ಶುಕ್ರವಾರ, ಏಪ್ರಿಲ್ 16, 2021
31 °C

8 ಲಕ್ಷ ಮನೆ ನಿರ್ಮಾಣ: ಸೋಮಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ: ಸೂರಿಲ್ಲದ ಬಡವರಿಗೆ ಬಸವ ವಸತಿ ಯೋಜನೆಯಡಿ ವಸತಿ ಕಲ್ಪಿಸಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ನುಡಿದರು.ಪಟ್ಟಣದ ಬಸವರಾಜೇಂದ್ರ ಪ್ರೌಢಶಾಲೆ ಆವರಣದಲ್ಲಿ ತಾಲ್ಲೂಕು ಪಂಚಾಯಿತಿ ಶನಿವಾರ ಆಯೋಜಿಸಿದ್ದ ಬಸವ ವಸತಿ ಯೋಜನೆ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತಾಡಿದರು. ರಾಜ್ಯದ 176 ತಾಲ್ಲೂಕುಗಳಲ್ಲಿ ಬಸವ ವಸತಿ ಯೋಜನೆ ಜಾರಿಯಾಗಲಿದೆ.ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಲಾಗುವುದು. ಈ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 4 ಸಾವಿರ ಮನೆ ನಿರ್ಮಿಸಲಾಗುವುದು. 2011-12ರಲ್ಲಿ 8 ಲಕ್ಷ ಮನೆ ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದರು.ಈ ಯೋಜನೆಯಡಿ 63 ಸಾವಿರ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಬೇಕು.ಇದರಲ್ಲಿ ಸರ್ಕಾರ 50 ಸಾವಿರ ರೂಪಾಯಿ ಭರಿಸಿ, 10 ಸಾವಿರ ರೂಪಾಯಿ ಸಾಲ ನೀಡುತ್ತದೆ, ಉಳಿದ ಮೂರು ಸಾವಿರ ರೂಪಾಯಿಯನ್ನು ಫಲಾನುಭವಿ ಭರಿಸಬೇಕು. ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನಲ್ಲಿ ಶಾಸಕರ ಸಹಕಾರದಿಂದ 3684 ಮಂದಿ ಸೂರಿಲ್ಲದ ಬಡವರನ್ನು ವಸತಿ ಯೋಜನೆಗೆ ಆಯ್ಕೆ ಮಾಡಲಾಗಿದೆ. ಮುಂದಿನ ತಿಂಗಳಿನಿಂದ ಆಯ್ದ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಜನ ಸಂಪರ್ಕ ಸಭೆ ನಡೆಸುತ್ತೇನೆ ಎಂದರು.ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಕೈಜೋಡಿಸಿ ಸಹಕರಿಸಿದಾಗ ಕ್ಷೇತ್ರದ ಪ್ರಗತಿ ಸಾಧ್ಯ. ಯಡಿಯೂರಪ್ಪ ನೇತೃತ್ವದ ಸರ್ಕಾರ ಬಸವ ವಸತಿ ಯೋಜನೆಯಡಿ ಪಕ್ಷಾತೀತವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿದೆ ಎಂದರು.ಬೇಲೂರು ಶಾಸಕ ವೈ.ಎನ್‌.ರುದ್ರೇಶಗೌಡ, ಜಿಪಂ ಅಧ್ಯಕ್ಷ ಬಿ.ಡಿ ಚಂದ್ರೇಗೌಡ, ತಾ.ಪಂ ಅಧ್ಯಕ್ಷ ನಂಜುಂಡಪ್ಪ, ಉಪಾಧ್ಯಕ್ಷ ಶಿವಮೂರ್ತಿ, ಸಿಇಓ ಎಸ್‌.ಟಿ. ಅಂಜನ್‌ಕುಮಾರ್‌, ಪುರಸಭಾಧ್ಯಕ್ಷ ಎನ್‌.ಎಸ್‌. ಸಿದ್ದರಾಮಶೆಟ್ಟಿ, ಜಿ.ಪಂ ಸದಸ್ಯರಾದ ಬಿಳಿಚೌಡಯ್ಯ, ಲಕ್ಷ್ಮಣ, ಹುಚ್ಚೇಗೌಡ, ಕೃಷ್ಣನಾಯಕ, ಇಓ ಚಂದ್ರಶೇಖರ್‌, ತಹಶೀಲ್ದಾರ್‌ ಚಿದಾನಂದ ಇತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.