ಭಾನುವಾರ, ಫೆಬ್ರವರಿ 28, 2021
29 °C

630 ಕೋಟಿ ವೆಚ್ಚದಲ್ಲಿ ಮಾರುಕಟ್ಟೆ ಅಭಿವೃದ್ಧಿ-ಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

630 ಕೋಟಿ ವೆಚ್ಚದಲ್ಲಿ ಮಾರುಕಟ್ಟೆ ಅಭಿವೃದ್ಧಿ-ಸಿಎಂ

ಬೆಂಗಳೂರು: `ವಿಶೇಷ ಅನುದಾನ ಬಳಸಿ ರೂ 630 ಕೋಟಿ ವೆಚ್ಚದಲ್ಲಿ ನಗರದ ಜಯನಗರ, ಕೆ.ಆರ್.ಪುರ, ಮಲ್ಲೇಶ್ವರ, ಶೇಷಾದ್ರಿಪುರದ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಟೆಂಡರ್ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತಿಳಿಸಿದರು.ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ವತಿಯಿಂದ ನಗರದಲ್ಲಿ ಸೋಮವಾರ ಎರಡು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಹಾಗೂ ಮೂರು ಮೇಲು ಸೇತುವೆಗಳನ್ನು ಉದ್ಘಾಟಿಸಿ ಬಳಿಕ ಮಹದೇವಪುರದ ಗುಂಜೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.`ನಗರದಲ್ಲಿ ಫೆರಿಫೆರಲ್ ರಿಂಗ್ ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲಿ ಕೈಗೆತ್ತಿಕೊಳ್ಳಲಾಗುವುದು~ ಎಂದು ಘೋಷಿಸಿದ ಅವರು, `ಕಾವೇರಿ ನಾಲ್ಕನೇ ಹಂತದ ಕುಡಿಯುವ ನೀರು ಯೋಜನೆ ಜೂನ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ~ ಎಂದು ಭರವಸೆ ನೀಡಿದರು.`ನಗರದ 12 ಕೆರೆಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ರೂ 26 ಸಾವಿರ ಕೋಟಿ ವೆಚ್ಚದ ಮೆಟ್ರೊ ಎರಡನೇ ಹಂತದ ಕಾಮಗಾರಿಯನ್ನು ಶೀಘ್ರದಲ್ಲಿ ಕೈಗೆತ್ತಿಕೊಳ್ಳಲಾಗುವುದು. ವಸತಿ ಯೋಜನೆಯಡಿ ನಗರದ ವಿವಿಧೆಡೆ 30 ಸಾವಿರ ಮನೆ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಈ ಪೈಕಿ 8,000 ಮನೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. 1,500 ಮನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ~ ಎಂದರು.`ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಗರದಲ್ಲಿ 26 ಮೇಲು ಸೇತುವೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಯಿತು. ಇದರಲ್ಲಿ ಎಂಟು ಕಾಮಗಾರಿಗಳು ಪೂರ್ಣಗೊಂಡಿವೆ. 11 ಕಾಮಗಾರಿಗಳು ಪ್ರಗತಿಯಲ್ಲಿವೆ. ಏಳು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು~ ಎಂದು ಅವರು ತಿಳಿಸಿದರು.ವಸತಿ ಸಚಿವ ವಿ. ಸೋಮಣ್ಣ ಮಾತನಾಡಿ, `ಕೇಂದ್ರ ಸರ್ಕಾರ ಹಾಗೂ ರಾಜ್ಯದ ಅನುದಾನ ಬಳಸಿ 2012-13ರಲ್ಲಿ 150 ಕೊಳಚೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಿ 25 ಸಾವಿರ ಮನೆಗಳನ್ನು ನಿರ್ಮಿಸಲಾಗುವುದು. ನಗರದಲ್ಲಿ 50 ಕೊಳಚೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗಿದೆ. ರಾಜ್ಯದ ಇತರ ಮಹಾನಗರ ಪಾಲಿಕೆ ಹಾಗೂ ಪಟ್ಟಣಗಳಲ್ಲಿ ವರ್ಷದೊಳಗೆ ಒಂದು ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗುವುದು~ ಎಂದರು.ಅಧ್ಯಕ್ಷತೆ ವಹಿಸಿದ್ದ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, `ಕ್ಷೇತ್ರದ ಸಿದ್ದಾಪುರದಲ್ಲಿ 100 ಹಾಸಿಗೆಗಳ ಆಸ್ಪತ್ರೆ ಆರಂಭಿಸಬೇಕು. ಗುಂಜೂರಿನಲ್ಲಿ 22 ಎಕರೆ ಜಾಗದಲ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಮಾಡಬೇಕು. ಬೆಳಂದೂರು ಹಾಗೂ ವರ್ತೂರು ಕೆರೆಗಳನ್ನು ಅಭಿವೃದ್ಧಿಪಡಿಸಬೇಕು. ಕ್ಷೇತ್ರದ 34 ಹಳ್ಳಿಗಳು ಬಿಬಿಎಂಪಿಗೆ ಸೇರ್ಪಡೆಯಾಗಿದ್ದು, ಅವುಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು~ ಎಂದು ಆಗ್ರಹಿಸಿದರು.ಗೃಹ ಹಾಗೂ ಸಾರಿಗೆ ಸಚಿವ ಆರ್. ಅಶೋಕ್, ಬೆಂಗಳೂರು ದಕ್ಷಿಣ ಸಂಸದ ಅನಂತಕುಮಾರ್, ವಿಧಾನಪರಿಷತ್ ಉಪಸಭಾಪತಿ ವಿಮಲಾ ಗೌಡ, ಮಲ್ಲೇಶ್ವರ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ, ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ, ರಾಜ್ಯ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಜೆ. ನರಸಿಂಹಸ್ವಾಮಿ, ಬಿಡಿಎ ಅಧ್ಯಕ್ಷ ಸುಬೀರ್ ಹರಿಸಿಂಗ್, ಬಿಡಿಎ ಆಯುಕ್ತ ಭರತ್‌ಲಾಲ್ ಮೀನಾ ಇದ್ದರು.

ಈ ಸಂದರ್ಭ ಚಿಕ್ಕನಾಯಕನಹಳ್ಳಿ ಗ್ರಾಮದ 10 ಮಂದಿಗೆ, ದೊಡ್ಡಕನ್ನಾಳ ಗ್ರಾಮದ ಐವರಿಗೆ ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸಲಾಯಿತು.ವೇಮನ ಜ್ಞಾನ ಮಂದಿರ ನಿರ್ಮಾಣ

`ರಾಜ್ಯ ಸರ್ಕಾರದ ಪೂರ್ಣ ಅನುದಾನ ಬಳಸಿ ಮಹದೇವಪುರ ಕ್ಷೇತ್ರದ ದೊಡ್ಡಕನ್ನಾಳದಲ್ಲಿ ವೇಮನ ಜ್ಞಾನ ಮಂದಿರ (ಅಂತರರಾಷ್ಟ್ರೀಯ ಸಮಾವೇಶ ಸಭಾಂಗಣ)ವನ್ನು ನಿರ್ಮಾಣ ಮಾಡಲಾಗುವುದು~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಘೋಷಿಸಿದರು.ಶಾಸಕ ಅರವಿಂದ ಲಿಂಬಾವಳಿ ಅವರ ಬೇಡಿಕೆಗೆ ಸ್ಪಂದಿಸಿ ಪ್ರತಿಕ್ರಿಯಿಸಿದ ಅವರು, `ಮಂದಿರ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಕಟಿಬದ್ಧ. ಕಾಮಗಾರಿ ನಡೆಸಲು ಈಗಾಗಲೇ ರೂ 3 ಕೋಟಿ ಬಿಡುಗಡೆ ಮಾಡಲಾಗಿದೆ.ಹೊಸ ವಿನ್ಯಾಸದಲ್ಲಿ ಮಂದಿರ ನಿರ್ಮಿಸಲಾಗುವುದು. ಅಲ್ಲದೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲಿ ಅಂತರರಾಷ್ಟ್ರೀಯ ಸಮಾವೇಶ ಸಭಾಂಗಣ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು~ ಎಂದು ಅವರು ತಿಳಿಸಿದರು.ನಗರ ಪ್ರದಕ್ಷಿಣೆ: `ನಗರದ ಸಮಸ್ಯೆಗಳನ್ನು ಅರಿತುಕೊಳ್ಳಲು ಕಳೆದ ನಾಲ್ಕು ವಾರಗಳಿಂದ ನಗರ ಪ್ರದಕ್ಷಿಣೆ ನಡೆಸಲಾಗುತ್ತಿದೆ. ನಗರದ ಸಮಗ್ರ ಅಭಿವೃದ್ಧಿ ಆಗುವವರೆಗೆ ವಾರದಲ್ಲಿ ಒಂದು ದಿನ ನಗರ ಪ್ರದಕ್ಷಿಣೆ ಮುಂದುವರಿಸಲಾಗುವುದು. ನಗರದ ಶಾಸಕರು ಹಾಗೂ ಸಂಸದರ ಜೊತೆಗೆ ಶನಿವಾರ ಅಥವಾ ಭಾನುವಾರ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು~ ಎಂದು ಅವರು ತಿಳಿಸಿದರು.  ಬರ ನಿರ್ವಹಣೆಗೆ ಕೇಂದ್ರದಿಂದ ವಿಶೇಷ ಪ್ಯಾಕೇಜ್‌ಗೆ ಆಗ್ರಹ

`ವಿದರ್ಭ ಪ್ಯಾಕೇಜ್ ಮಾದರಿಯಲ್ಲೇ ರಾಜ್ಯದಲ್ಲಿ ಬರ ನಿರ್ವಹಣೆಗೆ ಕೇಂದ್ರ ಸರ್ಕಾರ ರೂ 4,500 ಕೋಟಿಯ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು~ ಎಂದು ಸಂಸದ ಅನಂತಕುಮಾರ್ ಆಗ್ರಹಿಸಿದರು.ಸಮಾರಂಭದಲ್ಲಿ ಮಾತನಾಡಿದ ಅವರು, `ಬರನಿರ್ವಹಣೆ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತಾಳಿದೆ. ತುಮಕೂರಿನಲ್ಲಿ ನಡೆದ ಸಮಾರಂಭದಲ್ಲಿ ಯುಪಿಎ ಪ್ರಮುಖರು ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ. ರಾಜಕೀಯ ಮೇಲಾಟಕ್ಕಾಗಿ ಟೀಕೆ ಮಾಡುತ್ತಿದ್ದಾರೆ~ ಎಂದು ದೂರಿದರು.`ಬರ ನಿರ್ವಹಣೆಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆ ಹಾಸ್ಯಾಸ್ಪದವಾದುದು. ಅವರು ಪಿತ್ರಾರ್ಜಿತ ಹಣ ನೀಡುತ್ತಿಲ್ಲ. ಮುಂಬೈ, ನವದೆಹಲಿ ಬಳಿಕ ಹೆಚ್ಚು ತೆರಿಗೆ ಪಾವತಿಸುವ ನಗರ ಬೆಂಗಳೂರು. ಆದರೆ ತಾರತಮ್ಯದಿಂದಾಗಿ ರಾಜ್ಯಕ್ಕೆ ಸಿಗಬೇಕಾದ ಪಾಲು ಸಿಗುತ್ತಿಲ್ಲ~ ಎಂದು ಅವರು ಕಿಡಿ ಕಾರಿದರು.`ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡ ಹೆಸರು ನಾಮಕರಣ ಮಾಡುವುದಾಗಿ ಕೇಂದ್ರದ ಸಚಿವರು ಕೆಂಪೇಗೌಡ ಜನ್ಮದಿನಾಚರಣೆ ಸಂದರ್ಭ ಭರವಸೆ ನೀಡಿದ್ದರು. ಆದರೆ ಇನ್ನೂ ಹೆಸರು ಇಟ್ಟಿಲ್ಲ. ಕೇಂದ್ರ ಸರ್ಕಾರ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು~ ಎಂದು ಆಗ್ರಹಿಸಿದರು.`ನಗರದಲ್ಲಿ ಕುಡಿಯುವ ನೀರು ಸಮಸ್ಯೆ ಬಗೆಹರಿಸಲು, ಬಿಬಿಎಂಪಿ ಬಲಪಡಿಸಲು ರೂ 5,000 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ತೆರಳುವಾಗ ಮುಖ್ಯಮಂತ್ರಿ ಅವರು ವಿಶೇಷ ಅನುದಾನಕ್ಕೆ ಮನವಿ ಸಲ್ಲಿಸಬೇಕು~ ಎಂದು ವಿನಂತಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.