ಮಂಗಳವಾರ, ಮೇ 18, 2021
30 °C

32 ಸಾವಿರ ಅನಧಿಕೃತ ಎಲ್‌ಪಿಜಿ ಸಂಪರ್ಕ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜಿಲ್ಲೆಯಲ್ಲಿ ನಿಯಮ ಉಲ್ಲಂಘಿಸಿ ಅನಧಿಕೃತ ಸಂಪರ್ಕ ಪಡೆದಿರುವ 32ಸಾವಿರ  ಅಡುಗೆ ಅನಿಲ ಸಿಲಿಂಡರ್ (ಎಲ್‌ಪಿಜಿ) ಸಂಪರ್ಕಗಳನ್ನು ರದ್ದುಗೊಳಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಡಾ.ಕೆ. ರಾಮೇಶ್ವರಪ್ಪ ತಿಳಿಸಿದರು.ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಅಧ್ಯಕ್ಷರಿಗೆ ಈ ಕುರಿತು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಇದುವರೆಗೆ 2.45ಲಕ್ಷ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಕಲ್ಪಿಸಲಾಗಿದೆ. ಸಂಪರ್ಕ ಹೊಂದಿದವರು ವಿದ್ಯುತ್ ಬಿಲ್, ಪಡಿತರ ಚೀಟಿ ಸೇರಿದಂತೆ ಇತರ ಅಧಿಕೃತ ದಾಖಲೆ ಸಲ್ಲಿಸಬೇಕು ಎಂದು ಇಲಾಖೆ ಮನವಿ ಮಾಡಿತ್ತು. ಇದಕ್ಕೆ 1.21ಲಕ್ಷ ಸಂಪರ್ಕದಾರರು ಸ್ಪಂದಿಸಿ, ದಾಖಲೆ ಸಲ್ಲಿಸಿದ್ದಾರೆ. ಇವುಗಳಲ್ಲಿ 32 ಸಾವಿರ ಅನಧಿಕೃತ ಸಂಪರ್ಕದಾರರನ್ನು ಪತ್ತೆ ಹಚ್ಚಲಾಗಿದೆ. ಈ ಸಂಪರ್ಕಗಳನ್ನು ಇನ್ನು 2-3ದಿನಗಳಲ್ಲಿ ರದ್ದುಪಡಿಸಲಾಗುವುದು ಎಂದು ವಿವರಿಸಿದರು.ಜಿಲ್ಲೆಯಲ್ಲಿ 26ಹೆಚ್ಚುವರಿ ಎಲ್‌ಪಿಜಿ ವಿತರಕರಿಗೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಕುರಿತು ಮೂರು ವರ್ಷದಿಂದ ಪತ್ರ ವ್ಯವಹಾರ ನಡೆಸಲಾಗುತ್ತಿದೆ. ಆದರೆ, ಕೇಂದ್ರದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹೆಚ್ಚುವರಿ ವಿತರಕರಿಗೆ ಅನುಮತಿ ನೀಡಿದಲ್ಲಿ, ಜಿಲ್ಲೆಯಲ್ಲಿ ಎಲ್‌ಪಿಜಿ ಕೊರತೆ ನೀಗಿಸಬಹುದು ಎಂದು ತಿಳಿಸಿದರು.ಕೇಂದ್ರ ಸರ್ಕಾರ `ರಾಜೀವ್ ಗಾಂಧಿ ಗ್ರಾಮೀಣ ಎಲ್‌ಪಿಜಿ ವಿತರಣೆ~ಯೋಜನೆ ಆರಂಭಿಸಿದೆ. ಇದನ್ನು ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತಂದಲ್ಲಿ ಇನ್ನು 6 ತಿಂಗಳಲ್ಲಿ ಗ್ರಾಮೀಣ ಭಾಗದಲ್ಲೂ ಎಲ್‌ಪಿಜಿ ವಿತರಕರನ್ನು ನೇಮಿಸಬಹುದು. ಚನ್ನಗಿರಿ, ಮಲೇಬೆನ್ನೂರು ಇತೆರೆಡೆ ಎಲ್‌ಪಿಜಿ ಸಮಸ್ಯೆ ಇದೆ. ಇದಕ್ಕೆ ಸಂಬಂಧಿಸಿದಂತೆ ಈಚೆಗಷ್ಟೇ ರಾಜ್ಯಮಟ್ಟದ ಐಒಸಿಯ ಉನ್ನತ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗಿದೆ ಎಂದರು.ಜಿಲ್ಲೆಯ ಚನ್ನಗಿರಿ ತಾಲ್ಲೂಕು ಸೇರಿದಂತೆ ಹಲವೆಡೆ 45ದಿನಗಳಾದರೂ ಸಿಲಿಂಡರ್ ದೊರೆಯುವುದಿಲ್ಲ. ಈ ಕುರಿತು ಗ್ರಾಹಕರಿಂದ ದೂರುಗಳು ಬಂದಿವೆ. ದೊಡ್ಡ ತಾಲ್ಲೂಕಿನಲ್ಲಿ 25ಸಾವಿರ ಗ್ರಾಹಕರಿಗೆ ಒಬ್ಬನೇ ಡೀಲರ್ ಇದ್ದರೆ ಕಷ್ಟ. ಇದನ್ನು ವಿತರಕರು ದುರಪಯೋಗಪಡಿಸಿಕೊಂಡು ಕಾಳಸಂತೆಯಲ್ಲಿ ಹೆಚ್ಚಿನ ಹಣ ಪಡೆದು, ತಮಗೆ ಬೇಕಾದವರಿಗೆ ಸಿಲಿಂಡರ್ ಮಾರಾಟ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಬೇಕು ಎಂದು ಜಿ.ಪಂ. ಅಧ್ಯಕ್ಷ ಬಸವಲಿಂಗಪ್ಪ ಸೂಚಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.