ಬುಧವಾರ, ಜೂನ್ 16, 2021
22 °C
ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ

28ರೊಳಗೆ ಆರೋಪಪಟ್ಟಿ :‘ಸುಪ್ರೀಂ’ ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರಿ ವಿವಾದ ಸೃಷ್ಟಿಸಿದ  ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ನಾಲ್ಕು ವಾರ ಕಾಲಾವಕಾಶ ಕೋರಿ  ಸಿಬಿಐ ಸಲ್ಲಿಸಿದ ಮನವಿಯನ್ನು  ನಿರ್ದಾಕ್ಷಿಣ್ಯವಾಗಿ ತಳ್ಳಿಹಾಕಿದ ಸುಪ್ರೀಂಕೋರ್ಟ್, ಮಾರ್ಚ್‌ 28ರ ಒಳಗಾಗಿ ಹಗರಣಕ್ಕೆ ಸಂಬಂಧಿಸಿದ ಉಳಿದ ಐದೂ ಆರೋಪಪಟ್ಟಿಗಳನ್ನು ಸಲ್ಲಿಸುವಂತೆ ಸೋಮವಾರ ಗಡುವು ನೀಡಿದೆ.  ನ್ಯಾಯಮೂರ್ತಿಗಳಾದ ಆರ್‌.ಎಂ. ಲೋಧಾ, ಮದನ್‌ ಬಿ.ಲೋಕೂರ ಮತ್ತು ಕುರೇನ್‌ ಜೋಸೆಫ್‌ ಅವರಿದ್ದ ನ್ಯಾಯಪೀಠ, ಆರೋಪಪಟ್ಟಿ ಸಲ್ಲಿಸಲು ವಿಳಂಬ ಮಾಡಿದ ಸಿಬಿಐಯನ್ನು  ತೀವ್ರವಾಗಿ ತರಾಟೆಗೆ ತೆಗದುಕೊಂಡಿತು.

ಕಾಲಾವಕಾಶ ಕೋರಿದ ಸಿಬಿಐ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಫೆಬ್ರುವರಿ 10ರಂದು ಹೇಳಿಕೆ ದಾಖಲಿಸಿಕೊಂಡ ಬಳಿಕ ಮೂರು ವಾರಗಳಲ್ಲಿ ಆರೋಪಟ್ಟಿ ಸಲ್ಲಿಸಬೇಕಿತ್ತು. ಆದರೆ, ಇದುವರೆಗೂ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಹಗರಣದ ಕುರಿತು ಇನ್ನೂ ಕೆಲವು ಮಾಹಿತಿ ಸಂಗ್ರಹಿಸಬೇಕಿರುವ ಕಾರಣ ಆರೋಪಪಟ್ಟಿ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡುವಂತೆ ಸಿಬಿಐ  ವಕೀಲ ಅಮರೇಂದ್ರ ಶರಣ್‌  ಮನವಿ ಮಾಡಿದರು. ಸಿಬಿಐ ಕೋರಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು , ‘ನಾಲ್ಕು  ವಾರ ತೀರಾ ಹೆಚ್ಚಾಯಿತು. ಇಷ್ಟು ಕಾಲಾವಕಾಶ ನೀಡಲು ಸಾಧ್ಯವಿಲ್ಲ ಎರಡು ವಾರ ಬೇಕಾದರೆ ನೀಡಬಹುದು’ ಎಂದರು. ಸಿಬಿಐ ಪದೇ ಪದೇ ಮನವಿ ಮಾಡಿ­ಕೊಂಡಾಗ ಅಂತಿಮವಾಗಿ ಮಾರ್ಚ್‌ 28ರ ಗಡುವು ನೀಡಲಾಯಿತು.ಸಿಬಿಐ ಮನವಿಯನ್ನು ವಿರೋಧಿಸಿದ ಸ್ವಯಂ ಸೇವಾ ಸಂಸ್ಥೆ ಪರ ವಕೀಲ ಪ್ರಶಾಂತ್‌ ಭೂಷಣ್‌,  ಚುನಾವಣೆ ಹಿನ್ನೆಲೆಯಲ್ಲಿ ಪ್ರಕರಣವನ್ನು ಅನಗತ್ಯ ವಿಳಂಬ ಮಾಡಲು ಸಿಬಿಐ ಈ ತಂತ್ರ ಹೂಡಿದೆ  ಎಂದು ಆರೋಪಿಸಿದರು. ಕಳೆದ ಬಾರಿ ವಿಚಾರಣೆಯ ವೇಳೆ   ಬಹುತೇಕ ತನಿಖೆ ಮುಗಿದಿರುವುದಾಗಿ ಹೇಳಿದ್ದ ಸಿಬಿಐ, ಆದರೆ ಇದೀಗ ಕಾಲಾವಾಕಾಶ ಕೋರುವ ಮೂಲಕ ವಿಳಂಬ ತಂತ್ರ ಅನುಸರಿಸುತ್ತಿದೆ ಎಂದರು.ವಿವರಣೆ ಕೋರಿದ ‘ಸುಪ್ರೀಂ’: ದೇಶದ ವಿವಿಧೆಡೆ ಇರುವ ಹಿಂಡಾಲ್ಕೊ ಕಂಪೆನಿಯ ಆವರಣದಿಂದ ವಶ­ಪಡಿಸಿಕೊಳ್ಳಲಾದ ದಾಖಲೆ ಪರಿಶೀಲಿಸಲು ತನ್ನ ಅಧಿ­ಕಾರಿಗಳಿಗೆ ಅನುಮತಿ ನೀಡುವಂತೆ ಕೋರಿ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ ಅರ್ಜಿ ಬಗ್ಗೆ ಸುಪ್ರೀಂ­ಕೋರ್ಟ್‌ ಇದೇ ವೇಳೆ ಸಿಬಿಐ ಅಭಿಪ್ರಾಯ ಕೋರಿತು. ಆದಾಯ ತೆರಿಗೆ ಕಾನೂನು ಅಡಿ ಆದಿತ್ಯ ಬಿರ್ಲಾ ಸಮೂಹ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಲು  ಅನುಮತಿ ಅಗತ್ಯ ಎಂದು ತೆರಿಗೆ ಇಲಾಖೆ ಅರ್ಜಿಯಲ್ಲಿ ಹೇಳಿದೆ.ಹಿಂಡಾಲ್ಕೊ ಕಂಪೆನಿಯ ಕಚೇರಿಗಳಿಂದ ಸಿಬಿಐ,  ಸೂಕ್ತ ದಾಖಲೆಗಳಿಲ್ಲದ 25 ಕೋಟಿ ರೂಪಾಯಿ­ಗಳನ್ನೂ ವಶಪಡಿಸಿಕೊಂಡಿತ್ತು. ಈ ಕುರಿತಾದ ಮಾಹಿತಿ ಮತ್ತು ದಾಖಲೆಗಳನ್ನು  ಯಾರೊಂದಿಗೂ ಹಂಚಿಕೊಳ್ಳದಂತೆ ಸುಪ್ರೀಂ­ಕೋರ್ಟ್‌, ತನಿಖಾ ಸಂಸ್ಥೆಗೆ ತಾಕೀತು ಮಾಡಿತ್ತು. ಹೀಗಾಗಿ ದಾಖಲೆ ಪರಿಶೀಲಿಸಲು ಅನುಮತಿ ಕೋರಿ ಆದಾಯ ತೆರಿಗೆ ಇಲಾಖೆ ಅರ್ಜಿ ಸಲ್ಲಿಸಿದೆ. 15 ದಿನ­ದ ಒಳಗಾಗಿ ಅಭಿ­ಪ್ರಾಯ ತಿಳಿಸು­ವಂತೆ ಸಿಬಿ­ಐಗೆ ಸೂಚಿಸಿರುವ ನ್ಯಾಯ­ಪೀಠ, ಮಾರ್ಚ್‌ 28ರಂದು ವಿಚಾರಣೆ  ವೇಳೆ ತನಿಖಾ ಸಂಸ್ಥೆ ಅಭಿಪ್ರಾಯ  ಪರಿಶೀಲಿಸುವು­ದಾಗಿಯೂ ಹೇಳಿತು.ಸಂಸದ ನವೀನ್ ಜಿಂದಾಲ್‌,  ಕಲ್ಲಿದ್ದಲು ಖಾತೆ ಮಾಜಿ ರಾಜ್ಯಖಾತೆ ಸಚಿವ ದಾಸರಿ ನಾರಾಯಣ­ರಾವ್‌, ಕಲ್ಲಿದ್ದಲು ಸಚಿವಾಲಯದ ಮಾಜಿ ಕಾರ್ಯದರ್ಶಿ ಪಿ.ಸಿ. ಪಾರಖ್‌, ಕೆ.ಎಂ. ಬಿರ್ಲಾ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ದೆಹಲಿ ನ್ಯಾಯಾಲಯಕ್ಕೆ ಮೊದಲ ಆರೋಪಟ್ಟಿ ಸಲ್ಲಿಕೆ

ದೆಹಲಿ ವಿಚಾರಣಾ ನ್ಯಾಯಾಲಯದಲ್ಲಿ ಸಿಬಿಐ ಸೋಮವಾರ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದ ಮೊದಲ ಆರೋಪ­ಪಟ್ಟಿಯನ್ನು ಸಲ್ಲಿಸಿತು.

ಹಗರಣಕ್ಕೆ ಸಂಬಂಧಿಸಿದ ಒಟ್ಟು ಆರು ಆರೋಪಪಟ್ಟಿಗಳ ಪೈಕಿ ಸಿಬಿಐ ಸಲ್ಲಿಸಿದ ಮೊದಲ ಆರೋಪಪಟ್ಟಿ ಇದಾಗಿದೆ.

ಸಿಬಿಐ ವಿಶೆಷ ನ್ಯಾಯಾಧೀಶ ಮಧು ಜೈನ್‌ ಅವರಿಗೆ ಸಲ್ಲಿಸಿದ  ಆರೋಪಪಟ್ಟಿಯಲ್ಲಿ ನವಭಾರತ ಪವರ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಕಂಪೆನಿಯ ಇಬ್ಬರು ನಿರ್ದೇಶಕರ ಹೆಸರುಗಳಿವೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.

2006 ಮತ್ತು 09 ಅವಧಿಯಲ್ಲಿ ನವಭಾರತ ಪವರ್‌ ಕಂಪೆನಿ ಕಲ್ಲಿದ್ದಲು ನಿಕ್ಷೇಪ ಪಡೆಯಲು ತಪ್ಪು ಮಾಹಿತಿ ನೀಡಿದೆ ಎಂದು ಆರೋಪಿಸ­ಲಾಗಿದೆ.ಅದೇ ರೀತಿ ಕಂಪೆನಿಯ ನಿರ್ದೇಶಕರಾದ  ಪಿ. ತ್ರಿವಿಕ್ರಮ ಪ್ರಸಾದ್‌ ಮತ್ತು ವೈ. ಹರೀಶ್‌ಚಂದ್ರ ಪ್ರಸಾದ್‌ ಅವರ ಪಾತ್ರದ ಕುರಿತೂ ಆರೋಪಪಟ್ಟಿಯಲ್ಲಿ ವಿವರಿಸಲಾಗಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 120 ಬಿ (ಅಪರಾಧ ಸಂಚು) ಮತ್ತು 420 (ಮೋಸ) ಅಡಿ  ಆರೋಪ  ಹೊರಿಸಲಾಗಿದೆ. ಆದರೆ, ಭ್ರಷ್ಟಾಚಾರ ತಡೆ ಕಾಯ್ದೆ ಅಡಿ  ಇವರ ವಿರುದ್ಧ ಆರೋಪ ನಿಗದಿ ಪಡಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.