ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಲಾದ ಚಾಲಕರಹಿತ ರೋಬೊ ಟ್ಯಾಕ್ಸಿ

Last Updated 20 ಜೂನ್ 2019, 10:35 IST
ಅಕ್ಷರ ಗಾತ್ರ

ವಿಶ್ವದ ಜನಪ್ರಿಯ ವಿದ್ಯುತ್‌ ಚಾಲಿತ (ಎಲೆಕ್ಟ್ರಿಕ್‌) ಕಾರು ತಯಾರಿಕಾ ಕಂಪನಿ ಟೆಸ್ಲಾ ಮೋಟರ್ಸ (Tesla Motors) ಇನ್ನೊಂದು ವರ್ಷದಲ್ಲಿ ಅಮೆರಿಕದ ರಸ್ತೆಗಳಲ್ಲಿ ಸ್ವಯಂಚಾಲಿತ ರೋಬೊ–ಟ್ಯಾಕ್ಸಿಗಳನ್ನು ಪರಿಚಯಿಸುವುದಾಗಿ ಹೇಳಿದೆ. ಅಮೆರಿಕದಲ್ಲಿ ಕಳೆದೊಂದು ದಶಕದಿಂದ ಇಂತಹ ಚಾಲಕ ರಹಿತ ಕಾರುಗಳು ಬಳಕೆಯಲ್ಲಿವೆ. ಆದರೆ, ಇಂತಹ ಕಾರುಗಳು ಗ್ರಾಹಕರಿಗೆ ಮುಕ್ತವಾಗಿ ಲಭ್ಯವಿಲ್ಲ. ಹಲವು ಒಪ್ಪಂದಗಳ ನಂತರವೇ ಈ ಮಾದರಿಯ ಕಾರನ್ನು ಕಂಪನಿ ಮಾರಾಟ ಮಾಡುತ್ತದೆ.

ಟೆಸ್ಲಾ ಕಂಪನಿಯ ಕಾರಿನಲ್ಲಿರುವ ಸ್ವಯಂಚಾಲಿತ ವ್ಯವಸ್ಥೆಯನ್ನು ಆಟೊಪೈಲಟ್‌ ಎಂದು ಕರೆಯಲಾಗುತ್ತದೆ. ಇಂತಹ ತಂತ್ರಜ್ಞಾನ ಹೊಂದಿರುವ ಕಾರುಗಳನ್ನು ಸಮೂಹ ಸಾರಿಗೆ ವ್ಯವಸ್ಥೆಯಾಗಿ ಜನಪ್ರಿಯಗೊಳಿಸಲು ಕಂಪನಿ ಯೋಜನೆ ರೂಪಿಸಿದೆ. ಇದರ ಭಾಗವಾಗಿ ರೂಪುಗೊಂಡ ಯೋಜನೆಯೇ ರೋಬೊ–ಟ್ಯಾಕ್ಸಿ.

ಸ್ವಂತ ಕಾರು ಮಾಲೀಕನಾಗುವ ಬದಲು, ‘ಸಾರಿಗೆಯನ್ನು ಒಂದು ಸೇವೆ’ಯಾಗಿ (ಟಿಎಎಎಸ್‌) ಪಡೆಯಲು ಬಯಸುವ ಗ್ರಾಹಕರನ್ನು ಗಮನದಲ್ಲಿ ಇಟ್ಟುಕೊಂಡು ರೋಬೊ ಟ್ಯಾಕ್ಸಿಗಳು ರಸ್ತೆಗಿಳಿಯಲಿವೆ. ರಸ್ತೆ ಸುರಕ್ಷತೆ, ವಾಹನ ದಟ್ಟಣೆ, ಇಂಧನ ಮಿತ ಬಳಕೆ ಮತ್ತು ನಿಲುಗಡೆ ಈ ನಾಲ್ಕೂ ವಿಷಯಗಳಲ್ಲಿ ಈ ರೋಬೊ ಕ್ಯಾಬ್‌ಗಳು, ಚಾಲಕ ಸಹಿತ ಟ್ಯಾಕ್ಸಿಗಳನ್ನು ಹಿಂದಿಕ್ಕಲಿವೆ. ಇದರ ಗರಿಷ್ಠ ಲಾಭವು ಗ್ರಾಹಕನಿಗೆ ವರ್ಗಾವಣೆಯಾಗಲಿದೆ.

ಮಹಾ ನಗರಗಳಲ್ಲಿ ಚಾಲಕ ಸಹಿತ ಟ್ಯಾಕ್ಸಿ ಸೇವೆಗೆ ಸರಾಸರಿ 10 ಕಿ.ಮೀಗೆ, ಗ್ರಾಹಕ ಸರಾಸರಿ ₹ 100 ರಿಂದ ₹ 120 ಪಾವತಿಸಬೇಕಾಗುತ್ತದೆ. ರೋಬೊ ಕ್ಯಾಬ್‌ನಲ್ಲಾದರೆ ಈ ಮೊತ್ತ ₹ 50 ರಿಂದ ₹ 60ಕ್ಕೆ ತಗ್ಗುತ್ತದೆ.

ಸಾಂಪ್ರದಾಯಿಕ ಪೆಟ್ರೋಲ್‌, ಡೀಸೆಲ್‌ ವಾಹನಗಳಂತೆ ಇವುಗಳು ಪರಿಸರಕ್ಕೆ ಹಾನಿಕಾರಕವಾದ ಇಂಗಾಲವನ್ನೂ ಉಗುಳುವುದಿಲ್ಲ. ಇದರಿಂದ ಪರಿಸರವೂ ಸ್ವಚ್ಛವಾಗಿ ಉಳಿಯಲಿದೆ. ಜತೆಗೆ ವಾಹನದ ಗಾತ್ರವೂ ಚಿಕ್ಕದಿರುವುದರಿಂದ ನಿಲುಗಡೆಯೂ ಸುಲಭ.

‘ಟೆಸ್ಲಾ ಕಾರುಗಳನ್ನು ಖರೀದಿಸುವುದೆಂದರೆ ವ್ಯಕ್ತಿಯೊಬ್ಬರು ತನ್ನ ಸ್ವಂತ ಅಗತ್ಯಕ್ಕಾಗಿ ಕುದುರೆಯೊಂದನ್ನು ಖರೀದಿಸಿದಂತೆ’ ಎನ್ನುತ್ತಾರೆ ಈ ಕಂಪನಿಯ ಸಿಇಒ ಎಲಾನ್‌ ಮಸ್ಕ್. ಇದನ್ನು ಗಮನದಲ್ಲಿಟ್ಟುಕೊಂಡು ಟೆಸ್ಲಾ ಮಾಡೆಲ್ 3 ಸೆಡಾನ್‌ ಕಾರನ್ನು ಅಮೆರಿಕ ಹೊರಗಿನ ಮಾರುಕಟ್ಟೆಗೂ ಪರಿಚಯಿಸಲು ಸಿದ್ಧತೆ ನಡೆಸಿದೆ. ಐವರು ಒಟ್ಟಿಗೆ ಕುಳಿತು ಪ್ರಯಾಣಿಸಬಹುದಾದ, ಒಮ್ಮೆ ಚಾರ್ಜ್‌ ಮಾಡಿದರೆ 354 ಕಿ.ಮೀ ದೂರ ಕ್ರಮಿಸಬಹುದಾದ, ಅಂದಾಜು ₹ 25 ಲಕ್ಷ ಮೌಲ್ಯದ ಈ ಸ್ವಯಂಚಾಲಿತ ಕಾರು ಸದ್ಯ ಅಮೆರಿಕದಲ್ಲಿ ಅತ್ಯಂತ ಬೇಡಿಕೆ ಇರುವ ಎಲೆಕ್ಟ್ರಿಕ್‌ ಕಾರುಗಳಲ್ಲಿ ಒಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT