ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಂದರ್ಯ | ಕೂದಲ ಅಂದ–ಆರೋಗ್ಯಕ್ಕೆ ಮನೆ ಮದ್ದು

Last Updated 4 ಫೆಬ್ರುವರಿ 2022, 20:30 IST
ಅಕ್ಷರ ಗಾತ್ರ

ರೇಷ್ಮೆಯಂತಹ ಹೊಳಪಿನ ಕೂದಲು ಇರಬೇಕೆಂದು ಎಲ್ಲರೂ ಬಯಸುತ್ತಾರೆ. ಉದ್ದದ, ನುಣುಪಾದ ಕೂದಲನ್ನು ಬೆಳೆಸುವುದಕ್ಕೆ ಬೇಕಾದಷ್ಟು ಕಸರತ್ತು ಮಾಡುತ್ತಾರೆ. ಹೆಣ್ಣುಮಕ್ಕಳ ಸೌಂದರ್ಯದ ಭಾಗವಾಗಿರುವ ಕೂದಲಿನ ಅಂದ ಕಾಪಾಡಿಕೊಳ್ಳುವುದು ಇತ್ತೀಚೆಗೆ ಸವಾಲಾಗಿದೆ. ಅಂದ–ಚಂದ್ರ ಮಾತ್ರವಲ್ಲ, ಕೂದಲಿನ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟ. ಈ ಕಾರಣದಿಂದ ಕೆಲವರು ಉದ್ದನೆಯ ಕೂದಲಿಗೆ ಕತ್ತರಿ ಹಾಕಿ ಮೊಟುದ್ದ ಮಾಡಿಕೊಳ್ಳುತ್ತಾರೆ.

ಕೂದಲಿನ ಅಂದ – ಆರೋಗ್ಯ ಕೆಡುವುದಕ್ಕೆ ಮಾಲಿನ್ಯ, ಸೂರ್ಯನ ಕಿರಣ ನೇರವಾಗಿ ಕೂದಲಿಗೆ ತಾಕುವುದು, ಪೋಷಕಾಂಶಗಳ ಕೊರತೆ ಸೇರಿದಂತೆ ಹಲವು ಕಾರಣಗಳಿವೆ. ಕೆಲವೊಂದು ಮನೆಮದ್ದುಗಳಿಂದಲೇ ಕೂದಲಿನ ಆರೋಗ್ಯ ಕಾಪಾಡಬಹುದು, ಅಂದವನ್ನೂ ಹೆಚ್ಚಿಸಿಕೊಳ್ಳಬಹುದು. ಅಂಥ ಕೆಲವು ಮನೆಮದ್ದುಗಳು ಇಲ್ಲಿವೆ;

ಮೊಟ್ಟೆಯ ಪ್ಯಾಕ್‌

ಮೊಟ್ಟೆಯ ಬಿಳಿಭಾಗ ಕೂದಲಿನ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೊಳಪಿನ ಕೂದಲಿಗೆ ಮೊಟ್ಟೆಯ ಬಿಳಿಭಾಗವನ್ನು ಹಚ್ಚಬೇಕು. ಇದರಲ್ಲಿರುವ ಪ್ರೊಟೀನ್‌, ವಿಟಮಿನ್‌ ಅಂಶವು ಕೂದಲು ಪೋಷಣೆಗೆ ಸಹಾಯಕ. ಇವು ಕೂದಲನ್ನು ಬುಡದಿಂದಲೂ ಗಟ್ಟಿಗೊಳಿಸಿ ಪೋಷಿಸುತ್ತವೆ. ಹಾನಿಯಾಗಿರುವ ಕೂದಲಿನ ಕಾಂತಿ ಹೆಚ್ಚಿಸುತ್ತದೆ.

ವಿಧಾನ: 2 ಮೊಟ್ಟೆಯ ಬಿಳಿಭಾಗವನ್ನು ತೆಗೆದುಕೊಂಡು ಚೆನ್ನಾಗಿ ಕಲೆಸಬೇಕು. ಕೂದಲಿಗೆ ನೀರು ಚಿಮುಕಿಸಿಕೊಂಡು ಮೊಟ್ಟೆಯನ್ನು ಬುಡದಿಂದ ಹಚ್ಚಬೇಕು. ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಇದನ್ನು ವಾರಕೊಮ್ಮೆ ಮಾಡುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.

ಲೋಳೆಸರ ಹಾಗೂ ಈರುಳ್ಳಿರಸ

ಈರುಳ್ಳಿ ಕೂದಲಿನ ಸರ್ವ ಸಮಸ್ಯೆಗೂ ಮದ್ದು. ಕೂದಲ ಬೆಳವಣಿಗೆಗೂ ಈರುಳ್ಳಿ ರಸ ಸಹಾಯ ಮಾಡುತ್ತದೆ. ಲೋಳೆಸರದಲ್ಲಿ ಪೋಷಕಾಂಶ ಸಮೃದ್ಧವಾಗಿದ್ದು ಇದು ಶುಷ್ಕ ಹಾಗೂ ಹಾನಿಗೊಳಗಾದ ಕೂದಲನ್ನು ಸರಿಪಡಿಸಿ ರೇಷ್ಮೆಯಂತೆ ನುಣ್ಣಗೆ ಹೊಳೆಯುವಂತೆ ಮಾಡುತ್ತದೆ.

ವಿಧಾನ: ಈರುಳ್ಳಿಯನ್ನು ರುಬ್ಬಿ ರಸ ಹಿಂಡಿಟ್ಟುಕೊಳ್ಳಿ. ಲೋಳೆಸರದ ತಿರುಳನ್ನು ತೆಗೆದು ಅದರೊಂದಿಗೆ ಈರುಳ್ಳಿ ರಸವನ್ನು ಚೆನ್ನಾಗಿ ಮಿಶ್ರಣ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ. 40 ನಿಮಿಷ ಬಿಟ್ಟು ತಲೆಸ್ನಾನ ಮಾಡಿ.

