ಶನಿವಾರ, ಫೆಬ್ರವರಿ 4, 2023
28 °C

ಮಹೀಂದ್ರಾದ 'ಎಕ್ಸ್‌ಯುವಿ700' ಅನಾವರಣ; ಆರಂಭಿಕ ಬೆಲೆ ₹ 11.99 ಲಕ್ಷ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮಹೀಂದ್ರಾ ಎಕ್ಸ್‌ಯುವಿ700

ಮುಂಬೈ: ದೇಶೀಯ ಆಟೊಮೊಬೈಲ್‌ ಸಂಸ್ಥೆ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಲಿಮಿಟೆಡ್‌ನ ಬಹುನಿರೀಕ್ಷಿತ ಹೊಸ ಎಸ್‌ಯುವಿ, ಎಕ್ಸ್‌ಯುವಿ700 (XUV700) ಗುರುವಾರ ಅನಾವರಣಗೊಂಡಿದೆ. ಆರಂಭಿಕ ಬೆಲೆ ₹ 11.99 ಲಕ್ಷ ನಿಗದಿಯಾಗಿದೆ.

ಅತ್ಯಾಕರ್ಷಕ ವಿನ್ಯಾಸ, ವಿನೂತನ ತಂತ್ರಜ್ಞಾನದ ಅಳವಡಿಕೆ, ಕಂಪನಿಯ ಹೊಸ ಲೋಗೊ ಮೂಲಕ 'ಎಕ್ಸ್‌ಯುವಿ700' ಎಸ್‌ಯುವಿ ಪ್ರಿಯರ ಗಮನ ಸೆಳೆದಿದೆ. ಕಳೆದ ವರ್ಷ ಥಾರ್‌ಗೆ ಲಕ್ಸುರಿ ಲೇಪನ ಕೊಟ್ಟಿದ್ದ ಮಹೀಂದ್ರಾ, ಈಗ ದೇಶದ ಕಾರು ಮಾರುಕಟ್ಟೆಯಲ್ಲಿ ಮತ್ತೊಂದು ಪೈಪೋಟಿಗೆ ಮುಂದಾಗಿದೆ. ಡೀಸೆಲ್‌ ಮತ್ತು ಗ್ಯಾಸೊಲಿನ್‌ (ಪೆಟ್ರೋಲ್‌) ಎಂಜಿನ್‌ ಹಾಗೂ ಮ್ಯಾನ್ಯುಯಲ್‌ ಮತ್ತು ಆಟೊಮ್ಯಾಟಿಕ್‌ ಆಯ್ಕೆಗಳಲ್ಲಿ ಎಕ್ಸ್‌ಯುವಿ700 ಲಭ್ಯವಿರಲಿದೆ.

ಐದು ಮತ್ತು ಏಳು ಸೀಟ್ ಸಾಮರ್ಥ್ಯದ ಆಯ್ಕೆಯೂ ಇದ್ದು, ವಾಹನದ ಎಲ್ಲ ಗಾಲಿಗಳಿಗೆ ಪವರ್‌ ಒದಗಿಸುವ ವ್ಯವಸ್ಥೆ ಆಲ್‌–ವೀಲ್ಹ್‌–ಡ್ರೈವ್‌ (ಎಡಬ್ಲ್ಯುಡಿ) ಆಯ್ಕೆಯೂ ಲಭ್ಯವಿರುವುದಾಗಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ವಾರವಷ್ಟೇ ತನ್ನ ಎಸ್‌ಯುವಿ ಮಾದರಿಯ ವಾಹನಗಳಿಗೆ ಹೊಸ ಲೋಗೊ ಅಳವಡಿಸಿಕೊಂಡಿರುವ ಮಹೀಂದ್ರಾ, 2026ರ ವೇಳೆಗೆ ಒಂಬತ್ತು ಹೊಸ ಎಸ್‌ಯುವಿಗಳನ್ನು ಹೊರತರುವುದಾಗಿ ಹೇಳಿದೆ. ತಿಂಗಳ ಅಂತ್ಯ ಅಥವಾ ಮುಂದಿನ ತಿಂಗಳು ಎಸ್‌ಯುವಿ700 ಬುಕ್ಕಿಂಗ್‌ ಆರಂಭವಾಗಲಿದೆ.

ಎಂಎಕ್ಸ್‌ (MX) ಮತ್ತು ಅಡ್ರಿನಾಕ್ಸ್‌ (ಎಎಕ್ಸ್‌) ಎರಡು ಮುಖ್ಯ ಮಾದರಿಗಳು, ಅಡ್ರಿನಾಕ್ಸ್‌ ಸರಣಿಯಲ್ಲಿ ಇನ್ನೂ 3 ಮಾದರಿಗಳಿವೆ; AX3, AX5 ಹಾಗೂ AX7.

ಪ್ರಸ್ತುತ 5 ಸೀಟರ್‌ನ ನಾಲ್ಕು ಮಾದರಿಗಳ ಬೆಲೆಯನ್ನು ಕಂಪನಿಯು ಪ್ರಕಟಿಸಿದೆ. ಎಂಎಕ್ಸ್‌ ಪೆಟ್ರೋಲ್‌ ಮಾದರಿಗೆ ₹ 11.99 ಲಕ್ಷ, ಡೀಸೆಲ್‌ ಎಂಜಿನ್‌ಗೆ ₹ 12.49 ಲಕ್ಷ ನಿಗದಿಯಾಗಿದೆ. ಅಡ್ರಿನಾಕ್ಸ್‌ ಎಎಕ್ಸ್‌3 ಪ್ರೆಟ್ರೋಲ್‌ ಮಾದರಿಗೆ ₹ 13.99 ಲಕ್ಷ ಮತ್ತು ಎಎಕ್ಸ್‌5 ಮಾದರಿಯ ಬೆಲೆ ₹ 14.99 ಲಕ್ಷ ಇದೆ.

ಎಸ್‌ಯುವಿ700 ವೈಶಿಷ್ಟ್ಯಗಳು

10.25 ಇಂಚಿನ ಎರಡು ಸ್ಕ್ರೀನ್‌ಗಳಿವೆ. ಒಂದು ಇನ್ಫೊಟೇನ್ಮೆಂಟ್‌ಗಾಗಿ (ಟಚ್‌ ಸ್ಕ್ರೀನ್‌) ಮತ್ತೊಂದು ಕಾರಿನ ವೇಗ, ಇಂಧನ ಸೇರಿದಂತೆ ಇತರೆ ಅಂಶಗಳನ್ನು ಕಾಣಲು ಬಳಕೆಯಾಗುತ್ತದೆ. ಇದರೊಂದಿಗೆ ಅಲೆಕ್ಸಾ ಜೊತೆಯಾಗಿದ್ದು, ಧ್ವನಿಯ ಕಮಾಂಡ್‌ ಕೊಡುವ ಮೂಲಕ ಹಲವು ಕೆಲಸ ಮಾಡಿಸಿಕೊಳ್ಳಬಹುದು. ಸ್ಕೈರೂಫ್‌ ತೆರೆಯುವುದು, ಹಾಡು ಬದಲಿಸುವುದು, ತಾಪಮಾನ ನಿಯಂತ್ರಿಸುವುದು,..ಇಂಥ ಮತ್ತಷ್ಟು ಕೆಲಸಗಳನ್ನು ಅಲೆಕ್ಸಾ ಸಾಧ್ಯವಾಗಿಸುತ್ತದೆ.

