ಶನಿವಾರ, ಫೆಬ್ರವರಿ 29, 2020
19 °C

ಮಹೀಂದ್ರಾ ಎಲೆಕ್ಟ್ರಿಕ್‌ 'ಕೆಯುವಿ 100' ಬಿಡುಗಡೆ: ಬೆಲೆ ₹8.25 ಲಕ್ಷ 

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮಹೀಂದ್ರಾ ಇ–ಕೆಯುವಿ 100

ಗ್ರೇಟರ್‌ ನೋಯ್ಡಾ: 'ಆಟೊ ಎಕ್ಸ್‌ಪೊ 2020'ರಲ್ಲಿ ವಿದ್ಯುತ್‌ ಚಾಲಿತ ವಾಹನಗಳದ್ದೇ ಕಾರುಬಾರು. ಮಾರುತಿ ಸುಜುಕಿ ಸಹ ಎಲೆಕ್ಟ್ರಿಕ್‌ ಕಾನ್ಸೆಪ್ಟ್‌ ಕಾರು ಅನಾವರಣಗೊಳಿಸಿದೆ. ಈಗಾಗಲೇ ಎಲೆಕ್ಟ್ರಿಕ್‌ ವಾಹನ ಮಾರಾಟ ನಡೆಸುತ್ತಿರುವ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಬುಧವಾರ ಕಾಂಪ್ಯಾಕ್ಟ್‌ ಎಸ್‌ಯುವಿ 'ಕೆಯುವಿ 100' ಮಾದರಿಯ ಎಲೆಕ್ಟ್ರಿಕ್‌ ಆವೃತ್ತಿ ಬಿಡುಗಡೆ ಮಾಡಿದೆ. 

ಇ–ಕೆಯುವಿ 100 ದೇಶದಲ್ಲೇ ಕೈಗೆಟುಕುವ ಬೆಲೆಯ ಪ್ರಯಾಣಿಕರ ಎಲೆಕ್ಟ್ರಿಕ್‌ ವಾಹನಗಳಲ್ಲಿ ಮುಂಚೂಣಿಯಲ್ಲಿರುವುದಾಗಿ ಕಂಪನಿ ಹೇಳಿಕೊಂಡಿದ್ದು, ಆರಂಭಿಕ ಬೆಲೆ ₹8.25 ಲಕ್ಷ ನಿಗದಿಯಾಗಿದೆ.

15.9 ಕಿ.ವೋಲ್ಟ್ ಮೋಟಾರ್‌ ಹೊಂದಿರುವ ಕೆಯುವಿ 100, 40 ಕಿ.ವ್ಯಾಟ್‌ ಪವರ್‌ ಔಟ್‌ಪುಟ್‌ ಮತ್ತು 120 ನ್ಯೂಟನ್‌ ಮೀಟರ್‌ ಟಾರ್ಕ್‌ ಹೊಮ್ಮಿಸುವ ಸಾಮರ್ಥ್ಯ ಹೊಂದಿದೆ. ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಅಳವಡಿಸಲಾಗಿರುವ ಈ ಕಾಂಪ್ಯಾಕ್ಟ್‌ ಎಸ್‌ಯುವಿ ಒಮ್ಮೆ ಪೂರ್ಣ ಚಾರ್ಜ್‌ ಆಗಿರುವ ಬ್ಯಾಟರಿಯೊಂದಿಗೆ 147 ಕಿ.ಮೀ ದೂರ ಕ್ರಮಿಸಬಹುದಾಗಿದೆ. ಫಾಸ್ಟ್‌ ಚಾರ್ಜಿಂಗ್‌ ಆಯ್ಕೆಯಲ್ಲಿ 60 ನಿಮಿಷಗಳಲ್ಲಿ ಶೇ 80ರಷ್ಟು ಜಾರ್ಜ್‌ ಆಗಬಲ್ಲದು. 

ಲಿಕ್ವಿಡ್‌ ಕೂಲ್‌ ಬ್ಯಾಟರಿ ಪ್ಯಾಕ್‌, ಆಟೋಟ್ರಾನ್ಸ್‌ಮಿಷನ್‌ ಹಾಗೂ ಡಿಜಿಟಲ್‌ ಸಂಪರ್ಕಿತ ಆಯ್ಕೆಗಳನ್ನು ಒಳಗೊಂಡಿದೆ. 

ಮಹೀಂದ್ರಾ ಪುಟ್ಟ ಎಲೆಕ್ಟ್ರಿಕ್‌ ಕಾರು 'ಆಟಂ'

ಪರಿಸರ ಸ್ನೇಹಿ ಮತ್ತು ಶಕ್ತಿಯುತ ಎಸ್‌ಯುವಿ ಚಾಲನೆ ಮಾಡುವ ಅನುಭವವನ್ನು ಇ–ಕೆಯುವಿ 100 ನೀಡಲಿದೆ ಎನ್ನುತ್ತಾರೆ ಮಹೀಂದ್ರಾ ಕಂಪನಿಯ ಎಲೆಕ್ಟ್ರಿಕ್‌ ವಾಹನಗಳ ಅಭಿವೃದ್ಧಿ ವಿಭಾಗದ ಆಶಿಶ್‌ ಮಲಿಕ್‌. 

ಎಕ್ಸ್‌ಯುವಿ 300 ಮಾದರಿಯ ಎಲೆಕ್ಟ್ರಿಕ್‌ ಆವೃತ್ತಿಯನ್ನೂ ಪ್ರದರ್ಶಿಸಲಾಗಿದೆ. 2021ರ ದ್ವಿತಿಯಾರ್ಧದಲ್ಲಿ ಶಕ್ತಿಶಾಲಿ ಇ–ಎಕ್ಸ್‌ಯುವಿ 300 ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.

ಮಹೀಂದ್ರಾ ಸಮೂಹದ ಮತ್ತೊಂದು ಎಲೆಕ್ಟ್ರಿಕ್‌ ಕಾರು, ನಗರ ಪ್ರದೇಶಗಳಲ್ಲಿ ಸಂಚಾರಕ್ಕೆ ಸೂಕ್ತವಾಗುವ 'ಆಟಂ' ಹಾಗೂ ಪರಿವರ್ತಿಸಬಹುದಾದ ರೂಫ್‌ಟಾಪ್‌ ಹೊಂದಿರುವ ಎಲೆಕ್ಟ್ರಿಕ್‌ ಕಾನ್ಸೆಪ್ಟ್‌ ಕಾರು 'ಫನ್‌ಸ್ಟರ್' ಸಹ ಪ್ರದರ್ಶಿಸಲಾಗಿದೆ. 

ಫನ್‌ಸ್ಟರ್‌ 230 ಕಿ.ವ್ಯಾಟ್‌ ಶಕ್ತಿ ಹೊಮ್ಮಿಸುತ್ತದೆ ಹಾಗೂ ಗಂಟೆಗೆ ಗರಿಷ್ಠ 200 ಕಿ.ಮೀ. ದೂರ ಕ್ರಮಿಸಬಲ್ಲದು. ಶೂನ್ಯದಿಂದ ಗಂಟೆಗೆ 100 ಕಿ.ಮೀ ವೇಗವನ್ನು 5 ಸೆಕೆಂಡ್‌ಗಳಲ್ಲಿ ತಲುಪಬಹುದಾಗಿದೆ. ಆಟೋ ಎಕ್ಸ್‌ಪೊದಲ್ಲಿ ಮಹೀಂದ್ರಾ ಒಟ್ಟು 18 ವಾಹನಗಳನ್ನು ಪ್ರದರ್ಶಿಸಿದೆ. 

ಶಕ್ತಿಶಾಲಿ ಎಲೆಕ್ಟ್ರಿಕ್‌ ಕಾನ್ಸೆಪ್ಟ್ ಕಾರು 'ಫನ್‌ಸ್ಟರ್'

ತಂತ್ರಜ್ಞಾನ ಅಭಿವೃದ್ಧಿ, ಅಗತ್ಯ ಸೌಕರ್ಯಗಳ ನಿರ್ಮಾಣ ಹಾಗೂ ತಯಾರಿಕೆ ಸೇರಿದಂತೆ ಎಲೆಕ್ಟ್ರಿಕ್‌ ವಾಹನಗಳ ಅಭಿವೃದ್ಧಿಗಾಗಿಯೇ ಮಹೀಂದ್ರಾ ಸುಮಾರು ₹1,700 ಕೋಟಿ ಹೂಡಿಕೆ ಮಾಡಿದೆ. ಬೆಂಗಳೂರಿನಲ್ಲಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಹಾಗೂ ಪುಣೆಯಲ್ಲಿ ತಯಾರಿಕಾ ಘಟಕಕ್ಕಾಗಿ ₹500 ಕೋಟಿ ಹೂಡಿಕೆ ಮಾಡುತ್ತಿರುವುದಾಗಿ ಕಂಪನಿ ತಿಳಿಸಿದೆ.

ಲಿಥಿಯಮ್‌ ಬ್ಯಾಟರಿ ಚಾಲಿತ ಮೂರು ಚಕ್ರಗಳ 'ತ್ರಿಯೊ' ಆಟೊ ಬಿಡುಗಡೆಗೂ ಸಿದ್ಧತೆ ನಡೆಸಿದೆ. ಬ್ಯಾಟರಿ ಹೊರತು ಪಡಿಸಿ ಎಲ್ಲವನ್ನೂ ದೇಶೀಯವಾಗಿಯೇ ನಿರ್ಮಿಸಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು