ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

27 ವರ್ಷದ ನಂತರ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆ: ಕಿರೀಟ ಗೆಲ್ಲುವರೇ ಸಿನಿ ಶೆಟ್ಟಿ?

Published 9 ಜೂನ್ 2023, 12:46 IST
Last Updated 9 ಜೂನ್ 2023, 12:46 IST
ಅಕ್ಷರ ಗಾತ್ರ

ನವದೆಹಲಿ: ಮೂರು ದಶಕಗಳ ನಂತರ ವಿಶ್ವ ಸುಂದರಿ ಸ್ಪರ್ಧೆ ಆಯೋಜಿಸುವ ಅವಕಾಶ ಭಾರತಕ್ಕೆ ಲಭಿಸಿದೆ. ಹೀಗಾಗಿ ದೇಶದ ಫ್ಯಾಷನ್ ಜಗತ್ತನ್ನೂ ಒಳಗೊಂಡಂತೆ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.

1996ರಲ್ಲಿ ಅಮಿತಾ ಬಚ್ಚನ್ ಕಾರ್ಪೊರೇಷನ್ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ವಿಶ್ವ ಸುಂದರಿ ಸ್ಪರ್ಧೆಯೇ ಭಾರತದಲ್ಲಿ ಆಯೋಜನೆಗೊಂಡಿದ್ದ ಮೊದಲ ಸ್ಪರ್ಧೆಯಾಗಿತ್ತು.

ಇದು 71ನೇ ವಿಶ್ವ ಸುಂದರಿ ಸ್ಪರ್ಧೆಯಾಗಿದ್ದು, ಸ್ಪರ್ಧೆಯ ಖಚಿತ ದಿನಾಂಕ ಹಾಗೂ ನಡೆಯುವ ಸ್ಥಳ ಈವರೆಗೂ ಘೋಷಣೆಯಾಗದಿದ್ದರೂ, 2023ರ ನವೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ ಎಂದೆನ್ನಲಾಗಿದೆ.

ಮಿಸ್ ವರ್ಲ್ಡ್‌ನ ಸಿಇಒ ಜೂಲಿಯಾ ಮಾರ್ಲೆ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿ, ’130 ರಾಷ್ಟ್ರಗಳ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಜತೆಗೆ ಭವ್ಯ ಭಾರತವನ್ನು ಒಂದು ತಿಂಗಳ ಕಾಲ ಸುತ್ತಾಡಿ ಅರಿಯಲಿದ್ದಾರೆ‘ ಎಂದಿದ್ದಾರೆ.

2022ರ ವಿಶ್ವ ಸುಂದರಿ ಪೊಲೆಂಡ್‌ನ ಕೆರೊಲಿನಾ ಬಿಲಾವಸ್ಕ ಅವರು ತನ್ನ ಸಂತಸವನ್ನು ಹಂಚಿಕೊಂಡಿದ್ದು, ’ಭಾರತದಂತ ಸುಂದರ ನಾಡಿನಲ್ಲಿ ನಾನು ನನ್ನ ಮುಕುಟದಲ್ಲಿರುವ ಕಿರೀಟವನ್ನು ನೂತನ ವಿಶ್ವ ಸುಂದರಿಗೆ ತೊಡಿಸುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಅದರಂತೆಯೇ ಒಂದು ತಿಂಗಳ ಕಾಲ 114 ಸುಂದರ ಸ್ಪರ್ಧಿಗಳೊಂದಿಗೆ ಭಾರತದಲ್ಲಿ ಓಡಾಡುವ ಅವಕಾಶ ಸಿಕ್ಕಿದ್ದಕ್ಕೆ ಸಂತಸವಾಗಿದೆ. ಇಡೀ ಜಗತ್ತಿನಲ್ಲೇ ಭಾರತದ ಆತಿಥ್ಯ ಅದ್ಭುತ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಭಾರತಕ್ಕೆ ಇದು ನನ್ನ ಎರಡನೇ ಭೇಟಿ. ಪ್ರತಿಬಾರಿ ಇಲ್ಲಿಗೆ ಬಂದಾಗ ಅತ್ಯಂತ ಆತ್ಮೀಯವಾಗಿ ನನ್ನನ್ನು ಬರಮಾಡಿಕೊಂಡಿದ್ದನ್ನು ನಾನು ಮರೆಯಲಾರೆ. ಭಾರತದ ವೈವಿದ್ಯಮಯ ರಾಷ್ಟ್ರವಾದರೂ ಐಕ್ಯತೆ ಕಾಪಾಡಿಕೊಂಡಿರುವುದು, ಕೌಟುಂಬಿಕ ಮೌಲ್ಯ, ಪರಸ್ಪರ ಗೌರವ, ಪ್ರೀತಿ, ಕರುಣೆಯನ್ನು ಇಡೀ ಜಗತ್ತು ಈ ಕಾರ್ಯಕ್ರಮದ ಮೂಲಕ ನೋಡಲಿದೆ‘ ಎಂದು ಬಣ್ಣಿಸಿದರು.

