ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ಹೇರಿಕೆಗೆ ಸಾಹಿತಿಗಳ ವಿರೋಧ

ಕರ್ನಾಟಕ ರಕ್ಷಣಾ ವೇದಿಕೆ ದುಂಡುಮೇಜಿನ ಸಭೆ
Last Updated 27 ಜೂನ್ 2014, 20:17 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರದ ಹಿಂದಿ ಭಾಷೆಯ ಹೇರಿಕೆಯ ಕ್ರಮದ ವಿರುದ್ಧ ಅನೇಕ ಸಾಹಿತಿಗಳು ಶುಕ್ರವಾರ ಇಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಕ್ಷಣಾ ವೇದಿಕೆಯು ಆಯೋಜಿಸಿದ್ದ ದುಂಡು­ಮೇಜಿನ ಸಭೆಯಲ್ಲಿ ಮಾತನಾಡಿದ ಸಾಹಿತಿಗಳು, ಎಲ್ಲಾ ಪತ್ರ ವ್ಯವಹಾರಗಳನ್ನು ಹಿಂದಿ ಭಾಷೆಯಲ್ಲಿ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರವು ಪತ್ರ ಬರೆದಿರುವುದು ಖಂಡನಾರ್ಹ ಎಂದರು.

ಹಿರಿಯ ಸಾಹಿತಿ ಯು.ಆರ್‌.ಅನಂತಮೂರ್ತಿ ಮಾತನಾಡಿ, ‘ಹಿಂದಿ ಸಂಪೂರ್ಣವಾಗಿ ಕೃತಕ ಭಾಷೆ. ಅದೊಂದು ಪ್ರಾದೇಶಿಕ ಭಾಷೆಯಾಗಿದೆ. ಹಿಂದಿಗೆ ಯಾವ ಚರಿತ್ರೆಯೂ ಇಲ್ಲ. ಹಿಂದಿ ಭಾಷೆಯ ಮುಖ್ಯ ಲೇಖಕರ ಮಾತೃ ಭಾಷೆಯು ಹಿಂದಿಯಲ್ಲ. ಅವರು ಮನೆಯಲ್ಲಿ ಮಾತನಾಡುವ ಭಾಷೆ ಬೇರೆಯೇ ಆಗಿದೆ’ ಎಂದರು.

‘ಈ ಬಾರಿಯ ಚುನಾವಣೆಯು ಒಬ್ಬ ವ್ಯಕ್ತಿಯ ಹಿಂದಿ ಭಾಷೆಯ ವಾಗ್ಝರಿಯ ಆಧಾರದ ಮೇಲೆ ನಡೆಯಿತು. ಮೋದಿ ಹಿಂದಿ ಭಾಷೆಗೆ ಮಾತ್ರ ಆದ್ಯತೆಯನ್ನು ನೀಡಿದರು. ದೇವೇಗೌಡ ಅವರಿಗೆ ಹಿಂದಿ ಭಾಷೆ ಬಾರದಿದ್ದರೂ ಪ್ರಧಾನಿಯಾಗಿದ್ದಾಗ ಒಳ್ಳೆಯ ಕೆಲಸಗಳನ್ನು ಮಾಡಿದರು. ಅವರೊಂದಿಗೆ ರಾಜಕೀಯ­ವಾಗಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಈ ವಿಷಯದಲ್ಲಿ ಅವರನ್ನು ಮೆಚ್ಚಿಕೊಳ್ಳಬೇಕು’ ಎಂದು ಹೇಳಿದರು.
 

‘ಪ್ರಧಾನಿಗೆ ಪತ್ರ’
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಿಂದಿಯೇತರ ಭಾಷೆಗಳ ಮೇಲೆ ಹಿಂದಿ ಭಾಷೆಯನ್ನು ಹೇರಿಕೆ ಮಾಡದಂತೆ ಒಂದು ಕನ್ನಡ ಪದ್ಯವನ್ನು ಬರೆದು ಪತ್ರದ ರೂಪ­ದಲ್ಲಿ ಕಳುಹಿಸುತ್ತೇನೆ. ಅವರೂ ಕನ್ನಡ ಭಾಷೆಯನ್ನು ಕಲಿಯಲಿ.
ಕಮಲಾ ಹಂಪನಾ, ಸಾಹಿತಿ.

‘ತಮಿಳರಿಗೆ ಅವರ ತಮಿಳು ಭಾಷೆಯ ಮೇಲೆ ಇರುವಂತಹ ಪ್ರೀತಿ ನಮ್ಮ ಕನ್ನಡಿಗರಿಗೆ ಇಲ್ಲ. ದೇಶದಲ್ಲಿ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳನ್ನು ಪ್ರಬಲಗೊಳಿಸಲು ನಡೆಯುತ್ತಿರುವ  ಕಾರ್ಯವು ಅಪಾಯಕಾರಿ ಬೆಳವಣಿಗೆ’ ಎಂದು ಆತಂಕ ವ್ಯಕ್ತಪಡಿಸಿದರು.
ಸಾಹಿತಿ ಕಮಲಾ ಹಂಪನಾ, ‘ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ತಿರಸ್ಕರಿಸಬೇಕು. ಅಧಿಕಾರ ವಹಿಸಿಕೊಂಡ ಒಂದು ತಿಂಗಳಿನಲ್ಲಿಯೇ ಸರ್ವಾಧಿಕಾರಿ ಆಡಳಿತ ಜಾರಿಗೆ ಬಂದಿದೆ. ರಾಜ್ಯ ಭಾಷೆಗಳ ಕೊರಳನ್ನು ಹಿಸುಕುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ’ ಎಂದು ವಿಷಾದಿಸಿದರು.
 

‘ಮೋದಿ ಭೂತದಿಂದ ಹೊರಗೆ ಬರಲಿ’
‘ಸಾಹಿತಿ ಅನಂತಮೂರ್ತಿ ಅವರು ಚುನಾವಣಾ ಪೂರ್ವ ಮೋದಿಯ ಭೂತದಿಂದ ಹೊರಗೆ ಬಂದರೆ, ಅವರ ಆರೋಗ್ಯಕ್ಕೂ ಒಳ್ಳೆಯದು. ನಮ್ಮ ಆರೋಗ್ಯಕ್ಕೂ ಒಳ್ಳೆಯದು’ ಎಂದು ಸಾಹಿತಿ ಚಂದ್ರಶೇಖರ ಪಾಟೀಲ ಅವರು ನಗೆ ಚಟಾಕಿ ಹಾರಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ, ‘ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರು ಹಿಂದಿಯೇತರ ರಾಜ್ಯ­ಗಳಿಗೆ ಪತ್ರ ಬರೆದು, ಆ ರಾಜ್ಯಗಳನ್ನೂ ಈ ಹೋರಾಟಕ್ಕೆ ಒಗ್ಗೂಡಿಸಬೇಕು’ ಎಂದು ಒತ್ತಾಯಿಸಿದರು. ‘ವೈಜ್ಞಾನಿಕ ತಳಹದಿ ಆಧಾರದ ಮೇಲೆ ಭಾಷಾನೀತಿಯನ್ನು ರೂಪಿಸಬೇಕು. ಆಯಾ ರಾಜ್ಯಗಳಲ್ಲಿ ಅಲ್ಲಿಯ ಭಾಷೆಗಳೇ ಪ್ರಧಾನ­ವಾಗಬೇಕು’ ಎಂದರು.

ಸಾಹಿತಿ ಕೆ.ಮರುಳಸಿದ್ದಪ್ಪ, ‘ಬಿಜೆಪಿ ಮತ್ತು ಸಂಘ ಪರಿ­ವಾರದ ಬಗೆಗೆ ನನಗೆ ಮೂಲಭೂತವಾಗಿ ವಿರೋಧವಿದೆ. ಆಡಳಿತಕ್ಕೆ ಬಂದ ಒಂದು ತಿಂಗಳಿನಲ್ಲಿಯೇ ಅವರು ನಂಬಿದ ತತ್ವ­ಗಳನ್ನು ಜಾರಿ ಮಾಡುತ್ತಿದ್ದಾರೆ. ಹಿಂದಿ ಹೇರಿಕೆಯು ‘ಟೆಸ್ಟ್‌ ಡೋಸ್’ ಆಗಿದೆಯಷ್ಟೇ’ ಎಂದರು.

‘ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ದೇಶದ ಎಲ್ಲ ರಾಜ್ಯಗಳಿಗೂ ವಿಸ್ತರಿಸಬೇಕು. ಎಲ್ಲಾ ರಾಜ್ಯಗಳನ್ನೂ ಸಮಾ­ನವಾಗಿ ಕಾಣಬೇಕು. ಕೇಂದ್ರ ಸರ್ಕಾರ ಈ ಐದು ವರ್ಷಗಳಲ್ಲಿ ಸಾಧಿಸಬೇಕಾಗಿರುವ ಕುರಿತು ತನ್ನದೇ ಆದ ಒಂದು ಐಡಿಯಾಲಜಿ ರೂಪಿಸಿದೆ’ ಎಂದು ವಿಶ್ಲೇಷಿಸಿದರು.

ಸಾಹಿತಿ ಚಂದ್ರಶೇಖರ ಪಾಟೀಲ, ‘ಪ್ರತಿಯೊಂದು ಭಾಷೆಗೂ ಚರಿತ್ರೆಯಿದೆ. ಹಿಂದಿ ಭಾಷೆಗೆ ಚರಿತ್ರೆಯಿಲ್ಲ ಎಂಬ ಮಾತನ್ನು ಇಲ್ಲಿ ಒಪ್ಪಲು ಸಾಧ್ಯವಿಲ್ಲ. ಚರಿತ್ರೆ ಹೇಳಿ, ವರ್ತಮಾನವನ್ನು ತುಚ್ಛೀಕರಿಸುವುದು ಸರಿಯಲ್ಲ. ಹಿಂದಿ ಒಂದು ಜನ ಭಾಷೆಯಾಗಿದೆ. ರಾಜ್ಯ ಭಾಷೆಗಳ ಮೇಲೆ ಹಿಂದಿ ಹೇರಿಕೆಯು ಮೋದಿ ಪ್ರಧಾನಿಯಾದಾಗಿನಿಂದ ಆರಂಭವಾದದ್ದಲ್ಲ. ಕೇಂದ್ರ­ದಲ್ಲಿ ಆಡಳಿತಕ್ಕೆ ಬಂದ ಎಲ್ಲ ಕೇಂದ್ರ ಸರ್ಕಾರಗಳೂ ಈ ಪ್ರಯತ್ನ­ವನ್ನು ಮಾಡಿವೆ’ ಎಂದು ನುಡಿದರು.

ಸಭೆಯ ನಿರ್ಣಯಗಳು
*ಮಾತೃಭಾಷೆಯಾಗಿ ಕನ್ನಡಕ್ಕೆ ಸ್ಥಾನಮಾನ, ಸಂಪರ್ಕ ಭಾಷೆಯಾಗಿ ಇಂಗ್ಲಿಷ್‌ ಹೊರತುಪಡಿಸಿ, ಉಳಿದ ಭಾಷೆಗಳ ದಬ್ಬಾಳಿಕೆಗೆ ವಿರೋಧ
* ಹಿಂದಿಯೇತರ ರಾಜ್ಯಗಳನ್ನು ಒಗ್ಗೂಡಿಸಿ ಚಳವಳಿ
*ನವದೆಹಲಿಯ ಜಂತರ್‌­ಮಂತರ್‌ನಲ್ಲಿ  ಶೀಘ್ರದಲ್ಲಿ ಪ್ರತಿಭಟನೆ
*ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದಿ­ಯೇತರ ರಾಜ್ಯಗಳ ಬೆಂಬಲ ಪಡೆಯಲಿ
*ಮುಖ್ಯಮಂತ್ರಿ ಅವರು ಹಿಂದಿ ಹೇರಿಕೆ­ಯನ್ನು ಖಂಡಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಒತ್ತಾಯ


ಸಾಹಿತಿ ಎಸ್‌.ಜಿ.ಸಿದ್ಧರಾಮಯ್ಯ, ‘ಒಂದು ಭಾಷೆಯ ಒಡಕುಗಳನ್ನು ಬಳಸಿಕೊಂಡು ಹಿಂದಿ ಭಾಷೆಯು ಪ್ರಬಲ­ವಾಗುತ್ತಿದೆ. ಈ ವೇಳೆಯಲ್ಲಿ ಎಲ್ಲರೂ ಸಂಕಲ್ಪ ಬದ್ಧವಾಗಿ ಹೋರಾಡಬೇಕು’ ಎಂದು ಹೇಳಿದರು.

ಲೇಖಕ ಜಿ.ಎಸ್‌.ಸಿದ್ದಲಿಂಗಯ್ಯ, ‘1960 ರಲ್ಲಿಯೇ ಕೇಂದ್ರ ಸರ್ಕಾರವು ರಾಜ್ಯಗಳ ಮೇಲೆ ಹಿಂದಿ ಭಾಷೆಯನ್ನು ಹೇರಿಕೆ ಮಾಡುವ ಪ್ರಯತ್ನವನ್ನು ಮಾಡಿತ್ತು. ಆಗ, ತಮಿಳು ಸರ್ಕಾರ ಪ್ರಬಲವಾಗಿ ವಿರೋಧಿಸಿತ್ತು. ಆಗ ಎಚ್ಚೆ­ತ್ತುಕೊಂಡ ಕೇಂದ್ರ ಸರ್ಕಾರವು 1975 ರಲ್ಲಿ ತಮಿಳುನಾಡು ಒಂದನ್ನು ಬಿಟ್ಟು ಉಳಿದ ಎಲ್ಲ ರಾಜ್ಯಗಳಿಗೂ ಅನ್ವಯಿಸುತ್ತದೆ ಎಂದು ಸೂಚಿಸಿತ್ತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT