ಭಾನುವಾರ, ಏಪ್ರಿಲ್ 18, 2021
33 °C

50 ಹೆಚ್ಚುವರಿ ಬಿಸಿಎಂ ವಿದ್ಯಾರ್ಥಿನಿಲಯ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಪ್ರಸಕ್ತ ಆರ್ಥಿಕ ವರ್ಷ 50 ಹೆಚ್ಚುವರಿ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸುವ ಪ್ರಸ್ತಾವಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಈ ವರ್ಷ ಒಟ್ಟು 100 ವಿದ್ಯಾರ್ಥಿ ನಿಲಯಗಳು ಆರಂಭವಾಗಲಿವೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪ್ರಕಟಿಸಿದರು.ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸೋಮವಾರ ನಡೆದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನ್ಮದಿನ ಸಮಾರಂಭದಲ್ಲಿ `ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಾಲಯ~ದ ಉದ್ಘಾಟನೆ ಮತ್ತು `ದೇವರಾಜ ಅರಸು ಪ್ರಶಸ್ತಿ~ ಪ್ರದಾನ ಮಾಡಿ ಅವರು ಮಾತನಾಡಿದರು.`ತಲಾ 100 ವಿದ್ಯಾರ್ಥಿಗಳ ಸಾಮರ್ಥ್ಯದ 50 ವಿದ್ಯಾರ್ಥಿ ನಿಲಯಗಳನ್ನು ಆರಂಭಿಸುವುದಾಗಿ ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆದರೆ, ಹಿಂದುಳಿದ ವರ್ಗಗಳ ಹೆಚ್ಚು ಸಂಖ್ಯೆಯ ಮಕ್ಕಳು ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಬಯಸಿದ್ದಾರೆ. ಈ ಕಾರಣ ಹೆಚ್ಚುವರಿಯಾಗಿ 50 ವಿದ್ಯಾರ್ಥಿ ನಿಲಯ ಆರಂಭಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ~ ಎಂದರು.ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದ ಜನರು ಸ್ವಂತ ಭೂಮಿ ಹೊಂದಲು ಸರ್ಕಾರದ ವತಿಯಿಂದ ನೀಡಲಾಗುವ ಆರ್ಥಿಕ ನೆರವಿನ ಮೊತ್ತವನ್ನು 2.5 ಲಕ್ಷ ರೂಪಾಯಿಯಿಂದ ಐದು ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗುವುದು. ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದವರು ವಾಸಿಸುವ ಕಾಲೋನಿಗಳಿಗೆ ಮೂಲಸೌಕರ್ಯ ಒದಗಿಸಲು ಬಜೆಟ್‌ನಲ್ಲಿ 50 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಈ ಅನುದಾನವನ್ನು ಬಳಸಿಕೊಂಡು ಹೆಚ್ಚಿನ ಸಂಖ್ಯೆಯ ಕಾಲೋನಿಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.ತಾಲ್ಲೂಕು ಮಟ್ಟದಲ್ಲಿ ಕಚೇರಿ:

ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸರ್ಕಾರ ರೂಪಿಸಿರುವ ಯೋಜನೆಗಳು ಸರಿಯಾಗಿ ಅನುಷ್ಠಾನಕ್ಕೆ ಬರಬೇಕು. ಈ ಉದ್ದೇಶಕ್ಕಾಗಿ ಪ್ರತ್ಯೇಕ ಸಚಿವಾಲಯಯನ್ನೇ ಆರಂಭಿಸಲಾಗುತ್ತಿದೆ. ಪ್ರತಿ ತಾಲ್ಲೂಕಿನಲ್ಲೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯನ್ನು ಸ್ಥಾಪಿಸಲಾಗುವುದು. ಹಿಂದುಳಿದ ವರ್ಗದ ಜನರನ್ನು ನೇರವಾಗಿ ತಲುಪುವುದಕ್ಕೆ ಈ ಕಚೇರಿಗಳು ನೆರವಾಗಲಿವೆ ಎಂದು ಶೆಟ್ಟರ್ ತಿಳಿಸಿದರು.`ಸೊತ್ತು ಮತ್ತು ಸತ್ತೆ ಒಂದೆಡೆ ಇದ್ದರೆ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆ. ಇದನ್ನು ಬಲವಾಗಿ ನಂಬಿದ್ದ ಅರಸು ಅವರು ಆರ್ಥಿಕ ಶಕ್ತಿ ಹೊಂದಿಲ್ಲದ ವ್ಯಕ್ತಿಗಳು ಮತ್ತು ಸಮುದಾಯಗಳನ್ನು ಗುರುತಿಸಿ ರಾಜಕೀಯ ಅಧಿಕಾರ ನೀಡಿದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಅದನ್ನು ರಾಜಕೀಯ ವಿರೋಧಿಗಳನ್ನು ಹಣಿಯಲು ಅರಸು ಬಳಸಿಕೊಳ್ಳಲಿಲ್ಲ. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸುಧಾರಣೆಗಳನ್ನು ತರಲು ಆ ಕಾಲವನ್ನು ಬಳಸಿಕೊಂಡ ಮುತ್ಸದ್ದಿ ಅವರು~ ಎಂದು ಸ್ಮರಿಸಿದರು.ಅಲೆಮಾರಿಗಳಿಗೆ ಸವಲತ್ತು:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜ ಕಲ್ಯಾಣ ಸಚಿವ ಎ.ನಾರಾಯಣ ಸ್ವಾಮಿ ಮಾತನಾಡಿ, `ಅರಸು ಅವರು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನೀಡಿದ ಆದ್ಯತೆಯನ್ನು ಈಗ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದ ಅಭಿವೃದ್ಧಿಗೆ ಅನುಸರಿಸಬೇಕಿದೆ. ಈ ಸಮುದಾಯಗಳು ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದಿವೆ. ನಮ್ಮ ಸರ್ಕಾರ ಅವರನ್ನು ಗುರುತಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಶೀಘ್ರದಲ್ಲಿ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಲಾಗುವುದು~ ಎಂದರು.ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ ಮಾತನಾಡಿದರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಂ.ಶಂಕರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಎಸ್.ಕೆ.ಸಿದ್ದರಾಮಣ್ಣ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಶೋಕ ಕಾಟ್ವೆ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಆರ್.ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಇ.ವೆಂಕಟಯ್ಯ ಉಪಸ್ಥಿತರಿದ್ದರು.`ಸಮಗ್ರ ಅಧ್ಯಯನ ನಡೆಯಲಿ~

`ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜೀವನ ಮತ್ತು ವಿಚಾರಗಳ ಕುರಿತು ಸಮಗ್ರ ಅಧ್ಯಯನ ನಡೆಯಬೇಕು. ಈ ಅಧ್ಯಯನವನ್ನು ಆಧರಿಸಿ ಕೃತಿಗಳನ್ನು ಪ್ರಕಟಿಸಬೇಕು~ ಎಂದು `ಪ್ರಜಾವಾಣಿ~ಯ ಸಹಾಯಕ ಸಂಪಾದಕ ದಿನೇಶ್ ಅಮಿನ್ ಮಟ್ಟು ಸರ್ಕಾರಕ್ಕೆ ಸಲಹೆ ಮಾಡಿದರು.ರಾಜ್ಯಮಟ್ಟದ ದೇವರಾಜ ಅರಸು ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, `ಅರಸು ಅವರ ಜೀವನದ ಸಮಗ್ರ ಚಿತ್ರಣವನ್ನು ಕಟ್ಟಿಕೊಡುವ ಕೃತಿಗಳ ಸಂಪುಟ ಇನ್ನೂ ಹೊರಬಂದಿಲ್ಲ. ಸರ್ಕಾರವೇ ಅಧ್ಯಯನ ಯೋಜನೆಯೊಂದನ್ನು ರೂಪಿಸಬೇಕು. ಅರಸು ಅವರ ಜೀವನ ಮತ್ತು ವಿಚಾರ ಕುರಿತ ಸಮಗ್ರ ಸಂಪುಟವನ್ನು ಪ್ರಕಟಿಸಬೇಕು~ ಎಂದರು.`ತನ್ನ ಸಾಮರ್ಥ್ಯದಿಂದ ಸುತ್ತಲಿನ ಪರಿಸರವನ್ನು ಬದಲಿಸಬಲ್ಲ ವರ್ಗಕ್ಕೆ ಸೇರಿದ ನಾಯಕ ಅರಸು. ಎಲ್ಲ ಜಾತಿಗಳ ವಿಶ್ವಾಸವನ್ನು ಗಳಿಸುವ ಪ್ರಯತ್ನ ಮಾಡುತ್ತಲೇ ಸುಧಾರಣೆಯನ್ನೂ ತಂದವರು~ ಎಂದು ಅವರು ಹೇಳಿದರು.

`ಅವರ ಹೆಸರಿನ ಪ್ರಶಸ್ತಿ ನನಗೆ ಸಂದಿರುವುದು ಸಂತಸದ ವಿಷಯ. ಈ ಪ್ರಶಸ್ತಿಯು ನನ್ನನ್ನು ರೂಪಿಸಿದ `ಪ್ರಜಾವಾಣಿ~ ಪತ್ರಿಕೆಗೆ ಸಂದ ಗೌರವ~ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ವಿಭಾಗ ಮಟ್ಟದ ದೇವರಾಜ ಅರಸು ಪ್ರಶಸ್ತಿಯನ್ನೂ ಪ್ರದಾನ ಮಾಡಲಾಯಿತು. ಬೆಂಗಳೂರಿನ ಶ್ರಿ ವಿಶ್ವಕರ್ಮ ರಥ ಶಿಲ್ಪಕಲಾ ಸಂಸ್ಥೆ, ಬೆಳಗೆರೆಯ ಶ್ರಿ ಶಾರದಾ ವಿದ್ಯಾಸಂಸ್ಥೆ, ಪಾವಗಡ ತಾಲ್ಲೂಕಿನ ನರಸಮ್ಮ (ಬೆಂಗಳೂರು ವಿಭಾಗ), ಮುಧೋಳ ತಾಲ್ಲೂಕಿನ ಲೋಕಾಪುರ ಗ್ರಾಮದ ಕಾಶೀನಾಥ ಬಿ. ಹುಡೇದ, ಭೀಮರಾವ್ ಬಿ. ಗಸ್ತಿ (ಬೆಳಗಾವಿ ವಿಭಾಗ ), ಜೇವರ್ಗಿ ತಾಲ್ಲೂಕಿನ ಬಸವಣ್ಣಪ್ಪ ಎಂ. ಗೌನಳ್ಳಿ, ವಜ್ರಕುಮಾರ್ ಜಿ. ಕಿವಡೆ (ಗುಲ್ಬರ್ಗ ವಿಭಾಗ) ಮತ್ತು ಚಾಮರಾಜನಗರದ ದೀನಬಂಧು ಸಂಸ್ಥೆ (ಮೈಸೂರು ವಿಭಾಗ)ಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆಸುತ್ತಿರುವ ಮೆಟ್ರಿಕ್‌ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.