ವಿಶ್ವ ಸುಂದರಿ ಸ್ಪರ್ಧೆ ಕುರಿತ ಒಂದಷ್ಟು ಮಾಹಿತಿ...

1. 2023ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಆಯೋಜಿಸುವುದರೊಂದಿಗೆ ಭಾರತ ಒಟ್ಟು ಎರಡನೇ ಬಾರಿ ಈ ಸ್ಪರ್ಧೆ ಆಯೋಜಿಸಿದೆ. 27 ವರ್ಷಗಳ ಹಿಂದೆ ಮೊದಲ ಬಾರಿಗೆ ಭಾರತದಲ್ಲಿ ಈ ಸ್ಪರ್ಧೆ ನಡೆದಿತ್ತು.

2. ಕಳೆದ ಬಾರಿ 1996ರಲ್ಲಿ ಬೆಂಗಳೂರಿನಲ್ಲಿ ಸ್ಪರ್ಧೆ ಆಯೋಜನೆಗೊಂಡಿತ್ತು. ಅದರಲ್ಲಿ ಗ್ರೀಸ್‌ನ 18 ವರ್ಷದ ಯರಿನ್ ಸ್ಕ್ಲಿವಾ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದರು.

3. ಈ ಬಾರಿ 21 ವರ್ಷದ ಸಿನಿ ಶೆಟ್ಟಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

4. ಕಳೆದ ಬಾರಿ ಪೂವ್ತೊ ರಿಕೊದಲ್ಲಿ ನಡೆದ ಸ್ಪರ್ಧೆಯಲ್ಲಿ ಪೊಲೆಂಡ್‌ನ ಕೆರೊಲಿನಾ ಬಿಲಾವಸ್ಕ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದರು.

5. ಮಾನುಷಿ ಚಿಲ್ಲರ್‌ ಅವರು 2017ರಲ್ಲಿ ಭಾರತಕ್ಕೆ ವಿಶ್ವ ಸುಂದರಿ ಕೀರ್ತಿ ತಂದುಕೊಟ್ಟ ಇತ್ತೀಚಿನವರು.‌

6. ಜಗತ್ತಿನಲ್ಲಿ ಭಾರತ ಹಾಗೂ ವೆನುಜುಲಾ ಅತಿ ಹೆಚ್ಚು ಬಾರಿ ವಿಶ್ವ ಸುಂದರಿ ಪಟ್ಟ ಪಡೆದ ರಾಷ್ಟ್ರಗಳು ಎಂಬ ಕೀರ್ತಿಗೆ ಭಾಜನವಾಗಿವೆ. ಎರಡೂ ರಾಷ್ಟ್ರಗಳು ತಲಾ 6 ಬಾರಿ ಈ ಸ್ಪರ್ಧೆಯಲ್ಲಿ ಗೆದ್ದಿವೆ.

7. ವಿಶ್ವ ಸುಂದರಿ ಪಟ್ಟವನ್ನು ಭಾರತಕ್ಕೆ ಮೊದಲ ಬಾರಿಗೆ ತಂದುಕೊಟ್ಟವರು 1966ರಲ್ಲಿ ರೀಟಾ ಫರಿಯಾ, 1994ರಲ್ಲಿ ಐಶ್ವರ್ಯ ರೈ, 1997ರಲ್ಲಿ ಡಯಾನಾ ಹೆಡನ್, 1999ರಲ್ಲಿ ಯುಕ್ತಾ ಮೂಖೆ, 2000ದಲ್ಲಿ ಪ್ರಿಯಾಂಕಾ ಚೋಪ್ರಾ ಹಾಗೂ 2017ರಲ್ಲಿ ಮಾನುಷಿ ಚಿಲ್ಲರ್.

8. ವಿಶ್ವ ಸುಂದರಿ ಪಟ್ಟ ಪಡೆದವರಲ್ಲಿ ಐಶ್ವರ್ಯ ರೈ, ಡಯಾನಾ ಹೆಡನ್, ಪ್ರಿಯಾಂಕಾ ಚೋಪ್ರಾ ಹಾಗೂ ರೀಟಾ ಫರಿಯಾ ಅವರು ತೀರ್ಪುಗಾರರಾಗಿಯೂ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ.

9. 1951ರಲ್ಲಿ ಎರಿಕ್ ಮಾರ್ಲೆ ಅವರು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಆರಂಭಿಸಿದ ವಿಶ್ವ ಸುಂದರಿ ಸ್ಪರ್ಧೆ ಈವರೆಗೂ ಇರುವ ಅತ್ಯಂತ ಹಳೆಯ ಸ್ಪರ್ಧೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT