ಶುಕ್ರವಾರ, ಜುಲೈ 23, 2021
23 °C

60 ವರ್ಷದಲ್ಲಿ ಆಗದ ಅಭಿವೃದ್ಧಿ ಮೂರು ವರ್ಷದಲ್ಲಿ ಆಗಿದೆಯೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಬಿಜೆಪಿ ಕಚೇರಿ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪನವರು ಮಾತನಾಡುತ್ತಾ “60 ವರ್ಷದಲ್ಲಿ ಆಗದ ಅಭಿವೃದ್ಧಿಯನ್ನು ಕೇವಲ ಮೂರು ವರ್ಷದಲ್ಲಿ ನಮ್ಮ ಸರ್ಕಾರ ಮಾಡಿದೆ” ಎಂದು ಬೆನ್ನು ತಟ್ಟಿಕೊಂಡು ಹೇಳಿದ್ದು ಆಶ್ಚರ್ಯದ ಸಂಗತಿ. ಇನ್ನು ಸ್ವಲ್ಪ ದಿನ ಕಳೆದರೆ “ಕರ್ನಾಟಕ ಪ್ರಕಾಶಿಸುತ್ತಿದೆ” ಎಂಬ ಮಂತ್ರ ಇವರ ಬಾಯಲ್ಲೂ ಬರಬಹುದು.ಬಿಜೆಪಿ ಸರ್ಕಾರ ಈ ಮೂರು ವರ್ಷದಲ್ಲಿ ಎಷ್ಟು ಅಣೆಕಟ್ಟು ನಿರ್ಮಿಸಿದೆ? ಎಷ್ಟು ಎಕರೆಗೆ ನೀರಾವರಿ ಸೌಲಭ್ಯ ಒದಗಿಸಿದೆ? ಎಷ್ಟು ವಿದ್ಯುತ್ ಯೋಜನೆ ನಿರ್ಮಿಸಿದೆ? ಎಷ್ಟು ಹೊಸ ಶಾಲಾ ಕಾಲೇಜುಗಳನ್ನು ಕಟ್ಟಿಸಿದೆ? ಎಷ್ಟು ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಿದೆ? ಎಷ್ಟು ಗ್ರಾಮೀಣ ರಸ್ತೆಗಳಿಗೆ ಟಾರು ಹಾಕಿಸಿದೆ? ಎಷ್ಟು ಕುಡಿಯುವ ನೀರಿನ ಯೋಜನೆಗಳನ್ನು ಪೂರ್ಣಗೊಳಿಸಿದೆ? ಬಡವರಿಗೆ ನೆರೆಸಂತ್ರಸ್ತರಿಗೆ ಎಷ್ಟು ಮನೆ ಕಟ್ಟಿಸಿಕೊಟ್ಟಿದೆ? ಎಷ್ಟು ಸೇತುವೆ ನಿರ್ಮಿಸಿದೆ? ಎಷ್ಟು ಆಸ್ಪತ್ರೆ ಕಟ್ಟಿಸಿದೆ?ಈ ವಿವರಗಳನ್ನು ರಾಜ್ಯದ ಜನತೆಗೆ ಈಶ್ವರಪ್ಪನವರು ತಿಳಿಸಿಯಾರೆ? ಬರೀ ಸೈಕಲ್, ಸೀರೆ, ಮಠಗಳಿಗೆ ಹಣ ಕೊಟ್ಟಿದ್ದೇ ಅಭಿವೃದ್ಧಿಯಾದೀತೆ? ಚುನಾವಣೆ, ಉಪಚುನಾವಣೆ ವೇಳೆ ಕೊಟ್ಟ ಆಶ್ವಾಸನೆಗಳಾದ ಗುಡಿಸಲು ರಹಿತ ರಾಜ್ಯ, ಮಾದರಿ ತಾಲ್ಲೂಕು, ಗುಜರಾತ್ ಮಾದರಿ ಅಭಿವೃದ್ಧಿ ಇವೆಲ್ಲ ಶೇ. 65 ಸಾಕ್ಷರತೆ ಹೊಂದಿರುವ ರಾಜ್ಯದ ಜನತೆಯ ಗಮನಕ್ಕೆ ಬಾರದೆ ಇಲ್ಲ. ಅಭಿವೃದ್ಧಿ, ಅಭಿವೃದ್ಧಿಯೇ ನಮ್ಮ ಅಜೆಂಡಾ ಎನ್ನುವ ಈಶ್ವರಪ್ಪನವರು ಬಿಜೆಪಿ ಸರ್ಕಾರದಲ್ಲಿ ಇಂದು ಯಾರ್ಯಾರ ಅಭಿವೃದ್ಧಿ ಎಷ್ಟು ಆಗಿದೆ ಎಂದು ಆತ್ಮಾವಲೋಕನ ಮಾಡಿಕೊಂಡು, ಜನರ ಅಭಿಪ್ರಾಯ ತಿಳಿದು ಮಾತನಾಡಬೇಕೇ ಹೊರತು ಬೊಗಳೆ ದಾಸಯ್ಯನಂತಾಗಬಾರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.