ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411: ನಗರ ಪ್ರಯಾಣಕ್ಕೂ ಸೈ, ಅಡ್ವೆಂಚರ್ ಯಾನಕ್ಕೂ ಜೈ

Last Updated 21 ಏಪ್ರಿಲ್ 2022, 2:30 IST
ಅಕ್ಷರ ಗಾತ್ರ

ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ‘ರಾಯಲ್ ಎನ್‌ಫೀಲ್ಡ್‌’ ಈಗ ಹೊಸ ‘ಸ್ಕ್ರಾಮ್ 411 ಸಿಸಿ ಎಡಿವಿ ಕ್ರಾಸೋವರ್’ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

‘ನಗರ ಪ್ರದೇಶದ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಈ ದ್ವಿಚಕ್ರ ವಾಹನ ಬಿಡುಗಡೆ ಮಾಡಲಾಗಿದೆ. ದೈನಂದಿನ ನಗರ ಪ್ರಯಾಣ ಹಾಗೂ ಅಡ್ವೆಂಚರ್ ಯಾನ, ಪ್ರವಾಸಕ್ಕೂ ಅನುಕೂಲವಾಗುವಂತೆ ನೂತನ ದ್ವಿಚಕ್ರ ವಾಹನ ವಿನ್ಯಾಸಗೊಳಿಸಲಾಗಿದೆ’ ಎಂದು ಕಂಪನಿ ತಿಳಿಸಿದೆ. ‘ಪ್ರಜಾವಾಣಿ’ ಇತ್ತೀಚೆಗೆ ಈ ಬೈಕ್‌ನ ಟೆಸ್ಟ್‌ ಡ್ರೈವ್‌ ಮಾಡಿದೆ.

ರಾಯಲ್ ಎನ್‌ಫೀಲ್ಡ್‌ನ ಹಿಮಾಲಯನ್ ಸರಣಿಯ ಈ ಪವರ್ ಬೈಕ್ ಮೊದಲ ನೋಟದಲ್ಲೇ ಗಮನ ಸೆಳೆಯುವಂತಿದೆ. ರೈಡರ್ ಆಸನ ತಗ್ಗಿನಲ್ಲಿದ್ದು, ಹಿಂಬದಿಯ ಸೀಟು ತುಸು ಎತ್ತರದಲ್ಲಿದೆ. ಸಿಂಗಲ್‌ ಸೀಟ್‌ ಮಾದರಿಯ ಈ ಆಸನ ವ್ಯವಸ್ಥೆ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಿದೆ. ಜತೆಗೆ, ಆರಾಮದಾಯಕವಾಗಿದೆ. ರೈಡಿಂಗ್ ಹಾಗೂ ಹಿಂಬದಿಯ ಪ್ರಯಾಣಕ್ಕೂ ಹೇಳಿ ಮಾಡಿಸಿದಂತಿದೆ. ಹೆಡ್‌ಲೈಟ್‌ ಸುತ್ತ ಲೋಹದ ಕವಚವಿದ್ದು ಆಕರ್ಷಕವಾಗಿದೆ.

‘ಸ್ಕ್ರಾಮ್ 411’ರ ವಿನ್ಯಾಸದ ಕಡೆಗೇ ಕಂಪನಿಯು ಹೆಚ್ಚು ಗಮನ ಕೊಟ್ಟಿರುವುದು ಸ್ಪಷ್ಟವಾಗಿದೆ. ಯುವ ಗ್ರಾಹಕರನ್ನು ಸೆಳೆಯುವುದಕ್ಕಾಗಿಯೇ ಹೊಸ ವಿನ್ಯಾಸದ ಟಚ್ ನೀಡಿದಂತಿದೆ. ಹಿಮಾಲಯನ್‌ ಸರಣಿಯ ಇತರ ದ್ವಿಚಕ್ರ ವಾಹನಗಳಿಗೆ ಹೋಲಿಸಿದರೆ, ‘ಸ್ಕ್ರಾಮ್ 411’ರ ಹೆಡ್‌ಲ್ಯಾಂಪ್‌, ಟೇಲ್‌ ಲ್ಯಾಂಪ್‌, ಇಂಡಿಕೇಟರ್‌ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ಕಾಣಬಹುದು.

ಗ್ರಾಫೈಟ್ ಯೆಲ್ಲೋ, ಗ್ರಾಫೈಟ್ ರೆಡ್, ಗ್ರಾಫೈಟ್ ಬ್ಲೂ, ಸ್ಕೈಲೈನ್ ಬ್ಲೂ & ಬ್ಲೇಜಿಂಗ್ ಬ್ಲಾಕ್, ವೈಟ್ ಫ್ಲೇಮ್ & ಸಿಲ್ವರ್ ಬಣ್ಣಗಳಲ್ಲಿ ‘ಸ್ಕ್ರಾಮ್ 411’ ಲಭ್ಯವಿದೆ.

ಎಂಜಿನ್ ಸಾಮರ್ಥ್ಯ: ಎಂಜಿನ್ ಸಾಮರ್ಥ್ಯ ಮತ್ತು ದಕ್ಷತೆಯ ವಿಚಾರದಲ್ಲಿ ತನ್ನ ಹಳೆಯ ದ್ವಿಚಕ್ರ ವಾಹನಗಳಲ್ಲಿರುವ ಸಕಾರಾತ್ಮಕ ಅಂಶಗಳನ್ನು ‘ಸ್ಕ್ರಾಮ್ 411’ರಲ್ಲಿಯೂ ರಾಯಲ್ ಎನ್‌ಫೀಲ್ಡ್ ಉಳಿಸಿಕೊಂಡಿದೆ. ಈ ದ್ವಿಚಕ್ರ ವಾಹನವು 411 ಸಿಸಿ, ಸಿಂಗಲ್ ಸಿಲಿಂಡರ್, ಎಸ್‌ಒಎಚ್‌ಸಿ, ಏರ್‌ ಕೂಲ್ಡ್, ಫ್ಯುಯೆಲ್ ಇಂಜೆಕ್ಟೆಡ್ ಎಂಜಿನ್ ಒಳಗೊಂಡಿದೆ. ಗರಿಷ್ಠ 6500 ಆರ್‌ಪಿಎಂ ಸಾಮರ್ಥ್ಯವಿದೆ.

5 ಹಂತಗಳ ಗೇರ್ ಸಿಸ್ಟಂ ಹೊಂದಿರುವ ‘ಸ್ಕ್ರಾಮ್ 411’ ಸಮತಟ್ಟಾದ ರಸ್ತೆಯಲ್ಲಿ 4ರಿಂದ 5 ಸೆಕೆಂಡ್‌ಗಳಲ್ಲಿ 100 ಕಿ.ಮೀ. ವೇಗವನ್ನು ತಲುಪಬಲ್ಲ ಸಾಮರ್ಥ್ಯ ಹೊಂದಿದೆ. ಗಂಟೆಗೆ ನೂರು ಕಿಲೋಮೀಟರ್‌ಗೂ ಹೆಚ್ಚಿನ ವೇಗದಲ್ಲಿ ಚಲಿಸುತ್ತಿರುವಾಗಲೂ ಸ್ಥಿರವಾಗಿದ್ದು, ಥ್ರಿಲ್ಲಿಂಗ್ ಅನುಭವ ನೀಡುತ್ತದೆ. ರಾಯಲ್ ಎನ್‌ಫೀಲ್ಡ್‌ನ ಇತರ ಪವರ್ ಬೈಕ್‌ಗಳಿಗೆ ಹೋಲಿಸಿದರೆ, ಇದರಲ್ಲಿ ಸದ್ದು ತುಸು ಕಡಿಮೆಯೇ ಎನ್ನಬಹುದು.

ಉತ್ತಮ ಬ್ರೇಕಿಂಗ್ ವ್ಯವಸ್ಥೆ: ಮುಂಭಾಗದಲ್ಲಿ 300 ಎಂಎಂ ಡಿಸ್ಕ್, ಎರಡು ಪಿಸ್ಟನ್ ಫ್ಲೋಟಿಂಗ್ ಕ್ಯಾಲಿಪರ್ ಹಾಗೂ ಹಿಂಭಾಗದಲ್ಲಿ 240 ಎಂಎಂ ಡಿಸ್ಕ್, ಒಂದು ಪಿಸ್ಟನ್ ಫ್ಲೋಟಿಂಗ್ ಕ್ಯಾಲಿಪರ್ ಬ್ರೇಕ್ ಹೊಂದಿದೆ. ಗಂಟೆಗೆ ನೂರು ಕಿಲೋಮೀಟರ್‌ಗೂ ಹೆಚ್ಚಿನ ವೇಗದಲ್ಲಿ ಸಂಚರಿಸುತ್ತಿದ್ದರೂ ಕೆಲವೇ ಸೆಕೆಂಡುಗಳಲ್ಲಿ ಬೈಕನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಇವು ನೆರವಾಗಿವೆ.

ದೂರ ಪ್ರಯಾಣಕ್ಕೂ ಉತ್ತಮ: ಮುಖ್ಯವಾಗಿ ನಗರ ಪ್ರದೇಶದ ಯುವಕರನ್ನು ಮತ್ತು ಅಡ್ವೆಂಚರ್ ಯಾನವನ್ನು ಗಮನದಲ್ಲಿ ಇಟ್ಟುಕೊಂಡು ‘ಸ್ಕ್ರಾಮ್ 411’ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದ್ದರೂ ದೂರ ಪ್ರಯಾಣಕ್ಕೂ ಈ ಬೈಕ್ ಅನುಕೂಲಕರವಾಗಿದೆ. ಇದರ ಇಂಧನ ಟ್ಯಾಂಕ್ ಗರಿಷ್ಠ 15 ಲೀಟರ್ ಸಾಮರ್ಥ್ಯ ಹೊಂದಿದೆ. 183.5 ಕೆ.ಜಿ. ತೂಕ (ಇಂಧನ ಹೊರತುಪಡಿಸಿ) ಹೊಂದಿದ್ದು, ಅತ್ಯುತ್ತಮ ರೋಡ್‌ ಗ್ರಿಪ್ ಹೊಂದಿದೆ.

ಚಕ್ರದ ವಿನ್ಯಾಸವು ಹೆದ್ದಾರಿ, ಮಣ್ಣಿನ ರಸ್ತೆ ಹಾಗೂ ಕಡಿದಾದ ಪ್ರದೇಶಗಳ ಪ್ರಯಾಣಕ್ಕೂ ಹೇಳಿ ಮಾಡಿಸಿದಂತಿದೆ. 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಇದೆ. ‘ಹಿಮಾಲಯನ್’ ಸರಣಿಯ ಇತರ ಬೈಕ್‌ಗಳ ಮುಂಭಾಗದ ಚಕ್ರಕ್ಕೆ ಹೋಲಿಸಿದರೆ ಇದರ ಗಾತ್ರ ತುಸು (19 ಇಂಚು) ಚಿಕ್ಕದಾಗಿದೆ. ಆದರೆ ರೈಡಿಂಗ್‌ನಲ್ಲಿ ಅದರಿಂದ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಹ್ಯಾಂಡಲ್‌ ಬಾರ್‌ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ದರಿಂದ ರೈಡಿಂಗ್‌ ಹೆಚ್ಚು ಆರಾಮದಾಯಕ ಎನಿಸುತ್ತದೆ.

ಎಂಜಿನ್‌ ಸ್ವಿಚ್‌ ಆಫ್‌ ಮಾಡಲು ಪ್ರತ್ಯೇಕ ಸ್ವಿಚ್‌ ಅಳವಡಿಸಿರುವುದು ಈ ದ್ವಿಚಕ್ರ ವಾಹನದಲ್ಲಿ ನೀಡಲಾಗಿರುವ ಹೆಚ್ಚುವರಿ ಫೀಚರ್ ಆಗಿದೆ.

ವೈಬ್ರೇಷನ್ ಸಮಸ್ಯೆಗೆ ಮುಕ್ತಿ: ಗಂಟೆಗೆ 100ರಿಂದ 120 ಕಿಲೋಮೀಟರ್‌ ವೇಗದಲ್ಲಿ ಸಂಚರಿಸಿದರೂ ವೈಬ್ರೇಷನ್ ಅನುಭವವಾಗುವುದಿಲ್ಲ. ಭಾರಿ ಗಾತ್ರದ ವಾಹನಗಳ ಸನಿಹದಲ್ಲಿ ಸಂಚರಿಸುವಾಗ ಅಲುಗಾಡಿದ ಅನುಭವವಾಗುವುದಿಲ್ಲ. ಆರಾಯಮದಾಯಕ ರೈಡಿಂಗ್ ಅನುಭವ ನೀಡುತ್ತದೆ.

ತಂತ್ರಜ್ಞಾನ: ಡಿಜಿಟಲ್ ಸ್ಪೀಡೋಮೀಟರ್ ಒಳಗೊಂಡಿದೆ. ಟ್ರಿಪ್ ಸೆಟ್ ಮಾಡಲು ಎರಡು ಆಯ್ಕೆಗಳನ್ನು ನೀಡಲಾಗಿದೆ. ಸಮಯ, ಗೇರ್ ಮಾಹಿತಿ ನೀಡುವ ವ್ಯವಸ್ಥೆಯೂ ಇದೆ.

ಡಿಜಿಟಲ್ ಮೀಟರ್
ಡಿಜಿಟಲ್ ಮೀಟರ್

ಸ್ಟ್ಯಾಂಡ್‌ ಹಾಕಿಕೊಂಡಿದ್ದಾಗ ಎಂಜಿನ್ ಸ್ಟಾರ್ಟ್ ಆಗದಂತೆ ಹಾಗೂ ಸ್ಟ್ಯಾಂಡ್ ಹಾಕುತ್ತಿದ್ದಂತೆ ಎಂಜಿನ್ ಆಫ್‌ ಆಗುವ ನೂತನ ತಂತ್ರಜ್ಞಾನ ಅಳವಡಿಸಲಾಗಿದೆ. ಸಾಮಾನ್ಯವಾಗಿ ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಹೆಚ್ಚಿನ ದ್ವಿಚಕ್ರ ವಾಹನಗಳಲ್ಲಿ ಈ ತಂತ್ರಜ್ಞಾನ ಅಳವಡಿಸಿರುವುದು ಕಂಡುಬರುತ್ತಿದೆ. ಸ್ಟ್ಯಾಂಡಿಂಗ್ ಮೋಡ್‌ನಲ್ಲೇ ಚಾಲನೆ ಮಾಡಿ ಅಪಾಯವಾಗುವುದನ್ನು ತಪ್ಪಿಸಲು ಇದು ಸಹಕಾರಿ.

ಬೆಲೆ ಮಾಹಿತಿ: ‘ಸ್ಕ್ರಾಮ್ 411’ ಸದ್ಯ ಮೂರು ಆವೃತ್ತಿಗಳಲ್ಲಿ ಲಭ್ಯವಿದ್ದು, ₹2,03,085 ಆರಂಭಿಕ ಬೆಲೆ (ಎಕ್ಸ್ ಶೋರೂಂ) ಹೊಂದಿದೆ.

– ₹2,03,085 – ಗ್ರಾಫೈಟ್ ರೆಡ್, ಯೆಲ್ಲೊ & ಬ್ಲೂ ಬಣ್ಣದ ಬೈಕ್ ಎಕ್ಸ್ ಶೋರೂಂ ಬೆಲೆ
– ₹2,04,921 – ಸ್ಕೈ ಬ್ಲೂ & ಬ್ಲೇಜಿಂಗ್ ಬ್ಲ್ಯಾಕ್ ಬೈಕ್ ಎಕ್ಸ್ ಶೋರೂಂ ಬೆಲೆ
– ₹2,08,593 – ಸಿಲ್ವರ್ ಸ್ಪಿರಿಟ್ ಆಂಡ್ ವೈಟ್ ಫ್ಲೇಮ್ ಎಕ್ಸ್ ಶೋರೂಂ ಬೆಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT