ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಾಫಿಕ್‌ ಅವಾಂತರ ತಪ್ಪಿಸಲು ಆಟೊ ರಿಕ್ಷಾ ರೂಪಾಂತರ!

ಎಲೆಕ್ಟ್ರಿಕ್ ಆಟೊ
Last Updated 23 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಓಡಾಡುತ್ತಿರುವ ಸುಮಾರು 2 ಲಕ್ಷ ಆಟೊಗಳನ್ನು ಎಲೆಕ್ಟ್ರಿಕ್‌ ಆಟೊಗಳಾಗಿ ಪರಿವರ್ತಿಸಿದರೆ ನಗರದ ಪರಿಸರದಲ್ಲಿನ 7.4 ಲಕ್ಷ ಟನ್‌ ಇಂಗಾಲ ಡೈಆಕ್ಸೈಡ್‌ (ಕಾರ್ಬನ್) ಮಾಲಿನ್ಯವನ್ನು ಕಡಿಮೆ ಮಾಡಬಹುದು ಎಂದು ಯುರೋಪ್‌ ಒಕ್ಕೂಟ ಅಧ್ಯಯನ ವರದಿ ಸಲಹೆ ಮಾಡಿದೆ.

ರಾಜ್ಯ ಸಾರಿಗೆ ಇಲಾಖೆ ಎರಡು ಸ್ಟ್ರೋಕ್‍ ಆಟೊ ರಿಕ್ಷಾಗಳನ್ನು ನಿಷೇಧಿಸಿದೆ. ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ವಾರ್ಷಿಕ 0.11 ಮಿಲಿಯನ್‌ ಟನ್ ಕಾರ್ಬನ್ ಡೈ ಆಕ್ಸೈಡ್‌, 114.5 ಮಿಲಿಯನ್‌ ಟನ್ ಪಿಎಂ10 ಮತ್ತು 37.6 ಮಿಲಿಯನ್‌ ಟನ್ ನೈಟ್ರೋಜನ್ ಡೈಆಕ್ಸೈಡ್ ಮಾಲಿನ್ಯ ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟಿದೆ.

ಬೆಂಗಳೂರಿನಲ್ಲಿ ಈಗ ದಟ್ಟಣೆಯ ಸಮಯದಲ್ಲಿ ವಾಹನಗಳು ಗಂಟೆಗೆ ಸರಾಸರಿ ಕೇವಲ 15 ಕಿ.ಮೀ. ವೇಗದಲ್ಲಿ ಮಾತ್ರ ಸಾಗುತ್ತಿವೆ. ಇದನ್ನು 40 ಕಿ.ಮೀಗೆ ಏರಿಸಲು ಮೆಟ್ರೋ ನಿಲ್ದಾಣಗಳಲ್ಲಿ ಸಾರ್ವಜನಿಕ ಸಾರಿಗೆ ಸೌಲಭ್ಯಕ್ಕೆ ಒತ್ತು ನೀಡಬೇಕು. ಆಟೊ ರಿಕ್ಷಾಗಳನ್ನು ನಿಯೋಜಿಸಿ ಕೊನೆಯ ತಾಣದವರೆಗೆ ಅವುಗಳ ಸೌಲಭ್ಯ ದೊರೆಯುವಂತಾಗಬೇಕು. ಮುಖ್ಯವಾಗಿ ಜನರು ಧೈರ್ಯದಿಂದ ಇವುಗಳನ್ನು ಬಳಸುವಂತಾಗಬೇಕು. ಇದರಿಂದ ನಗರ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ 17 ಲಕ್ಷಗಳಷ್ಟು ಕಡಿಮೆಯಾಗಲಿದೆ ಎಂದು ಅಧ್ಯಯನ ತಿಳಿಸಿದೆ.

ಯುರೋಪ್‌ ಒಕ್ಕೂಟದ‘ನಮ್ಮ ಆಟೊ’

2016ರಲ್ಲಿ ಯುರೋಪ್ ಒಕ್ಕೂಟದ ಸ್ವಿಚ್ ಏಷ್ಯಾ ಯೋಜನೆಯನ್ನು ನಗರದಲ್ಲಿ ಅನುಷ್ಠಾನಗೊಳಿಸಲಾಯಿತು. ಸುಸ್ಥಿರ ಆಟೊ ರಿಕ್ಷಾ ವ್ಯವಸ್ಥೆ ಜಾರಿಗೊಳಿಸುವುದು ಈ ಯೋಜನೆಯ ಉದ್ದೇಶ. ಯುರೋಪ್ ಒಕ್ಕೂಟ ಇದಕ್ಕೆ ನೆರವು ನೀಡುತ್ತಿದೆ.

ಯೋಜನೆಯ ಅಡಿ ‘ನಮ್ಮ ಆಟೊ’ ಹೆಸರಿನಡಿ ಮೂರು ವರ್ಷಗಳವರೆಗೆ ಅಧ್ಯಯನ ನಡೆಸಿ ಆಟೊ ರಿಕ್ಷಾಗಳ ಬಳಕೆ ಮತ್ತು ಕಾರ್ಯವೈಖರಿಯಲ್ಲಿ ಬದಲಾವಣೆ ತಂದು ನಗರದ ಸಂಚಾರ ಸಮಸ್ಯೆ, ವಾಯು ಮಾಲಿನ್ಯವನ್ನು ನಿಯಂತ್ರಣದಲ್ಲಿಟ್ಟು, ಸವಾರರ ಸುರಕ್ಷತೆಗೆ ಒತ್ತು ನೀಡುವ ಶಿಫಾರಸು ಮಾಡಲಾಗಿದೆ.

ಪರಿಸರಕ್ಕೆ ಪೂರಕವಾದ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅನುಕೂಲಕರವಾದ ಕಡಿಮೆ ಮಾಲಿನ್ಯ ಹೊರಸೂಸುವ ಅಥವಾ ಎಲೆಕ್ಟ್ರಿಕ್ ರಿಕ್ಷಾಗಳನ್ನು ಪರಿಚಯಿಸುವುದು ‘ನಮ್ಮ ಆಟೊ’ ಅಧ್ಯಯನದ ಗುರಿಗಳಲ್ಲಿ ಒಂದು.

2 ಲಕ್ಷ ಆಟೊ!

ಬೆಂಗಳೂರಿನಲ್ಲಿ ಸುಮಾರು 2 ಲಕ್ಷ ಆಟೊ ರಿಕ್ಷಾಗಳಿವೆ. ನಗರದ ಒಟ್ಟು ವಾಹನಗಳ ಸಂಖ್ಯೆಯಲ್ಲಿ ಇವುಗಳ ಪಾಲು ಕೇವಲ ಶೇ 2.5. ಆದರೆ, ಸಾರ್ವಜನಿಕ ಸಾರಿಗೆಯಲ್ಲಿ ಶೇ 10ರಷ್ಟು ಪಾಲನ್ನು ರಿಕ್ಷಾಗಳು ನಿಭಾಯಿಸುತ್ತವೆ.ಬೆಂಗಳೂರಿನ ಅನಿವಾರ್ಯ ಸಂಚಾರ ಸಾಧನಗಳಾಗಿರುವ ಆಟೊ ರಿಕ್ಷಾಗಳು ನಗರದ ಸಂಚಾರ ದಟ್ಟಣೆಯಲ್ಲೂ ಗಮನಾರ್ಹ ಪಾತ್ರ ವಹಿಸುತ್ತಿವೆ.

ಶಿಫಾರಸುಗಳು

1. ಪರಿಸರಕ್ಕೆ ಪೂರಕವಾದ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅನುಕೂಲಕರವಾದ ಕಡಿಮೆ ಮಾಲಿನ್ಯ ಹೊರಸೂಸುವ ಅಥವಾ ಎಲೆಕ್ಟ್ರಿಕ್ ರಿಕ್ಷಾಗಳನ್ನು ಪರಿಚಯಿಸಬೇಕು

2. ಪರಿಸರ ಸ್ನೇಹಿ ರಿಕ್ಷಾಗಳಿಗೆ ಬೇಡಿಕೆ ಕುದುರಿಸುವುದು ಮತ್ತು ಅವುಗಳ ಬಳಕೆ ಉತ್ತೇಜಿಸಲು ನಿಯಮ ರೂಪಿಸಬೇಕು

3. ರಿಕ್ಷಾ ಚಾಲಕರ ಆರ್ಥಿಕ ಸಬಲೀಕರಣಕ್ಕಾಗಿ ರಾಜ್ಯಮಟ್ಟದ ಸಹಕಾರಿ ಸಂಘದ ರಚನೆ ಮಾಡಬೇಕು

4. ಕಂಬಷನ್‌ ಎಂಜಿನ್‌, 2 ಸ್ಟ್ರೋಕ್‌ ಎಂಜಿನ್‌ ಆಟೊಗಳನ್ನು ನಿಷೇಧಿಸಬೇಕು

5. ಮೆಟ್ರೋ ನಿಲ್ದಾಣಗಳಲ್ಲಿ ಸಾರ್ವಜನಿಕ ಸಾರಿಗೆ ಸೌಲಭ್ಯಕ್ಕೆ ಒತ್ತು ನೀಡಬೇಕು.

ಹಳೆ ಆಟೊ ಅಪಾಯಕಾರಿ

ಸಾಂಪ್ರದಾಯಿಕ ಆಟೊ ರಿಕ್ಷಾಗಳು ದ್ರವೀಕೃತ ಪೆಟ್ರೋಲಿಯಂ ಅನಿಲದ ಮೇಲೆ ಸಂಚರಿಸುವ ಕಂಬಷನ್ ಎಂಜಿನ್‍ಗಳನ್ನು ಹೊಂದಿದ್ದು ಕಾರ್ಬನ್ ಡೈಆಕ್ಸೈಡ್, ನೈಟ್ರೋಜನ್ ಡೈ ಆಕ್ಸೈಡ್ ಮತ್ತು ಪಿಎಂ10ನಂಥ ಅಪಾಯಕಾರಿ ರಾಸಾಯನಿಕಗಳನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ. ಇಂಥ ಆಟೊ ರಿಕ್ಷಾಗಳಿಂದಲೇ ನಗರದ ವಾಯುಮಾಲಿನ್ಯ ಹೆಚ್ಚುತ್ತಿದ್ದು, ನಾಗರಿಕರ ಆರೋಗ್ಯ ಅಪಾಯಕಾರಿ ಮಟ್ಟದಲ್ಲಿದೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT