನಡೆಯದೇ ಹೋದದ್ದರಿಂದ ಬಿಕ್ಕಟ್ಟು ನಿವಾರಣೆಗೆ ಸರ್ಕಾರ ಮಂಗಳವಾರದಿಂದ ಹೊಸ ಕಾರ್ಯತಂತ್ರ ಆರಂಭಿಸಲಿದೆ. ಬಜೆಟ್ ಅಧಿವೇಶನಕ್ಕೆ ಇನ್ನು 15 ದಿನಗಳು ಉಳಿದಿರುವಾಗ ಈ ಯತ್ನ ನಡೆಯುತ್ತಿದೆ.‘ಸರ್ಕಾರ ಯಾವ ಹೊಸ ಪ್ರಸ್ತಾವ ಹೊಂದಿದೆ ಎಂಬುದು ನಮಗೆ ಗೊತ್ತಿಲ್ಲ. ನಾವು ಮುಖರ್ಜಿ ಜತೆ ಮಾತುಕತೆ ನಡೆಸಲಿದ್ದೇವೆ’ ಎಂದು ಮೂರು ತಿಂಗಳ ಅವಧಿಯ ಬಜೆಟ್ ಅಧಿವೇಶನವನ್ನು ‘ಉಳಿಸುವ’ ಯತ್ನವಾಗಿ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಮುಖರ್ಜಿ ಅವರು ಮಾತುಕತೆ ನಡೆಸುವ ಮುನ್ನಾ ದಿನ, ಸಿಪಿಐ ನಾಯಕ ಡಿ. ರಾಜಾ ಹೇಳಿದ್ದಾರೆ.

ಜೆಪಿಸಿ ತನಿಖೆ ನಡೆಸಬೇಕೆಂಬುದು ಎಡಪಕ್ಷಗಳ ಆಗ್ರಹ. ಸರ್ಕಾರ ಇದನ್ನು ಒಪ್ಪಿಕೊಳ್ಳಬೇಕು ಎಂದು ರಾಜಾ ಹೇಳಿದ್ದನ್ನು ಸಿಪಿಎಂ ಸಂಸದೀಯ ಪಕ್ಷದ ನಾಯಕ ಸೀತಾರಾಂ ಯೆಚೂರಿ ಕೂಡ ಬೆಂಬಲಿಸಿದ್ದಾರೆ.ದೂರಸಂಪರ್ಕ ಸಚಿವಾಲಯದ ಮಾಜಿ ಸಚಿವ ಎ. ರಾಜಾ ಬಂಧನ ಮತ್ತು ಶಿವರಾಜ್ ಪಾಟೀಲ್ ಸಮಿತಿಯ ವರದಿ ಈ ಪ್ರಕರಣದ ತನಿಖೆಗೆ ಜೆಪಿಸಿಯಿಂದಲೇ ಆಗಬೇಕು ಎಂಬುದಕ್ಕೆ ಪುಷ್ಠಿ ನೀಡಿವೆ ಎಂದು ಯೆಚೂರಿ ಅಭಿಪ್ರಾಯ ಪಟ್ಟಿದ್ದಾರೆ.‘ಕಲಾಪ ನಡೆಯಬೇಕು ಎಂದು ನಾವು ಬಯಸುತ್ತೇವೆ. ಆದರೆ ಕಲಾಪ ನಡೆಯುವುದೋ ಬಿಡುವುದೋ ಅದು ಸರ್ಕಾರದ ಹೊಣೆಗಾರಿಕೆ. ಜೆಪಿಸಿ ತನಿಖೆ ಇಲ್ಲ ಎಂದು ಈಗಿನ ಹಠಮಾರಿತನವನ್ನೇ ಸರ್ಕಾರ ಮುಂದುವರಿಸಿದರೆ, ಸಂಸತ್ತಿನಲ್ಲಿ ಕಲಾಪ ನಡೆಯುವಂತೆ ಮಾಡುವುದು ಸರ್ಕಾರದ ಜವಾಬ್ದಾರಿ ಎಂದೂ ಯೆಚೂರಿ ಸುದ್ದಿಗಾರರಿಗೆ ಹೇಳಿದ್ದಾರೆ.‘ಏನನ್ನು ಬಯಸುತ್ತಿದೆ ಎಂಬುದನ್ನು ಮೊದಲು ಸರ್ಕಾರ ಹೇಳಲಿ.ತಮಗೆ ಏನು ಬೇಕು ಎಂಬುದನ್ನು ಸರ್ಕಾರ ಹೇಳಿದರೆ ನಂತರ ಸಂಸತ್ತಿನಲ್ಲಿ ಕಲಾಪ ನಡೆಯುತ್ತದೆ. ಆದರೆ ಅವರು ಯಾವುದೇ ಪ್ರಸ್ತಾವ ಮುಂದಿಟ್ಟಿಲ್ಲ’ ಎಂದಿದ್ದಾರೆ.ತಮ್ಮ ಪಕ್ಷವು ಜೆಪಿಸಿ ಬೇಡಿಕೆಗೆ ಬದ್ಧವಾಗಿದ್ದು ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಎಲ್.ಕೆ. ಅಡ್ವಾಣಿ ಸೇರಿದಂತೆ ಬಿಜೆಪಿಯ ಇತರ ನಾಯಕರು ಹೇಳಿದ್ದಾರೆ.

ಬಿಕ್ಕಟ್ಟು ನಿವಾರಣೆಗೆ ಲೋಕಸಭಾ ಸ್ಪೀಕರ್ ಮೀರಾಕುಮಾರ್ ಅವರು, ಈಗಾಗಲೇ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಮೂರು ಸುತ್ತಿನ ಮಾತುಕತೆ ನಡೆಸಿದ್ದಾರೆ.ಜೆಪಿಸಿಗೆ ವಿರೋಧಿಸಿದ್ದ ಕಾಂಗ್ರೆಸ್, ಈಗ ಮೃದು ಧೋರಣೆ ತಾಳಿದೆ. ಜೆಪಿಸಿ ವಿಷಯವನ್ನು   ಸಂಸತ್ತಿನಲ್ಲಿ ಮತಕ್ಕೆ ಹಾಕಿದರೆ ಆ ಬಗ್ಗೆ ಚರ್ಚಿಸಲು ಪಕ್ಷ ಮುಕ್ತವಾಗಿದೆ ಎಂದು ಕಾಂಗ್ರೆಸ್ ವಕ್ತಾರೆ ಜಯಂತಿ ನಟರಾಜನ್ ಹೇಳಿದ್ದಾರೆ.2ಜಿ ತರಂಗಾಂತರ ಹಂಚಿಕೆ, ಆದರ್ಶ ವಸತಿ ಹಗರಣ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟದ ಸಿದ್ಧತೆ ಹಗರಣ ಬಗ್ಗೆ ಬಿಜೆಪಿ ನೇತೃತ್ವದ ಎನ್‌ಡಿಎ ಜೆಪಿಸಿ ತನಿಖೆಯ ಬೇಡಿಕೆಗೆ ಅಂಟಿಕೊಂಡಿದೆ.ಈ ಮೂರೂ ಹಗರಣಗಳ ಬಗ್ಗೆ ಜೆಪಿಸಿ ತನಿಖೆ ನಡೆಸಬೇಕೆಂಬ ತನ್ನ ಪಟ್ಟನ್ನು ಮಂಗಳವಾರದ ಸಭೆಯಲ್ಲೂ ಮುಂದುವರಿಸಲು ಬಿಜೆಪಿ ನಿರ್ಧರಿಸಿದೆ. ಜೆಪಿಸಿ ತನಿಖೆಗೆ ಕಾಂಗ್ರೆಸ್ ಒಪ್ಪಿಕೊಂಡರೆ ತನ್ನದೇನೂ ಸಮಸ್ಯೆಯಲ್ಲ ಎಂದು ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಹೇಳಿರುವುದು ಗಮನಾರ್ಹ. ಯುಪಿಎದಲ್ಲಿ ಕಾಂಗ್ರೆಸ್ ನಂತರ ತೃಣಮೂಲ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳನ್ನು ಪಡೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.