ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಇ-ಸ್ಕೂಟರ್ ಟಿವಿಎಸ್‌ ಐ-ಕ್ಯೂಬ್‌

Last Updated 8 ನವೆಂಬರ್ 2021, 13:30 IST
ಅಕ್ಷರ ಗಾತ್ರ

ಭಾರತದಲ್ಲಿ ಈಗ ವಿದ್ಯುತ್ ಚಾಲಿತ ವಾಹನಗಳತ್ತ ಜನರ ವಲಸೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ವಿದ್ಯುತ್ ಚಾಲಿತ ಕಾರುಗಳಿಗಿಂತ, ವಿದ್ಯುತ್ ಚಾಲಿತ ಸ್ಕೂಟರ್‌ಗಳತ್ತ ಈ ವಲಸೆ ಹೆಚ್ಚಿನ ಪ್ರಮಾಣದಲ್ಲಿ ಇದೆ. ಹತ್ತು ಹಲವು ಹೊಸ ಕಂಪನಿಗಳು ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಹತ್ತಾರು ಮಾದರಿಗಳ ಇ-ಸ್ಕೂಟರ್‌ಗಳು ಈಗ ಮಾರುಕಟ್ಟೆಯಲ್ಲಿವೆ. ಈ ವಲಸೆಯತ್ತ ಹೊರಳಲು ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪನಿಗಳು ವಿದ್ಯುತ್ ಚಾಲಿತ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಅದೇ ರೀತಿ ಟಿವಿಎಸ್‌ ಕಂಪನಿಯು ವಿದ್ಯುತ್ ಚಾಲಿತ ಪ್ರೀಮಿಯಂ ಸ್ಕೂಟರ್ ಐ-ಕ್ಯೂಬ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕಂಪನಿಯ ಆಹ್ವಾನದ ಮೇರೆಗೆ ‘ಪ್ರಜಾವಾಣಿ’ಯು ಐ-ಕ್ಯೂಬ್‌ನ ಟೆಸ್ಟ್‌ ರೈಡ್‌ ನಡೆಸಿತ್ತು. ಅದರ ವಿವರ ಇಲ್ಲಿದೆ.

ವಿನ್ಯಾಸ
ಮಾರುಕಟ್ಟೆಯಲ್ಲಿ ಇರುವ ಬಹುತೇಕ ಇ-ಸ್ಕೂಟರ್‌ಗಳನ್ನು ನೋಡಿದ ತಕ್ಷಣ, ಅದು ಇ-ಸ್ಕೂಟರ್ ಎಂಬುದು ಗೊತ್ತಾಗುತ್ತದೆ. ಸಾಮಾನ್ಯ ಸ್ಕೂಟರ್‌ಗಳು ಮತ್ತು ಇ-ಸ್ಕೂಟರ್‌ಗಳ ವಿನ್ಯಾಸದಲ್ಲಿರುವ ವ್ಯತ್ಯಾಸ ಅಂಥದ್ದು. ಮಾರುಕಟ್ಟೆಯಲ್ಲಿರುವ ಬಹುತೇಕ ಇ-ಸ್ಕೂಟರ್‌ಗಳ ವಿನ್ಯಾಸ ಮನಸೆಳೆಯುವುದಿಲ್ಲ. ಆದರೆ ಟಿವಿಎಸ್‌ನ ಐ-ಕ್ಯೂಬ್‌ನ ವಿನ್ಯಾಸ ಸಾಮಾನ್ಯ ಸ್ಕೂಟರ್‌ನಂತೆಯೇ ಇದೆ. ಮೊದಲ ನೋಟದಲ್ಲಿ ಅದು ಇ-ಸ್ಕೂಟರ್ ಅನ್ನಿಸುವುದೇ ಇಲ್ಲ. ಐ-ಕ್ಯೂಬ್ ಅನ್ನು ಸಾಮಾನ್ಯ ಸ್ಕೂಟರ್‌ನಂತೆಯೇ ವಿನ್ಯಾಸ ಮಾಡಲಾಗಿದೆ.

ಮುಂಬದಿಯಲ್ಲಿ ಎಲ್‌ಇಡಿ ಡಿಎಲ್‌ಆರ್‌, ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಎಲ್‌ಇಡಿ ಟರ್ನ್ ಇಂಡಿಕೇಟರ್‌ಗಳನ್ನು ನೀಡಲಾಗಿದೆ. ಇವುಗಳ ವಿನ್ಯಾಸ ಉತ್ತಮವಾಗಿದೆ. ಟೇಲ್‌ ಲ್ಯಾಂಪ್ ಸಹ ಎಲ್‌ಇಡಿ ಆಗಿದ್ದು, ರಾತ್ರಿ ಚಾಲನೆ ವೇಳೆ ಈ ದೀಪಗಳನ್ನು ಬೆಳಗಿಸಲು ಹೆಚ್ಚು ವಿದ್ಯುತ್ ಅಗತ್ಯವಿಲ್ಲ. ದೇಹದ ವಿನ್ಯಾಸ ಉತ್ತಮವಾಗಿದ್ದು, ಗಡುಸಾಗಿದೆ.

ಮೋಟರ್
ಇದರಲ್ಲಿ 4.4 ಕಿ.ವ್ಯಾ.ನ ಹಬ್ ಮೋಟರ್ ನೀಡಲಾಗಿದೆ. ಈ ಮೋಟರ್ ಉತ್ತಮವಾಗಿದ್ದು, ಚಾಲನೆ ವೇಳೆಉತ್ತಮವಾದ ಶಕ್ತಿ ನೀಡುತ್ತದೆ. ಈ ಮೋಟರ್‌ 4.4 ಕಿ.ವ್ಯಾ. ಶಕ್ತಿ ಉತ್ಪಾದಿಸುವ ಕಾರಣ ಚಾಲನೆ ಸುಲಭವಾಗಿದೆ. ನಿಂತಲ್ಲಿಂದಲೇ ಗರಿಷ್ಠ ಶಕ್ತಿ ಲಭ್ಯವಿರುವ ಕಾರಣ, ದಿಬ್ಬಗಳನ್ನು, ಹಂಪ್‌ಗಳನ್ನು ಹತ್ತಿಸಲು ಹೆಚ್ಚಿನ ಪ್ರಯಾಸ ಬೇಕಿಲ್ಲ. ಈ ಸ್ಕೂಟರ್‌ 0-40 ಕಿ.ಮೀ. ವೇಗ ಪಡೆದುಕೊಳ್ಳಲು ಕೇವಲ 4.2 ಸೆಕೆಂಡ್‌ ತೆಗೆದುಕೊಳ್ಳುತ್ತದೆ. ಇದು ಈ ವರ್ಗದ ಸಾಮಾನ್ಯ ಸ್ಕೂಟರ್‌ಗಳಿಗಿಂತ ಹೆಚ್ಚು ವೇಗ. ಇಷ್ಟು ಶಕ್ತಿ ಇರುವ ಕಾರಣ, ನಗರದಲ್ಲಿ ಚಾಲನೆ ವೇಳೆ ಬೇರೆಲ್ಲಾ ದ್ವಿಚಕ್ರ ವಾಹನಗಳಿಗಿಂತ ವೇಗವಾಗಿ ಚಾಲನೆ ಮಾಡಲು ಸಾಧ್ಯವಿದೆ.ಉತ್ತಮ ಶಕ್ತಿ ಇರುವ ಕಾರಣ ಇಬ್ಬರು ಇದ್ದರೂ, ವೇಗ ವರ್ಧನೆ ಮತ್ತು ಚಾಲನೆ ಉತ್ತಮವಾಗಿಯೇ ಇದೆ.

