ಸೋಮವಾರ, ಏಪ್ರಿಲ್ 19, 2021
23 °C
ಬೌನ್ಸ್‌–ಇ: ಸದ್ಯ ಬಾಡಿಗೆಗೆ ಲಭ್ಯ; ಶೀಘ್ರದಲ್ಲೇ ಮಾರುಕಟ್ಟೆಗೆ ನಿರೀಕ್ಷೆ

ವಿದ್ಯುತ್ ಚಾಲಿತ ವಾಹನ ತಯಾರಿಕೆಗೆ ‘ಬೌನ್ಸ್‌’ ಗಮನ

ವಿಶ್ವನಾಥ ಎಸ್. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದ್ವಿಚಕ್ರ ವಾಹನಗಳನ್ನು ಬಾಡಿಗೆ ಆಧಾರದಲ್ಲಿ ನೀಡುವ ‘ಬೌನ್ಸ್’ ನವೋದ್ಯಮವು ವಿದ್ಯುತ್ ಚಾಲಿತ ವಾಹನಗಳ (ಇ.ವಿ.) ತಯಾರಿಕಾ ಕಂಪನಿಯಾಗುವತ್ತ ಹೆಜ್ಜೆ ಇರಿಸಿದೆ. 

ವ್ಯಾಪಾರದ ದೃಷ್ಟಿಕೋನದಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತು ಗ್ರಾಹಕರ ಬೇಡಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ‘ಇ.ವಿ.’ ತಯಾರಿಕಾ ಕಂಪನಿಯಾಗಿ ಹೊರಹೊಮ್ಮಲು ಯೋಜನೆ ರೂಪಿಸಲಾಗಿದೆ. ಕೆಲವು ಕಂಪನಿಗಳೊಂದಿಗೆ ಒಪ್ಪಂದ, ಸ್ವಾಧೀನ ಪ್ರಕ್ರಿಯೆಯ ಆಯ್ಕೆಗಳನ್ನೂ ಪರಿಗಣಿಸಲಾಗುತ್ತಿದೆ ಎಂದು ‘ಬೌನ್ಸ್‌’ ಸಹ ಸ್ಥಾಪಕ ವಿವೇಕಾನಂದ ಹಳ್ಳೆಕೆರೆ ‘ಪ್ರಜಾವಾಣಿ’ಗೆ ತಿಳಿಸಿದರು.

ಬೌನ್ಸ್‌–ಇ: ಕಂಪನಿಯದ್ದೇ ಆದ ಎಲೆಕ್ಟ್ರಿಕ್‌ ಸ್ಕೂಟರ್‌ ‘ಬೌನ್ಸ್‌ –ಇ’ ಅನ್ನು ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಸದ್ಯ ಬಾಡಿಗೆಗೆ ಈ ಸ್ಕೂಟರ್ ಲಭ್ಯವಿದೆ. ಬೌನ್ಸ್‌ ಆ್ಯಪ್‌ ಮೂಲಕ ಬಾಡಿಗೆ ಆಧಾರದಲ್ಲಿ ಬಳಸಬಹುದು ಎಂದು ಹಳ್ಳೆಕೆರೆ ಹೇಳಿದರು.

‘ಬೌನ್ಸ್‌ –ಇ’ ಸ್ಕೂಟರ್‌ಗೆ ಇಂಟರ್‌ ನ್ಯಾಷನಲ್‌ ಸೆಂಟರ್‌ ಫಾರ್‌ ಆಟೊಮೊಟಿವ್ ಟೆಕ್ನಾಲಜಿಯು (ಐಸಿಎಟಿ) 2020ರ ಸೆಪ್ಟೆಂಬರ್‌ನಲ್ಲಿ ಪ್ರಮಾಣಪತ್ರ ನೀಡಿದೆ. ಭಾರತದಲ್ಲಿ ಈ ಪ್ರಮಾಣ ಪತ್ರ ಪಡೆದಿರುವ ಮೊದಲ ಗ್ರಾಹಕ ಕೇಂದ್ರಿತ ಬೈಕ್‌‌ ಷೇರಿಂಗ್‌ ಪ್ಲಾಟ್‌ಫಾರಂ ಎನ್ನುವ ಹೆಗ್ಗಳಿಕೆಗೆ ಬೌನ್ಸ್‌ ಪಾತ್ರವಾಗಿದೆ ಎಂದೂ ತಿಳಿಸಿದರು.

ಈ ಸ್ಕೂಟರ್ ಬೆಲೆ ಬ್ಯಾಟರಿಯನ್ನು ಹೊರತುಪಡಿಸಿ ₹ 45 ಸಾವಿರದಿಂದ ₹ 50 ಸಾವಿರ ಇರಲಿದೆ. ಬ್ಯಾಟರಿಯನ್ನೂ ಸೇರಿಸಿದರೆ ₹ 70 ಸಾವಿರದವರೆಗೆ ಆಗಲಿದೆ. ಆದರೆ, ಬ್ಯಾಟರಿ ಖರೀದಿಯಿಂದ ಆಗುವ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ಬ್ಯಾಟರಿಯನ್ನು ಬಾಡಿಗೆಗೆ ಕೊಡುವ ಆಯ್ಕೆ ಇದೆ. ಈ ಸಂಬಂಧ ಕೆಲವು ಕಿರಾಣಿ ಅಂಗಡಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಕಿಲೋ ಮೀಟರಿಗೆ ₹ 1.80ರಂತೆ ಬ್ಯಾಟರಿಯನ್ನು ಪಡೆದು ಬಳಸಬಹುದು. ಕಿರಾಣಿ ಅಂಗಡಿಗಳ ವಿವರ ಆ್ಯ‍ಪ್‌ನಲ್ಲಿ ಲಭ್ಯವಿದೆ ಎಂದು ಮಾಹಿತಿ ನೀಡಿದರು.

ರೆಟ್ರೊ ಫಿಟ್: ಸಾಂಪ್ರದಾಯಿಕ ಇಂಧನ ಬಳಸುವ ಸ್ಕೂಟರ್‌ಗಳನ್ನು ರೆಟ್ರೊ ಫಿಟ್‌ (ಎಲೆಕ್ಟ್ರಿಕ್‌) ಆಗಿ ಪರಿವರ್ತಿಸಬಹುದು. ಇದಕ್ಕೆ ₹ 10 ಸಾವಿರದಿಂದ ₹ 20 ಸಾವಿರದವರೆಗೆ ವೆಚ್ಚವಾಗಲಿದೆ. ಇದಕ್ಕೆ ಸಬ್ಸಿಡಿ ಇಲ್ಲ. ಸಬ್ಸಿಡಿ ಸಿಕ್ಕರೆ ಇನ್ನೂ ಕಡಿಮೆ ಆಗಲಿದೆ. ಈ ರೀತಿ ಪರಿವರ್ತಿತ ಸ್ಕೂಟರ್‌ಗಳಿಗೂ ಸಹ ಬ್ಯಾಟರಿಯನ್ನು ಕಿಲೋ ಮೀಟರಿಗೆ ಅನುಗುಣವಾಗಿ ಖರೀದಿಸಿ ಬಳಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು