ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ‌್ಯಾಕೆಟ್ ಹಿಡಿದವರ ಫ್ಯಾಷನ್ ಆಟ

Last Updated 21 ಮಾರ್ಚ್ 2012, 19:30 IST
ಅಕ್ಷರ ಗಾತ್ರ

ಘಾಗ್ರಾ ತೊಟ್ಟು ಬಿಡುಬೀಸಾಗಿ ಹೆಜ್ಜೆ ಹಾಕುತ್ತಿದ್ದಳಾಕೆ. `ಕಲಿತ ಹುಡುಗಿ ಕುದುರಿ ನಡಿಗಿ...~ ಎಂಬಂತೆ. ಮೈಮೇಲೆ ದುಪ್ಪಟ್ಟವೇ ನಿಲ್ಲದೆ ನಿಂತವಳು ಇನ್ನೊಬ್ಬ ಬೆಡಗಿ. ಸೀರೆ ತೊಟ್ಟರೂ ಬಿಂಕ-ಬಿನ್ನಾಣವಿಲ್ಲದ, ಸೀರೆಯೇ ಭಾರ ಎಂಬಂತೆ ನಡೆದದ್ದು ಇನ್ನೊಬ್ಬ ಚೆಲುವೆ. ಇದು ಭಾರತೀಯ ಸಾಂಪ್ರದಾಯಿಕ ಉಡುಗೆ ತೊಟ್ಟ ಹದಿನೆಂಟು ದೇಶ ವಿದೇಶಗಳ ಟೆನ್ನಿಸ್ ಆಟಗಾರ್ತಿಯರು ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿದ ಪರಿ.

ಬೆಂಗಳೂರಿನಲ್ಲಿ ನಡೆಯಲಿರುವ ಕ್ಯೂನೆಟ್ ಎಟಿಪಿ ಟೆನ್ನಿಸ್ ಟೂರ್ನಿಗೆ ದೇಶ ವಿದೇಶಗಳಿಂದ ನಗರಕ್ಕೆ ಆಗಮಿಸಿರುವ ಆಟಗಾರ್ತಿಯರಿಗಾಗಿ ಒಂದು ಔತಣಕೂಟ ಏರ್ಪಡಿಸಲಾಗಿತ್ತು. ಅವರಿಂದಲೇ ಒಂದು ಫ್ಯಾಷನ್ ಶೋ ಸಹ ಏರ್ಪಡಿಸಲಾಗಿತ್ತು.
ಆಯೋಜಕರು ಸಂಜೆ ಸರಿಯಾಗಿ ಏಳು ಗಂಟೆಗೆ ಕಾರ್ಯಕ್ರಮ ಆರಂಭ ಎಂದು ಆಹ್ವಾನ ಪಟ್ಟಿಯಲ್ಲಿ ನಮೂದಿಸಿದ್ದರಿಂದ ಅತಿಥಿಗಳೂ ಆ ಸಮಯಕ್ಕೆ ಆಗಮಿಸಿದರು. ಆದರೆ ಆಟಗಾರ್ತಿಯರು ಹೆಜ್ಜೆ ಹಾಕಬೇಕಿದ್ದ ರ‌್ಯಾಂಪ್‌ಗೆ ಸಿದ್ಧತೆ ಇನ್ನೂ ನಡೆಯುತ್ತಲೇ ಇತ್ತು. ವೇದಿಕೆ ಕೊನೆಗೂ ಸಿದ್ಧಗೊಂಡಿದ್ದು ರಾತ್ರಿ 7.45ಕ್ಕೆ.

ಮಾರ್ಜಾಲ ನಡಿಗೆ ಆರಂಭವಾದದ್ದು 8ಕ್ಕೆ. ಅದಕ್ಕೂ ಮೊದಲು ಶಮಾ ಕೃಷ್ಣ ನಡೆಸಿಕೊಟ್ಟ ಕೂಚಿಪುಡಿ ನೃತ್ಯ ವಿದೇಶಿಯರನ್ನು ಸೆಳೆಯಿತು. ಕೃಷ್ಣನ ಕುರಿತ ಪುರಂದರದಾಸರ ಕೃತಿಯಾಧಾರಿತ ಕೀರ್ತನೆಗೆ ಶಮಾ ನರ್ತಿಸಿದರು. 

ತಲೆಯ ಮೇಲೊಂದು ನೀರು ತುಂಬಿದ ಕುಂಭ ಇಟ್ಟು, ತಟ್ಟೆಯ ಮೇಲೆ ನರ್ತಿಸಿದ್ದು ಅರೆಕ್ಷಣ ಸಭಿಕರನ್ನು ಮಂತ್ರಮುಗದ್ಧರನ್ನಾಗಿಸಿತು. ವಿದೇಶಿಯರ ಕ್ಯಾಮೆರಾಗಳು ಫಳಗುಟ್ಟುತ್ತಾ ಶಮಾ ಅವರ ಪ್ರತಿಯೊಂದು ಭಂಗಿಯನ್ನೂ ಸೆರೆಹಿಡಿದವು.

ನಂತರ ವೇದಿಕೆ ಏರಿದ ಕ್ಯೂನೆಟ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಭಿಕರಿಗೆ `ಗುಡ್ ಮಾರ್ನಿಂಗ್~ ಎಂದು ಶುಭಾಶಯ ತಿಳಿಸಿದರು. ಇದಕ್ಕೆ ಪ್ರತಿಯಾಗಿ ಕೆಲ ಸಭಿಕರೂ ಅವರ ಧಾಟಿಯಲ್ಲೇ ಶುಭಾಶಯ ಹೇಳಿದರು. ಕೆಲ ಹೊತ್ತಿನ ನಂತರ `ಗುಡ್ ಈವ್ನಿಂಗ್~ ಮೂಲಕ ತಮ್ಮ ಮಾತನ್ನು ಆರಂಭಿಸಿ ತಮ್ಮ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಕುರಿತು ಅಧಿಕಾರಿ ಬೆಳಕು ಚೆಲ್ಲಿದರು.

ತದನಂತರ ಶುರುವಾಗಿದ್ದು ಹೊಸ ಬಗೆಯ ಫ್ಯಾಷನ್ ಶೋ. ಭಾರತದ ವಿವಿಧ ಸಾಂಪ್ರದಾಯಿಕ ಉಡುಪು ತೊಟ್ಟ ಆಟಗಾರ್ತಿಯರು ಜೋಡಿಯಾಗಿ ವೇದಿಕೆ ಮೇಲೆ ಆಗಮಿಸಿ ರ‌್ಯಾಂಪ್ ತುಳಿದರು. ಘಾಗ್ರಾ-ಚೋಲಿ, ಚೂಡಿ, ಸೀರೆ, ಸಲ್ವಾರ್ ಇತ್ಯಾದಿಗಳಲ್ಲಿ ಆಟಗಾರ್ತಿಯರು ಕಂಗೊಳಿಸುತ್ತಿದ್ದರು. ಉಡುಗೆಯನ್ನು ಸಂಭಾಳಿಸುವ ಗೊಂದಲ, ಬೇಗನೆ ರ‌್ಯಾಂಪ್ ಮುಗಿಸುವ ಗಡಿಬಿಡಿ, ಕಣ್ಮನ ಸೆಳೆಯುವ ಉಡುಪು ತೊಟ್ಟ ಸಂಭ್ರಮ, ಅದಕ್ಕಿಂತ ಹೆಚ್ಚಾಗಿ ಹೊಸಬಗೆಯ ಉಡುಪು ತೊಟ್ಟು ಅಪಾರ ಸಭಿಕರನ್ನು ಎದುರಿಸುವ ಆತಂಕ ಇವೆಲ್ಲವೂ ಆಟಗಾರ್ತಿಯರ ನಡಿಗೆಯಲ್ಲಿದ್ದವು.

ರ‌್ಯಾಕೆಟ್ ಹಿಡಿದು ಆಟದ ಮೈದಾನದಲ್ಲಿ ಸೆಣೆಸುವ ಆಟಗಾರ್ತಿಯರು ರ‌್ಯಾಂಪ್ ಮೇಲೆ ಆಪ್ತ ಗೆಳತಿಯರಂತೆ ಪರಸ್ಪರ ಕೈಹಿಡಿದು ನಡೆದರು.
ಭಾರತ, ಜರ್ಮನಿ, ಚೀನಾ, ಥಾಯ್ಲೆಂಡ್, ಇಸ್ರೇಲ್, ಇಟಲಿ, ಬೆಲ್ಜಿಯಂ ಮೊದಲಾದ ರಾಷ್ಟ್ರಗಳಿಂದ ಬಂದ ಟೆನಿಸ್ ಆಟಗಾರ್ತಿಯರು ಹಾಗೂ ಅವರೊಂದಿಗೆ ಆಗಮಿಸಿದ್ದ ಸ್ನೇಹಿತರು, ತರಬೇತುದಾರರ ಸಂಭ್ರಮ ಮುಗಿಲುಮುಟ್ಟಿತ್ತು. ಎಲ್ಲಕ್ಕೂ ಮಿಗಿಲಾಗಿ ಬೆಲ್ಜಿಯಂನ ಟ್ಯಾಮರಿನ್ ಹ್ಯಾಂಡ್ಲರ್ ಆಟಗಾರ್ತಿಯರ ಪರವಾಗಿ ಶೋ ಸ್ಟಾಪರ್ ಆದರು.
 
ರ‌್ಯಾಂಪ್‌ನಲ್ಲಿ ಹೆಜ್ಜೆ ಹಾಕುವುದೂ ಅಲ್ಲದೆ ಬೆಲ್ಲಿ ನೃತ್ಯದ ಮೂಲಕ ಆಟಗಾರ್ತಿಯರಿಗೆ ಸ್ಫೂರ್ತಿಯಾಗಿ ಸಭಿಕರಿಗೆ ರಸದೌತಣ ಬಡಿಸಿದರು. ಆಟಗಾರ್ತಿಯರ ವಸ್ತ್ರವಿನ್ಯಾಸ, ಉಡುಗೆ ತೊಡುವ ರೀತಿ, ಹೆಜ್ಜೆ ಹಾಕುವ ರೀತಿ ಹೇಳಿಕೊಟ್ಟ ದೀಪಂ ಸಿಲ್ಕ್ಸ್ ಪ್ರಮಿಳಾ ಅವರ ಮೊಗದಲ್ಲಿ ಸಂಭ್ರಮ ಎದ್ದು ಕಾಣುತ್ತಿತ್ತು.

ಅಲ್ಲಿಯವರೆಗೂ ನಗೆ, ಸಂತೋಷಗಳಲ್ಲಿ ಕಳೆದ ಸಭಿಕರ ಎದುರು ಬೆಂಗಳೂರು ಹುಡುಗಿ ಮಿಸ್ ಇಂಡಿಯಾ ಅರ್ಥ್ ನಿಕೋಲ್ ಫರಿಯಾ ಅವರು ಕಪ್ಪು ಶಾರ್ಟ್ ಸ್ಕರ್ಟ್ ತೊಟ್ಟು ಹೆಜ್ಜೆ ಹಾಕಿದಾಗ ಇಡೀ ಆವರಣವೇ ನಿಶ್ಶಬ್ದವಾಗಿತ್ತು. ಕುತ್ತಿಗೆಯನ್ನು ಮತ್ತಷ್ಟು ಎತ್ತರಿಸಿ ನೋಡುತ್ತಿದ್ದ ಸಭಿಕರ ಎದುರು ನಿಕೋಲ್ ಕೆಲವೇ ಕೆಲವು ಹೆಜ್ಜೆಗಳನ್ನಷ್ಟೆ ಹಾಕಿ, ಆಟಗಾರ್ತಿಯರ ನಡುವೆ ನಿಂತರು. ಅಂತಿಮವಾಗಿ ಆಟಗಾರ್ತಿಯರೆಲ್ಲರೂ ಹಾಡಿಗೆ ಹೆಜ್ಜೆ ಹಾಕಿ ಕಾರ್ಯಕ್ರಮಕ್ಕೆ ತೆರೆ ಎಳೆದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT