ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಮಾರುಕಟ್ಟೆಗೆ ಕಿಯಾ ಸೆಲ್ಟೋಸ್‌

Last Updated 17 ಜುಲೈ 2019, 19:30 IST
ಅಕ್ಷರ ಗಾತ್ರ

ದಕ್ಷಿಣ ಕೊರಿಯಾದ ಆಟೊಮೊಬೈಲ್ ಕಂಪನಿ ಕಿಯಾ ಮೋಟರ್ಸ್‌ ಭಾರತದ ಮಾರುಕಟ್ಟೆಗೆ ತನ್ನ ಸೆಲ್ಟೋಸ್ ಎಸ್‌ಯುವಿ ಬಿಡುಗಡೆ ಮಾಡಿದೆ. ಇನ್ನೂ ನಾಲ್ಕು ಮಾದರಿಗಳನ್ನು ಮುಂದಿನ ಎರಡು ವರ್ಷಗಳಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುವ ಆಲೋಚನೆ ಈ ಕಂಪನಿಯದ್ದು.

ಭಾರತದ ಮಾರುಕಟ್ಟೆಯನ್ನು ಗಮನದಲ್ಲಿ ಇರಿಸಿಕೊಂಡೇ ಸೆಲ್ಟೋಸ್ ತಯಾರಿಸಿದೆ. ಈ ಕಾರುಗಳನ್ನು ಆಂಧ್ರಪ್ರದೇಶದ ಅನಂತಪುರದಲ್ಲಿ ಇರುವ ಕಂಪನಿಯ ಘಟಕದಲ್ಲಿ ಸಿದ್ಧಪಡಿಸಲಾಗುತ್ತದೆ. ಇಲ್ಲಿಂದ ಮಧ್ಯಪ್ರಾಚ್ಯ, ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಏಷ್ಯಾದ ಕೆಲವು ದೇಶಗಳಿಗೂ ರಫ್ತು ಮಾಡುವುದು ಕಂಪನಿಯ ಉದ್ದೇಶವಾಗಿದೆ.

‘ನಮ್ಮ ಪಾಲಿಗೆ ಭಾರತದಲ್ಲಿ ಕಾರು ತಯಾರಿಸುವ ಯೋಜನೆ ಮಹತ್ವದ್ದು. ಕಿಯಾ ಕಂಪನಿಯ ಭವಿಷ್ಯದ ಯಶಸ್ಸಿನಲ್ಲಿ ಭಾರತವು ಪ್ರಮುಖವಾಗಿರಬೇಕು ಎಂಬ ಉದ್ದೇಶದಿಂದ ಇಲ್ಲಿ ಭಾರಿ ‍ಪ್ರಮಾಣದಲ್ಲಿ ನಮ್ಮ ಶಕ್ತಿ ಹಾಗೂ ಸಂಪನ್ಮೂಲದ ವಿನಿಯೋಗ ಮಾಡಿದ್ದೇವೆ’ ಎನ್ನುತ್ತಾರೆ ಕಿಯಾ ಮೋಟರ್ಸ್‌ ಕಾರ್ಪೊರೇಷನ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹ್ಯಾನ್‌–ವೂ ಪಾರ್ಕ್‌.

ಒಟ್ಟಾರೆಯಾಗಿ ಕಿಯಾ ಕಂಪನಿಯು ಭಾರತದಲ್ಲಿ ₹ 13,800 ಕೋಟಿಗಳಷ್ಟು ಬಂಡವಾಳ ಹೂಡಿಕೆ ಮಾಡಿದೆ. ಇದರಲ್ಲಿ ಕಾರು ತಯಾರಿಕಾ ಘಟಕದ ಮೇಲಿನ ಹೂಡಿಕೆ ಸಹ ಸೇರಿದೆ. ಈ ಘಟಕವು ವಾರ್ಷಿಕ 3 ಲಕ್ಷ ಕಾರು ತಯಾರಿಸುವ ಸಾಮರ್ಥ್ಯ ಹೊಂದಿದೆ.

ಸಣ್ಣ ಗಾತ್ರದ ಎಸ್‌ಯುವಿ ಹಾಗೂ ಬಹೂಪಯೋಗಿ ಕಾರುಗಳನ್ನು ತಯಾರಿಸುವ ಆಲೋಚನೆ ಕೂಡ ಕಂಪನಿಯ ಮನಸ್ಸಿನಲ್ಲಿ ಇದೆ. ಭಾರತದ ಮಾರುಕಟ್ಟೆಯಲ್ಲಿ ಗಣನೀಯ ಪಾಲು ಹೊಂದುವುದು ಅದರ ಗುರಿಗಳಲ್ಲಿ ಒಂದು.

ಮೂರು ವರ್ಷಗಳ ಅವಧಿಯಲ್ಲಿ ಆರು ಮಾದರಿಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸುವ ಚಿಂತನೆ ನಡೆಸಿರುವುದಾಗಿ ಕಿಯಾ ಕಂಪನಿ ಮೊದಲು ಹೇಳಿತ್ತು. ಅಂದರೆ, ಪ್ರತಿ ಆರು ತಿಂಗಳಿಗೆ ಒಂದು ಮಾದರಿಯನ್ನು ಇಲ್ಲಿನ ಮಾರುಕಟ್ಟೆಗೆ ಪರಿಚಯಿಸುವುದು. ಇದರಲ್ಲಿ ಭಾರತದ ಮಾರುಕಟ್ಟೆಗೆಂದೇ ಸಿದ್ಧಪಡಿಸಲಾದ ವಿದ್ಯುತ್ ಚಾಲಿತ ಕಾರು ಕೂಡ ಸೇರಿದೆ.

ಕಂಪನಿಯು ಭಾರತದ ಮಾರುಕಟ್ಟೆಗಾಗಿ ರೂಪಿಸಿರುವ ಕಾರ್ಯತಂತ್ರದಲ್ಲಿ ಒಂದು ಗಮನಾರ್ಹ ಅಂಶ ಇದೆ. ಭಾರತದ ಕಾರು ಮಾರುಕಟ್ಟೆಯಲ್ಲಿ ಶೇಕಡ 70ರಷ್ಟು ಪಾಲು ಇರುವುದು ಕಾಂಪ್ಯಾಕ್ಟ್‌ ಕಾರುಗಳು. ಈ ಮಾದರಿಯ ಕಾರುಗಳನ್ನು ತಯಾರಿಸುವ ಉದ್ದೇಶ ಕಿಯಾ ಕಂಪನಿಗೆ ಇಲ್ಲ.

ಸೆಲ್ಟೋಸ್ ಎಸ್‌ಯುವಿ ಭಾರತದ ಗ್ರಾಹಕರನ್ನು ಸಂತೃಪ್ತಪಡಿಸುವಲ್ಲಿ ಯಶಸ್ಸು ಕಂಡರೆ ಆ ಕಾರುಗಳನ್ನು ಮಧ್ಯಪ್ರಾಚ್ಯ, ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಏಷ್ಯಾದ ಇತರ ದೇಶಗಳಲ್ಲಿ ಕೂಡ ಮಾರಾಟ ಮಾಡಬಹುದು ಎನ್ನುವುದು ಪಾರ್ಕ್‌ ಅವರ ಧೋರಣೆಯಾಗಿದೆ.

ಈ ಮಾದರಿಯ ಕಾರುಗಳು ಬಿಎಸ್‌–4 ಮಾದರಿಯ ಪೆಟ್ರೋಲ್‌ ಹಾಗೂ ಡೀಸೆಲ್‌ ಎಂಜಿನ್‌ ಹೊಂದಿರಲಿವೆ. ಅಲ್ಲದೆ, ಆಟೊಮ್ಯಾಟಿಕ್‌ ಮತ್ತು ಮ್ಯಾನುವಲ್‌ ಟ್ರಾನ್ಸ್‌ಮಿಷನ್‌ ಮಾದರಿಗಳಲ್ಲಿ ಲಭ್ಯವಿರಲಿವೆ. ಸೆಲ್ಟೊಸ್‌ ಕಾರುಗಳ ಬೆಲೆ ₹ 11 ಲಕ್ಷದಿಂದ ₹ 17 ಲಕ್ಷದ ನಡುವೆ ಇರಲಿದೆ.

‘ಕಿಯಾ ಮೋಟರ್ಸ್‌ನ ಒಟ್ಟಾರೆ ಬೆಳವಣಿಗೆಯ ದೃಷ್ಟಿಯಿಂದ ಭಾರತವು ಮಹತ್ವದ ಮಾರುಕಟ್ಟೆ. ಜಾಗತಿಕವಾಗಿ ನಮ್ಮ ಹೆಜ್ಜೆ ಗುರುತುಗಳನ್ನು ಇನ್ನಷ್ಟು ವಿಸ್ತರಿಸುವಲ್ಲಿ ಭಾರತದ ಮಾರುಕಟ್ಟೆಯು ಮುಖ್ಯ ಪಾತ್ರ ವಹಿಸಲಿದೆ’ ಎಂದು ‍‍ಪಾರ್ಕ್‌ ಹೇಳಿದ್ದಾರೆ.

6 ಏರ್‌ಬ್ಯಾಗ್‌, ಸುರಕ್ಷಿತ ಚಾಲನೆಗೆ ಹಿಲ್‌ ಸ್ಟಾರ್ಟ್‌ ಅಸಿಸ್ಟ್‌ ಕಂಟ್ರೋಲ್‌ (ಎಚ್‌ಎಸಿ), ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌ (ಇಎಸ್‌ಸಿ), ಆ್ಯಂಟಿ ಲಾಕ್‌ ಬ್ರೇಕಿಂಗ್‌ ಸಿಸ್ಟಂ (ಎಬಿಎಸ್‌) ವ್ಯವಸ್ಥೆ ಒಳಗೊಂಡಿದೆ. ಎಲ್ಲಾ ವೀಲ್‌ಗಳಿಗೂ ಡಿಸ್ಕ್‌ ಬ್ರೇಕ್‌ ಇದೆ.

ಬಿಎಸ್‌–6 ಎಂಜಿನ್‌: 1.6 ಲೀಟರ್‌ ಟರ್ಬೊ ಜಿಡಿಐ ಟರ್ಬೊಚಾರ್ಜ್ಡ್ ಪೆಟ್ರೋಲ್‌ ಮತ್ತು 1.6 ಲೀಟರ್ ಡೀಸೆಲ್‌ ಎಂಜಿನ್‌. ನಾರ್ಮಲ್‌, ಇಕೊ ಮತ್ತು ಸ್ಪೋರ್ಟ್‌ ಮೋಡ್‌ ಆಯ್ಕೆ ಮಾಡಿಕೊಳ್ಳಬಹುದಾಗಿದೆ.ಎಲ್ಲಾ ಆವೃತ್ತಿಗಳಲ್ಲಿಯೂ 6 ಸ್ಪೀಡ್‌ ಮ್ಯಾನ್ಯುಯಲ್‌ ಗಿಯರ್‌ ಬಾಕ್ಸ್‌ ಇರಲಿದೆ. ಪೆಟ್ರೋಲ್‌ ಎಂಜಿನ್‌ ಆಯ್ಕೆಯಲ್ಲಿ ಸಿವಿಟಿ ಅಥವಾ 7 ಸ್ಪೀಡ್‌ ಡ್ಯುಯಲ್‌ ಕ್ಲಚ್‌ ಟ್ರಾನ್ಸ್‌ಮಿಷನ್‌ (ಡಿಸಿಟಿ) ಆಯ್ಕೆ ಇದೆ. ಡೀಸೆಲ್‌ ಎಂಜಿನ್‌ನಲ್ಲಿ 6 ಸ್ಪೀಡ್‌ ಟಾರ್ಕ್‌ ಕನ್ವರ್ಟರ್‌ ಆಟೊಮೆಟಿಕ್‌ ಗಿಯರ್‌ ಬಾಕ್ಸ್‌ ಆಯ್ಕೆ ಇದೆ.

ಯುವಿಒ ಕನೆಕ್ಟ್‌:ಮೊಬೈಲ್‌ನೊಂದಿಗೆ ಸಂಪರ್ಕಿಸಲು ಯುವಿಒ ಕನೆಕ್ಟ್‌ ಇದೆ. ಇದರಲ್ಲಿ ನ್ಯಾವಿಗೇಷನ್‌, ಸೇಫ್ಟಿ, ವೆಹಿಕಲ್‌ ಮ್ಯಾನೇಜ್‌ಮೆಂಟ್‌, ರಿಮೋಟ್‌ ಕಂಟ್ರೋಲ್‌ನಂತಹ 37 ಸ್ಮಾರ್ಟ್‌ ಫೀಚರ್‌ಗಳಿವೆ. ಏಳು ಬಣ್ಣಗಳಲ್ಲಿ ಲಭ್ಯ ಇರಲಿದೆ.

266 ಸೇಲ್ಸ್‌ ಪಾಯಿಂಟ್‌ ಮುತ್ತು ಆನ್‌ಲೈನ್‌ನಲ್ಲಿ ಬುಕಿಂಗ್‌ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT