ಭಾನುವಾರ, ಮೇ 9, 2021
26 °C

2ಜಿ: ಹೊಸ ಹರಾಜು ಪ್ರಕ್ರಿಯೆ- ಗಡುವು ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  2 ಜಿ ತರಂಗಾಂತರಗಳನ್ನು ಹೊಸದಾಗಿ ಹರಾಜು ಹಾಕಲು ಸರ್ಕಾರಕ್ಕೆ 400 ದಿನಗಳ ಕಾಲಾವಕಾಶ ನೀಡಲು ಸುಪ್ರೀಂಕೋರ್ಟ್ ಮಂಗಳವಾರ ನಿರಾಕರಿಸಿದೆ. ಆದರೆ, ಈ ಪ್ರಕ್ರಿಯೆಗೆ ನೀಡಿದ್ದ ಗಡುವನ್ನು ಬರುವ ಜೂನ್ 2ರಿಂದ ಆಗಸ್ಟ್ 31ಕ್ಕೆ ವಿಸ್ತರಿಸಿದೆ.ಇದೇ ವೇಳೆ, ಪ್ರಸ್ತುತ ಇರುವ 2 ಜಿ ತರಂಗಾಂತರ ಪರವಾನಗಿಗಳ ಅವಧಿ ಬರುವ ಸೆಪ್ಟೆಂಬರ್ 7ರವರೆಗೆ ಮುಂದುವರಿಯುತ್ತದೆ ಎಂದು ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಮತ್ತು ಕೆ.ಎಸ್. ರಾಧಾಕೃಷ್ಣನ್ ಅವರನ್ನೊಳಗೊಂಡ ನ್ಯಾಯಪೀಠ ಸ್ಪಷ್ಟಪಡಿಸಿದೆ.ಮತ್ತೊಂದೆಡೆ, ಎ.ರಾಜಾ  ದೂರಸಂಪರ್ಕ ಸಚಿವರಾಗಿದ್ದಾಗ ಮಂಜೂರು ಮಾಡಿದ್ದ 122 ಪರವಾನಗಿಗಳನ್ನು ರದ್ದುಪಡಿಸಿ ಫೆ.2ರಂದು ತಾನು ನೀಡಿರುವ ತೀರ್ಪು ಕೂಡ ಜಾರಿಯಲ್ಲಿರುತ್ತದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.ಫೆ.2ರಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ 2 ಜಿ ತರಂಗಾಂತರಗಳನ್ನು ಹೊಸದಾಗಿ ಹರಾಜು ಹಾಕಲು ಜೂನ್ 2ರ ಗಡುವು ವಿಧಿಸಿತ್ತು. ನ್ಯಾಯಾಲಯದ ನಿರ್ದೇಶನದ ಬಗ್ಗೆ ಸ್ಪಷ್ಟನೆ ಬಯಸಿ ಸರ್ಕಾರ ಅರ್ಜಿ ಸಲ್ಲಿಸಿತ್ತು.

ಅಟಾರ್ನಿ ಜನರಲ್ ಜಿ.ಇ.ವಹನ್ವತಿ ಅವರು, ನ್ಯಾಯಾಲಯದ ತೀರ್ಪನ್ನು ಜಾರಿಗೆ ತರುವಲ್ಲಿ ಎದುರಾಗುವ ಪ್ರಾಯೋಗಿಕ ತೊಂದರೆಗಳು ಹಾಗೂ ಅದರ ಪರಿಣಾಮಗಳ ಕುರಿತು ಕೋರ್ಟ್‌ಗೆ ವಿವರಿಸಲು ಯತ್ನಿಸಿದರು.ಆದರೆ ಇದನ್ನು ಒಪ್ಪದ ನ್ಯಾಯಪೀಠ, 2008ರಲ್ಲಿ ತರಂಗಾಂತರ ಮಂಜೂರಿಗೆ ನೀವು ಎಷ್ಟು ದಿನ ತೆಗೆದುಕೊಂಡಿದ್ದಿರಿ?-  ಆಗ ಇನ್ನೊಂದಿಷ್ಟು ಶ್ರಮ ವಹಿಸಿದ್ದರೆ ಇಡೀ ಹಗರಣವನ್ನು ತಪ್ಪಿಸಬಹುದಿತ್ತು ಎಂದು ಚಾಟಿ ಬೀಸಿತು.4.4 ಮೆಗಾಹರ್ಟ್ಜ್ ಮತ್ತು 6.2 ಮೆಗಾಹರ್ಟ್ಜ್ ತರಂಗಾಂತರಗಳ ಹರಾಜು ಮೌಲ್ಯಗಳಿಗೆ ಸಂಬಂಧಿಸಿದಂತೆ ದೂರಸಂಪರ್ಕ ಇಲಾಖೆ ಮಾಡಿದ್ದ ಅಂದಾಜಿನ ಬಗ್ಗೆ ಪ್ರಸ್ತಾಪಿಸಿದ ನ್ಯಾಯಪೀಠ, ನಿಮ್ಮ ಅಧಿಕಾರಿಗಳು ಈ ವ್ಯತ್ಯಾಸ ತಿಳಿಯದಷ್ಟು ಅಮಾಯಕರು ಎಂಬುದನ್ನು ತಮಗೆ ನಂಬಲಾಗುತ್ತಿಲ್ಲ ಎಂದರು.ತರಂಗಾಂತರ ಹರಾಜು ಪ್ರಕ್ರಿಯೆಗೆ ಕನಿಷ್ಠ 400 ದಿನಗಳ ಕಾಲಾವಕಾಶ ಅಗತ್ಯವಿದ್ದು, ಕಾಲಮಿತಿಯನ್ನು ವಿಸ್ತರಿಸದಿದ್ದರೆ 6.9 ಕೋಟಿ ಮೊಬೈಲ್ ಗ್ರಾಹಕರಿಗೆ ತೊಂದರೆಯಾಗುತ್ತದೆ ಎಂದು ಸರ್ಕಾರ ಮಾರ್ಚ್ 1ರಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಪರವಾನಗಿಗಳ ರದ್ದತಿಗೆ ನಿಗದಿ ಮಾಡಿದ್ದ ಗಡುವನ್ನು ವಿಸ್ತರಿಸುವಂತೆಯೂ ಸರ್ಕಾರ ಅರ್ಜಿಯಲ್ಲಿ ಕೋರಿತ್ತು.ಟೆಲಿಕಾಂ ಕಂಪೆನಿಗಳ ಸ್ವಾಗತ: 2 ಜಿ ತರಂಗಾಂತರ ಆಧರಿಸಿ ಸೆ.7ರವರೆಗೆ ಸೇವೆ ಒದಗಿಸಲು ಅವಕಾಶ ನೀಡಿರುವ ಸುಪ್ರೀಂಕೋರ್ಟ್ ತೀರ್ಪನ್ನು ದೂರಸಂಪರ್ಕ ಕಂಪನಿಗಳು ಸ್ವಾಗತಿಸಿವೆ.ಲೈಸನ್ಸ್ ರದ್ದತಿಗೆ ಜೂನ್ 2ಕ್ಕೆ ನಿಗದಿಯಾಗಿದ್ದ  ಕಾಲಮಿತಿಯನ್ನು ಸೆ.7ರವರೆಗೆ ವಿಸ್ತರಿಸಿರುವುದರಿಂದ ಗ್ರಾಹಕರಿಗೆ ಅನಾನುಕೂಲ ತಪ್ಪಿದಂತಾಗಿದೆ ಎಂದಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.