ಬಾಳೆಹಣ್ಣಿನ ಪ್ಯಾಕ್‌

ಬಾಳೆಹಣ್ಣು ದೇಹದ ಆರೋಗ್ಯಕಷ್ಟೇ ಅಲ್ಲ, ಕೂದಲಿನ ಆರೋಗ್ಯಕ್ಕೂ ಬಹಳ ಮುಖ್ಯ. ಇದರಲ್ಲಿ ಪೊಟ್ಯಾಶಿಯಂ, ನೈಸರ್ಗಿಕ ಎಣ್ಣೆಯಂಶ ಅಧಿಕವಿದೆ. ಇದು ಒಣ ಕೂದಲನ್ನು ನೈಸರ್ಗಿಕವಾಗಿ ಮೃದುಗೊಳಿಸುತ್ತದೆ.

ವಿಧಾನ: ಕಳಿತ ಬಾಳೆಹಣ್ಣನ್ನು ನುಣ್ಣಗೆ ಮಾಡಿ ಅದನ್ನು ಕೂದಲಿಗೆ ಬುಡದಿಂದ ಹಚ್ಚಿ. ಒಂದು ಗಂಟೆ ಹಾಗೇ ಬಿಟ್ಟು ನಂತರ ಬಿಸಿನೀರಿನಿಂದ ತೊಳೆಯಿರಿ. ಇದನ್ನು ವಾರಕ್ಕೆ ಒಮ್ಮೆ ಮಾಡಿದರೆ ಉತ್ತಮ.

ಮೊಸರು ಹಾಗೂ ಲೋಳೆಸರ

ಮೊಸರಿನಲ್ಲೂ ಕೂದಲ ಆರೋಗ್ಯಕ್ಕೆ ಸೂಕ್ತ ಎನ್ನಿಸುವ ಹಲವು ಆರೋಗ್ಯಕರ ಅಂಶಗಳಿವೆ. ಇದರಲ್ಲಿ ವಿಟಮಿನ್‌ ಡಿ ಹಾಗೂ ಬಿ5 ಇದ್ದು ಕೂದಲನ್ನು ಹೊಳೆಯುವಂತೆ ಮಾಡುತ್ತದೆ ಹಾಗೂ ನುಣಪಾಗಿಸುತ್ತದೆ. ಒಣ ಹಾಗೂ ಶುಷ್ಕ ಕೂದಲನ್ನು ತೇವವಾಗುವಂತೆ ಮಾಡಿ ಕಾಂತಿ ಹೆಚ್ಚಿಸುತ್ತದೆ. ಲೋಳೆಸರದಲ್ಲೂ ವಿಟಮಿನ್ ಎ, ಸಿ ಹಾಗೂ ಇ ಇದ್ದು ಇದು ಕೂದಲ ಬೆಳವಣಿಗೆಗೆ ಸಹಕರಿಸುತ್ತದೆ.

ವಿಧಾನ: ಲೋಳೆಸರದ ತಿರುಳಿನೊಂದಿಗೆ 4 ಚಮಚ ಗಟ್ಟಿಮೊಸರನ್ನು ಮಿಶ್ರಣ ಮಾಡಿ. ನಾಲ್ಕೈದು ಹನಿ ತೆಂಗಿನೆಣ್ಣೆ ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ. ಕೈಬೆರಳಿನಿಂದ ಈ ಮಿಶ್ರಣವನ್ನು ಕೂದಲಿನ ಬುಡಕ್ಕೆ ಚೆನ್ನಾಗಿ ಹಚ್ಚಿ. 30 ರಿಂದ 40 ನಿಮಿಷ ಬಿಟ್ಟು ಚೆನ್ನಾಗಿ ತೊಳೆಯಿರಿ. ಇದರ ನಿರಂತರ ಬಳಕೆಯಿಂದ ಕೂದಲು ತುಂಬಾಸದೃಢವಾಗಿರುತ್ತದೆ.

ಬೆಣ್ಣೆಹಣ್ಣು–ಜೇನುತುಪ್ಪದ ಪ್ಯಾಕ್‌

ಒಣ ಹಾಗೂ ಸುಕ್ಕುಗಟ್ಟಿದ ಕೂದಲ ಸಮಸ್ಯೆಗೆ ಬೆಣ್ಣೆಹಣ್ಣು ಉತ್ತಮ ಔಷಧಿ. ಈ ಹಣ್ಣಿನಲ್ಲಿರುವ ಖನಿಜಾಂಶಗಳು ಕೂದಲನ್ನು ರೇಷ್ಮೆಯಂತೆ ಹೊಳೆಯುವ ಹಾಗೆ ಮಾಡುತ್ತದೆ. ಅಲ್ಲದೇ ನಯವಾಗಿಸುತ್ತದೆ.

ವಿಧಾನ: ಬೆಣ್ಣೆಹಣ್ಣಿನ ತಿರುಳನ್ನು ಒಂದು ಪಾತ್ರೆಯಲ್ಲಿ ಹಾಕಿ. ಅದಕ್ಕೆ ಒಂದು ಮೊಟ್ಟೆಯ ಬಳಿಭಾಗ ಹಾಗೂ ಒಂದು ಚಮಚ ಜೇನುತುಪ್ಪ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಕೂದಲ ಬುಡದಿಂದ ತುದಿವರೆಗೂ ಹಚ್ಚಿ. ಇದನ್ನು ಅರ್ಧಗಂಟೆ ಒಣಗಲು ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT