ಹಸೀನಾ ಪಕ್ಷಕ್ಕೆ ಮತ್ತೆ ಅಧಿಕಾರ

7
ಸತತ ಮೂರನೇ ಬಾರಿಗೆ ಪ್ರಧಾನಿ ಹುದ್ದೆಗೇರಲು ಸಿದ್ಧತೆ

ಹಸೀನಾ ಪಕ್ಷಕ್ಕೆ ಮತ್ತೆ ಅಧಿಕಾರ

Published:
Updated:
Prajavani

ಢಾಕಾ: ಬಾಂಗ್ಲಾ ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ನೇತೃತ್ವದ ಮೈತ್ರಿಕೂಟ ಭಾರಿ ಬಹುಮತದಿಂದ ಜಯ ಗಳಿಸಿದೆ. 

‘300ರಲ್ಲಿ 288 ಸ್ಥಾನಗಳಲ್ಲಿ ಅವಾಮಿ ಲೀಗ್ ಮೈತ್ರಿಕೂಟ ಗೆಲುವು ಸಾಧಿಸಿದೆ. ವಿರೋಧ ಪಕ್ಷ ಜತಿಯಾ ಒಕ್ಯಾ ಫ್ರಂಟ್–ನ್ಯಾಷನಲ್ ಯೂನಿಟಿ ಫ್ರಂಟ್ (ಎನ್‌ಯುಎಫ್) 7 ಸ್ಥಾನ ಹಾಗೂ ಪಕ್ಷೇತರರು 3 ಸ್ಥಾನ ಗಳಿಸಿದ್ದಾರೆ’ ಎಂದು ಚುನಾವಣಾ ಆಯೋಗದ ಕಾರ್ಯದರ್ಶಿ ಹಲಾಲುದ್ದೀನ್ ಅಹ್ಮದ್ ಸೋಮವಾರ ತಿಳಿಸಿದ್ದಾರೆ. 

ಒಂದು ಕ್ಷೇತ್ರದಲ್ಲಿ ಮತದಾನ ಮುಂದೂಡಲಾಗಿತ್ತು. ಇನ್ನೊಂದು ಕ್ಷೇತ್ರದಲ್ಲಿ ಅಭ್ಯರ್ಥಿ ಮೃತಪಟ್ಟಿದ್ದರಿಂದ ಫಲಿತಾಂಶ ಘೋಷಿಸಲಾಗಿಲ್ಲ.  ಚುನಾವಣಾ ಫಲಿತಾಂಶವನ್ನು ವಿರೋಧ ಪಕ್ಷ ಎನ್‌ಯುಎಫ್‌ ತಳ್ಳಿಹಾಕಿದೆ. 

‘ಬಹುತೇಕ ಎಲ್ಲಾ ಮತಗಟ್ಟೆಗಳಲ್ಲೂ ಅಕ್ರಮ ನಡೆದಿದೆ ಎಂದು ನಮಗೆ ವರದಿ ದೊರಕಿದೆ. ಈ ನಾಟ
ಕೀಯ ಚುನಾವಣೆಯನ್ನು ತಕ್ಷಣವೇ ರದ್ದುಪಡಿಸಿ, ಪಕ್ಷಪಾತಿಯಲ್ಲದ ಮಧ್ಯಂತರ ಸರ್ಕಾರದ ನೇತೃತ್ವದಲ್ಲಿ ಹೊಸದಾಗಿ ಚುನಾವಣೆ ನಡೆಸಬೇಕು’ ಎಂದು ಎನ್‌ಯುಎಫ್ ಮುಖ್ಯಸ್ಥ ಹಾಗೂ ವಕೀಲ ಕಮಲ್ ಹುಸೇನ್ ಆಯೋಗಕ್ಕೆ ಆಗ್ರಹಿಸಿದ್ದಾರೆ. 

ಭ್ರಷ್ಟಾಚಾರ ಪ್ರಕರಣದಲ್ಲಿ 17 ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಪ್ರಧಾನಿ ಹಾಗೂ ಬಿಎನ್‌ಪಿ ಮುಖ್ಯಸ್ಥೆ ಖಲೀದಾ ಜಿಯಾ ಅವರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಕ್ಕೊಳಗಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಬಿಎನ್‌ಪಿ ಕಾರ್ಯದರ್ಶಿ ಮಿರ್ಜಾ ಫಕ್ರುಲ್ ಇಸ್ಲಾಂ ಅಲಂಗಿರ್ ಚುನಾವಣೆಯಲ್ಲಿ ಪಕ್ಷ ಮುನ್ನಡೆಸಿದ್ದರು.

‘ಇದು ನಗೆಪಾಟಲಿನ ಚುನಾವಣೆ. ಪಕ್ಷಪಾತಿ ಸರ್ಕಾರದ ಅಡಿಯಲ್ಲಿ ನ್ಯಾಯಯುತ ಹಾಗೂ ಮುಕ್ತ ಮತದಾನ ಸಾಧ್ಯವಿಲ್ಲ ಎನ್ನುವುದು ಸಾಬೀತಾಗಿದೆ’ ಎಂದು ಮಿರ್ಜಾ ಫಕ್ರುಲ್ ಹೇಳಿದ್ದಾರೆ. 

‘ಚುನಾವಣೆಗೆ ಸಂಬಂಧಿಸಿದ ಗಲಭೆಯಲ್ಲಿ ಭದ್ರತಾ ಪಡೆ ಸಿಬ್ಬಂದಿಯೊಬ್ಬರು ಸೇರಿದಂತೆ 18 ಮಂದಿ ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ’ ಎಂದು ‘ಡೈಲಿ ಸ್ಟಾರ್’ ವರದಿ ಮಾಡಿದೆ. ಮೃತರಲ್ಲಿ ಬಹುತೇಕರು ಆಡಳಿತಾರೂಢ ಪಕ್ಷದ ಕಾರ್ಯಕರ್ತರು ಹಾಗೂ ಉಳಿದವರು ವಿರೋಧ ಪಕ್ಷದ ಕಾರ್ಯಕರ್ತರಾಗಿದ್ದಾರೆ. 

ಮತ್ತೆ ಚುನಾವಣೆ ಇಲ್ಲ: ‘ಮತದಾನಕ್ಕೂ ಹಿಂದಿನ ರಾತ್ರಿ ಮತಗಟ್ಟೆಗಳಲ್ಲಿ ಅಕ್ರಮ ನಡೆದಿದೆ ಎನ್ನುವ ವಿರೋಧ ಪಕ್ಷಗಳ ಆರೋಪ ಸಂಪೂರ್ಣವಾಗಿ ಸುಳ್ಳು. ಹೊಸದಾಗಿ ಚುನಾವಣೆ ನಡೆಸುವ ಅವಶ್ಯಕತೆ ಇಲ್ಲ’ ಎಂದು ಚುನಾವಣಾ ಆಯೋಗದ ಮುಖ್ಯಸ್ಥ ಕೆ.ಎಂ.ನೂರುಲ್ ಹುದಾ ಸ್ಪಷ್ಟಪಡಿಸಿದ್ದಾರೆ.  

ಐತಿಹಾಸಿಕ ಗೆಲುವು ದಾಖಲೆ

11ನೇ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ 71 ವರ್ಷದ ಹಸೀನಾ ಅವರು ಸತತ ಮೂರನೇ ಬಾರಿಗೆ ಹಾಗೂ ಒಟ್ಟು ನಾಲ್ಕನೇ ಬಾರಿಗೆ ಪ್ರಧಾನಿ ಹುದ್ದೆ ನಿರ್ವಹಿಸಲು ಸಿದ್ಧರಾಗಿದ್ದಾರೆ. ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಬಾರಿ, ಆಡಳಿತಾರೂಢ ಮೈತ್ರಿಪಕ್ಷದ ಮತಗಳಿಕೆ ಮತ್ತಷ್ಟು ಏರಿಕೆಯಾಗಿದೆ. 2008ರಲ್ಲಿ 263 ಸ್ಥಾನಗಳಲ್ಲಿ ಪಕ್ಷ ಗೆಲುವು ಸಾಧಿಸಿತ್ತು. 

ಗೋಪಾಲ್‌ಗಂಜ್ ಕ್ಷೇತ್ರದಲ್ಲಿ ಹಸೀನಾ 2,29,639 ಮತಗಳನ್ನು ಗಳಿಸಿ ಗೆದ್ದಿದ್ದರೆ, ವಿರೋಧ ಪಕ್ಷ ಬಿಎನ್‌ಪಿ ಅಭ್ಯರ್ಥಿ ಕೇವಲ 123 ಮತ ಗಳಿಸಿದ್ದಾರೆ. 

ಬಾಂಗ್ಲಾದೇಶದ ಸ್ಥಾಪಕ, ಮೊದಲ ಅಧ್ಯಕ್ಷ ಶೇಖ್ ಮುಜಿಬರ್ ರಹಮಾನ್ ಅವರ ಪುತ್ರಿಯಾಗಿರುವ ಹಸೀನಾ, 1975ರಲ್ಲಿ ಆವಾಮಿ ಲೀಗ್ ಪಕ್ಷ ಸೇರುವ ಮೂಲಕ ಸಕ್ರಿಯ ರಾಜಕೀಯ ಪ್ರವೇಶಿಸಿದರು. ತಮ್ಮ ಪತಿಯೊಂದಿಗೆ ಸ್ವಯಂ ಗಡೀಪಾರಾಗಿ ಭಾರತದಲ್ಲಿ ವಾಸವಿದ್ದ ಅವರು 1981ರಲ್ಲಿ ಅಲ್ಲಿಂದಲೇ ಆವಾಮಿ ಲೀಗ್ ಅಧ್ಯಕ್ಷರಾಗಿ ಆಯ್ಕೆಯಾದರು. ಅದೇ ವರ್ಷ ಬಾಂಗ್ಲಾದೇಶಕ್ಕೆ ಮರಳಿದ ಅವರು, ಸೇನಾ ಆಡಳಿತ ಕೊನೆಗಾಣಿಸಲು ಜಿಯಾ ಜತೆಗೆ ಕೈಜೋಡಿಸಿದರು. ಆದರೆ 1990ರಲ್ಲಿ ಇಬ್ಬರೂ ಬೇರಾದ ಬಳಿಕ ವೈರಿಗಳಾದರು. 1996ರಲ್ಲಿ ಜಿಯಾ ಅವರನ್ನು ಸೋಲಿಸಿದ ಹಸೀನಾ, ಪ್ರಜಾಪ್ರಭುತ್ವದ ಬಳಿಕ ಪ್ರಧಾನಿ ಹುದ್ದೆಗೇರಿದ ಮೊದಲಿಗರಾದರು. ಪೂರ್ಣಾವಧಿಗೆ ಪ್ರಧಾನಿ ಹುದ್ದೆ ನಿರ್ವಹಿಸಿದವರಲ್ಲೂ ಇವರು ಮೊದಲು. 

ಪ್ರಧಾನಿ ಮೋದಿ ಅಭಿನಂದನೆ

ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದು, ಬಾಂಗ್ಲಾದ ಅಭಿವೃದ್ಧಿಗೆ ಭಾರತದ ನೆರವು ಮುಂದುವರಿಯಲಿದೆ ಎಂದು ಭರವಸೆ ನೀಡಿದ್ದಾರೆ. 

ದೂರವಾಣಿ ಮೂಲಕ ಮಾತನಾಡಿದ ಮೋದಿ, ‘ಹಸೀನಾ ಅವರ ನಾಯಕತ್ವದಲ್ಲಿ ಬಾಂಗ್ಲಾ ದೇಶ ಸಾಧಿಸಿರುವ ಅಭಿವೃದ್ಧಿಯ ಫಲವಾಗಿಯೇ ಅವರು ಈ ಗೆಲುವು ದಾಖಲಿಸಿದ್ದಾರೆ’ ಎಂದು ಹೇಳಿದ್ದಾಗಿ ಬಾಂಗ್ಲಾ ಪ್ರಧಾನಿಯ ಮಾಧ್ಯಮ ಕಾರ್ಯದರ್ಶಿ ಇಹ್ಸಾನುಲ್ ಕರೀಂ ತಿಳಿಸಿದ್ದಾರೆ. 

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಹ ಹಸೀನಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. 

***

ಮುಕ್ತ ಹಾಗೂ ನ್ಯಾಯಯುತ ಚುನಾವಣೆಗೆ ಕಾರಣರಾದ ಕಾನೂನು ಸುವ್ಯವಸ್ಥೆ ಕಾಪಾಡಿದವರು ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ

ಅಬ್ದುರ್ ರಹಮಾನ್, ಆವಾಮಿ ಲೀಗ್ ಜಂಟಿ ಕಾರ್ಯದರ್ಶಿ

ಈ ಚುನಾವಣೆಯ ಗೆಲುವು ನನಗೆ ವೈಯಕ್ತಿಕ ಲಾಭವಲ್ಲ. ದೇಶದ ಅಭಿವೃದ್ಧಿಯ ಗುರುತರ ಹೊಣೆಗಾರಿಕೆ ನನ್ನ ಮೇಲಿದೆ 

ಶೇಖ್ ಹಸೀನಾ, ನಿಯೋಜಿತ ಪ್ರಧಾನಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !