ಶನಿವಾರ, ಡಿಸೆಂಬರ್ 4, 2021
26 °C

ಟಾಟಾದ ಹೊಸ 'ಪಂಚ್‌' ಬಿಡುಗಡೆ: ಆರಂಭಿಕ ಬೆಲೆ ₹5.49 ಲಕ್ಷ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಟಾಟಾ ಮೋಟಾರ್ಸ್‌ ಸೋಮವಾರ ಸಬ್‌–ಕಾಂಪ್ಯಾಕ್ಟ್‌ ಎಸ್‌ಯುವಿ 'ಪಂಚ್‌' (Punch) ಬಿಡುಗಡೆ ಮಾಡಿದ್ದು, ಆರಂಭಿಕ ಬೆಲೆ ₹5.49 ಲಕ್ಷ ನಿಗದಿಯಾಗಿದೆ.

ಭಾರತ, ಇಂಗ್ಲೆಂಡ್‌ ಹಾಗೂ ಇಟಲಿಯ ಟಾಟಾ ಮೋಟಾರ್ಸ್‌ ಸ್ಟುಡಿಯೊಗಳಲ್ಲಿ ಈ ಹೊಸ ಸಬ್‌–ಕಾಂಪ್ಯಾಕ್ಟ್‌ ಎಸ್‌ಯುವಿಯ ವಿನ್ಯಾಸ ಮಾಡಲಾಗಿದೆ. ಚಿಕ್ಕ ಗಾತ್ರವಿದ್ದರೂ ಹೆಚ್ಚಿನ ಒಳಾಂಗಣ ಸ್ಥಳಾವಕಾಶ, ಸುರಕ್ಷತೆ, ಸಾಮರ್ಥ್ಯ ಹಾಗೂ ಹೊಸ ಆಯ್ಕೆಗಳನ್ನು ಬಯಸುವ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ 'ಪಂಚ್‌' ಅಭಿವೃದ್ಧಿ ಪಡಿಸಲಾಗಿದೆ.

ಮ್ಯಾನುಯಲ್‌ ಮತ್ತು ಆಟೊಮ್ಯಾಟಿಕ್‌ ಎರಡೂ ಆಯ್ಕೆಗಳಿರುವ 1.2 ಲೀಟರ್‌ ಪೆಟ್ರೋಲ್‌ ಎಂಜಿನ್‌ ಒಳಗೊಂಡಿದೆ. ಟಾಟಾ ಮೋಟಾರ್ಸ್‌ ಪ್ರಕಾರ, ಈ ಹೊಸ ವಾಹನವು ಪ್ರತಿ ಲೀಟರ್‌ ಪೆಟ್ರೋಲ್‌ಗೆ 18.82ರಿಂದ 18.97 ಕಿ.ಮೀ. ದೂರ ಕ್ರಮಿಸುತ್ತದೆ.

ಜಿಎನ್‌ಸಿಎಪಿ ಕ್ರಾಶ್‌ಟೆಸ್ಟ್‌ನಲ್ಲಿ 'ಪಂಚ್‌' 5 ಸ್ಟಾರ್‌ಗಳ ರೇಟಿಂಗ್ ಪಡೆದಿದೆ. ಅಂದರೆ, ಅತ್ಯುತ್ತಮ ಸುರಕ್ಷತಾ ಮಟ್ಟವನ್ನು ಹೊಂದಿದೆ. ಎತ್ತರದ ಸೀಟ್‌ಗಳು, ಹೆಚ್ಚಿನ ಗ್ರೌಂಡ್‌ ಕ್ಲಿಯರೆನ್ಸ್‌ ಹಾಗೂ 370 ಮಿಮೀ ವಾಟರ್‌ ವೇಡಿಂಗ್‌ ಸಾಮರ್ಥ್ಯದಿಂದಾಗಿ ನೀರು ತುಂಬಿದ ಮತ್ತು ಕಚ್ಚಾ ರಸ್ತೆಗಳಲ್ಲೂ ಸಂಚರಿಸಲು ಅನುವಾಗಲಿದೆ.

'ಪಂಚ್‌ ಮೂಲಕ ನಾವು ಹೊಸ ವರ್ಗವನ್ನೇ ಸೃಷ್ಟಿಸಿದ್ದೇವೆ. ಎಸ್‌ಯುವಿ ಗುಣಗಳಿರುವ ಚಿಕ್ಕ ಗಾತ್ರದ ಕಾರುಗಳ ಅಗತ್ಯಕ್ಕೆ ತಕ್ಕಂತೆ ಇದನ್ನು ರೂಪಿಸಲಾಗಿದೆ' ಎಂದು ಟಾಟಾ ಮೋಟಾರ್ಸ್‌ನ ಪ್ರಯಾಣಿಕ ವಾಹನಗಳ ಬಿಸಿನೆಸ್‌ ಘಟಕದ ಅಧ್ಯಕ್ಷ ಶೈಲೇಶ್‌ ಚಂದ್ರ ಹೇಳಿದ್ದಾರೆ.

ಆಲ್ಟ್ರೋಜ್‌ ಮತ್ತು ನೆಕ್ಸಾನ್‌ ನಂತರ ಕ್ರಾಶ್‌ಟೆಸ್ಟ್‌ನಲ್ಲಿ ಅತ್ಯುತ್ತಮ ರೇಟಿಂಗ್‌ ಪಡೆದಿರುವ ಟಾಟಾ ಮೋಟಾರ್ಸ್‌ನ ಮೂರನೇ ಕಾರು ಪಂಚ್‌.

ಇದನ್ನೂ ಓದಿ– ಟಾಟಾ ಮೋಟರ್ಸ್: ಚಿಕ್ಕಗಾತ್ರದ ನೈಜ ಎಸ್‌ಯುವಿ ಪಂಚ್‌ ಅನಾವರಣ

ಆರಂಭಿಕ ಬೆಲೆ ₹5.49 ಲಕ್ಷ

ಟಾಟಾ ಪಂಚ್‌ ಬೇಸಿಕ್‌ ಮಾದರಿಗೆ ₹5.49 ಲಕ್ಷ (ಎಕ್ಸ್‌–ಷೋರೂಂ) ನಿಗದಿಯಾಗಿದೆ. ಅಕಂಪ್ಲಿಷ್ಡ್‌, ಅಡ್ವೆಂಚರ್‌, ಕ್ರಿಯೇಟಿವ್‌ ಹಾಗೂ ಪ್ಯೂರ್‌ –ಒಟ್ಟು ನಾಲ್ಕು ಮಾದರಿಗಳಲ್ಲಿ ಪಂಚ್‌ ಲಭ್ಯವಿದ್ದು, ಗರಿಷ್ಠ ಬೆಲೆ ₹8.49 ಲಕ್ಷವಿದೆ. ಏಳು ಭಿನ್ನ ಬಣ್ಣಗಳಲ್ಲಿ ಕಾರು ತಯಾರಿಸಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು