ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟು ಇ.ವಿ. ಬಿಡುಗಡೆ ಮಾಡಿದ ಲಾರ್ಡ್ಸ್ ಆಟೊಮ್ಯಾಟಿವ್

Published 17 ಆಗಸ್ಟ್ 2023, 16:12 IST
Last Updated 17 ಆಗಸ್ಟ್ 2023, 16:12 IST
ಅಕ್ಷರ ಗಾತ್ರ

ಬೆಂಗಳೂರು: ಲಾರ್ಡ್ಸ್‌ ಆಟೊಮ್ಯಾಟಿವ್ ಕಂಪನಿಯು ಎಂಟು ವಿದ್ಯುತ್ ಚಾಲಿತ ವಾಹನ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

‘ಮಾರುಕಟ್ಟೆಯಲ್ಲಿ ನಾವು ಹೊಂದಿರುವ ಮುಂಚೂಣಿ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳುವ ಉದ್ದೇಶದಿಂದ ಆರು ತ್ರಿಚಕ್ರ ವಾಹನ ಮಾದರಿಗಳನ್ನು, ಎರಡು ಇ.ವಿ. ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ’ ಎಂದು ಕಂಪನಿ ಹೇಳಿದೆ.

ಈ ವಾಹನಗಳ ಬೆಲೆಯು ₹49,999ರಿಂದ ₹1.75 ಲಕ್ಷದವರೆಗೆ ಇದೆ. ಆರಂಭಿಕ ಹಂತದಲ್ಲಿ ಕಂಪನಿಯು ಉತ್ತರ ಪ್ರದೇಶ, ಮಹಾರಾಷ್ಟ್ರ, ದೆಹಲಿ ಕೇಂದ್ರಾಡಳಿತ ಪ್ರದೇಶ, ಕರ್ನಾಟಕ, ತಮಿಳುನಾಡು, ಬಿಹಾರ, ಮಧ್ಯಪ್ರದೇಶ, ಆಂಧ್ರಪ್ರದೇಶ, ಕೇರಳ, ಗುಜರಾತ್, ರಾಜಸ್ಥಾನ ಮತ್ತು ಅಸ್ಸಾಂ ರಾಜ್ಯಗಳ ಎರಡನೆಯ ಹಾಗೂ ಮೂರನೆಯ ಹಂತದ ನಗರಗಳನ್ನು ಕೇಂದ್ರೀಕರಿಸಲಿದೆ.

ಈ ವಾಹನಗಳನ್ನು ಕಂಪನಿಯು ಸಿಲ್ವಾಸಾ, ಲಖನೌ, ಗುರುಗ್ರಾಮ ಮತ್ತು ಫರೀದಾಬಾದ್‌ನಲ್ಲಿ ಹೊಂದಿರುವ ಅತ್ಯಾಧುನಿಕ ಘಟಕಗಳಲ್ಲಿ ತಯಾರಿಸಲಾಗಿದೆ. ಇವು ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆಯನ್ನು ಹಾಗೂ ಸರಕು ಸಾಗಣೆಯಲ್ಲಿ ಹೆಚ್ಚಿನ ಅನುಕೂಲವನ್ನು ಕಲ್ಪಿಸುತ್ತವೆ. ಈ ವಾಹನಗಳ ಬ್ಯಾಟರಿ ಸಾಮರ್ಥ್ಯವು ಹೆಚ್ಚಿನ ಮಟ್ಟದಲ್ಲಿದೆ, ವಾಹನಗಳು ಹೆಚ್ಚು ಭಾರವನ್ನು ಹೊರಬಲ್ಲವು ಎಂದು ಕಂಪನಿ ಹೇಳಿದೆ.

ಲಾರ್ಡ್ಸ್‌ ಮಾರ್ಕ್‌ ಇಂಡಸ್ಟ್ರೀಸ್‌ ಪ್ರೈ.ಲಿ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಸಚ್ಚಿದಾನಂದ ಉಪಾಧ್ಯಾಯ ಅವರು, ‘ಎಂಟು ಸುಧಾರಿತ ಇ.ವಿ.ಗಳನ್ನು ಬಿಡುಗಡೆ ಮಾಡುತ್ತಿರುವುದು ನಮ್ಮ ಪಯಣದಲ್ಲಿ ಒಂದು ಹೊಸ, ಗುರುತರ ಮೈಲಿಗಲ್ಲು. ದೇಶದ ಎಲ್ಲೆಡೆ ಇ.ವಿ ಬಳಕೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಆಗಬೇಕು ಎಂಬುದು ನಮ್ಮ ಉದ್ದೇಶ. ಪ್ರಯಾಣಿಕ ಬಳಕೆಗೆ ಹಾಗೂ ಸರಕು ಸಾಗಣೆಗೆ ಇ.ವಿ.ಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಕೆ ಮಾಡುವುದರಿಂದ ಪರಿಸರದ ಮೇಲೆ ಒಳ್ಳೆಯ ಪರಿಣಾಮ ಉಂಟಾಗುತ್ತದೆ’ ಎಂದು ಹೇಳಿದ್ದಾರೆ.

‘ಸರ್ಕಾರವು ಸುಸ್ಥಿರ ಸಾರಿಗೆಗೆ ಗಮನ ನೀಡುತ್ತಿದೆ, ಗ್ರಾಹಕರಿಂದ ಬೇಡಿಕೆ ಹೆಚ್ಚುತ್ತಿದೆ ಹಾಗೂ ಇ.ವಿ. ವಲಯದಲ್ಲಿ ತಂತ್ರಜ್ಞಾನ ಸುಧಾರಿಸುತ್ತಿದೆ. ಈ ಕಾರಣಗಳಿಂದಾಗಿ ದೇಶದ ಇ.ವಿ. ಮಾರುಕಟ್ಟೆಯು ಕ್ಷಿಪ್ರ ಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ನಾವು ನಮ್ಮ ಇ.ವಿ. ತಯಾರಿಕಾ ಸಾಮರ್ಥ್ಯವನ್ನು ಹೆಚ್ಚು ಮಾಡಿಕೊಳ್ಳಲು ಹೂಡಿಕೆ ಮಾಡುವುದನ್ನು ಮುಂದುವರಿಸಲಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಲಾರ್ಡ್ಸ್‌ ಆಟೊಮೊಟಿವ್ ಕಂಪನಿಯು ತನ್ನ ಗ್ರಾಹಕರಿಗೆ ಕಡಿಮೆ ಬಡ್ಡಿ ದರಕ್ಕೆ ಹಾಗೂ ಕಡಿಮೆ ಶುಲ್ಕಕ್ಕೆ ಸಾಲ ಒದಗಿಸಲು, ಸಾಲವು ಸುಲಭವಾಗಿ ಸಿಗುವಂತೆ ಮಾಡಲು ಬಜಾಜ್‌ ಫಿನ್‌ಸರ್ವ್‌, ಪೈನ್ ಲ್ಯಾಬ್ಸ್, ಈಜಿಟ್ಯಾಪ್, ಅಸೆಂಡ್, ಆಕಾಸಾ ಫೈನಾನ್ಸ್, ಲೋನ್‌ಟ್ಯಾ‍ಪ್‌, ಪೇಟೆಲ್, ಕೋಟಕ್ ಮಹೀಂದ್ರ, ಪೇಟಿಎಂ, ಗೋಪಿಕ್ ಮತ್ತು ಪಿಕ್ಸ್‌ಮೊ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT