ಗುರುವಾರ , ಮೇ 13, 2021
17 °C
ಕಾರವಾರದಲ್ಲಿ ಬೇಡಿಕೆ ಪಡೆಯುತ್ತಿರುವ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳು

‘ಬ್ಯಾಟರಿ ವಾಹನ’ಗಳತ್ತ ಜನರ ಆಸಕ್ತಿ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಒಂದೆಡೆ ಪೆಟ್ರೋಲ್, ಡೀಸೆಲ್ ದರ ಏರಿಕೆಯ ಆಘಾತ. ಮತ್ತೊಂದೆಡೆ ಕೊರೊನಾ ಕಾರಣದಿಂದ ಸಾರ್ವಜನಿಕ ಸಾರಿಗೆಯ ಬಳಕೆಗೆ ಹಲವರ ಹಿಂದೇಟು.. ಈ ಕಾರಣಗಳಿಂದಾಗಿ ನಗರದಲ್ಲಿ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳಿಗೆ ಬೇಡಿಕೆ ನಿಧಾನವಾಗಿ ಕುದುರುತ್ತಿದೆ.

ಸಣ್ಣ ಮತ್ತು ಸಮತಟ್ಟಾದ ಭೌಗೋಳಿಕ ಪ್ರದೇಶ ಹೊಂದಿರುವ ಕಾರವಾರದಲ್ಲಿ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳ ಮಾರಾಟ ಮಳಿಗೆಯೂ ಕೆಲವು ತಿಂಗಳ ಹಿಂದೆ ಆರಂಭವಾಗಿದೆ. ದಿನವೊಂದಕ್ಕೆ ಸರಾಸರಿ 15 ಮಂದಿ ಬಂದು ವಾಹನಗಳ ಬಗ್ಗೆ ವಿಚಾರಿಸಿಕೊಂಡು ಹೋಗುತ್ತಿದ್ದಾರೆ. 

‘ಬ್ಯಾಟರಿ ಚಾಲಿತ ವಾಹನಗಳಿಗೆ ಜನರ ಬೇಡಿಕೆಯಿದೆ. ನಮ್ಮ ಶೋರೂಂ ಆರಂಭವಾಗಿ ಕೆಲವೇ ತಿಂಗಳಾಗಿವೆ. ಪ್ರದರ್ಶನಕ್ಕೆ ಇಟ್ಟಿದ್ದ ದ್ವಿಚಕ್ರ ವಾಹನಗಳೆಲ್ಲವೂ ಮಾರಾಟವಾಗಿವೆ ಹಾಗೂ ಮುಂಗಡ ಬುಕ್ಕಿಂಗ್ ಆಗಿವೆ. ಗಂಟೆಗೆ ಗರಿಷ್ಠ 60 ಕಿ.ಮೀ ವೇಗದಲ್ಲಿ ಚಲಿಸಬಹುದಾದ ಸ್ಕೂಟರ್‌ಗಳನ್ನು ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಬೇಕು. ಅಂಥ ವಾಹನಗಳನ್ನು ಕಾರವಾರದ 22 ಮಂದಿ ಮತ್ತು ಗೋವಾದ ಎಂಟು ಮಂದಿ ಈಗಾಗಲೇ ಖರೀದಿಸಿದ್ದಾರೆ’ ಎನ್ನುತ್ತಾರೆ ಶೋರೂಂನ ಶಿವರಾಜ ನಾಯ್ಕ.

‘ಗಂಟೆಗೆ 25 ಕಿಲೋಮೀಟರ್‌ಗಳಷ್ಟು ವೇಗದಲ್ಲಿ ಚಲಿಸಬಹುದಾದ ಸ್ಕೂಟರ್‌ಗಳಿಗೆ ಆರ್.ಟಿ.ಒ ನೋಂದಣಿ, ಚಾಲನಾ ಪರವಾನಗಿ ಅಥವಾ ಆರ್.ಸಿ ದಾಖಲೆಗಳ ಅಗತ್ಯವಿಲ್ಲ. ಆ ಮಾದರಿಯಲ್ಲಿ ಸುಮಾರು 30 ವಾಹನಗಳು ಮಾರಾಟವಾಗಿವೆ’ ಎಂದು ವಿವರಿಸುತ್ತಾರೆ.

‘ಹಿರಿಯರಿಗೆ ದ್ವಿಚಕ್ರ ವಾಹನ ಚಲಾಯಿಸುವುದು ಕಷ್ಟವಾಗುತ್ತದೆ. 18 ವರ್ಷದ ಒಳಗಿನ ಮಕ್ಕಳಿಗೆ ಚಾಲನಾ ಪರವಾನಗಿ ಸಿಗುವುದಿಲ್ಲ. ಅಂಥವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ವಿಚಾರಿಸುತ್ತಿದ್ದಾರೆ. ಈಗ ಖರೀದಿಸಿದವರಲ್ಲಿ ಬಹುತೇಕರು ಉದ್ಯೋಗಿಗಳು. ಕಳೆದ ವರ್ಷ ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಿಂದಲೇ ಕೆಲಸ ಮಾಡಲು ಬಂದವರಲ್ಲಿ ಹಲವರು ಇನ್ನೂ ಊರಿನಲ್ಲೇ ಇದ್ದಾರೆ. ಅವರು ಬ್ಯಾಟರಿ ಚಾಲಿತ ವಾಹನಗಳತ್ತ ಒಲವು ತೋರಿದ್ದಾರೆ’ ಎಂದು ಹೇಳುತ್ತಾರೆ.‌

ಚಾರ್ಜಿಂಗ್ ಕೇಂದ್ರದ ಅಗತ್ಯ

‘ಕಾರವಾರ ನಗರದಲ್ಲಿ ಪ್ರಸ್ತುತ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳಿಗೆ ಬರುತ್ತಿರುವ ಬೇಡಿಕೆಯನ್ನು ಗಮನಿಸಿದರೆ, ಶೀಘ್ರವೇ ಇಲ್ಲಿ ಬ್ಯಾಟರಿ ಚಾರ್ಜಿಂಗ್‌ನ ಒಂದೆರಡು ಕೇಂದ್ರಗಳ ಸ್ಥಾಪನೆ ಮಾಡಬೇಕಾದೀತು’ ಎನ್ನುತ್ತಾರೆ ಶಿವರಾಜ ನಾಯ್ಕ.

‘ವಾಹನಗಳು ಚಲಿಸುತ್ತಿರುವಾಗಲೇ ಬ್ಯಾಟರಿ ಚಾರ್ಜ್ ಆಗುವಂತೆ, ಒಮ್ಮೆ ಸಂಪೂರ್ಣ ಚಾರ್ಜ್ ಆದರೆ ಕನಿಷ್ಠ 150 ಕಿ.ಮೀ ದೂರ ಹೋಗಲು ಸಾಧ್ಯವಾಗುವಂಥ ವಾಹನಗಳ ಬಗ್ಗೆ ಹೆಚ್ಚಿನ ಬೇಡಿಕೆಯಿದೆ. ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಅಭಿವೃದ್ಧಿಯಾದಂತೆ ಇವೂ ಸಾಧ್ಯವಾಗಬಹುದು’ ಎಂದು ಅವರು ಹೇಳುತ್ತಾರೆ.

***

ಉತ್ತರ ಕನ್ನಡ ಜಿಲ್ಲೆಯು ಗುಡ್ಡಗಾಡು ಪ್ರದೇಶಗಳಿಂದ ಕೂಡಿರುವ ಕಾರಣ ಇಲ್ಲಿ ಇತರ ಜಿಲ್ಲೆಗಳಿಗೆ ಹೋಲಿಸಿದರೆ ವಿದ್ಯುತ್ ಚಾಲಿತ ವಾಹನಗಳಿಗೆ ಬೇಡಿಕೆ ಸ್ವಲ್ಪ ಕಡಿಮೆಯಿದೆ.

- ರಾಮಕೃಷ್ಣ ರೈ, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ.

***

ಕಾರವಾರದಲ್ಲಿ ಇ–ವಾಹನ (10 ವರ್ಷಗಳಲ್ಲಿ)

ದ್ವಿಚಕ್ರ ವಾಹನ: 30

ಕಾರು: 01

ಆಟೊ ರಿಕ್ಷಾ: 01

 

ಸಿ.ಎನ್.ಜಿ ಆಧಾರಿತ ವಾಹನ

ಕಾರುಗಳು: 68

ಆಟೊ: 890

* ಆಧಾರ: ಕಾರವಾರ ಆರ್.ಟಿ.ಒ ಕಚೇರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು