ಭಾನುವಾರ, ಏಪ್ರಿಲ್ 11, 2021
22 °C

30 ವರ್ಷಕ್ಕಿಂತ ಮೇಲಿನ ಎಲ್ಲರೂ ಶಿಬಿರದಲ್ಲಿ ಪಾಲ್ಗೊಳ್ಳಿ: ಬಾಯರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: `ಉಡುಪಿ ಜಿಲ್ಲೆಯ ಆರೋಗ್ಯ ಉಪಕೇಂದ್ರ ಮಟ್ಟದಲ್ಲಿ ಇದೇ 8ರಿಂದ 10ರ ವರೆಗೆ ರಕ್ತದಲ್ಲಿನ ಗ್ಲುಕೋಸ್ ಅಂಶ (ಮಧುಮೇಹ ಪರೀಕ್ಷೆ) ಪತ್ತೆ ಹಚ್ಚುವ ಗ್ಲುಕೋಸ್ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ~ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಚಂದ್ರ ಬಾಯರಿ ಹೇಳಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಕ್ರಾಮಿಕವಲ್ಲದ ರೋಗದಿಂದ ಸಾಯುವವರ ಪ್ರಮಾಣ ದೇಶದಲ್ಲಿ ಶೇ 53ರಷ್ಟಿದೆ. ದೇಶದಲ್ಲಿ ಪ್ರತಿ 1000 ಜನಸಂಖ್ಯೆಗೆ 62.47ರಷ್ಟು ಮಂದಿಗೆ ಮಧುಮೇಹ ರೋಗ ಇರುವುದು ಅಂಕಿ- ಅಂಶಗಳಿಂದ ತಿಳಿದುಬಂದಿದೆ. ಮಧುಮೇಹದ ಪರಿಣಾಮ ಹಲವು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಜನರನ್ನು ಪರೀಕ್ಷೆಗೆ ಒಳಪಡಿಸಿ ಅವರಲ್ಲಿ ಮಧುಮೇಹ ಇದ್ದರೆ ಅದಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಮಧುಮೇಹದ ಪೂರ್ವಭಾವಿ ಲಕ್ಷಣ ಇದ್ದರೆ ಅಂತಹವರಿಗೆ ಸಮಾಲೋಚನೆ ಮಾಡಿ ಸಲಹೆಗಳನ್ನು ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಮೂವತ್ತು ವರ್ಷ ಮೇಲ್ಪಟ್ಟ ಎಲ್ಲರೂ ತಪಾಸಣಾ ಶಿಬಿರಲ್ಲಿ ಪಾಲ್ಗೊಂಡು ಪರೀಕ್ಷೆ ಮಾಡಿಸಿಕೊಳ್ಳಬೇಕು. ಆರೋಗ್ಯ ಉಪಕೇಂದ್ರ, ಅಂಗನವಾಡಿ ಕೇಂದ್ರಗಳಲ್ಲಿ ಈ ತಪಾಸಣೆ ಮಾಡಲಾಗುತ್ತದೆ. ಜಿಲ್ಲೆಯ ಜನಸಂಖ್ಯೆ ಸುಮಾರು ಹನ್ನೆರಡು ಲಕ್ಷ ಇದ್ದು, ಅದರಲ್ಲಿ ಅರ್ಧದಷ್ಟು ಅಂದರೆ ಆರು ಲಕ್ಷ ಮಂದಿಯನ್ನು ತಪಾಸಣೆ ಮಾಡುವ ಗುರಿ ಇದೆ ಎಂದು ಅವರು ಮಾಹಿತಿ ನೀಡಿದರು.ಪಲ್ಸ್ ಪೋಲಿಯೊ ಮಾದರಿಯಲ್ಲಿ ತಪಾಸಣಾ ಶಿಬಿರವನ್ನು ನಡೆಸಲಾಗುತ್ತದೆ. ಗ್ಲುಕೋಸ್ ಪ್ರಮಾಣ 140 ಅಥವಾ ಅದಕ್ಕಿಂತ ಹೆಚ್ಚಿದ್ದರೆ ಅವರನ್ನು ಆರೋಗ್ಯ ಕೇಂದ್ರದಲ್ಲಿ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅಲ್ಲದೆ ಅವರಿಗೆ ಚಿಕಿತ್ಸೆ, ಆಪ್ತ ಸಮಾಲೋಚನೆ ನೀಡಲಾಗುತ್ತದೆ. ಇದರಿಂದ ಆರಂಭಿಕ ಹಂತದಲ್ಲಿಯೇ ಮಧುಮೇಹವನ್ನು ತಡೆಯಬಹುದು ಅಥವಾ ಈಗಾಗಲೇ ಇದ್ದರೆ ಜೀವನ ಶೈಲಿಯ ಬದಲಾವಣೆ ಮೂಲಕ ಅದನ್ನು ಹತೋಟಿ ಮಾಡಲು ಅನುಕೂಲವಾಗುತ್ತದೆ ಎಂದು ಬಾಯರಿ ಮಾಹಿತಿ ನೀಡಿದರು.5 ಸೆಕೆಂಡ್‌ನಲ್ಲಿ ಮಧುಮೇಹ ಪತ್ತೆ: ಮಧುಮೇಹ ಪರೀಕ್ಷೆ ಮಾಡಲು ಕೇಂದ್ರ ಸರ್ಕಾರ ಜಿಲ್ಲೆಗೆ 293 ಗ್ಲುಕೋಮೀಟರ್‌ಗಳನ್ನು ನೀಡಿದೆ. ಇದರ ಜತೆಗೆ 58,600 ಸ್ಟ್ರಿಪ್ಸ್ ಹಾಗೂ 6,73,900 ಲ್ಯಾನ್ಸೆಟ್‌ಗಳನ್ನು ನೀಡಿದೆ.

 

ಬೆರಳಿನಿಂದ ರಕ್ತದ ಮಾದರಿಯನ್ನು ತೆಗೆಯಲು ಲ್ಯಾನ್ಸೆಟ್‌ಗಳನ್ನು ಬಳಸಲಾಗುತ್ತದೆ. ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳುವ ವ್ಯಕ್ತಿಗೆ ಸ್ವಲ್ಪವೂ ನೋವಾಗದಂತೆ ರಕ್ತದ ಮಾದರಿ ತೆಗೆಯವುದು ಈ ಲ್ಯಾನ್ಸೆಟ್‌ಗಳ ವಿಶೇಷತೆಯಾಗಿದೆ.

 

ಹೀಗೆ ತೆಗೆದ ರಕ್ತದ ಮಾದರಿಯನ್ನು ಸ್ಟ್ರಿಪ್ಸ್‌ಗಳಿಗೆ ಲೇಪಿಸಿ ಗ್ಲುಕೋಮೀಟರ್‌ಗೆ ಹೊಂದಿಸಿದಾಗ ಕೇವಲ ಐದು ಸೆಕೆಂಡ್‌ಗಳಲ್ಲಿ ಗ್ಲುಕೋಸ್ ಅಂಶ ಎಷ್ಟಿದೆ ಎಂಬುದನ್ನು ತೋರಿಸುತ್ತದೆ. ಪ್ರತಿ ಡೆಸಿಲೀಟರ್‌ಗೆ 140 ಮಿಲಿಗ್ರಾಂ ಅಥವಾ ಅದಕ್ಕಿಂತ ಹೆಚ್ಚಿಗೆ ಇದ್ದರೆ ಅದು ಮಧುಮೇಹದ ಲಕ್ಷಣ ಅಥವಾ ಮಧುಮೇಹ ಇರಬಹುದು ಎಂದು ಗುರುತಿಸಲಾಗುತ್ತದೆ ಎಂದು ಸರ್ವೇಕ್ಷಣಾ ಕೇಂದ್ರದ ಡಾ. ರೋಹಿಣಿ ಮಾಹಿತಿ ನೀಡಿದರು.

ಶುಷ್ರೂಶಕಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕರು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಪತ್ತೆ ಮಾಡುವ ಪ್ರಾಯೋಗಿಕ ಯೋಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ.

ದೇಶದ 21 ರಾಜ್ಯಗಳ 100 ಜಿಲ್ಲೆಗಳನ್ನು ಪ್ರಾಯೋಗಿಕ ಯೋಜನೆಗೆ ಆಯ್ಕೆ ಮಾಡಿಕೊಂಡಿದೆ. ಕರ್ನಾಟಕದ ಶಿವಮೊಗ್ಗ, ಕೋಲಾರ, ಉಡುಪಿ, ಚಿಕ್ಕಮಗಳೂರು, ತುಮಕೂರಿನಲ್ಲಿ ಈ ಶಿಬಿರ ನಡೆಯಲಿದೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.