ಮಹೀಂದ್ರಾದ ಅಡ್ರಿನಾಕ್ಸ್‌ ತಂತ್ರಜ್ಞಾನವು ಈ ಎಸ್‌ಯುವಿ ಅನ್ನು ಮತ್ತುಷ್ಟು ಸ್ಮಾರ್ಟ್‌ ಮಾಡಿದೆ. ಬಾಗಿಲು ತೆರೆಯುತ್ತಿದ್ದಂತೆ ಸೀಟ್‌ ತಾನಾಗಿಯೇ ಹಿಂದಕ್ಕೆ ಸರಿಯುವ ಮೂಲಕ ಕೂರಲು ಅನುವು ಮಾಡಿಕೊಡುತ್ತದೆ. ಎಸ್‌ಯುವಿ ಬಾಗಿಲು ತೆರೆಯಲು ಕೈ ಮುಂದು ಮಾಡಿದರೆ ತಾನಾಗಿಯೇ ಅಣಿಯಾಗುವ ಹ್ಯಾಂಡಲ್‌(ಸ್ಮಾರ್ಟ್‌ ಡೋರ್‌ ಹ್ಯಾಂಡಲ್‌), ಸೋನಿಯ 3ಡಿ ಸೌಂಡ್‌ ಸಿಸ್ಟಮ್‌ ಒಳಗೊಂಡ 12 ಸ್ಪೀಕರ್‌ಗಳು, 360 ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್‌ ಪಾರ್ಕ್‌ ಬ್ರೇಕ್‌, ವಯರ್‌ಲೆಸ್‌ ಚಾರ್ಜಿಂಗ್‌, 'ಜಿಪ್‌–ಜ್ಯಾಪ್‌–ಜೂಮ್‌' ಮೂರು ಡ್ರೈವ್‌ ಮೋಡ್‌ಗಳು, 7 ಏರ್‌ಬ್ಯಾಗ್‌ಗಳು, ಡ್ರೈವರ್‌ ಅಸಿಸ್ಟೆಂಟ್‌ (ಸ್ವಯಂ ಚಾಲಿತ ಬ್ರೇಕಿಂಗ್‌),... ಇನ್ನಷ್ಟು ವೈಶಿಷ್ಟ್ಯಗಳಿವೆ.

'ನೂತನ ತಂತ್ರಜ್ಞಾನ, ಸಾಮರ್ಥ್ಯ ಹಾಗೂ ಇಂಟೆಲಿಜೆನ್ಸ್‌ ಅಳವಡಿಕೆಯಿಂದಾಗಿ ಎಕ್ಸ್‌ಯುವಿ700, ಬಳಕೆದಾರರಿಗೆ ಅಸಾಧ್ಯವನ್ನು ಸಾಧ್ಯವಾಗಿಸುವ ಅವಕಾಶ ನೀಡಲಿದೆ' ಎಂದು ಮಹೀಂದ್ರಾ ಆ್ಯಂಡ್‌ ಮಹೀಂದ್ರಾದ ಸಿಇಒ ಅನಿಶ್ ಶಾ ಹೇಳಿದ್ದಾರೆ.

ಎಕ್ಸ್‌ಯುವಿ700 ವಾಹನವು ಹೊಸ ಮಹೀಂದ್ರಾದ ಆರಂಭವಾಗಿದೆ. ಹಾಗೇ ಭಾರತದಲ್ಲಿ ಎಸ್‌ಯುವಿ ಮಾದರಿಗಳಲ್ಲಿ ಹೊಸತನವನ್ನು ಸೃಷ್ಟಿಸಿದೆ. ಇಡೀ ಎಸ್‌ಯುವಿ ತಯಾರಿಕೆ ಮತ್ತು ಅದರ ಪ್ರಕ್ರಿಯೆಯಲ್ಲೇ ಇದು ಪರಿವರ್ತನೆಯನ್ನು ತರಲಿದೆ ಎಂದು ಕಂಪನಿಯ ಕಾರ್ಯಕಾರಿ ನಿರ್ದೇಶಕ ರಾಜೇಶ್‌ ಜೆಜುರಿಕರ್‌ ಹೇಳಿದ್ದಾರೆ.

ಎಂಜಿನ್‌ ಮತ್ತು ಸಾಮರ್ಥ್ಯ

ಎಂಜಿನ್‌: 4 ಸಿಲಿಂಡರ್‌, 2.0 ಲೀಟರ್‌ ಪೆಟ್ರೋಲ್‌ / 2.2 ಲೀಟರ್‌ ಡೀಸೆಲ್‌ (ಹಾಗೂ ಡೀಸೆಲ್‌ ಎಕ್ಸ್‌)

ಪವರ್‌: 197 ಬಿಎಚ್‌ಪಿ @5000ಆರ್‌ಪಿಎಂ/ 153ಬಿಎಚ್‌ಪಿ@ 3750ಆರ್‌ಪಿಎಂ/ 182ಬಿಎಚ್‌ಪಿ @3500ಆರ್‌ಪಿಎಂ

ಗಂಟೆಗೆ 0ದಿಂದ 60 ಕಿ.ಮೀ: 4.6 ಸೆಕೆಂಡ್‌

ಟ್ರಾನ್ಸ್‌ಮಿಷನ್‌: 6 ಸ್ಪೀಡ್‌ (ಆಟೋ/ಮ್ಯಾನ್ಯುಯಲ್‌)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು