ಮಂಗಳವಾರ, ಜುಲೈ 27, 2021
20 °C

85 ಕಲಾವಿದರಿಗೆ ಮಾಸಾಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಕಲಾವಿದರಿಗೆ ಸರ್ಕಾರದಿಂದ ಸಿಗುವ ಎಲ್ಲ ನೆರವನ್ನು ನೀಡಿದರೆ ಮಾತ್ರ ಕಲೆ ಉಳಿಯಲು ಸಾಧ್ಯ. ಆ ನಿಟ್ಟಿನಲ್ಲಿ ಯಕ್ಷಗಾನ ಕಲಾವಿದರಿಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನೂ ತಲುಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಎಸ್.ಆಚಾರ್ಯ ಇಲ್ಲಿ ಭರವಸೆ ನೀಡಿದರು.ಮಂದಾರ್ತಿ ದುರ್ಗಾ ಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ಯಕ್ಷಗಾನ ಬಯಲಾಟ ಅಕಾಡೆಮಿ ವತಿಯಿಂದ ಭಾನುವಾರ ಆಯೋಜಿಸಿದ್ದ 2010ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರಸಕ್ತ ಬಜೆಟ್‌ನಲ್ಲಿ 200 ಕೋಟಿ ರೂಪಾಯಿ ಸರ್ಕಾರ ಬಿಡುಗಡೆ ಮಾಡುವ ಮೂಲಕ ಈ ಕ್ಷೇತ್ರದ ಉಳಿವಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಕಲಾವಿದರಿಗೆ ಸರ್ಕಾರ ಸೂಕ್ತವಾದ ಮನ್ನಣೆಯನ್ನೂ ನೀಡುತ್ತಿದೆ. ಅರ್ಜಿ ಸಲ್ಲಿಸುವ ಎಲ್ಲ ಕಲಾವಿದರಿಗೆ ಮಾಸಾಶನ ನೀಡಲಾಗುತ್ತಿದೆ. ಈಗಾಗಲೇ ಸರ್ಕಾರ 85 ಮಂದಿ ಕಲಾವಿದರಿಗೆ ಮಾಸಾಶನ ನೀಡಿದೆ. ಇನ್ನುಳಿದ ಕಲಾವಿದರಿಗೂ ಸರ್ಕಾರ ನೆರವು ನೀಡಲು ಸಿದ್ಧವಿದೆ. ಅದಕ್ಕೆ ಯಾವುದೇ ಕಾನೂನು ತೊಡಕಾಗಲೀ, ಹಣದ ಸಮಸ್ಯೆಯಾಗಲೀ ಇಲ್ಲ ಎಂದರು.3ನೇ ಹಣಕಾಸು ಆಯೋಗದ ವರದಿ ಅನುಷ್ಠಾನ ಕಾರ್ಯಪಡೆ ಅಧ್ಯಕ್ಷ ಎ.ಜಿ.ಕೊಡ್ಗಿ, 300 ಕಲಾವಿದರ ಪರಿಚಯ ಒಳಗೊಂಡ ‘ಯಕ್ಷೋಪಾಸಕರು’ ಕೃತಿ ಬಿಡುಗಡೆ ಮಾಡಿದರು. ಅಕಾಡೆಮಿ ಅಧ್ಯಕ್ಷ ಕುಂಬ್ಳೆ ಸುಂದರರಾವ್ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್, ದುರ್ಗಾ ಪರಮೇಶ್ವರಿ ದೇವಸ್ಥಾನ ಧರ್ಮದರ್ಶಿ ಧನಂಜಯ ಶೆಟ್ಟಿ, ಅಕಾಡೆಮಿ ರಿಜಿಸ್ಟ್ರಾರ್ ಎನ್.ಪದ್ಮಜಾ ಕುಮಾರಿ, ಶ್ರೀನಿವಾಸ ಸಾಸ್ತಾನ ಇದ್ದರು.ಪುರಸ್ಕೃತರು: ಕೃಷ್ಣ ತಿಮ್ಮಯ್ಯ ಹೆಗಡೆ ಬಾಳೆಹದ್ದ, ಹಳ್ಳಾಡಿ ಮಂಜಯ್ಯ ಶೆಟ್ಟಿ, ಶಿವರಾಮ ಜೋಗಿ, ಪುತ್ತೂರು ಶ್ರೀಧರ ಭಂಡಾರಿ, ಲೀಲಾವತಿ ಬೈಪಡಿತ್ತಾಯ, ಬೇಗಾರು ಪದ್ಮನಾಭ ಶೆಟ್ಟಿಗಾರ, ಮೂಡಲಪಾಯ ಸಿದ್ದಲಿಂಗಯ್ಯ, ಮಲ್ಲಿಕಾರ್ಜುನ ರಾಚಪ್ಪ ಮುದಕವಿ ಹಾಗೂ ಕೆ.ಹುಸೇನ್ ಸಾಬ್. ಸಂಘಟನೆಗಾಗಿ ಬೆಂಗಳೂರು ಯಕ್ಷ ದೇಗುಲಕ್ಕೆ ಪ್ರಶಸ್ತಿ ಪಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.