ಶನಿವಾರ, ಏಪ್ರಿಲ್ 17, 2021
32 °C

45 ಕೋಟಿ ವೆಚ್ಚದ ಒಳಚರಂಡಿ ಯೋಜನೆ *ರಾಜ್ಯದ ಮೊದಲ ಕಲುಷಿತ ನೀರು ಶುದ್ಧೀಕರಣ ಘಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೇಕಲ್: ಒಳಚರಂಡಿ ವ್ಯವಸ್ಥೆಗಾಗಿ ಪಟ್ಟಣಕ್ಕೆ ಮಂಜೂರಾಗಿರುವ 45 ಕೋಟಿ ವೆಚ್ಚದ ಯೋಜನೆಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎ.ನಾರಾಯಣ ಸ್ವಾಮಿ ನುಡಿದರು.

ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಒಳಚರಂಡಿ ಹಾಗೂ ಜಲಮಂಡಳಿ ಅಧಿಕಾರಿಗಳು ಹಾಗೂ ಪುರಸಭೆಯ ಪ್ರತಿನಿಧಿಗಳೊಂದಿಗೆ ಯೋಜನೆಯ ಬಗ್ಗೆ ಸಮಾಲೋಚನೆ ನಡೆಸಿ ಮಾತನಾಡಿದರು.62 ಕಿ.ಮೀ ಉದ್ದದ ಯೋಜನೆ ಇದಾಗಿದ್ದು ಮೊದಲ ಹಂತದಲ್ಲಿ 16 ಕೋಟಿ ರೂಪಾಯಿ ಮೊತ್ತದ ಟೆಂಡರ್ ಕರೆಯಲಾಗಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಆಧುನಿಕ ತಂತ್ರಜ್ಞಾನದ ಎಸ್‌ವಿಆರ್ ಹೈಟೆಕ್ ಇಟಿಪಿ (ಕಲುಷಿತ ನೀರು ಶುದ್ಧೀಕರಣ ಘಟಕ) ಸ್ಥಾಪಿಸಲಾಗುವುದು.ಬೇರೆ ಪಟ್ಟಣಗಳಲ್ಲಿ ಒಳಚರಂಡಿ ವ್ಯವಸ್ಥೆಯಲ್ಲಿ ಕಲ್ಮಷದ ನೀರನ್ನು ಬಯಲು ಜಾಗದಲ್ಲಿ ಬಿಡಲಾಗುತ್ತಿತ್ತು. ಇದರಿಂದ ವಾತವರಣ ಕಲುಷಿತವಾಗಿ ಕಿರಿಕಿರಿ ಉಂಟಾಗುತಿತ್ತು. ಇದನ್ನು ತಪ್ಪಿಸಲು ಹೊಸ ತಂತ್ರಜ್ಞಾನದ ಮೊರೆ ಹೋಗಲಾಗಿದೆ. ಆ.13ರಂದು ಎಲ್ಲಾ ಪುರಸಭಾ ಸದಸ್ಯರ ಸಭೆ ಕರೆದು ಯೋಜನೆಯ ರೂಪರೇಷೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಕಾಮಗಾರಿ ಸುಗಮವಾಗಿ ನಡೆಯಲು ಎಲ್ಲ ಸದಸ್ಯರ ಸಹಕಾರ ಪಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಗದಗದಲ್ಲಿರುವಂತೆ ಆನೇಕಲ್‌ನಲ್ಲಿಯೂ ಶುದ್ಧ ಕುಡಿಯುವ ನೀರು ಘಟಕವನ್ನು ಸ್ಥಾಪಿಸಲಾಗುವುದು. 2 ರೂ.ಗೆ 20 ಲೀ.ನೀರು ದೊರೆಯುವ ವ್ಯವಸ್ಥೆ ಮಾಡಲಾಗುವುದು. ಪಟ್ಟಣದಲ್ಲಿ ಉಪ್ಪು ನೀರು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿದ್ದು ಈ ನೀರನ್ನು ಸಿಹಿ ನೀರಾಗಿ ಪರಿವರ್ತಿಸಲಾಗುವುದು. ಇದಕ್ಕೆ ತಗಲುವ ವೆಚ್ಚವನ್ನು ಶಾಸಕರ ನಿಧಿಯಿಂದ ಭರಿಸಲಾಗುವುದು ಎಂದು ತಿಳಿಸಿದರು.ಜಲ ಮಂಡಳಿ ವ್ಯವಸ್ಥಾಪಕ ಮುನಿಯಪ್ಪ ಮಾತನಾಡಿ, ಪಟ್ಟಣದಲ್ಲಿ 62 ಕಿ.ಮೀ ದೂರದ ಪೈಪ್‌ಲೈನ್ ನಿರ್ಮಾಣ ಮಾಡಬೇಕಾಗಿದೆ. ಇದಕ್ಕಾಗಿ 16 ಕೋಟಿ ರೂ ವೆಚ್ಚವಾಗಲಿದೆ. ಈ ಪೈಪ್‌ಲೈನ್‌ಗೆ ಮನೆಯ ಶೌಚಾಲಯದ ಸಂಪರ್ಕ ನೀಡುವ ಖರ್ಚನ್ನು ನಿಯಮದ ಪ್ರಕಾರ ಮನೆಯವರೇ ಭರಿಸಬೇಕಾಗಿತ್ತು. ಆದರೆ ಇದಕ್ಕಾಗಿ ನಾಲ್ಕು ಕೋಟಿ ರೂ ವೆಚ್ಚ ಮಾಡಿ ಮಂಡಳಿಯೇ ಸಂಪರ್ಕ ಜೋಡಿಸುವ ಕಾರ್ಯ ಮಾಡುತ್ತಿದೆ ಎಂದರು. ರಾಜ್ಯದಲ್ಲಿ 53 ಪಟ್ಟಣಗಳಲ್ಲಿ ಒಳಚರಂಡಿ ವ್ಯವಸ್ಥೆ ಪೂರ್ಣಗೊಂಡಿದೆ. 62 ಕಡೆ ಯುಜಿಡಿ ವ್ಯವಸ್ಥೆಯನ್ನು ಈಗಾಗಲೇ ಆರಂಭಿಸಲಾಗಿದೆ. ಕೆಲವು ಪಟ್ಟಣಗಳಲ್ಲಿ ಪೈಪ್‌ಲೈನ್ ಹಾಕಲು ಭೂಮಿಯನ್ನು ಅಗಿಯಲು ಹೋದಾಗ ಸ್ಥಳೀಯರು ಅಡ್ಡಿ ಮಾಡುತ್ತಿರುವುದರಿಂದ ತಡವಾಗಿದೆ.

 

ಮಾಗಡಿಯಲ್ಲಿ ಯುಜಿಡಿ ಪ್ರಾರಂಭವಾಗಿ 5 ವರ್ಷವಾಗಿದ್ದರೂ ಪೂರ್ಣವಾಗಿಲ್ಲ. ರಾಮನಗರ, ಚನ್ನಪಟ್ಟಣಗಳಲ್ಲೂ ಸಹ ವಿಳಂಬವಾಗಿದೆ. ಆನೇಕಲ್‌ನಲ್ಲಿ ಈ ರೀತಿಯ ವಿಳಂಬಕ್ಕೆ ಅವಕಾಶ ಕೊಡುವುದಿಲ್ಲ. ಎಲ್ಲ ಪುರಸಭಾ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಂಡು ಸಣ್ಣ ಪುಟ್ಟ ಸಮಸ್ಯೆಗಳನ್ನು ನಿವಾರಿಸಿಕೊಂಡು ಕಾಮಗಾರಿ  ತ್ವರಿತವಾಗಿ ಮುಗಿಯಲು ಶ್ರಮಿಸಬೇಕು ಎಂದು ಸಲಹೆ ಮಾಡಿದರು.ಒಳ ಚರಂಡಿ ಹೊರಬರುವ ನೀರಿಗೆ 10-15ಎಕರೆ ಪ್ರದೇಶದಲ್ಲಿ ತೊಟ್ಟಿ ಮಾಡಿ ಬಿಡಲಾಗುವುದು ಈಮಲಿನ ನೀರಿಗೆ ಬ್ಯಾಕ್ಟೀರೊಯಾ ಬಿಟ್ಟು ದುರ್ವಾಸನೆ ನಿವಾರಿಸಲಾಗುವುದು. ಈ ನೀರನ್ನು ಸ್ಥಳೀಯ ತೋಟಗಳಿಗೆ ಬಳಸಬಹುದಾಗಿದೆ. ಈ ಯೋಜನೆ ಬೇಡವೆಂದಲ್ಲಿ ಎಸ್‌ವಿಆರ್ ಹೈಟೆಕ್ ಟೆಕ್ನಾಲಜಿ ಬಳಸಬಹುದು. 50-60ಲಕ್ಷ ರೂ.ವೆಚ್ಚ ಬರುತ್ತದೆ. ಪುರಸಭೆ ಒಪ್ಪಿದಲ್ಲಿ ಈ ಯೋಜನೆಯನ್ನು ಅಳವಡಿಸಲು ಮಂಡಳಿ ಸಿದ್ದವಿದೆ ಎಂದರು. ಈ ನೀರು ಕುಡಿಯುವ ನೀರು ಗುಣಮಟ್ಟದಾಗಿರುತ್ತದೆ ಮುಂಬೈ, ಕೊಯಮತ್ತೂರುಗಳಲ್ಲಿ ಈಯೋಜನೆ ಅಳವಡಿಸಲಾಗಿದೆ ಎಂದರು.ಕೊಳವೆ ಹಾಕಲು ಅಗೆಯುವ ರಸ್ತೆಗಳನ್ನು ಸರಿಪಡಿಸದಿದ್ದರೆ ಜನರು ಶಾಪಹಾಕುತ್ತಾರೆ ಹಾಗಾಗಿ ರಿಪೇರಿಗೆ ತಗಲುವ ವೆಚ್ಚದ ಪಾಲನ್ನು ಪುರಸಭೆ ಮಂಡಳಿಗೆ ನೀಡಿದರೆ ಸರಿಪಡಿಸುತ್ತೇವೆ ಇಲ್ಲವಾದ್ದಲ್ಲಿ ಪುರಸಭೆ ನಿರ್ವಹಿಸುದಾದರೆ ಪಾಲಿನ ಹಣ ನೀಡಲು ಸಿದ್ದ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ನಾರಾಯಣ ಸ್ವಾಮಿ ಅವರು ಪುರಸಭೆಗೆ ಶೀಘ್ರದಲ್ಲಿಯೇ 25ಕೋಟಿ ಅನುದಾನ ಮಂಜೂರಾಗಲಿದೆ ರಸ್ತೆ ಕಾಮಗಾರಿಗೆ ಜಂಟಿಯಾಗಿ ಟೆಂಡರ್ ಕರೆದು ನವೀನ ತಂತ್ರಜ್ಞಾನ ಬಳಸಿ ಸಿಮೆಂಟ್ ಹಾಕಿದರೆ 25-30ವರ್ಷ ಹಾಳಾಗುವುದಿಲ್ಲ ಎಂದರು.ಪುರಸಭೆ ಅಧ್ಯಕ್ಷೆ ಉಮಾಗೋಪಿ, ಉಪಾಧ್ಯಕ್ಷ ಶ್ರೆನಿವಾಸ್, ಜಲ ಮಂಡಳಿಯ ಕೇಶವ, ಮಂಜುನಾಥ್, ಮುಖ್ಯಾಧಿಕಾರಿ ಮುನಿಸ್ವಾಮಿ, ಸದಸ್ಯರಾದ ಬಿ.ನಾಗರಾಜು, ಕೆ.ನಾಗರಾಜು, ಸುಜಾತ ರಾಜಣ್ಣ, ಪದ್ಮ ಮುನಿರಾಜು, ಜಯಲಕ್ಷ್ಮೆ ಮುನಿರಾಜು, ಮರಿಯಪ್ಪ, ಲಕ್ಷ್ಮೆ ವಿಶ್ವನಾಥ್, ನಳಿನಾ ವೆಂಕಟರಾಮಯ್ಯ, ರಾಜಪ್ಪ ಇತರರು ಇದ್ದರು.            ಮುಖ್ಯಾಂಶಗಳು

* ಅಧಿಕಾರಿಗಳೊಂದಿಗೆ ಸಚಿವ ನಾರಾಯಣ ಸ್ವಾಮಿ ಚರ್ಚೆ

* 62 ಕಿ.ಮೀ ಉದ್ದದ ಯೋಜನೆ

* ಮೊದಲ ಹಂತದಲ್ಲಿ 16 ಕೋಟಿ ಮೊತ್ತದ ಟೆಂಡರ್

* ಆ.13ರಂದು ಪುರಸಭಾ ಸದಸ್ಯರಿಗೆ ಮಾಹಿತಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.