ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಲ್ಸ್‌ ಡೌನ್!

Last Updated 17 ಜುಲೈ 2019, 19:30 IST
ಅಕ್ಷರ ಗಾತ್ರ

ಮಾ ರಾಟ ಪ್ರಗತಿಯನ್ನೇ ಕಾಣದೆ ಕಂಗಾಲಾಗಿರುವ ವಾಹನ ತಯಾರಿಕಾ ಕ್ಷೇತ್ರಕ್ಕೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ ಬಜೆಟ್‌ನಿಂದ ಸಂಜೀವಿನಿ ಸಿಗಲಿಲ್ಲ. ಹಾಗೆಯೇ ಮೂಲಸೌಕರ್ಯವೇ ಇಲ್ಲದೆ ಇನ್ನೂ ಅಂಬೆಗಾಲಿಡುತ್ತಿರುವ ವಿದ್ಯುತ್ ಚಾಲಿತ ವಾಹನಗಳ ಖರೀದಿಗೆ ಭಾರೀ ಉತ್ತೇಜನ ನೀಡಿರುವುದು ದೂರದಲ್ಲಿರುವ ಚಂದ್ರನ ತೋರಿಸಿ ಮಕ್ಕಳಿಗೆ ಉಣಿಸುವ ಪ್ರಯತ್ನವಾಗಿದೆ ಎಂದು ಮಾರುಕಟ್ಟೆ ವಿಶ್ಲೇಶಿಸುತ್ತಿದೆ.

ಜೂನ್ ಅಂತ್ಯಕ್ಕೆ ಕೊನೆಗೊಂಡ ಪ್ರಥಮ ತ್ರೈಮಾಸಿಕದಲ್ಲಿ ಪ್ರಮುಖ ವಾಹನ ತಯಾರಿಕಾ ಕಂಪನಿಗಳು ತೀವ್ರ ನಷ್ಟ ಅನುಭವಿಸಿವೆ. ಕಳೆದ 18 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಾರಾಟ ಪ್ರಗತಿಯನ್ನು ವಾಹನ ಕ್ಷೇತ್ರ ದಾಖಲಿಸಿರುವುದು ತಯಾರಕರು ಹಾಗೂ ಮಾರಾಟಗಾರರಲ್ಲಿ ತೀವ್ರ ಆತಂಕ ಮೂಡಿಸಿದೆ. ವಾಹನ ಕ್ಷೇತ್ರಕ್ಕೆ ಸಾಲ ಕೊಡುವಾಗ ಎಚ್ಚರವಹಿಸಿ ಎಂದು ಬ್ಯಾಂಕ್‌ಗಳಿಗೆ ಎಬಿಎಫ್‌ಸಿ ನೀಡಿರುವ ಎಚ್ಚರಿಕೆಯಿಂದಾಗಿ ಮಹಾನಗರಗಳಲ್ಲೇ ಹತ್ತಾರು ಮಾರಾಟ ಮಳಿಗೆಗಳು ಬಾಗಿಲು ಹಾಕುತ್ತಿವೆ. ಇವೆಲ್ಲದಕ್ಕೂ ಪರಿಹಾರ ಸಿಗಬಹುದೇ ಎಂಬ ಆಸೆಗಣ್ಣಿನಿಂದ ಬಜೆಟ್‌ನತ್ತ ವಾಹನ ಕ್ಷೇತ್ರ ನೋಡಿತ್ತು. ಆದರೆ, ನಿರೀಕ್ಷೆ ಆಶಾದಾಯಕವಾಗಿಲ್ಲ ಎಂಬುದನ್ನು ವಾಹನ ತಯಾರಿಕಾ ಕ್ಷೇತ್ರ ವ್ಯಕ್ತಪಡಿಸಿದೆ.

ನಿರೀಕ್ಷಿಸಿದಷ್ಟು ಸಿಗಲಿಲ್ಲ

ವಾಹನಗಳು ಸ್ವದೇಶದಲ್ಲಿ ನಿರ್ಮಾಣವಾಗಬೇಕು ಎನ್ನುವುದು ಸರ್ಕಾರದ ನೀತಿ. ಆದರೆ, ಬಹಳಷ್ಟು ತಯಾರಕರು, ಕೆಲವೊಂದು ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುತ್ತಾರೆ. ಹಲವನ್ನು ರಫ್ತು ಮಾಡುತ್ತಾರೆ. ಇದರ ಮೇಲೆ ಅಬಕಾರಿ ಸುಂಕ ಹೊರಿಸಲಾಗಿದೆ. ಅದರಂತೆಯೇ ಇಂಧನ ಮೇಲೆ ಸೆಸ್ ಹಾಕಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆಯಾಗಿದೆ. ಒಂದೆಡೆ ವಿತರಣೆ ದುಬಾರಿಯಾದರೆ, ಮತ್ತೊಂದೆಡೆ ವಾಹನ ಖರೀದಿ ಮಾಡುವ ಗ್ರಾಹಕರ ಮೇಲೂ ಪರಿಣಾಮ ಬೀರುತ್ತಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಈ ಹಂತದಲ್ಲಿ ಒಂದಷ್ಟು ರಿಯಾಯಿತಿ ನೀಡಿದ್ದರೆ ಕಷ್ಟದಲ್ಲಿರುವ ಕ್ಷೇತ್ರಕ್ಕೆ ಪುನಶ್ಚೇತನ ಸಿಗುತ್ತಿತ್ತು ಎಂಬ ಮಾತು ಕ್ಷೇತ್ರದಿಂದ ಕೇಳಿಬರುತ್ತಿದೆ.

ಹೈಬ್ರಿಡ್ ಕೂಡಾ ಸೇರಬೇಕಿತ್ತು

ವಿದ್ಯುತ್ ಚಾಲಿತ ವಾಹನಗಳಿಗೆ ಜಿಎಸ್‌ಟಿ ಶೇ12 ರಿಂದ ಶೇ5ಕ್ಕೆ ಇಳಿಸಿ ಪ್ರೋತ್ಸಾಹಿಸಲಾಗಿದೆ.ಹಾಗೆಯೇ ಖರೀದಿದಾರರಿಗೂ ಆದಾಯ ತೆರಿಗೆಯಲ್ಲಿ ₹1.5 ಲಕ್ಷವರೆಗೆ ರಿಯಾಯಿತಿಯನ್ನೂ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದು ದೇಶದ ಭವಿಷ್ಯದ ದೃಷ್ಟಿಯಿಂದ ಆಶಾದಾಯಕ ಹೆಜ್ಜೆ. ಆದರೆ ವಿದ್ಯುತ್ ಚಾಲಿತ ವಾಹನಗಳಿಗೆ ಪೂರಕ ವಾತಾವರಣ ಸೃಷ್ಟಿಯಾಗಿದ್ದರೂ, ಚಾರ್ಜಿಂಗ್, ಸರ್ವೀಸ್ ಇತ್ಯಾದಿ ಅಗತ್ಯ ಮೂಲಸೌಕರ್ಯ ಕಲ್ಪಿಸಿಲ್ಲ. ಹೀಗಾಗಿ ವಿದ್ಯುತ್ ಚಾಲಿತ ವಾಹನಗಳತ್ತ ಖರೀದಿದಾರರು ಹೊರಳಲು ಇನ್ನೂ ಒಂದೆರಡು ವರ್ಷಗಳಾದರೂ ಬೇಕು. ಅದಕ್ಕೆ ಬದಲಾಗಿ ಪರಿಸರ ಸ್ನೇಹಿಯೂ ಆಗಿರುವ ಹಾಗೂ ಸದ್ಯ ಪ್ರಚಲಿತದಲ್ಲಿರುವ ಹೈಬ್ರಿಡ್‌ ತಂತ್ರಜ್ಞಾನಕ್ಕೂ ಈ ರಿಯಾಯಿತಿ ವಿಸ್ತರಿಸಿದ್ದರೆ, ಕೈಗಾರಿಕೆ ಮತ್ತು ಗ್ರಾಹಕರಿಗೆ ತಕ್ಷಣದ ಲಾಭವಾಗುತ್ತಿತ್ತು.

ವಿದ್ಯುತ್ ಚಾಲಿತ ವಾಹನಗಳ ಪೈಕಿ ದ್ವಿಚಕ್ರ ವಾಹನ ತಯಾರಕರು ಬಜೆಟ್‌ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ. ಸದ್ಯ ಕೆಲವೊಂದು ಕಂಪನಿಗಳು ದೇಶದ ಪ್ರಮುಖ ನಗರಗಳಲ್ಲಿ ತಮ್ಮ ಮಳಿಗೆ ಆರಂಭಿಸಿವೆ. ಇವುಗಳು ಗ್ರಾಹಕರನ್ನು ಸೆಳೆಯಲು ಸಜ್ಜಾಗಿರುವ ಹೊತ್ತಿಗೆ, ಬಜೆಟ್‌ನ ಘೋಷಣೆಗಳು ಪೂರಕವಾಗಿರುವುದರಿಂದ ಖರೀದಿ ಚಟುವಟಿಕೆಗಳು ಚುರುಕಾಗಿವೆ.

ಹಳೆ ವಾಹನಗಳ ಗುಜರಿಗೆ ಇಲ್ಲ ಕಾನೂನು

ಅವಧಿ ಮೀರಿದ ವಾಹನಗಳನ್ನು ಗುಜರಿಗೆ ಹಾಕುವ ಸಲುವಾಗಿ ನೀತಿ ರೂಪಿಸುವ ಕುರಿತೂ ವಾಹನ ಕ್ಷೇತ್ರ ನಿರೀಕ್ಷೆಯಲ್ಲಿತ್ತು. ಆ ಮೂಲಕ ಹೊಸ ವಾಹನಗಳ ಖರೀದಿ ಸಾಧ್ಯವಾಗಬಹುದು ಎಂಬ ಲೆಕ್ಕಾಚಾರವೂ ಅದರ ಹಿಂದೆ ಅಡಗಿತ್ತು ಎನ್ನುವುದು ಸುಳ್ಳಲ್ಲ.

ದೇಶದಲ್ಲಿ ಅವಧಿ ಮೀರಿದ (15 ವರ್ಷ ಪೂರೈಸಿದ) ಸುಮಾರು 11 ಲಕ್ಷದಷ್ಟು ಟ್ರಕ್‌ಗಳು ಇವೆ ಎಂದು ಅಂದಾಜಿಸಲಾಗಿದೆ. ಇವುಗಳಿಂದ ಪರಿಸರದ ಮೇಲಾಗುತ್ತಿರುವ ಹಾನಿಯ ಪ್ರಮಾಣ ಶೇ 60ರಷ್ಟು ಎಂಬುದು ತೀವ್ರ ಆತಂಕದ ವಿಷಯವೂ ಹೌದು. ಪರಿಸರ ಕಾಳಜಿ ಹೊಂದಿರುವ ಕೇಂದ್ರ ಸರ್ಕಾರ ಇವುಗಳನ್ನು ಮೊದಲು ರದ್ದುಪಡಿಸಬೇಕು ಎಂಬುದನ್ನು ವಾಹನ ಕ್ಷೇತ್ರ ಅಪೇಕ್ಷಿಸಿತ್ತು.

ಮತ್ತೊಂದೆಡೆ ಟೈರ್‌ ತಯಾರಿಕಾ ಕ್ಷೇತ್ರವೂ ಆಮದು ಟೈರ್‌ಗಳ ಮೇಲೆ ಸುಂಕ ಹೆಚ್ಚಿಸಿ, ದೇಶದಲ್ಲಿ ತಯಾರಾಗುವ ರಬ್ಬರ್‌ ಮೇಲಿನ ತೆರಿಗೆ ತಗ್ಗಿಸಬೇಕು ಎಂದು ನಿರೀಕ್ಷಿಸಿತ್ತು. ಆ ಬೇಡಿಕೆಯೂ ಬಜೆಟ್‌ನಲ್ಲಿ ಈಡೇರಿಲ್ಲ. ಜತೆಗೆ ಬಿಡಿಭಾಗಗಳ ತಯಾರಿಕಾ ಘಟಕಕ್ಕೂ ಹೆಚ್ಚಿನ ಉತ್ತೇಜನ ಸಿಕ್ಕಿಲ್ಲ. ಈ ಎಲ್ಲಾ ಕಾರಣಕ್ಕಾಗಿ ವಾಹನ ತಯಾರಿಕಾ ಕ್ಷೇತ್ರದಲ್ಲಿ ನಿರಾಸೆ ಮಡುಗಟ್ಟಿದೆ.

ಇದರ ನಡುವೆಯೇ ದೇಶದ ಗ್ರಾಮೀಣ ಭಾಗದಲ್ಲಿರುವ 1.25ಲಕ್ಷ ಕಿಲೋ ಮೀಟರ್‌ ಉದ್ದದ ರಸ್ತೆಯ ಅಭಿವೃದ್ಧಿಗೆ ₹80ಸಾವಿರ ಕೋಟಿ ಹಣ ಹೂಡಿಕೆ ಮಾಡುತ್ತಿರುವುದನ್ನು ಕೆಲವರು ಸ್ವಾಗತಿಸಿದ್ದಾರೆ. ರಸ್ತೆಗಳು ಅಭಿವೃದ್ಧಿಯಾದರೆ ವಾಹನ ಮಾರಾಟ ಪ್ರಗತಿ ಕಾಣಬಹುದು. ಆದರೆ ಅದು ಈ ವರ್ಷವೇ ಆಗಲಿದೆಯೇ ಎಂಬುದು ಯಕ್ಷಪ್ರಶ್ನೆ.

ಪ್ರತಿ ವರ್ಷ ಕಾರುಗಳ ಮಾರಾಟ ಶೇ 20.55ರಷ್ಟು ಕುಸಿತ ಕಾಣುತ್ತಿದೆ. ಹೊಸ ಕಾರುಗಳು, ಹೊಸ ಕಂಪನಿಗಳು ಭಾರತಕ್ಕೆ ದಾಂಗುಡಿ ಇಡುತ್ತಲಿವೆ. ಇದರ ನಡುವೆಯೇ ಇರುವ ಕಂಪನಿಗಳು ಪೈಪೋಟಿ ನಡೆಸಬೇಕಾದ ಪರಿಸ್ಥಿತಿಯಲ್ಲಿ ವಾಹನ ಕ್ಷೇತ್ರಕ್ಕೆ ಈ ಬಾರಿ ಬಜೆಟ್ ಬೇವು ಮತ್ತು ಬೆಲ್ಲ ಎರಡನ್ನೂ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT