ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರು ಕಾಫಿ ಹರಟೆ...

Published 24 ಆಗಸ್ಟ್ 2024, 23:30 IST
Last Updated 24 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ವಾವ್‌... ಫೆರಾರಿ....! ಎಷ್ಟು ವರ್ಷದಿಂದ ಓಡಿಸ್ತಿದ್ದೀರಿ? ಹೇಗೆ ಮೆಂಟೇನ್ ಮಾಡ್ತೀರಿ? ಟಾಪ್‌ ಸ್ಪೀಡ್‌ನಲ್ಲಿ ಎಲ್ಲಿಯಾದರೂ ಓಡಿಸಿದ್ದೀರಾ? ಹೇಗಿರುತ್ತೆ ಫೀಲಿಂಗ್‌?

ಝೆನ್‌ ಕಾರಿನಲ್ಲಿ ಬಂದಿದ್ದ ಯುವಕ ಒಂದೇಸಮನೆ ಫೆರಾರಿ ಕಾರಿನ ಮಾಲೀಕರಿಗೆ ಪ್ರಶ್ನೆಗಳ ಸುರಿಮಳೆಗರೆದ.

‘ಹೋ... ನನ್ನ ಬಾಲ್ಯದ ಕ್ರಶ್‌ ಝೆನ್‌. ನನ್ನ ಅಂಕಲ್ ಹತ್ರ ಇತ್ತು. ಆಗಾಗ ಅವರಿಂದ ಪಡೆದು ಓಡಿಸ್ತಿದ್ದೆ. ಮಸ್ತ್ ಮಜಾ ಕೊಡುತ್ತೆ’ ಎಂದರು ಫೆರಾರಿ ಮಾಲೀಕರು. ಆ ಯುವಕನ ಖುಷಿಗೆ ಎಲ್ಲೆಯೇ ಇರಲಿಲ್ಲ!

ಶ್ರೀಮಂತಿಕೆಯ ಪ್ರದರ್ಶನದ ವಸ್ತುವಾಗಿದ್ದ ಕಾರು, ಈಗ ಭಾರತದಲ್ಲಿ ಕೋಟ್ಯಂತರ ಕುಟುಂಬಗಳ ಅವಶ್ಯ ವಸ್ತುಗಳ ಪಟ್ಟಿಗೆ ಸೇರಿಕೊಂಡಿದೆ. ಹೀಗಾಗಿ ರಾಜ–ಮಹಾರಾಜರು, ಆಗರ್ಭ ಶ್ರೀಮಂತರ ವಿಂಟೇಜ್‌ ಕಾರುಗಳ ಪ್ರದರ್ಶನ ಈಗ ಸಾಮಾನ್ಯ ಕಾರುಗಳ ‘ಕಾರ್‌ ಮೀಟ್‌ಅಪ್‌’ ಎಂಬ ಹೆಸರಿನ ಹೊಸ ರೂಪ ಪಡೆದುಕೊಂಡಿದೆ.

1920 ಹಾಗೂ 1930ರಲ್ಲಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ‘ಕಾರ್‌ ಮೀಟ್‌ಅಪ್‌’ ಅಥವಾ ‘ಕ್ರೂಸಿಂಗ್‌’ ಎಂಬ ಪರಿಕಲ್ಪನೆ ಜನಪ್ರಿಯತೆ ಪಡೆದುಕೊಂಡಿತ್ತು. ಯುವ ಸಮೂಹ ತಮ್ಮ ಕಾರುಗಳೊಂದಿಗೆ ನಗರದ ಹೊರವಲಯದ ವಿಶಾಲ ರಸ್ತೆಯಲ್ಲೋ, ಇನ್ಯಾವುದೋ ಸಭಾಂಗಣದ ಎದುರು ಸೇರಿ ತಮ್ಮ ತಮ್ಮ ಕಾರುಗಳನ್ನು ಪ್ರದರ್ಶಿಸುವುದು ಹಾಗೂ ತಮ್ಮಂತೆಯೇ ಇರುವ ಕಾರು ಮೋಹಿಗಳೊಂದಿಗೆ ಒಂದಷ್ಟು ಹರಟುತ್ತಾ ವಿಚಾರ ವಿನಿಮಯ ಮಾಡಿಕೊಳ್ಳುವುದು ಮೀಟ್‌ಅಪ್‌ಗಳ ಮುಖ್ಯ ಉದ್ದೇಶವಾಗಿತ್ತು. ಇವುಗಳಲ್ಲಿ ಕೆಲವು ಸಣ್ಣ ಪ್ರಮಾಣದ್ದೂ ಇದ್ದವು. ಇನ್ನೂ ಕೆಲವರು ನೂರಾರು ಕಾರುಗಳನ್ನು ಸೇರಿಸಿ ದೊಡ್ಡ ಕಾರ್ಯಕ್ರಮ ಮಾಡುವವರೂ ಇದ್ದರು.

ಇದು ನಂತರದ ದಿನಗಳಲ್ಲಿ ರೇಸಿಂಗ್‌ ಅಂಗಣವಾಗಿ ರಂಗು ಹೆಚ್ಚಿಸಿಕೊಳ್ಳುತ್ತಾ ಸಾಗಿತು. ತಮ್ಮ ಕಾರುಗಳ ಸಾಮರ್ಥ್ಯ ಪ್ರದರ್ಶನದ ಡ್ರ್ಯಾಗ್ ರೇಸ್‌ಗಳಾಗಿ ಬದಲಾಯಿತು. ಇಂಥ ಪರಿಕಲ್ಪನೆಯನ್ನೇ ಆಧರಿಸಿದ ‘ಫಾಸ್ಟ್ ಆ್ಯಂಡ್‌ ಫ್ಯೂರಿಯಸ್‌’ ಸರಣಿ ಚಿತ್ರಗಳು ಇದಕ್ಕೆ ಒಳ್ಳೆಯ ನಿದರ್ಶನ. ಈಗ ‘ಕಾರ್‌ ಮೀಟ್‌ಅಪ್‌’ ಎನ್ನುವುದು ಜಾಗತಿಕ ಮಟ್ಟದಲ್ಲಿ ಹೆಚ್ಚು ಪ್ರಚಲಿತವಾಗಿದೆ. ಈಗ ಬೆಂಗಳೂರಿನಂತ ಮಹಾನಗರಗಳಲ್ಲೂ ಜನಪ್ರಿಯಗೊಳ್ಳುತ್ತಿದೆ. ಇಲ್ಲಿ ವಿಲಾಸಿ ಕಾರು ಅಥವಾ ಪುಟ್ಟದಾದ ಹ್ಯಾಚ್‌ಬ್ಯಾಕ್ ಎಂಬ ಭೇದವಿಲ್ಲ. ಏನಿದ್ದರೂ ಕಾರು, ಕಾರು ಮತ್ತು ಕಾರು ಅಷ್ಟೇ.

ಇಂಥ ‘ಕಾರ್‌ ಮೀಟ್‌ಅಪ್‌’ಗಳನ್ನು ನಡೆಸುವ ಕೆಲ ಗುಂಪುಗಳು ರೂಪುಗೊಂಡಿವೆ. ಇನ್‌ಸ್ಟಾಗ್ರಾಂ, ಫೇಸ್‌ಬುಕ್‌, ವಾಟ್ಸ್ಆ್ಯಪ್‌ಗಳ ಮೂಲಕ ಆಹ್ವಾನ ಕಳುಹಿಸಲಾಗುತ್ತದೆ. ಈ ವಾರಾಂತ್ಯ ಎಲ್ಲಿ ಸೇರಬಹುದು ಎನ್ನುವ ಕುತೂಹಲದಲ್ಲೇ ಹಲವರು ದಿನ ಕಳೆಯುವುದೂ ಉಂಟು. ನಗರದ ಹೊರವಲಯದ ಹೊಟೇಲ್‌ ಇಲ್ಲವೇ ಕೆಫೆಗಳು, ಗೋ ಕಾರ್ಟ್‌ ಎಂಬ ರೇಸಿಂಗ್‌ ಟ್ರ್ಯಾಕ್‌ಗಳನ್ನೇ ವೇದಿಕೆಯನ್ನಾಗಿ ಪರಿವರ್ತಿಸಿಕೊಳ್ಳಲಾಗುತ್ತಿದೆ.

ಜನಪ್ರಿಯವಾಗಿದ್ದು ಹೇಗೆ...?

‘ಕಾರ್‌ ಮೀಟ್‌ಅಪ್‌’ಗಳಲ್ಲಿ ಸಾಮಾನ್ಯವಾಗಿ ಕಾರು ಮೋಹಿಗಳಾದ ಸಮಾನ ಮನಸ್ಕರು ಒಂದೆಡೆ ಸೇರಿ ಹೊಸ ತಂತ್ರಜ್ಞಾನ ಅಥವಾ ಉತ್ತಮ ಕಾರ್ಯಕ್ಷಮತೆಯ ಕಾರುಗಳ ಕುರಿತು ಚರ್ಚಿಸುವುದು, ಕಾಫಿ ಹೀರುತ್ತಾ ಇತರ ಕಾರುಗಳ ಅಂದವನ್ನು ಕಣ್ತುಂಬಿಕೊಳ್ಳುವುದೇ ಆಗಿರುತ್ತದೆ. ಇನ್ನೂ ಕೆಲವರು ತಮ್ಮ ಕಾರನ್ನು ಹೆಚ್ಚು ಅಂದಗೊಳಿಸಿ, ಇತರರಿಂದ ಒಂದಷ್ಟು ಹೊಗಳಿಕೆಗಳನ್ನು ನಿರೀಕ್ಷಿಸುತ್ತಿರುತ್ತಾರೆ. ಕೆಲವರು ಅಜ್ಜ, ತಂದೆ ಓಡಿಸುತ್ತಿದ್ದ ಕಾರನ್ನು ತಂದು ಪ್ರದರ್ಶಿಸಿದರೆ, ಮತ್ತೆ ಕೆಲವರು ಹೊಸ ಮಾದರಿಯ ಕಾರನ್ನು ತಂದು ಪಾಲ್ಗೊಳ್ಳುತ್ತಿರುತ್ತಾರೆ. ಒಂದೆರೆಡು ಬಾರಿ ಇಂಥ ಮೀಟ್‌ಅಪ್‌ಗಳಿಗೆ ಹೋಗಿ ಬಂದಲ್ಲಿ, ನಂತರ ಇದರ ಸಂಗ ಬಿಡುವುದೇ ಕಷ್ಟ.

ಹೀಗೆ ಮೀಟ್‌ಅಪ್‌ಗಳನ್ನು ಬೆಂಗಳೂರಿನಲ್ಲಿ ಆಯೋಜಿಸುವುದರಲ್ಲಿ ‘ಕಾರ್ಸ್ ಆ್ಯಂಡ್‌ ಕಾಫಿ’, ‘ಕ್ಲಬ್ ಆಕ್ಟೇನ್‌’, ‘ಮಾರ್ಕ್ಯೂ ಒನ್‌’ ಸೇರಿದಂತೆ ಕೆಲ ಉತ್ಸಾಹಿ ಯುವಪಡೆಗಳು ಮುಂಚೂಣಿಯಲ್ಲಿವೆ.

ಇಲ್ಲೆಲ್ಲಾ ಫೆರಾರಿ, ಮಝರಾಟಿ, ಎಎಂಜಿ, ಔಡಿ, ಪೋಶೆ, ಸುಪ್ರಾ, ಲ್ಯಾಂಬೊರ್ಗಿನಿ ಎಂಬ ವಿಲಾಸಿ ಕಾರುಗಳ ಜತೆಗೆ, ನ್ಯಾನೊ, ಝೆನ್, ಸ್ವಿಫ್ಟ್‌, ಪೊಲೊ ಕಾರುಗಳೂ ಪಾಲ್ಗೊಂಡ ಉದಾಹರಣೆಗಳಿವೆ. ಜತೆಗೆ ಇಂದಿಗೂ ಅದೇ ಬೇಡಿಕೆ ಉಳಿಸಿಕೊಂಡಿರುವ ಹೊಂಡಾ ಸಿಟಿ ವಿಟೆಕ್, ಝೆನ್, ಪೊಲೊ, ಸಿಡಿಯಾ, ಲ್ಯಾನ್ಸರ್, ಸ್ಕೋಡಾ ಆಕ್ಟೀವಿಯಾ ವಿಆರ್‌ಎಸ್‌, ವರ್ಟಸ್‌ ಜಿಟಿಐ ಕಾರುಗಳೂ ದುಬಾರಿ ಕಾರುಗಳಿಂತ ಹೆಚ್ಚು ಆಕರ್ಷಣೆ ಹೊಂದಿವೆ.

‘ನಮ್ಮ ಮೊದಲ ಮೀಟ್‌ಅಪ್‌ ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿರುವ ಮಧು ಟೈರ್ಸ್‌ನಲ್ಲಿ ನಡೆಯಿತು. ಟಾಟಾ ನ್ಯಾನೊ, ಮಿಟ್ಸುಬಿಷಿ ಮೊಂಟೆರೊ, ಲೆಕ್ಸಸ್ ಆರ್‌ಸಿಎಫ್, ಡಿಫೆಂಡರ್, ಪೋಶೆ ಕಾರುಗಳು ಬಂದಿದ್ದವು. ಪೋಶೆ ಮಾಲೀಕ, ಹೊಂಡಾ ಸಿಟಿಯ ಮಾಲೀಕನೊಂದಿಗೆ ಚರ್ಚಿಸುತ್ತಿದ್ದರೆ, ಮೊಂಟೆರೊದವರು ಡಿಫೆಂಡರ್ ಅವರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು’ ಎಂದು ‘ಕಾರ್ಸ್ ಆ್ಯಂಡ್‌ ಕಾಫಿ’ಯ ನೇಸರ ನೆನಪಿಸಿಕೊಂಡರು.

ವುಡ್‌ಲ್ಯಾಂಡ್ಸ್ ಹೋಟೆಲ್, ಮಾರತ್ತಹಳ್ಳಿಯ ಇಝೋನ್‌, ಕನಕಪುರದ ಮೊಟೊ ಫಾರ್ಮ್‌, ಯುಬಿ ಸಿಟಿಯಂಥ ಸ್ಥಳಗಳೇ ಮೀಟ್‌ಅಪ್‌ಗಳ ತಾಣ. ಇನ್‌ಸ್ಟಾಗ್ರಾಂನಲ್ಲಿ ಇಂಥ ಮೀಟ್‌ಅಪ್‌ಗಳ ಆಹ್ವಾನ ರವಾನೆಯಾಗುತ್ತದೆ. ಬರುವವರು ಹೆಸರು ನೋಂದಾಯಿಸಿಕೊಳ್ಳುತ್ತಾರೆ. ಕೆಲವು ಸ್ಥಳಗಳಿಗೆ ಬಾಡಿಗೆ ನೀಡಬೇಕಾಗುತ್ತದೆ. ಒಂದಷ್ಟು ನಿರ್ವಹಣೆಯ ವೆಚ್ಚವೂ ಇರುತ್ತದೆ ಎನ್ನುತ್ತಾರೆ ಆಯೋಜಕರು.

ಕೆಲವು ಮೀಟ್‌ಅಪ್‌ಗಳು ಕಾರುಗಳ ಕಾರ್ಯಕ್ಷಮತೆ ಹಾಗೂ ಚಾಲಕನ ಚಾಲನಾ ಕಲೆಯ ಪರಿಣತಿಯನ್ನು ಒರೆಗೆ ಹಚ್ಚುವ ವೇದಿಕೆಗಳೂ ಆಗಿರುತ್ತವೆ. ಕೆಸರು, ಗುಂಡಿಯಲ್ಲಿ ಕಾರುಗಳನ್ನು ಹೇಗೆ ಸುರಕ್ಷಿತವಾಗಿ ಚಾಲನೆ ಮಾಡಬೇಕು ಎಂಬ ಪರೀಕ್ಷೆಯನ್ನು ಎದುರಿಸಬೇಕು. ಸ್ಪೀಡ್‌, ಸ್ಲಶ್, ಎಲಿವೇಷನ್, ಆರ್ಟಿಕಲೇಷನ್‌–ಹೀಗೆ ಹಲವು ಹಂತಗಳಲ್ಲಿ ಚಾಲಕರು ಪಾಸಾಗಿ, ಅಂತಿಮ ಹಂತಕ್ಕೆ ಹೋಗುತ್ತಾರೆ. ಗೆದ್ದವರಿಗೆ ಬಹುಮಾನಕ್ಕಿಂತ ಸವಾಲು ಎದುರಿಸಿದ ಸಂಭ್ರಮವೇ ಸಾಕು.

ಇಂಥ ಮೀಟ್‌ಅಪ್‌ಗಳು ಕೇವಲ ಪುರುಷರಿಗಾಗಿ ಎಂದೇನೂ ಇಲ್ಲ. ಸಾಕಷ್ಟು ಯುವತಿಯರೂ ಪಾಲ್ಗೊಳ್ಳುತ್ತಾರೆ. ಇನ್ನೂ ಕೆಲವರು ಮಕ್ಕಳ ಸಹಿತ ಇಡೀ ಕುಟುಂಬದವರೇ ಭಾಗವಹಿಸುತ್ತಾರೆ. ತರಹೇವಾರಿ ಕಾರುಗಳ ಕಣ್ತುಂಬಿಕೊಂಡು ಖುಷಿಪಡುತ್ತಾರೆ.

ರೇಸಿಂಗ್ ಟ್ರ್ಯಾಕ್‌ಗಳು

ವಾರಾಂತ್ಯಗಳಲ್ಲಿ ಪರ್ಫಾಮೆನ್ಸ್‌ ಕಾರುಗಳಿಗೆ ಹೆದ್ದಾರಿಯೇ ಸದ್ಯದ ಟ್ರ್ಯಾಕ್‌ಗಳಾಗಿವೆ. ‘ಬ್ರೇಕ್‌ಫಾಸ್ಟ್‌ ರೇಡ್‌’ ಎಂದರೆ ಟ್ರಾಫಿಕ್‌ ವಾಹನ ದಟ್ಟಣೆ ಹೆಚ್ಚಾಗುವುದರೊಳಗಾಗಿ ಅಂದರೆ, ನಸುಕಿನ 4ರಿಂದ 10 ಗಂಟೆಯೊಳಗೆ ಹೆದ್ದಾರಿಯಲ್ಲಿ ಕಾರು ಓಡಿಸಿ, ಮನೆ ಸೇರುತ್ತಾರೆ. ಬೆಂಗಳೂರಿನಲ್ಲಿರುವ ಬಹುತೇಕರು ಹೊಸಕೋಟೆ ರಸ್ತೆಯನ್ನು ಆಯ್ಕೆ ಮಾಡಿಕೊಳ್ಳುವುದೇ ಹೆಚ್ಚು. ಬಿಗ್‌ ಬೇ– ಕೆಫೆಯಂಥ ಕೆಲ ತಾಣಗಳಲ್ಲಿ ಉಪಾಹಾರ ಸೇವಿಸಿ ಮರಳುತ್ತಾರೆ. ಆದರೆ ಮೀಟ್‌ಅಪ್‌ಗಳಲ್ಲಿ ಮಧ್ಯಾಹ್ನ ಸಂಜೆಯವರೆಗೂ ಕಾಲ ಕಳೆಯಲು ಅವಕಾಶವಿದೆ.

‘ಕಾರ್‌ ಮೀಟ್‌ಅಪ್‌ ಮಾತ್ರವಲ್ಲ. ‘ಕಾರ್‌ ಸ್ಪಾಟಿಂಗ್‌’ ಎಂಬ ಸಂಸ್ಕೃತಿಯೂ ಇದರ ಜತೆಜತೆಗೇ ಹುಟ್ಟಿಕೊಂಡಿದೆ. ಇಲ್ಲಿ ಪಾಲ್ಗೊಳ್ಳುವವರು ಕಾರಿನೊಂದಿಗೆ ಬಂದವರಲ್ಲ. ಬದಲಿಗೆ ಇಂಥ ಮೀಟ್‌ಅಪ್‌ಗಳಿಗೆ ಬರುವ ಹೊಸ ಹೊಸ ನಮೂನೆಯ ಕಾರುಗಳ ಚಿತ್ರ, ದೃಶ್ಯವನ್ನು ಸೆರೆಹಿಡಿದು ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಳ್ಳುತ್ತಾರೆ. ಆದರೆ ಇದು ಇತ್ತೀಚೆಗೆ ಅಲರ್ಜಿಯಾಗುವಷ್ಟರ ಮಟ್ಟಿಗೆ ಹೆಚ್ಚಿದೆ ಎನ್ನುತ್ತಾರೆ ಕೆಲ ಆಯೋಜಕರು.

‘ಭಾರತದಲ್ಲಿ ಕಾರು ಸ್ಪೋರ್ಟ್ಸ್‌ ಅನ್ನು ಎಂದಿಗೂ ಮನರಂಜನೆಯ ಸರಕನ್ನಾಗಿ ನೋಡಲೇ ಇಲ್ಲ. ದೆಹಲಿಯಲ್ಲಿರುವ ಬುದ್ಧ ಸರ್ಕೀಟ್‌ ಆರಂಭದಲ್ಲಿ ಸದ್ದು ಮಾಡಿತಾದರೂ, ಅಲ್ಲಿಗೆ ಕಾರು ಆಮದು ಮಾಡುವ ಸುಂಕ, ತೆಗೆದುಕೊಂಡು ಹೋಗುವ ಖರ್ಚು ಮತ್ತು ನೋಡಲು ಬರುವವರಿಗೆ ದುಬಾರಿ ಟಿಕೆಟ್‌ನಿಂದಾಗಿ ಯಶಸ್ವಿ ಆಗಲಿಲ್ಲ. ಹೀಗಾಗಿ ಪರ್ಫಾಮೆನ್ಸ್ ಕಾರು ಹೊಂದಿರುವವರಿಗೆ ಹೆದ್ದಾರಿಯೇ ಟ್ರ್ಯಾಕ್‌ಗಳಾಗಿವೆ. ಆದರೆ ಹೀಗೆ ಬೆಳೆಯುತ್ತಿರುವ ಕಾರು ಕ್ರೇಜ್‌ನಿಂದಾಗಿ ಬೆಂಗಳೂರಿನ ಸುತ್ತಮುತ್ತ ಅಂತರರಾಷ್ಟ್ರೀಯ ಆಟೊಮೊಬೈಲ್‌ ಒಕ್ಕೂಟದಿಂದ (ಎಫ್‌ಐಎ) ಗುಣಮಟ್ಟದ ಮೂರು ರೇಸಿಂಗ್‌ ಟ್ರ್ಯಾಕ್‌ಗಳು ನಿರ್ಮಾಣವಾಗುವ ಮಾಹಿತಿ ಇದೆ. ಇಂಥ ಒಂದು ಟ್ರ್ಯಾಕ್ ನಿರ್ಮಾಣಕ್ಕೆ ಸುಮಾರು 100 ಎಕರೆ ಜಾಗ ಬೇಕು. ಪರ್ಫಾಮೆನ್ಸ್ ಕಾರುಗಳ ಉತ್ತಮ ಸಂಗ್ರಹ ಹೊಂದಿರುವ ಬಿಲ್ಡರ್‌ ಭೂಪೇಶ್ ರೆಡ್ಡಿ ಅವರೂ ಇಂಥದ್ದೊಂದು ಟ್ರ್ಯಾಕ್‌ ಅನ್ನು ನಿರ್ಮಿಸುತ್ತಿದ್ದಾರೆ’ ಎಂದೆನ್ನುತ್ತಾರೆ ನೇಸರ.

ಮೀಟ್‌ಅಪ್‌ಗಳು ಅಥವಾ ಸಾಹಸಗಳು ಆರೋಗ್ಯಕರವಾಗಿದ್ದಲ್ಲಿ ಉತ್ತಮ. ರಸ್ತೆಯಲ್ಲಿ ಅನಗತ್ಯವಾಗಿ ರೇಸ್ ಮಾಡುವ ಮೀಟ್‌ಅಪ್‌ಗಳು ಕಾನೂನು ಬಾಹಿರ. ಅಂಥ ಮೀಟ್‌ಅಪ್‌ಗಳಿಗೆ ಹೋಗಬೇಕೆನ್ನುವವರು ಅಲ್ಲಿ ಪಾಲ್ಗೊಳ್ಳುವ ಇತರರೊಂದಿಗೆ, ತಂದಿರುವ ಕಾರುಗಳನ್ನು ಗೌರವದಿಂದ ಕಾಣುವುದು ಮುಖ್ಯ. ಮತ್ತೊಬ್ಬರ ಕಾರಿನ ಚಿತ್ರ ತೆಗೆಯುವ, ಕಾರಿನಲ್ಲಿ ಕೂರುವ ಮುನ್ನ ಅನುಮತಿ ಪಡೆಯುವ ಸೌಜನ್ಯ ಮೆರೆಯಬೇಕು. ಜತೆಗೆ ಭೇಟಿಯ ಸ್ಥಳದಲ್ಲಿನ ಘನತೆಯನ್ನು ಕಾಪಾಡಬೇಕು ಎಂಬ ಮಾತುಗಳು ಆಯೋಜಕರದ್ದು. ಆದರೆ ಅಂತಿಮವಾಗಿ ಇಲ್ಲಿಂದ ಮಧುರ ನೆನಪುಗಳೊಂದಿಗೆ, ಮುಂದಿನ ವಾರದ ಕನಸು ಆರಂಭವಾಗುತ್ತದೆ.

ಅಂದಹಾಗೆ... ಈ ಭಾನುವಾರ ಯಾವ ಕಾರ್‌ ಮೀಟ್‌ಅಪ್‌ ನಿಮ್ಮದು...?

ಕಾರ್ಸ್ ಆ್ಯಂಡ್‌ ಕಾಫಿ ಆಯೋಜಿಸಿದ್ದ ಮೀಟ್‌ಅಪ್‌ನಲ್ಲಿ ಪಾಲ್ಗೊಂಡ ಕಾರುಗಳ ಫೋಟೊ ತೆಗೆಯಲು ಮುಗಿಬಿದ್ದ ಆಸಕ್ತರು
ಕಾರ್ಸ್ ಆ್ಯಂಡ್‌ ಕಾಫಿ ಆಯೋಜಿಸಿದ್ದ ಮೀಟ್‌ಅಪ್‌ನಲ್ಲಿ ಪಾಲ್ಗೊಂಡ ಕಾರುಗಳ ಫೋಟೊ ತೆಗೆಯಲು ಮುಗಿಬಿದ್ದ ಆಸಕ್ತರು
ಹೇಗಿದೆ ನನ್ ಕಾರು!
ಹೇಗಿದೆ ನನ್ ಕಾರು!
ಕಾರ್‌ ಮೀಟ್‌ಅಪ್‌ನಲ್ಲಿ ಎಂಜಿನ್‌ ಕುರಿತ ಚರ್ಚೆಯಲ್ಲಿ ಕಾರು ಮೋಹಿಗಳು
ಕಾರ್‌ ಮೀಟ್‌ಅಪ್‌ನಲ್ಲಿ ಎಂಜಿನ್‌ ಕುರಿತ ಚರ್ಚೆಯಲ್ಲಿ ಕಾರು ಮೋಹಿಗಳು
ಕಾರ್ ಮೀಟ್‌ಅಪ್‌ಗಳಲ್ಲಿ ಸೇರಿರುವ ತರಹೇವಾರಿ ಮಾದರಿಯ ಕಾರುಗಳು
ಕಾರ್ ಮೀಟ್‌ಅಪ್‌ಗಳಲ್ಲಿ ಸೇರಿರುವ ತರಹೇವಾರಿ ಮಾದರಿಯ ಕಾರುಗಳು
ಕಾರ್ ಮೀಟ್‌ಅಪ್‌ಗಳಲ್ಲಿ ಹಳೆಯ ಕಾರುಗಳಿಗೂ ಸ್ಥಾನಮಾನ
ಕಾರ್ ಮೀಟ್‌ಅಪ್‌ಗಳಲ್ಲಿ ಹಳೆಯ ಕಾರುಗಳಿಗೂ ಸ್ಥಾನಮಾನ
ಕೆಫೆಯಲ್ಲಿ ಸಾಲಾಗಿ ನಿಂತಿರುವ ಐಷಾರಾಮಿ ಕಾರುಗಳು
ಕೆಫೆಯಲ್ಲಿ ಸಾಲಾಗಿ ನಿಂತಿರುವ ಐಷಾರಾಮಿ ಕಾರುಗಳು
ಕಾರ್‌ ಮೀಟ್‌ಅಪ್‌ಗೆ ಬಂದ ಕಾರುಗಳು
ಕಾರ್‌ ಮೀಟ್‌ಅಪ್‌ಗೆ ಬಂದ ಕಾರುಗಳು
ಪುಟಾಣಿ ಕಾರಿನೊಂದಿಗೆ ಮೀಟ್‌ಅಪ್‌ಗೆ ಪಾಲಕರೊಂದಿಗೆ ಬಂದ ಬಾಲಕ
ಪುಟಾಣಿ ಕಾರಿನೊಂದಿಗೆ ಮೀಟ್‌ಅಪ್‌ಗೆ ಪಾಲಕರೊಂದಿಗೆ ಬಂದ ಬಾಲಕ
ವಿಂಟೇಜ್‌ ಕಾರುಗಳಿಗೂ ಇದೆ ಕಾರ್‌ ಮೀಟ್‌ಅಪ್‌ನಲ್ಲಿ ಸ್ಥಾನ
ವಿಂಟೇಜ್‌ ಕಾರುಗಳಿಗೂ ಇದೆ ಕಾರ್‌ ಮೀಟ್‌ಅಪ್‌ನಲ್ಲಿ ಸ್ಥಾನ
ಹೆದ್ದಾರಿಯಲ್ಲಿ ಐಷಾರಾಮಿ ಕಾರುಗಳ ಪೆರೇಡ್
ಹೆದ್ದಾರಿಯಲ್ಲಿ ಐಷಾರಾಮಿ ಕಾರುಗಳ ಪೆರೇಡ್
ನೇಸರ
ನೇಸರ
ಅರ್ಜುನ್ ಬೀರ್ ಸಿಂಗ್
ಅರ್ಜುನ್ ಬೀರ್ ಸಿಂಗ್
ಸೂಪರ್ ಕಾರು ಹೊಂದಿರುವವರ ಜತೆ ಮಾತನಾಡಲು ಕೆಲವರು ಕೀಳರಿಮೆ ಅನುಭವಿಸುತ್ತಿದ್ದರು. ಆದರೆ ಕಾರ್‌ ಮೀಟ್‌ಅಪ್‌ನಲ್ಲಿ ಹೈ ಕಲ್ಚರ್‌ ಎಂಬ ಮೇಲರಿಮೆ ಇಲ್ಲ. ಕಾರಿನೊಂದಿಗೆ ಮೀಟ್‌ಅಪ್‌ಗಳಿಗೆ ಬರುವುದು ಕಾಫಿ ಕುಡಿಯುವುದು ಕಾರು ತೋರಿಸುವುದಷ್ಟೇ.
ನೇಸರ, ಕಾರ್ಸ್‌ ಅಂಡ್ ಕಾಫಿ
ವಿದೇಶಗಳಲ್ಲಿ ಆಯೋಜಿಸಲಾಗುವ ಕಾರ್ ಮೀಟ್‌ಅಪ್‌ಗಳಲ್ಲಿ ಪಾಲ್ಗೊಂಡಿದ್ದೇನೆ. ಅಂಥದ್ದೊಂದು ಇಲ್ಲಿಯೂ ಇದ್ದಿದ್ದರೆ ಎಂದೆನಿಸುತ್ತಿತ್ತು. ಈಗ ಬೆಂಗಳೂರಿನಲ್ಲೂ ಇಂಥ ಸಂಸ್ಕೃತಿ ಆರಂಭವಾಗಿದೆ. ಕಾರ್ಸ್ ಅಂಡ್ ಕಾಫಿ ಆಯೋಜಿಸುವ ಮೀಟ್‌ಅಪ್‌ಗಳಲ್ಲಿ ನನ್ನ ಆಕ್ಟೀವಿಯಾ ಟಿಎಸ್‌ಐ ತೆಗೆದುಕೊಂಡು ಹೋಗಿದ್ದೇನೆ. ಹೊಸ ಸ್ನೇಹಿತರು ಕಾರು ಪ್ರೀತಿಸುವ ಸಮುದಾಯ ಹಲವು ಹೊಸತುಗಳು ನನಗೆ ಸಿಕ್ಕಿವೆ.
ಶರಣ್ ಕಾರು ಪ್ರಿಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT