ಬುಧವಾರ, ಜೂಲೈ 8, 2020
28 °C

534 ಮಂದಿ ಭವಿಷ್ಯ ನಿರ್ಧಾರ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಮತ ಎಣಿಕೆ ಮಂಗಳವಾರ ನಡೆಯಲಿದ್ದು, ಒಟ್ಟು 534 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಜಿಲ್ಲಾ ಪಂಚಾಯಿತಿಯ 28 ಸ್ಥಾನಗಳಿಗೆ 143 ಮತ್ತು ತಾ.ಪಂ.ನ 101 ಸ್ಥಾನಗಳಿಗೆ 391 ಮಂದಿ ಸ್ಪರ್ಧಿಸಿ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಅವರಲ್ಲಿ, ಜಿಲ್ಲೆಯ ಒಟ್ಟು 102 ತಾ.ಪಂ. ಸದಸ್ಯ ಸ್ಥಾನಗಳಲ್ಲಿ ಮೀಸಲಿರುವ 57 ಸ್ಥಾನಗಳಿಗೆ 201 ಮಹಿಳೆಯರು ಮತ್ತು ಜಿ.ಪಂ.ನ 28 ಸ್ಥಾನಗಳಲ್ಲಿ ಮೀಸಲಿರುವ 14 ಸ್ಥಾನಕ್ಕೆ ಸ್ಪರ್ಧಿಸಿರುವ 62 ಮಹಿಳೆಯರೂ ಇದ್ದಾರೆ. ಅವರೊಡನೆ ಮತದಾರರು, ಬಾಜಿ ಕಟ್ಟಿದವರ ಕುತೂಹಲವೂ ಸೇರಿಕೊಂಡಿದೆ.ಎಲ್ಲರಿಗೂ ಪ್ರತಿಷ್ಠೆ:
ಮಂಗಳವಾರ ಮತ ಎಣಿಕೆ ಬಳಿಕ ಪ್ರಕಟಗೊಳ್ಳಲಿರುವ ಚುನಾವಣೆ ಫಲಿತಾಂಶ ವಿವಿಧ ಪಕ್ಷಗಳು, ಅಭ್ಯರ್ಥಿಗಳು ಮತ್ತು ಬೆಂಬಲಿಗರಿಗೆ ಪ್ರತಿಷ್ಠೆಯ ವಿಷಯವಾಗಿದೆ. ಚುನಾವಣೆಗೆ ಮುನ್ನ ನಡೆದ ಪಕ್ಷಾಂತರ ಮತ್ತು ಪಕ್ಷಾಂತರಿಗಳಿಗೆ ದೊರಕಿದ ಮಹತ್ವದ ಕಾರಣದಿಂದ ಬಂಡೆದ್ದ ಆಕಾಂಕ್ಷಿಗಳ ಸ್ಪರ್ಧೆಯೂ ಕುತೂಹಲ ಹೆಚ್ಚಿಸಿದೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಗೆ ಜಿಲ್ಲೆಯ ಪಕ್ಷ ರಾಜಕಾರಣ ಮತ್ತು ಅಭಿವೃದ್ಧಿ ರಾಜಕಾರಣದಲ್ಲಿ ಅಸ್ತಿತ್ವ ಮತ್ತು ಘನತೆ ಉಳಿಸಿಕೊಳ್ಳುವ ಸಾಹಸವಾಗಿಯೂ ಫಲಿತಾಂಶ ಕಾಣಿಸಲಿದೆ.ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಮಾಜಿ ಸಚಿವ ಕೆ.ಶ್ರೀನಿವಾಸಗೌಡರಿಗೆ ಪಕ್ಷದಲ್ಲಿ ಘನತೆ, ರಾಜಕೀಯ ಪ್ರಭಾವವನ್ನು ಸ್ಥಾಪಿಸುವ ಹೆಬ್ಬಯಕೆ. ಅವರ ನಿರೀಕ್ಷೆಯಂತೆ ಫಲಿತಾಂಶ ಬಂದರೆ ಮಾತ್ರ ಸಮಾಧಾನ. ಇಲ್ಲವಾದರೆ ಮತ್ತೆ ಅನ್ಯಪ್ರಜ್ಞೆಯ ಭಾವ ಕಾಡಲಿದೆ. ಒಂದು ಜಿ.ಪಂ. ಮತ್ತು ನಾಲ್ಕು ತಾ.ಪಂ. ಕ್ಷೇತ್ರಗಳಲ್ಲಿ ಅಭ್ಯರ್ಥಿ ಇಲ್ಲದ ಕಾಂಗ್ರೆಸ್ ಗೌಡರ ಗೈರಿನಿಂದ ಎದುರಾಗುವ ನಷ್ಟವನ್ನು ತುಂಬಿಸಿಕೊಳ್ಳುವ ಸವಾಲಿದೆ. ಮೊದಲ ಬಾರಿಗೆ ಅಧಿಕ ಸ್ಪರ್ಧಿಗಳುಳ್ಳ ಬಿಜೆಪಿ ಜಿಲ್ಲೆಯಲ್ಲಿ ತನ್ನ ಅಸ್ತಿತ್ವ ಸಾಬೀತುಪಡಿಸುವ ಸಾಮರ್ಥ್ಯ ಪಣಕ್ಕಿಟ್ಟಿದೆ.ಯಾರ್ಯಾರು?: ಆತ್ಮವಿಶ್ವಾಸದಿಂದ ಗೆಲುವನ್ನು ಈಗಾಗಲೇ ಖಚಿತಪಡಿಸಿಕೊಂಡವರು, ಗೆಲುವಿನ ದಾರಿ ಕಾಯುತ್ತಿರುವವರು, ಫಲಿತಾಂಶ ಪ್ರಕಟವಾಗುವ ಮುನ್ನವೇ ಸೋಲನ್ನು ನಿರೀಕ್ಷಿಸಿ ಸ್ವೀಕರಿಸಿದವರು; ಚುನಾವಣೆ ಕಣಕ್ಕೆ ಇನ್ನು ಇಳಿಯಲೇಬಾರದೆಂದು ನಿರ್ಧರಿಸಿದವರು- ಹೀಗೆ ವಿವಿಧ ಆಲೋಚನೆಯ ಅಭ್ಯರ್ಥಿಗಳು ಜಿಲ್ಲೆಯಲ್ಲಿರುವುದು ವಿಶೇಷ. ಪ್ರಚಾರಕ್ಕೆ ಹೆಚ್ಚು ಹಣ ಖರ್ಚು ಮಾಡಿದವರಿಗೆ ಗೆಲುವು ಕಟ್ಟಿಟ್ಟ ಬುತ್ತಿ, ಹಣವೇ ಇಲ್ಲದೆ ಕಣಕ್ಕಿಳಿದ ಅಭ್ಯರ್ಥಿಯ ಸೋಲು ಖಚಿತ- ಎಂಬ ಸಾರ್ವತ್ರಿಕ ಲೆಕ್ಕಾಚಾರಕ್ಕೆ ಒಪ್ಪಿಸಿಕೊಂಡು ನಿರುಮ್ಮಳವಾಗಿ ಮನೆ, ಮಕ್ಕಳೊಡನೆ ಆನಂದವಾಗಿ ಸಮಯ ಕಳೆಯುತ್ತಿರುವ ಅಭ್ಯರ್ಥಿಗಳೂ ಇಲ್ಲಿದ್ದಾರೆ!ಎಲ್ಲೆಲ್ಲಿ? ತಾಲ್ಲೂಕಿನಲ್ಲಿರುವ ಜಿ.ಪಂ.ನ 6 ಕ್ಷೇತ್ರಗಳಲ್ಲೂ -ಹುತ್ತೂರು, ಹೋಳೂರು, ವೇಮಗಲ್, ವಕ್ಕಲೇರಿ, ಸುಗಟೂರು ಮತ್ತು ನರಸಾಪುರ-ಅಭ್ಯರ್ಥಿಗಳು ತಮ್ಮ ರಾಜಕೀಯ, ಆರ್ಥಿಕ, ಸಾಮಾಜಿಕ ಪ್ರತಿಷ್ಠೆಯನ್ನೆ ಪಣಕ್ಕೆ ಇಟ್ಟಿದ್ದಾರೆ. ಅವರ ಗೆಲುವು ಏಕಕಾಲಕ್ಕೆ ಪಕ್ಷದ ಮುಖಂಡರ ಗೆಲುವು ಆಗಲಿರುವುದರಿಂದ ದೊಡ್ಡಮೊತ್ತದ ಬಾಜಿ ಕಟ್ಟಿರುವವರ ಸಂಖ್ಯೆಯೂ ಹೆಚ್ಚಿದೆ.ನರಸಾಪುರ, ಹುತ್ತೂರಿನಲ್ಲಿ ಕಾಂಗ್ರೆಸ್- ಜೆಡಿಎಸ್- ಬಿಜೆಪಿ ನಡುವಿನ ತ್ರಿಕೋನ ಸ್ಪರ್ಧೆ, ಹೋಳೂರಿನಲ್ಲಿ ‘ತಮಗೆ ಸ್ಪರ್ಧಿಯೇ ಇಲ್ಲ’ ಎನ್ನುವ ಜೆಡಿಎಸ್ ಅಭ್ಯರ್ಥಿಯ ಆತ್ಮವಿಶ್ವಾಸ,  ಮೀಸಲಾತಿ ಪರಿಣಾಮವಾಗಿ ವೇಮಗಲ್, ವಕ್ಕಲೇರಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಮಹಿಳೆಯರ ಪುರುಷ ಸಂಬಂಧಿಗಳ ರಾಜಕೀಯ ಪ್ರಭಾವ, ಸುಗಟೂರಿನಲ್ಲಿ ಸ್ಪರ್ಧಿಸಿರುವ ಜಿ.ಪಂ. ಮಾಜಿ ಅಧ್ಯಕ್ಷೆಯ ಜನಪ್ರಿಯತೆ, ಕೂಲಿ ಮಹಿಳೆಯ ಸಾಹಸ ಎಲ್ಲಕ್ಕೂ ಫಲಿತಾಂಶ ಉತ್ತರ ನೀಡಲಿದೆ. ಬಂಗಾರಪೇಟೆ, ಮಾಲೂರು, ಮುಳಬಾಗಲು, ಶ್ರೀನಿವಾಸಪುರದಲ್ಲೂ ಇದೇ ಬಗೆಯ ವಾತಾವರಣವಿದೆ.ಫಲಿತಾಂಶ ಪ್ರಕಟಣೆಯ ಬಳಿಕ ಏರ್ಪಡಬಹುದಾದದ ಸಂಭ್ರಮ, ಉತ್ಕರ್ಷ, ಗಲಾಟೆಯನ್ನು ನಿಯಂತ್ರಿಸಲು ಸಾಕಷ್ಟು ಸಂಖ್ಯೆಯ ಪೊಲೀಸರನ್ನು ಮತ ಎಣಿಕೆ ಕೇಂದ್ರಗಳಲ್ಲಿ ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.