ಈ ಸ್ಕೂಟರ್‌ಗೆ ಎಕೊ ಮತ್ತು ಪವರ್ ಮೋಡ್‌ ನೀಡಲಾಗಿದೆ. ಒಂದು ಬಟನ್ ಮೂಲಕ ಇದನ್ನು ಚಾಲನೆ ವೇಳೆಯಲ್ಲಿಯೇ ಬಳಸಿಕೊಳ್ಳಬಹುದು. ಎಕೋ ಮೋಡ್‌ನಲ್ಲಿ 40 ಕಿ.ಮೀ.ವರೆಗೆ ವೇಗವರ್ಧನೆ ಉತ್ತಮವಾಗಿದೆ. ನಂತರ 43-45 ಕಿ.ಮೀ. ವೇಗವನ್ನು ಮಾತ್ರ ಐ-ಕ್ಯೂಬ್ ಮುಟ್ಟುತ್ತದೆ. ಆದರೆ ಈ ಮೋಡ್‌ನಲ್ಲಿ ಗರಿಷ್ಠ ದೂರ ಚಲಿಸಲು ಸಾಧ್ಯವಿದೆ. ಇನ್ನು ಪವರ್ ಮೋಡ್‌ನಲ್ಲಿ ವೇಗವರ್ಧನೆ ಇನ್ನೂ ಉತ್ತಮವಾಗಿದೆ. ಪವರ್ ಮೋಡ್‌ನಲ್ಲಿ 60 ಕಿ.ಮೀ. ವೇಗದವರೆಗೂ ವೇಗವರ್ಧನೆ ಉತ್ತಮವಾಗಿದೆ. ಈ ಮೋಡ್‌ನಲ್ಲಿ ಗರಿಷ್ಠ 72 ಕಿ.ಮೀ. ವೇಗವನ್ನು ಮುಟ್ಟಬಹುದು. ಆದರೆ ಈ ಮೋಡ್‌ನಲ್ಲಿ ಬ್ಯಾಟರಿಯು ವೇಗವಾಗಿಯೇ ಡಿಸ್ಚಾರ್ಜ್ ಆಗುತ್ತದೆ.

ಚಾಲನೆ ವೇಳೆ ಸದ್ದೇ ಇಲ್ಲದಿರುವುದು ಈ ಮೋಟರ್‌ನ ಮತ್ತೊಂದು ಹೆಗ್ಗಳಿಕೆ. ಈಗ ಮಾರುಕಟ್ಟೆಯಲ್ಲಿರುವ ಬಹುತೇಕ ಇ-ಸ್ಕೂಟರ್‌ಗಳು ಚಾಲನೆ ವೇಳೆ ವೈನಿಂಗ್ ಸದ್ದು ಮಾಡುತ್ತವೆ. ಈ ಸದ್ದು ಕಿರಿಕಿರಿ ಉಂಟು ಮಾಡುತ್ತದೆ. ಆದರೆ ಐ-ಕ್ಯೂಬ್‌ ಹಾಗಲ್ಲ. ಹೀಗಾಗಿ ಐ-ಕ್ಯೂಬ್ ಚಾಲನೆ ವೇಳೆ ಕಿರಿಕಿರಿಯಾಗುವುದಿಲ್ಲ.

ಬ್ಯಾಟರಿ ಮತ್ತು ಚಾರ್ಜಿಂಗ್
ಐ-ಕ್ಯೂಬ್‌ನಲ್ಲಿ ಲಿ-ಅಯಾನ್ ಬ್ಯಾಟರಿ ಪ್ಯಾಕ್ ಇದೆ. ಒಮ್ಮೆ ಚಾರ್ಜ್ ಮಾಡಿದರೆ, ಸ್ಟಾಂಡರ್ಡ್‌ ಪರಿಸ್ಥಿತಿಗಳಲ್ಲಿ ಗರಿಷ್ಠ 75 ಕಿ.ಮೀ. ಕ್ರಮಿಸಬಹುದು. ಈ ಬ್ಯಾಟರಿಯು ಶೇ 10ರಷ್ಟರಿಂದ ಶೇ 100ರವರೆಗೆ ಚಾರ್ಜ್ ಆಗಲು 5 ಗಂಟೆ ತೆಗೆದುಕೊಳ್ಳುತ್ತದೆ. ಮನೆಗಳಲ್ಲಿ ಬಳಸುವ ಸಾಮಾನ್ಯ 6ಎ ಪ್ಲಗ್‌ ಪಾಯಿಂಟ್‌ ಬಳಸಿಯೂ ಈ ಸ್ಕೂಟರ್‌ಅನ್ನು ಚಾರ್ಜ್ ಮಾಡಬಹುದು. ಆದರೆ ಮನೆಯ ವೈರಿಂಗ್‌ನಲ್ಲಿ ಅರ್ಥಿಂಗ್ ಮಾಡಿರಲೇ ಬೇಕು. ಅರ್ಥಿಂಗ್ ಇಲ್ಲದಿದ್ದರೆ, ಚಾರ್ಜ್ ಆಗುವುದಿಲ್ಲ.ಎಕ್ಸ್‌ಟೆನ್ಷನ್ ಕಾರ್ಡ್‌ ಬಳಸಿಯೂ ಚಾರ್ಜ್ ಮಾಡಿಕೊಳ್ಳಬಹುದು.

ಐ-ಕ್ಯೂಬ್‌ನಲ್ಲಿ ಬ್ರೇಕಿಂಗ್ ರಿಜನರೇಷನ್ ವ್ಯವಸ್ಥೆ ಇದೆ. ಹೀಗಾಗಿ ಚಾಲನೆ ವೇಳೆ ಥ್ರೋಟಲ್ ಇನ್‌ಪುಟ್ ಸ್ಥಗಿತಗೊಳಿಸಿದ ತಕ್ಷಣ, ರಿಜನರೇಷನ್ ಆರಂಭವಾಗುತ್ತದೆ. ಆಗ ಬ್ಯಾಟರಿ ಚಾರ್ಜ್ ಆಗುತ್ತದೆ. ಅಲ್ಲದೆ ರಿಜನರೇಷನ್ ವ್ಯವಸ್ಥೆಯು ಎಂಜಿನ್ ಬ್ರೇಕಿಂಗ್‌ನಂತೆಯೂ ಕೆಲಸ ಮಾಡುತ್ತದೆ. ಇದರಿಂದ ಸ್ಕೂಟರ್‌ನ ನಿಯಂತ್ರಣ ಉತ್ತಮವಾಗಿದೆ.

ಚಾಲನೆ
ಉತ್ತಮ ಪವರ್ ಇರುವ ಕಾರಣ ಚಾಲನೆ ಉತ್ತಮವಾಗಿದೆ. ಸಾಮಾನ್ಯ ಸ್ಕೂಟರ್ ಚಾಲನೆಗೂ, ಇ-ಸ್ಕೂಟರ್ ಚಾಲನೆಗೂ ಬಹಳ ವ್ಯತ್ಯಾಸವಿದೆ. ನಿಂತಲ್ಲಿಂದಲೇ ಪೂರ್ಣ ಪ್ರಮಾಣದ ಶಕ್ತಿ ಲಭ್ಯವಿರುವ ಕಾರಣ ಇ-ಸ್ಕೂಟರ್ ದಿಢೀರ್ ಎಂದು ನುಗ್ಗುತ್ತದೆ. ಈ ವ್ಯತ್ಯಾಸವನ್ನು ಅರಿತು, ಚಾಲನಾ ಹವ್ಯಾಸ ಬದಲಿಸಿಕೊಳ್ಳಬೇಕು.

ಟಿವಿಎಸ್‌ ಐ-ಕ್ಯೂಬ್‌ನ ಗಾತ್ರ, ಎತ್ತರ, ತೂಕ ಮತ್ತು ವ್ಹೀಲ್ ಬೇಸ್‌ ಸಾಮಾನ್ಯ ಸ್ಕೂಟರ್‌ಗಳಂತೆಯೇ ಇದೆ. ಹೀಗಾಗಿ ಚಾಲನೆ ಮತ್ತು ನಿಯಂತ್ರಣದಲ್ಲಿ ಹೆಚ್ಚು ವ್ಯತ್ಯಾಸವೇನೂ ಇಲ್ಲ. ಒಟ್ಟಾರೆ ಚಾಲನೆ ಉತ್ತಮವಾಗಿದೆ.

ಫೀಚರ್‌ಗಳು
*ಎಲ್‌ಇಡಿ ಡಿಸ್ಪ್ಲೆ ಇದ್ದು, ಸ್ಮಾರ್ಟ್ ಕನೆಕ್ಟ್ ತಂತ್ರಜ್ಞಾನವಿದೆ. ಇದರ ಮೂಲಕ ಸ್ಮಾರ್ಟ್ ಫೋನ್‌ಅನ್ನು ಸ್ಕೂಟರ್‌ಗೆ ಕನೆಕ್ಟ್ ಮಾಡಿಕೊಳ್ಳಬಹುದು.
* ಇದರಲ್ಲಿ ಇನ್‌ಬಿಲ್ಟ್ ನ್ಯಾವಿಗೇಷನ್ ಇದೆ. ಹೀಗಾಗಿ ಚಾಲನೆ ವೇಳೆ ದಾರಿ ತಿಳಿಯಲು ನ್ಯಾವಿಗೇಷನ್ ಬಳಸಬೇಕಿಲ್ಲ.
* ಪಾರ್ಕಿಂಗ್ ಅಸಿಸ್ಟ್ ವ್ಯವಸ್ಥೆ ಇದ್ದು, ಇಕ್ಕಟ್ಟಾದ ಜಾಗಗಳಲ್ಲಿ ಸ್ಕೂಟರ್ ನಿಲ್ಲಿಸಲು ಇದು ನೆರವಾಗುತ್ತದೆ. ಈ ಮೋಡ್‌ನಲ್ಲಿ ಸ್ಕೂಟರ್‌ನ ವೇಗ 2 ಕಿ.ಮೀ. ದಾಟುವುದಿಲ್ಲ.
* ನಗರದಲ್ಲಿ ಎಲ್ಲೆಲ್ಲಿ ಚಾರ್ಜಿಂಗ್ ಕೇಂದ್ರಗಳಿವೆ ಎಂಬುದನ್ನೂ ಇದು ತೋರಿಸುತ್ತದೆ

ಒಟ್ಟಾರೆ ಈ ಸ್ಕೂಟರ್‌ನ ಚಾಲನೆಯ ಅನುಭವ ಉತ್ತಮವಾಗಿದೆ. ವೇಗವರ್ಧನೆ ಮಜಾ ನೀಡುತ್ತದೆ. ಉತ್ತಮ ರೇಂಜ್ ಸಹ ಇರುವ ಕಾರಣ ನಗರದಲ್ಲಿನ ಚಾಲನೆಗೆ ಐ-ಕ್ಯೂಬ್‌ ಅನ್ನು ಆರಾಮವಾಗಿ ಬಳಸಬಹುದು. ಎಕ್ಸ್‌ ಷೋ ರೂಂ ಬೆಲೆ 1.18 ಲಕ್ಷವಿದೆ. ಇದು ಈಗ ಮಾರುಕಟ್ಟೆಯಲ್ಲಿರುವ ಪ್ರೀಮಿಯಂ ಇ-ಸ್ಕೂಟರ್‌ಗಳ ಬೆಲೆಯಷ್ಟೆಯೇ ಇದೆ. ಕೊಡುವ ಹಣಕ್ಕೆ ಮೋಸವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT