ಗುರುವಾರ , ಏಪ್ರಿಲ್ 15, 2021
31 °C

40 ದಿನಗಳ ನಂತರವೂ ಮುಂದುವರಿದ ಧರಣಿ: ಮುಂದೇನು?

ಪ್ರಜಾವಾಣಿ ವಾರ್ತೆ/ ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ ವಿಷಯವು ಇತ್ತೀಚೆಗೆ ಮಹತ್ವ ಪಡೆದುಕೊಳ್ಳುತ್ತಿದೆ. ಯೋಜನೆ ಅನುಷ್ಠಾನಕ್ಕಾಗಿ ಒತ್ತಾಯಿಸಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಆಯಾ ತಾಲ್ಲೂಕುಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ವಿವಿಧ ಸಂಘ, ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸುತ್ತಿವೆ.ವಿವಿಧ ಜಿಲ್ಲೆ ಮತ್ತು ತಾಲ್ಲೂಕುಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮ್ಮ ವಿಚಾರಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಸಂಘ, ಸಂಸ್ಥೆಗಳಿಂದ ಪೈಪೋಟಿ ರೂಪದಲ್ಲಿ ಹೋರಾಟ ನಡೆಯುತ್ತಿದೆ.ವಿವಿಧ ಸಂಘ, ಸಂಸ್ಥೆ ನೇತೃತ್ವದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ನಗರದ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶನಿವಾರ 40ನೇ ದಿನಕ್ಕೆ ಕಾಲಿರಿಸಿದರೆ, ಬಾಗೇಪಲ್ಲಿಯ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಬಳಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಮತ್ತು ಚಿತ್ರಾವತಿ ಬಚಾವ್ ಸಮಿತಿ ನಡೆಸುತ್ತಿರುವ ಧರಣಿ 18ನೇ ದಿನಕ್ಕೆ ಪದಾರ್ಪಣೆ ಮಾಡಲಿದೆ. ಚಿಕ್ಕಬಳ್ಳಾಪುರ ಮತ್ತು ಬಾಗೇಪಲ್ಲಿಯಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಪಾಲ್ಗೊಳ್ಳಲೆಂದೇ ಇನ್ನಷ್ಟು ಸಂಘ, ಸಂಸ್ಥೆಗಳು ದಿನಾಂಕಗಳನ್ನು ಕಾಯ್ದಿರಿಸಿವೆ.ಚಿಕ್ಕಬಳ್ಳಾಪುರದ ಧರಣಿ ಸ್ಥಳಕ್ಕೆ ಈವರೆಗೆ ಕೇಂದ್ರ ಸಚಿವರಾದ ಎಂ. ವೀರಪ್ಪ ಮೊಯಿಲಿ, ಕೆ.ಎಚ್.ಮುನಿಯಪ್ಪ ಹಾಗೂ ಸಚಿವ ಎ.ನಾರಾಯಣಸ್ವಾಮಿ ಭೇಟಿ ಕೊಟ್ಟು, ಭರವಸೆ ನೀಡಿದ್ದಾರೆ. ಶಾಶ್ವತ ನೀರಾವರಿ ಯೋಜನೆ ಕುರಿತು ಜಲಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿ ಜೊತೆ ಮಾತನಾಡಿದ್ದೇನೆ ಎಂದು ವೀರಪ್ಪ ಮೊಯಿಲಿ ಹೇಳಿದ್ದರೆ, ನಮಗೆ ಎತ್ತಿನಹೊಳೆ ಯೋಜನೆ ಬೇಡ. ಶಾಶ್ವತ ನೀರಾವರಿ ಯೋಜನೆಯೇ ಬೇಕು ಎಂದು ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.ಧರಣಿ ಸ್ಥಳಕ್ಕೆ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಭೇಟಿ ನೀಡಿದಾಗ, `ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು~ ಎಂದು ಪಟ್ಟು ಹಿಡಿದಿದ್ದ ಹೋರಾಟ ಸಮಿತಿ ಸದಸ್ಯರು ನವೆಂಬರ್ 1ರ ರಾಜ್ಯೋತ್ಸವದಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಕೂಡ ನಡೆಸಿದರು.ನಂತರದ ದಿನಗಳಲ್ಲಿ ರಾಜ್ಯ ಸರ್ಕಾರದ ಸಚಿವರಾಗಲಿ, ಅಧಿಕಾರಿಗಳಾಗಲಿ ಮತ್ತು ಇತರ ಜನಪ್ರತಿನಿಧಿಗಳು ಧರಣಿ ಸ್ಥಳಕ್ಕೆ ಭೇಟಿ ನೀಡಲಿಲ್ಲ. ಕೆಲ ದಿನಗಳ ಹಿಂದೆ ಮನವಿಪತ್ರ ಸ್ವೀಕರಿಸಿದ್ದ ಸಚಿವ ಎ.ನಾರಾಯಣಸ್ವಾಮಿ, ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೇರವಾಗಿ ಬೆಂಗಳೂರಿಗೆ ತೆರಳಿದ್ದರು.`ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲವಿದೆ ಎಂದು ಹೇಳಿಕೊಂಡು ವಿವಿಧ ಸಂಘ, ಸಂಸ್ಥೆಗಳು ಹೆಸರು ನೋಂದಾಯಿಸಿಕೊಳ್ಳುತ್ತಿವೆ. ದಿನಾಂಕಗಳನ್ನು ಕಾಯ್ದಿರಿಸುತ್ತಿವೆ. ಮುಖಂಡರು ತಮ್ಮ ಸಂಘ, ಸಂಸ್ಥೆಗಳ ಬಲಪ್ರದರ್ಶನದೊಂದಿಗೆ ಧರಣಿ ಸ್ಥಳಕ್ಕೆ ಬಂದು ಭಾಷಣಗಳನ್ನು ಮಾಡುತ್ತಾರೆ.ನೀರಾವರಿ ಯೋಜನೆ ಅನುಷ್ಠಾನಗೊಳ್ಳಲೇಬೇಕು ಎಂದು ಭಾವೋದ್ವೇಗದಿಂದ ಮಾತನಾಡುತ್ತಾರೆ. ಆದರೆ ಹೋರಾಟವು ಪ್ರಮುಖ ಹಂತಕ್ಕೆ ಬರುವುದು ಮತ್ತು ತಾರ್ಕಿಕ ಅಂತ್ಯ ಕಾಣುವುದು ಯಾವಾಗ ಎಂಬುದು ಇನ್ನೂ ಅಸ್ಪಷ್ಟವಾಗಿ ಉಳಿದುಕೊಂಡಿದೆ~ ಎಂದು ಹೋರಾಟ ಸಮಿತಿ ಸದಸ್ಯರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.`ಸಚಿವರು ಮನವಿಪತ್ರ ಸ್ವೀಕರಿಸಿದರೆ ಸಾಲದು, ನಿಖರ ಭರವಸೆ ನೀಡುವವರೆಗೆ ಹೋರಾಟ ಕೈಬಿಡುವುದಿಲ್ಲ. ಒಂದು ತಿಂಗಳಿಗೂ ಹೆಚ್ಚಿನ ಕಾಲದವರೆಗೆ ಪ್ರತಿಭಟನೆ ನಡೆಯುತ್ತದೆ ಎಂಬುದರ ಬಗ್ಗೆ ನಿರೀಕ್ಷೆ ಇರಲಿಲ್ಲ. ಹೋರಾಟ ಆರಂಭಿಸಿಯಾಗಿದೆ. ಸಮುದ್ರಕ್ಕೆ ಇಳಿದ ಮೇಲೆ ಈಜಲೇಬೇಕು.ಈಜುತ್ತಲೇ ನಮ್ಮ ಹೋರಾಟ ಮುಂದುವರಿಸಬೇಕು. ನಿರ್ದಿಷ್ಟ ಗುರಿ ಮುಟ್ಟುವವರೆಗೆ ನಮ್ಮ ಹೋರಾಟ ಮುಂದುವರಿಸುತ್ತೇವೆ. ರಾಜ್ಯ ಸರ್ಕಾರ ಶೀಘ್ರವೇ ಕ್ರಮ ತೆಗದುಕೊಳ್ಳುವುದೇ ಎಂಬ ನಿರೀಕ್ಷೆಯಲ್ಲಿದ್ದೇವೆ~ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.